ಸ್ಫೂರ್ತಿಪಥ ಅಂಕಣ: ನವರಾತ್ರಿ – ಒಂದು ಹಬ್ಬ, ನೂರಾರು ಆಯಾಮ
- ರಾಜೇಂದ್ರ ಭಟ್ ಕೆ.
Navaratri 2024: ಒಂದು ಹಬ್ಬದ ಹಿಂದೆ ನೂರಾರು ಪುರಾಣದ ಕಥೆಗಳು, ನೂರಾರು ಇತಿಹಾಸದ ಘಟನೆಗಳು ಬೆಸೆದುಕೊಂಡ ಒಂದು ಹಬ್ಬ ಇದ್ದರೆ ಅದು ನವರಾತ್ರಿ! ನವರಾತ್ರಿ ಕೇವಲ ಒಂದು ಹಬ್ಬ ಅಲ್ಲವೇ ಅಲ್ಲ. ಅದೊಂದು ಅದ್ಭುತವಾದ ಧಾರ್ಮಿಕ ಆಚರಣೆ, ಸಾಂಸ್ಕೃತಿಕ ಸಮಾರಾಧನೆ, ಸ್ತ್ರೀ ಶಕ್ತಿಯ ಆರಾಧನೆ, ಒಂದು ಕೌಟುಂಬಿಕ ನಿವೇದನೆ ಮತ್ತು ನಮ್ಮೊಳಗಿನ ಶಕ್ತಿಯ ಆವಾಹನೆ. ಇಷ್ಟೆಲ್ಲವನ್ನೂ ಒಳಗೊಂಡ ಈ ಹಬ್ಬವು ಕರ್ನಾಟಕದ ನಾಡಹಬ್ಬ ಆದದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ!
ದುರ್ಗಾಷ್ಟಮಿ – ದುರ್ಗತಿ ದೂರ
ನವರಾತ್ರಿಯ ಹಬ್ಬ ಎಂದರೆ ದುಷ್ಟ ಶಕ್ತಿಯ ಮೇಲೆ ಶಿಷ್ಟ ಶಕ್ತಿಯ ವಿಜಯ! ತಾಮಸ ಶಕ್ತಿಗಳ ಮೇಲೆ ಸಾತ್ವಿಕ ಶಕ್ತಿಯ ವಿಜಯ! ರಾಕ್ಷಸೀ ಪ್ರವೃತ್ತಿಗಳ ಮೇಲೆ ದೈವಿಕ ಶಕ್ತಿಗಳ ವಿಜಯ! ಆ ಸಂಕಲ್ಪಗಳ ಒಟ್ಟು ಮೊತ್ತವಾಗಿ ಬಂದವಳು ದುರ್ಗೆ. ಸಪ್ತಮಿಯ ತಿಥಿಯವರೆಗೆ ಶಾಂತಮೂರ್ತಿಯಾಗಿ ಕಾಣಿಸುವ ಶ್ರೀದೇವಿಯು ಅಷ್ಟಮಿಯ ತಿಥಿಯು ಬರುವಾಗ ರೌದ್ರ ರೂಪವನ್ನು ತಾಳುತ್ತಾಳೆ! ಸಿಂಹವಾಹಿನಿ ಆಗುತ್ತಾಳೆ. ಆಯುಧಗಳು ಝಳಪಿಸುತ್ತವೆ. ದುಷ್ಟಮರ್ದನ ಕ್ರಿಯೆಯು ವೇಗ ಪಡೆಯುತ್ತದೆ. ರಕ್ತದ ಧಾರೆಯೇ ಹರಿಯುತ್ತದೆ.
ಆಕೆ ಚಂಡಿ,ಚಾಮುಂಡಿಯಾಗಿ, ದುರ್ಗೆಯಾಗಿ, ಮಹಾಕಾಳಿಯಾಗಿ ರೂಪಾಂತರ ಆಗುವ ತಿಥಿಯೇ ದುರ್ಗಾಷ್ಟಮಿ. ನಾಡಿನಾದ್ಯಂತ ಇರುವ ದುರ್ಗಾಕ್ಷೇತ್ರಗಳು, ಕಾಳಿಕಾ ಮಂದಿರಗಳು, ಮಾರಿಕಾಂಬಾ ಕ್ಷೇತ್ರಗಳು ಮಹಾಪೂಜೆ, ದುರ್ಗಾ ನಮಸ್ಕಾರ, ಚಂಡಿಕಾ ಹೋಮ, ಹೂವಿನ ಪೂಜೆ, ಕುಂಕುಮಾರ್ಚನೆ, ಭಜನೆ ಇತ್ಯಾದಿಗಳಿಂದ ವಿಜೃಂಭಣೆ ಪಡೆಯುತ್ತವೆ. ಸಹಸ್ರ ಸಹಸ್ರ ಸಂಖ್ಯೆಯ ಭಕ್ತರಿಗೆ ಸಂತರ್ಪಣೆ ನಡೆಯುತ್ತದೆ.
