Wednesday, 23rd October 2024

R T Vittalmurthy Column: ವಿಜಯೇಂದ್ರರನ್ನು ಆವರಿಸುತ್ತಿದೆ ಪದ್ಮವ್ಯೂಹ

BJP Karnataka

ಮೂರ್ತಿಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ಮೊನ್ನೆ ದೆಹಲಿಗೆ ಹೋದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯರ ನಾಯಕತ್ವದ ಅನಿವಾ
ರ್ಯತೆಯ ಬಗ್ಗೆ ಅವರು ಪ್ರಸ್ತಾಪಿಸಿದರಂತೆ. ‘ಸರ್, ಮುಡಾ ಪ್ರಕರಣದ ಬಲೆಯಲ್ಲಿ ಮುಖ್ಯಮಂತ್ರಿಗಳನ್ನು
ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ. ವಿಪಕ್ಷಗಳು ಇಂಥ ಕೆಲಸ ಮಾಡುವುದರಲ್ಲಿ ಅಚ್ಚರಿಯೇನೂ ಇಲ್ಲ. ಯಾಕೆಂದರೆ ದಕ್ಷಿಣ ಭಾರತದಲ್ಲಿ ನೆಲೆ ಕಂಡುಕೊಳ್ಳಲು ಬಿಜೆಪಿಗಿರುವ ಅಡ್ಡಿ ಎಂದರೆ ಸಿದ್ದರಾಮಯ್ಯ ಅವರು ಮಾತ್ರ’ ಅಂತ ಜಾರಕಿಹೊಳಿ ವಿವರಿಸಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ ಸಹಜವಾಗಿಯೇ ಸರಕಾರ ಅಲುಗಾಡುತ್ತದೆ. ಕೆಲವೇ ಕಾಲದಲ್ಲಿ ಉರುಳುತ್ತದೆ ಅಂತ ಬಿಜೆಪಿ ವರಿಷ್ಠರು ಯೋಚಿಸುತ್ತಿದ್ದಾರೆ. ಹೀಗಾಗಿ
ಯಾವ ಕಾರಣಕ್ಕೂ ಸಿದ್ದರಾಮಯ್ಯ ಕೆಳಗಿಳಿಯದಂತೆ ಹೈಕಮಾಂಡ್ ನೋಡಿಕೊಳ್ಳಬೇಕು. ಆ ದೃಷ್ಟಿಯಿಂದ
ಕಾಂಗ್ರೆಸ್ ವರಿಷ್ಠರು ಸಿದ್ದರಾಮಯ್ಯ ಅವರ ಜತೆ ಗಟ್ಟಿಯಾಗಿ ನಿಂತಿರುವುದೇನೋ ನಿಜ. ಸಮಸ್ಯೆ ಎಂದರೆ
ಪಕ್ಷವು ಸಿದ್ದರಾಮಯ್ಯ ಅವರ ಜತೆ ಭದ್ರವಾಗಿ ನಿಂತಿದ್ದರೂ ನಮ್ಮ ಪಕ್ಷದ ಕೆಲ ನಾಯಕರು ಮಾತ್ರ ಮುಖ್ಯಮಂತ್ರಿ
ಯಾಗುವ ಕನಸು ಕಾಣುತ್ತಿದ್ದಾರೆ.

ಅಷ್ಟೇ ಅಲ್ಲ, ಇನ್ನೊಂದು ತಿಂಗಳಲ್ಲಿ ಚಿತ್ರ ಬದಲಾಗಿ ಸಿದ್ದರಾಮಯ್ಯ ಅವರು ಕೆಳಗಿಳಿಯುತ್ತಾರೆ ಅಂತ ಮೆಸೇಜು ಪಾಸ್ ಮಾಡುತ್ತಿದ್ದಾರೆ. ಇವತ್ತು ಲೋಕಾಯುಕ್ತ ತನಿಖೆ ಸಿದ್ದರಾಮಯ್ಯ ಅವರ ಕೈ ಕಟ್ಟಿ ಹಾಕದಿರಬಹುದು. ಆದರೆ ಕೇಂದ್ರ ಸರಕಾರದ ಜಾರಿ ನಿರ್ದೇಶನಾಲಯದ ಎಂಟ್ರಿ ಆಗಿರುವುದರಿಂದ ಸಿದ್ದರಾಮಯ್ಯ ಅವರು ಸಂಕಷ್ಟಕ್ಕೆ ಸಿಲುಕಬಹುದು. ಇಲ್ಲವೇ ಮುಡಾ ಪ್ರಕರಣವನ್ನು ಲೋಕಾಯುಕ್ತದ ಬದಲು ಸಿಬಿಐ ತನಿಖೆಗೆ ಒಪ್ಪಿಸಲು ನ್ಯಾಯಾಲಯ ನಿರ್ಧರಿಸಿದರೂ ಸಿದ್ದರಾಮಯ್ಯ ಸಂಕಷ್ಟಕ್ಕೆ ಸಿಲುಕುತ್ತಾರೆ. ಹೀಗಾಗಿ ಇನ್ನೊಂದು ತಿಂಗಳಲ್ಲಿ ಪರ್ಯಾಯ ನಾಯಕತ್ವ ಅನಿವಾರ್ಯವಾಗಬಹುದು.

