ದೀಪಾವಳಿ ಮತ್ತೆ ಬಂದಿದೆ, ಪ್ರತಿ ವರ್ಷದಂತೆ. ಆದರೆ ವ್ಯತ್ಯಾಸವಿದೆ. ಈ ಬಾರಿ ಬೆಳಕಿನ ಹಬ್ಬಕ್ಕೆ ಕರೋನಾ ಕರಿನೆರಳು ಬಿದ್ದಿದೆ.
ಲಾಕ್‌ಡೌನ್ ಮತ್ತು ನಂತರ ವಿಧಿಸಿರುವ ಸಾಮಾಜಿಕ ಅಂತರ ಕಾಪಾಡುವ ನಿಯಮ ಮತ್ತು ಸೋಂಕನ್ನು ತಡೆಯುವ ಕ್ರಮ ಗಳಿಂದಾಗಿ, ಹೊರಗೆ ಸುತ್ತಾಡಿ, ಹಬ್ಬದ ಸಂಭ್ರಮವನ್ನು ಸವಿಯುವ ಅವಕಾಶಕ್ಕೆ ಕುಂದುಂಟಾಗಿದೆ. ಏನಿದ್ದರೂ, ಸೀಮಿತ ಅವಕಾಶದಲ್ಲಿ, ಸರಕಾರ ಮತ್ತು ಸಮಾಜ ವಿಧಿಸಿರುವ ಕಟ್ಟುಪಾಡುಗಳ ಚೌಕಟ್ಟಿನಲ್ಲಿ, ಹಬ್ಬ ಆಚರಿಸುವ ಅನಿವಾರ್ಯತೆ.
ಹಾಗೆಂದು ಹಬ್ಬದ ಆಚರಣೆಯನ್ನು ಬಿಡಲಾದೀತೆ? ಖಂಡಿತಾ ಇಲ್ಲ. ನಮ್ಮ ಸಂಸ್ಕೃತಿಯ ಅಸ್ಮಿತೆ ಎನಿಸಿರುವ ದೀಪಾವಳಿಯು, ಭಾವನಾತ್ಮಕ ವಾಗಿಯೂ ಮತ್ತು ವಾಚ್ಯವಾಗಿಯೂ ನಮ್ಮ ಬದುಕಿನಲ್ಲಿ ಬೆಳಕನ್ನು ತುಂಬುವ ಹಬ್ಬ. ನೀರು ತುಂಬುವ ಹಬ್ಬದಿಂದ ಆರಂಭವಾಗುವ ಈ ಹಬ್ಬವು, ದೀಪಗಳನ್ನು ಆರಾಧಿಸುತ್ತಾ, ಧನ ಲಕ್ಷ್ಮಿಯನ್ನು ಪೂಜಿಸುತ್ತಾ, ಧಾನ್ಯ ಲಕ್ಷ್ಮಿಯನ್ನು
ಆರಾಧಿಸುತ್ತಾ, ಗೋಪೂಜೆಯನ್ನೂ ಒಳಗೊಂಡು ಮೂರು ದಿನಗಳ ತನಕ ಮುಂದುವರಿಯುತ್ತದೆ.
ಮನೆಯಳಗೆ ಹಣತೆಗಳು ಬೆಳಗಿ ಪ್ರಭೆ ತುಂಬಿದರೆ, ಆಗಸದಲ್ಲಿ ಗೂಡುದೀಪವನ್ನು ಹಚ್ಚಿ, ಜಗವನ್ನೇ ಬೆಳಗುವ ಆಶಯ, ಸಂಭ್ರಮ. ಆದರೆ ಈ ವರ್ಷ ದೀಪಾವಳಿಯನ್ನು ಆಚರಿಸುವ ವಿಧಾನ ತುಸುವಾದರೂ ಬದಲಾಗಿದೆ. ಪ್ರತಿ ವರ್ಷ ದೀಪಾವಳಿ ಗೆಂದು ಊರಿಗೆ ಹೋಗುವ ಸಂಪ್ರದಾಯ ಇರುವವರಲ್ಲಿ ಕೆಲವರಾದರೂ, ಈ ಅನೂಚಾನ ಪದ್ಧತಿಯನ್ನು ತಪ್ಪಿಸಿಕೊಳ್ಳ ಬೇಕಾದೀತು.
ಹಬ್ಬದ ತಯಾರಿಗೆಂದು ಮಾರ್ಕೆಟ್‌ನಲ್ಲಿ, ಜನರ ನಡುವೆ ಸುತ್ತಾಡುವ ಉತ್ಸಾಹದವರು, ಆ ಖರೀದಿಯ ಮೂಲಕ ಹಬ್ಬದ ಉಲ್ಲಾಸದ ನವೀನ ಅನುಭವ ಪಡೆಯಬಯಸುವವರು, ಈ ವರ್ಷ ಅದಕ್ಕೆ ಸಣ್ಣಮಟ್ಟದ ಕಡಿವಾಣ ಹಾಕಬೇಕಾದೀತು. ಅಂಗಡಿ ಮುಂಗಟ್ಟುಗಳಲ್ಲಿ ಓಡಾಡುವಾಗ ಮುಖಗವಸು ಧರಿಸಿ, ಆಗಾಗ ಸೋಪುನಿಂದ ಕೈತೊಳೆಯುತ್ತಾ ಎಚ್ಚರಿಕೆ ವಹಿಸುವುದನ್ನು ಮರೆಯುವಂತೆಯೇ ಇಲ್ಲ – ಈ ಎಚ್ಚರಿಕೆಯು ವೈಯಕ್ತಿಯ ಆರೋಗ್ಯ ಕಾಪಾಡುವ ಜತೆಯಲ್ಲೇ, ಕುಟುಂಬದ ಕ್ಷೇಮಕ್ಕೂ
ಅಗತ್ಯ. ಇಷ್ಟೆಲ್ಲಾ ಕಟ್ಟುಪಾಡುಗಳಿದ್ದರೂ, ಹಬ್ಬದ ಖರೀದಿ ಆಗಲೇ ಬೇಕು.
ಹಬ್ಬದ ವಿಶೇಷ ಅಡುಗೆಯನ್ನು ಮಾಡಿ, ರುಚಿಯನ್ನು ಸವಿಯಲೇ ಬೇಕು. ದೀಪಲಕ್ಷ್ಮಿಯ ಪೂಜೆ ಮಾಡಿ ಮನದ ಮಸುಕನ್ನು ಕಳೆದು, ಜೀವನದಲ್ಲಿ ಬೆಳಕನ್ನು ತುಂಬಿಕೊಳ್ಳಬೇಕು. ಕಳೆಗುಂದಿದ ಕಾಲಮಾನದಲ್ಲಿ ನಡೆಯುತ್ತಿರುವ ಈ ವರ್ಷದ ದೀಪಾವಳಿ, ತನ್ನ ಬೆಳಕಿನ ಮೂಲಕ ಎಲ್ಲರ ಜೀವನದಲ್ಲಿ ಸಂತಸ ತುಂಬಲಿ ಎಂಬುದೇ ಆಶಯ.