ದುರ್ಗಾಷ್ಟಮಿಯ ತಿಥಿಯಂದು ರಾತ್ರಿ ನಡೆಯುವ ಹೋಮ, ಹವನಗಳು ಪ್ರಕೃತಿಯಲ್ಲಿ ಹರಡಿರುವ ತಾಮಸೀ ಶಕ್ತಿಗಳನ್ನು ನಾಶಮಾಡುತ್ತವೆ ಎನ್ನುವ ನಂಬಿಕೆ ಹಿಂದೂ ಧರ್ಮದಲ್ಲಿ ಇದೆ.
ಹಾಗೆಯೇ ಸಪ್ತಮಿ ತಿಥಿಯಂದು ಆರಂಭವಾದ ಶಾರದಾಪೂಜೆಯು ಇಲ್ಲಿ ಮತ್ತೆ ಮುಂದುವರೆಯುತ್ತದೆ.
ಆಯುಧಪೂಜೆ – ಹೀಗೊಂದು ಪೌರಾಣಿಕ ಹಿನ್ನೆಲೆ
ಪಾಂಡವರು ತಮ್ಮ 12 ವರ್ಷಗಳ ವನವಾಸ ಮತ್ತು ಒಂದು ವರ್ಷದ ಅಜ್ಞಾತವಾಸವನ್ನು ಮುಗಿಸಿ ವಿಜಯಯಾತ್ರೆಯನ್ನು ಕೈಗೊಳ್ಳುವ ದಿನವೇ ಮಹಾನವಮಿ. ಅವರು 13 ವರ್ಷಗಳ ಹಿಂದೆ ಬನ್ನಿ ಮರದಲ್ಲಿ ಅಡಗಿಸಿಟ್ಟ ಅವರ ದಿವ್ಯವಾದ ಆಯುಧಗಳನ್ನು ಮರದಿಂದ ಕೆಳಗೆ ಇಳಿಸಿ ಆಯುಧಪೂಜೆ ಮಾಡುತ್ತಾರೆ ಮತ್ತು ಕುರುಕ್ಷೇತ್ರ ಯುದ್ಧಕ್ಕೆ ಮಾನಸಿಕವಾಗಿ ಸಿದ್ಧರಾಗುತ್ತಾರೆ. ಆದ್ದರಿಂದ ಅಂದು ಆಯುಧಪೂಜೆ ನಡೆಯುತ್ತದೆ. ಯಂತ್ರಗಳು, ವಾಹನಗಳು, ನೇಗಿಲು ಮೊದಲಾದ ರೈತರ ಸಾಧನಗಳು ಅಂದು ಪೂಜೆಯನ್ನು ಪಡೆಯುತ್ತವೆ. ಅಂದು ಬನ್ನಿಮರಕ್ಕೆ ಪೂಜೆ ಕೂಡ ನಡೆಯುತ್ತದೆ. ಉತ್ತರ ಭಾರತದ ಹಲವೆಡೆ ಅಶ್ವತ್ಥ ಪೂಜೆ, ಗೋ ಪೂಜೆಗಳು ಅಂದು ನಡೆಯುತ್ತವೆ.
ದೇವಿ ದೇವಸ್ಥಾನಗಳು ಹೂವಿನ ಅಲಂಕಾರ ಪಡೆಯುತ್ತವೆ. ಭಜನೆ, ಸಂಕೀರ್ತನೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕ, ಯಕ್ಷಗಾನ, ಹರಿಕಥೆ, ಗೊಂಬೆಯಾಟ, ಸಂಗೀತ ಕಛೇರಿಗಳು, ಧಾರ್ಮಿಕ ಉಪನ್ಯಾಸಗಳು ಎಲ್ಲೆಡೆ ನಡೆಯುವ ಸಂಭ್ರಮಗಳನ್ನು ವರ್ಣಿಸಲು ಶಬ್ದಗಳೇ ಇಲ್ಲ. ಶ್ರೀರಾಮನು ರಾವಣನ ವಧೆಗಾಗಿ ಸಂಕಲ್ಪಿಸಿ ದುರ್ಗಾಪೂಜೆಯನ್ನು ಮಾಡಿದ ಉಲ್ಲೇಖವೂ ರಾಮಾಯಣದಲ್ಲಿ ಇದೆ. ಮರಾಠರ ಕಾಲದಲ್ಲಿ ದುರ್ಗಾಪೂಜೆ ಮಾಡಿ ಯುದ್ಧಕ್ಕೆ ಹೊರಡುವ ಉಲ್ಲೇಖಗಳು ಇತಿಹಾಸದ ಉದ್ದಕ್ಕೂ ದೊರೆಯುತ್ತವೆ.
ರಾಮಲೀಲಾ – ತುಳಸೀ ರಾಮಾಯಣದ ದೃಶ್ಯರೂಪ !
ಉತ್ತರ ಭಾರತದ ಎಲ್ಲೆಡೆ ವಿಜಯ ದಶಮಿಯಂದು ನಡೆಯುವ ಅತೀ ದೊಡ್ಡ ಹಬ್ಬ ಅದು ರಾಮಲೀಲಾ!