ಅಂಥ ಸಂದರ್ಭದಲ್ಲಿ ತಾವು ಸಿಎಂ ಆಗುವುದು ಸುಲಭ ಅಂತ ಈ ನಾಯಕರು ಹೇಳಿಕೊಳ್ಳುತ್ತಿದ್ದಾರೆ. ಇವತ್ತು ನಮ್ಮ ಮನವಿ ಎಂದರೆ ಕೊನೆಯ ಕ್ಷಣದವರೆಗೂ ಪಕ್ಷವು ಸಿದ್ದರಾಮಯ್ಯ ಅವರ ಜತೆ ನಿಲ್ಲಬೇಕು. ಯಾಕೆಂದರೆ ಅವರನ್ನು ಹೊರತುಪಡಿಸಿ ಬೇರೊಬ್ಬರನ್ನು ತಂದು ಕೂರಿಸಲು ಹೈಕಮಾಂಡ್ ಒಲವು ತೋರಿಸಿದರೆ ಕರ್ನಾಟಕದ ರಾಜಕೀಯ ಚಿತ್ರಣವೇ ಬದಲಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಅಹಿಂದ ವರ್ಗಗಳು ಕಾಂಗ್ರೆಸ್ ವಿರುದ್ಧ ತಿರುಗಿಬೀಳುತ್ತವೆ. ಹಾಗೇನಾದರೂ ಆದರೆ ಸರಕಾರ ಉಳಿಯುವುದಿರಲಿ, ಭವಿಷ್ಯದಲ್ಲಿ ಪಕ್ಷ ಮರಳಿ ಅಧಿಕಾರ ಹಿಡಿಯುವುದೂ ಕಷ್ಟವಾಗಬಹುದು. ನಿಜ ಹೇಳಬೇಕೆಂದರೆ ರಾಜ್ಯ ಕಾಂಗ್ರೆಸ್‌ನ ಬಹುತೇಕ ಶಾಸಕರು ಸಿದ್ದರಾಮಯ್ಯ ಮತ್ತು ನಿಮ್ಮ ನಾಯಕತ್ವವನ್ನು ಮಾತ್ರ ಒಪ್ಪಿಕೊಳ್ಳುತ್ತಾರೆ. ಉಳಿದಂತೆ ಯಾರ ನಾಯಕತ್ವವನ್ನೂ ಅವರು ಒಪ್ಪಿಕೊಳ್ಳುವ ಸ್ಥಿತಿಯಲ್ಲಿಲ್ಲ.

ಒಂದು ವೇಳೆ ಶಾಸಕರ ಈ ಭಾವನೆಗೆ ವ್ಯತಿರಿಕ್ತ ಬೆಳವಣಿಗೆ ನಡೆದರೆ ಅವರು ಪರ್ಯಾಯ ಮಾರ್ಗದ ಬಗ್ಗೆ ಯೋಚಿಸ ಬಹುದು. ಹೀಗಾಗಿ ಈ ವಿಷಯದಲ್ಲಿ ವರಿಷ್ಠರ ನಡೆ ಪಕ್ಕಾ ಆಗಿರಬೇಕು ಸರ್’ ಅಂತ ಜಾರಕಿಹೊಳಿ ಅವರು ಖರ್ಗೆಯವರಿಗೆ ವಿವರಿಸಿದ್ದಾರೆ. ಈ ಮಾತುಗಳನ್ನು ಕೇಳಿಸಿಕೊಂಡ ಮಲ್ಲಿಕಾರ್ಜುನ ಖರ್ಗೆ ಅವರು, ‘ನೋ, ನೋ, ಸಿದ್ದರಾಮಯ್ಯ ಅವರ ವಿಷಯದಲ್ಲಿ ಪಕ್ಷವು ಬೇರೆ ಯೋಚನೆ ಮಾಡಲು ಸಾಧ್ಯವೇ ಇಲ್ಲ. ‌

ಇನ್ ಫ್ಯಾಕ್ಟ್, ರಾಹುಲ್ ಗಾಂಧಿಯವರು ಎಷ್ಟು ಸ್ಪಷ್ಟವಾಗಿದ್ದಾರೆಂದರೆ ನಾಯಕತ್ವ ಬದಲಾವಣೆಯ ಮಾತೇ
ಇಲ್ಲ ಎಂದಿದ್ದಾರೆ. ಹೀಗಾಗಿ ನೋಡೋಣ, ಮುಂದಿನ ದಿನಗಳಲ್ಲಿ ಬಿಜೆಪಿ ವರಿಷ್ಠರು ಏನು ಆಟ ಆಡುತ್ತಾರೋ
ಅದನ್ನು ಎದುರಿಸಲು ಸಿದ್ಧವಿರೋಣ’ ಎಂದಿದ್ದಾರೆ.

