Saturday, 23rd November 2024

Roopa Gururaj Column: ಉಪಕಾರ ಮಾಡಿ, ಅದನ್ನು ನೆನಪಿಸುತ್ತಿರಬೇಡಿ

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಗೋವರ್ಧನ ಯಮುನಾ ನದೀತೀರದಲ್ಲಿ ಬೃಂದಾವನದ ಹತ್ತಿರವಿರುವ ಒಂದು ಪರ್ವತ. ನಂದಗೋಕುಲದ ಗೋಪಾಲಕರೆಲ್ಲ ತಮ್ಮ ಗೋವುಗಳನ್ನು ಮೇಯಿಸಲು ಈ ಪರ್ವತಕ್ಕೆ ಹೋಗುತ್ತಿದ್ದರು. ಆ ಪರ್ವತದ ತಪ್ಪಲಿನಲ್ಲಿ ಯಥೇಚ್ಛವಾಗಿ ಹುಲ್ಲು ಬೆಳೆಯುತ್ತಿದ್ದರಿಂದ ಅದು ಗೋಪಾಲಕರಿಗೂ ಗೋವುಗಳಿಗೂ ಪ್ರಿಯವಾದ ಸ್ಥಳವಾಗಿತ್ತು.

ಒಮ್ಮೆ ಎಂದಿನಂತೆ ನಂದಗೋಕುಲದ ಎಲ್ಲ ಪಶುಪಾಲಕರು ಇಂದ್ರನ ಪ್ರೀತ್ಯರ್ಥವಾಗಿ ಒಂದು ಯಾಗವನ್ನು
ಏರ್ಪಡಿಸಬೇಕೆಂದು ಸಂಕಲ್ಪಿಸಿದರು. ‘ಪಕ್ಕದಲ್ಲಿರುವ ಗೋವರ್ಧನ ಗಿರಿ ನಮ್ಮ ದನ ಕರುಗಳಿಗೆ ಬೇಕಾದ ಮೇವನ್ನು
ಒದಗಿಸುತ್ತದೆ, ಆದ್ದರಿಂದ ಇಂದ್ರನ ಬದಲಾಗಿ ಗೋವರ್ಧನ ಗಿರಿಯನ್ನೇ ಪೂಜಿಸೋಣ’ ಎಂದು ಶ್ರೀಕೃಷ್ಣ ಎಲ್ಲಾ ಪಶುಪಾಲಕರಿಗೆ ಸೂಚಿಸಿದ. ಅವರು ಕೃಷ್ಣನ ಸೂಚನೆಯಂತೆ ಗೋವರ್ಧನ ಗಿರಿಯನ್ನು ಪೂಜಿಸಲು ಅಣಿಯಾ‌ ದರು. ಆಗ ಇಂದ್ರ ಕ್ರುದ್ಧನಾಗಿ ಗೋಕುಲ ಮುಳುಗಿ ಹೋಗುವಂತೆ ಭಾರೀ ಮಳೆ ಸುರಿಸಲಾರಂಭಿಸಿದ.

ಹಿಂದೆಂದೂ ಕಂಡು ಕೇಳರಿಯದ ಹಗಲು ರಾತ್ರಿ ಸುರಿದ ಭಾರಿ ಮಳೆಗೆ, ಎಲ್ಲೂ ನೀರು ತುಂಬಿಕೊಂಡಿತು. ಗೋಪಾ ಲಕರಲ್ಲಿ ಹಾಹಾಕಾರ. ಇಂದ್ರನ ಷಡ್ಯಂತ್ರವನ್ನು ಗ್ರಹಿಸಿದ ಕೃಷ್ಣನು, ಗೋಪಾಲಕರನ್ನು ಹಾಗೂ ಗೋವುಗಳನ್ನು ಮಳೆಯಿಂದ ರಕ್ಷಿಸುವ ಅಗತ್ಯವನ್ನು ಮನಗಾಣುತ್ತಾನೆ. ಗೋವರ್ಧನ ಗಿರಿಯನ್ನು ಕಿತ್ತು ತನ್ನ ಕಿರು ಬೆರಳಿನಲ್ಲಿ ಕೊಡೆಯಂತೆ ಎತ್ತಿ ಹಿಡಿದು ಗೋಪಾಲರು ಹಾಗೂ ಗೋವುಗಳನ್ನು ಅದರ ಬುಡದಲ್ಲಿ ನಿಲ್ಲುವಂತೆ ಮಾಡಿ ಅವರನ್ನು ಕಾಪಾಡಿದ. ಈ ಒಂದು ಪವಾಡವನ್ನು ಸ್ವರ್ಗದಿಂದಲೆ ಗಮನಿಸಿದ ಇಂದ್ರ ಆವಾಕ್ಕಾಗಿ ಹೋದ.