ಲಂಕೆಯಲ್ಲಿ ದೊಡ್ಡದಾಗಿ ನಡೆದ ರಾಮ,ರಾವಣರ ಯುದ್ಧದಲ್ಲಿ ರಾಮನು ರಾವಣನ ವಧೆ ಮಾಡಿದ ತಿಥಿಯು ಅದು ವಿಜಯದಶಮಿ! ಅದರಿಂದಾಗಿ ನಾಡಿನಾದ್ಯಂತ ಸಂಭ್ರಮವು ಉಕ್ಕಿ ಹರಿದ ದಿನ ಅದು. ಅದನ್ನು 16ನೆಯ ಶತಮಾನದಲ್ಲಿ ಗೋಸ್ವಾಮಿ ತುಳಸಿದಾಸರು ತನ್ನ ಕೃತಿಯಾದ ರಾಮಚರಿತ ಮಾನಸದಲ್ಲಿ ತುಂಬಾ ಅದ್ಭುತವಾಗಿ ವರ್ಣನೆ ಮಾಡಿದ್ದಾರೆ.
ದಶಮಿ ತಿಥಿಯ ದಿನ ಉತ್ತರಭಾರತದ ಉದ್ದಕ್ಕೂ ಲಕ್ಷಾಂತರ ಜನರು ಮೈದಾನದಲ್ಲಿ ಸೇರಿ ತುಳಸೀ ರಾಮಾಯಣದ ಶ್ಲೋಕಗಳು, ನಾಟಕದ ರೂಪಾಂತರಗಳು, ಹಾಡುಗಳು, ವರ್ಣನೆಗಳು ಎಲ್ಲವನ್ನೂ ದೃಶ್ಯಕಾವ್ಯವಾಗಿ ನಿರ್ಮಿಸಿ ತ್ರೇತಾಯುಗವನ್ನೇ ಭೂಮಿಗೆ ಇಳಿಸುತ್ತಾರೆ. ಎಲ್ಲಿ ನೋಡಿದರಲ್ಲಿ ಬಿಲ್ಲು,ಬಾಣ ಹಿಡಿದ ಪುರಾಣದ ಬಾಲಕರು, ವಾನರ ಸೇನೆಯ ದೃಶ್ಯಗಳು ಕಂಡು ಬರುತ್ತದೆ. ಮೈದಾನದ ತುಂಬಾ ಬಾಲಕ ರಾಮರು, ಬಾಲಕಿ ಸೀತೆಯರದ್ದೆ ಕಾರುಬಾರು.
ಇಡೀ ಮೈದಾನವು ರಾಮನ ಗುಣಗಾನ, ಜೈ ಶ್ರೀರಾಮ್ ಘೋಷಣೆಗಳಿಂದ ಸಮುದ್ರದ ಅಲೆಗಳನ್ನು ಉಂಟುಮಾಡುತ್ತದೆ. ಮಧ್ಯರಾತ್ರಿಯು ಕಳೆದು ತುಂಬ ಹೊತ್ತಾದ ನಂತರ ಮೈದಾನದ ನಡುವೆ ನಿಲ್ಲಿಸಿರುವ ರಾವಣನ ಕಟ್ಟಿಗೆಯ ಗೊಂಬೆಗೆ ಬೆಂಕಿಯನ್ನು ಹಚ್ಚಿ ಅದು ಪೂರ್ತಿಯಾಗಿ ಉರಿದು ನಾಶವಾಗುವತನಕ ಕುಣಿದು ಕುಪ್ಪಳಿಸುತ್ತಾರೆ.
ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಡೀ ರಾತ್ರಿ ನಡೆಯುವ ಈ ರಾಮಲೀಲಾ ಉತ್ಸವವನ್ನು ನೋಡಿ, ಜನರ ಭಾವೋದ್ವೇಗ, ಭಕ್ತಿಯ ಪರಾಕಾಷ್ಟೆಗಳನ್ನು ನೋಡಿ ನಾನು ಒಂದು ವರ್ಷ ಮೂಕವಿಸ್ಮಿತನಾಗಿದ್ದೆ! ಅಲ್ಲಿ ಜಾತಿ, ಮತಗಳ ಬೇಧವಿಲ್ಲದೆ ಲಕ್ಷಾಂತರ ಜನರು ಸೇರಿದ್ದರು.
ನವರಾತ್ರಿ ಎಂದರೆ ಅಷ್ಟೇ ಅಲ್ಲ. ಇನ್ನೂ ಇದೆ.
(ನಾಳೆಗೆ ಮುಂದುವರೆಯುತ್ತದೆ)
ಇದನ್ನೂ ಓದಿ: Navaratri 2024: ರಾಜೇಂದ್ರ ಭಟ್ ಅಂಕಣ: ನವರಾತ್ರಿ – ನವಧಾತ್ರಿ – ನವ ನವೊನ್ಮೇಷ ಶಾಲಿನಿ