ನಂತರ ಅವನಿಗೆ ಕೃಷ್ಣನ ನಿಜ ಸ್ವರೂಪ ತಿಳಿದು ನಾಚಿಕೆಯಿಂದ ತಲೆ ತಗ್ಗಿಸಿ ಕೃಷ್ಣನಲ್ಲಿ ಕ್ಷಮಾಪಣೆ ಕೇಳಿದ. ಇದರಿಂದಾಗಿ ಕೃಷ್ಣನನ್ನು ಗೋವರ್ಧನ ಗಿರಿಧಾರಿ, ಗಿರಿಧರ ಮುಂತಾಗಿ ಭಕ್ತರು ಸ್ತುತಿಸುತ್ತಾರೆ.. ಹೀಗೆ ಆ ಪರ್ವತ ವನ್ನು ಎತ್ತಿದ ಸ್ಥಳವೆ ಇಂದು ಗೋವರ್ಧನಗಿರಿ ಎಂದು ಕರೆಸಿಕೊಳ್ಳುತ್ತದೆ. ಪ್ರಸ್ತುತ ಮಥುರಾದ ವೃಂದಾವನ ಪಟ್ಟಣದ ಬಳಿ ಈ ಗಿರಿಯಿದೆ. ಈ ವಿಚಾರವಾಗಿ ಹರಿವಂಶ, ವಿಷ್ಣು ಪುರಾಣ, ಭಾಗವತ ಮತ್ತು ಭಾರತಗಳಲ್ಲಿ ಪ್ರಸ್ತಾಪಿಸಲಾಗಿದೆ. ಬದುಕಿನಲ್ಲಿ ನಾವು ಯಾರಿಗಾದರೂ ಸಹಾಯ ಮಾಡಿದರೆ ಅವರು ಸದಾ ನಮ್ಮನ್ನೇ ಸ್ಮರಿಸು ತ್ತಿರಬೇಕು ಎನ್ನುವ ಹಂಬಲ ನಮಗಿರುತ್ತದೆ.

ಉಪಕಾರಕ್ಕಾಗಿ ಕೃತಜ್ಞತೆ ಸಲ್ಲಿಸುವುದು ಅವರ ಸಂಸ್ಕಾರ. ಆದರೆ ಸದಾ ಅವರು ನಮ್ಮ ಉಪಕಾರ ಸ್ಮರಣೆಯಲ್ಲಿ
ಸೈನ್ಯರಾಗಿ ನಮ್ಮ ಮುಂದೆ ಇರಬೇಕು ಎಂದು ಅಪೇಕ್ಷಿಸುವುದು ಮಾಡಿದ ಉಪಕಾರವನ್ನೆಲ್ಲ ಮರೆಸಿ ಬಿಡುವ ಯೋಚನೆ. ಎಷ್ಟೋ ಬಾರಿ ದೇವರು ನಮಗೆ ಕೊಟ್ಟ ಅನುಕೂಲದಿಂದ ಮತ್ತು ಸದ್ಬುದ್ಧಿಯಿಂದ ನಾವು ಮತ್ತೊಬ್ಬರಿಗೆ ಉಪಕಾರ ಮಾಡುವ ಶಕ್ತಿ ನಮಗಿರುತ್ತದೆ. ಅದರಿಂದಾಗಿ ಒಂದಷ್ಟು ಜನರಿಗೆ ಒಳಿತಾದರೆ, ಅದನ್ನು ಭಗವಂತನಿಗೆ ಸಮರ್ಪಿಸ ಬೇಕೆ ಹೊರತು ನನ್ನಿಂದ ಆದದ್ದು ಎನ್ನುವ ಅಹಂಕಾರ ತಲೆಗೇರಿದರೆ ಆ ಉಪಕಾರ ಮಾಡಿದ ಫಲವೂ ನಮಗೆ ದೊರೆಯುವುದಿಲ್ಲ.

ನಮ್ಮಲ್ಲಿ ಅನೇಕರು ಈ ರೀತಿಯ ಮನೋಭಾವನೆಯನ್ನು ಬೆಳೆಸಿಕೊಂಡಿರುತ್ತೇವೆ. ನಮ್ಮ ಸ್ನೇಹ ವಲಯದಲ್ಲಿ ಅಥವಾ ಬಂಧುಗಳಲ್ಲಿ ಅಗತ್ಯವಿzಗ ಹಣ ಸಹಾಯ ಅಥವಾ ಮತ್ತಾವುದೋ ಸಹಾಯ ಮಾಡುತ್ತೇವೆ. ಆದರೆ ಜೀವನಪೂರ್ತಿ ಸಹಾಯ ಪಡೆದವರು ನಮ್ಮನ್ನು ಹಾಡಿ ಹೊಗಳುತ್ತಿರಬೇಕು ಎಲ್ಲರ ಮುಂದೆ ಉಪಕಾರ ಸ್ಮರಣೆ ಮಾಡಬೇಕು ಎನ್ನುವ ಆಂತರಿಕ ಆಸೆ ಬೆಳೆಸಿಕೊಳ್ಳುತ್ತೇವೆ.

ಉಪಕೃತರಾಗಿ ಅವರು ನಂತರ ತಮ್ಮ ಪರಿಶ್ರಮದಿಂದ ಜೀವನದಲ್ಲಿ ಬಹಳ ಮುಂದೆ ಸಾಗಿರುತ್ತಾರೆ. ಆದರೆ ಸದಾ ನೀನು ಕಷ್ಟದಲ್ಲಿದ್ದಾಗ ನಾನು ನಿನಗೆ ನೆರವಾದೆ ಎಂದು ಹೇಳುತ್ತಾ ಅವರ ಎಲ್ಲ ಯಶಸ್ಸಿನ ಫಲವನ್ನು ನಾವೇ ತೆಗೆದುಕೊಳ್ಳುವ ಮಾತುಗಳನ್ನ ಆಡುತ್ತೇವೆ. ಖಂಡಿತ ಇಂತಹ ನಡವಳಿಕೆಗಳು ಗೌರವಾರ್ಥವಲ್ಲ. ಉಪಕೃತರು ಕೃತಜ್ಞತೆಯಿಂದ ನಮ್ಮನ್ನು ನೆನೆಯಬೇಕೇ ಹೊರತು, ನಾವೇ ಅದನ್ನು ಸದಾ ಅವರಿಗೆ ನೆನಪಿಸುತ್ತಾ ಇರುವುದಲ್ಲ. ಇಡೀ ಭೂಮಂಡಲ, ಪ್ರಕೃತಿ ನಮ್ಮನ್ನು ಸದ್ದಿಲ್ಲದೆ ಪೋಷಿಸಿ ಬೆಳೆಸಿ ಸಲಹುವಾಗ ನಮ್ಮದಾವ ಲೆಕ್ಕ.

ಇದನ್ನೂ ಓದಿ: Roopa Gururaj Column: ಅಂಬಿಗ ಹೇಳಿದ ಬದುಕಿನ ಯಶಸ್ಸಿನ ಸೂತ್ರಗಳು