ಜನತಾ ನ್ಯಾಯಾಲಯಕ್ಕೆ ಸಿದ್ದು ಎಂಟ್ರಿ

ಇನ್ನು ತಮ್ಮ ವಿರುದ್ಧ ಲೋಕಾಯುಕ್ತ ತನಿಖೆ ಆರಂಭಗೊಂಡ ಬೆನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಜನತಾ ನ್ಯಾಯಾಲಯಕ್ಕೆ ಎಂಟ್ರಿ ಆಗಿದ್ದಾರೆ. ಲೋಕಾಯುಕ್ತ ತನಿಖೆಗೆ ಜನಪ್ರತಿನಿಧಿಗಳ ನ್ಯಾಯಾಲಯ ಗ್ರೀನ್ ಸಿಗ್ನಲ್ ಕೊಟ್ಟ ಸಂದರ್ಭದಲ್ಲಿ ರಾಹುಲ್ ಗಾಂಧಿ ಕೊಟ್ಟ ಸಲಹೆಯೇ ಇದಕ್ಕೆ ಕಾರಣ. ಅಂದ ಹಾಗೆ, ಅವತ್ತು ಸಿದ್ದರಾಮಯ್ಯ ಅವರ ಜತೆ ದೂರವಾಣಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅವರು, ‘ಸಿದ್ರಾಮಯ್ಯಾಜೀ. ಇವತ್ತಿನ ಬೆಳವಣಿಗೆ ಯಿಂದ ನೀವು ಅಪ್‌ಸೆಟ್ ಆಗುವ ಅಗತ್ಯವಿಲ್ಲ. ಬದಲಿಗೆ ನೇರವಾಗಿ ರಾಜ್ಯ ಪ್ರವಾಸ ಆರಂಭಿಸಿ. ನಿಮ್ಮನ್ನು ಕೆಳಗಿಳಿಸಲು ಬಿಜೆಪಿ ಮಿತ್ರಕೂಟ ನಡೆಸುತ್ತಿರುವ ಷಡ್ಯಂತ್ರದ ಬಗ್ಗೆ ಜನರಿಗೆ ವಿವರಿಸುತ್ತಾ ಹೋಗಿ. ಜನರಿಗೆ ಈ ಸತ್ಯವನ್ನು ಹೇಳುತ್ತಾ ಹೋದರೆ ಬಿಜೆಪಿ ಮಿತ್ರಕೂಟದ ಆಟ ತುಂಬ ದಿನ ನಡೆಯುವುದಿಲ್ಲ’ ಎಂದಿದ್ದು ಸಿದ್ದರಾಮಯ್ಯ ಅವರಿಗೆ ಸರಿ ಎನ್ನಿಸಿದೆ.

ಹೀಗಾಗಿ ಮೈಸೂರು ದಸರೆಯ ಉದ್ಘಾಟನೆ ಮುಗಿಯುತ್ತಿದ್ದಂತೆಯೇ ಜನತಾ ನ್ಯಾಯಾಲಯಕ್ಕೆ ಎಂಟ್ರಿ ಕೊಟ್ಟಿರುವ ಸಿದ್ದರಾಮಯ್ಯ ಕೊಪ್ಪಳ, ಮಾನ್ವಿ ಸೇರಿದಂತೆ ಒಂದು ಕಡೆಯಿಂದ ಪ್ರವಾಸ ಶುರುಮಾಡಿ ಹವಾ ಎಬ್ಬಿಸಿದ್ದಾರೆ. ‘ನನ್ನ ಪತ್ನಿಯನ್ನು ಈ ಪ್ರಕರಣದಲ್ಲಿ ಎಳೆತಂದಿದ್ದು ನ್ಯಾಯವಾ?’ ಎಂಬುದೂ ಸೇರಿದಂತೆ ಅವರಾಡುತ್ತಿರುವ
ಮಾತು ಅಹಿಂದ ಸೈನ್ಯವನ್ನು ಕನ್‌ಸಾಲಿಡೇಟ್ ಮಾಡುವಲ್ಲಿ ಯಶಸ್ವಿಯಾಗುತ್ತಿದೆ. ಹೀಗೆ ಒಂದು ಕಡೆಯಿಂದ ಸಿದ್ದು ಜನತಾ ನ್ಯಾಯಾಲಯಕ್ಕೆ ದಾಂಗುಡಿ ಇಟ್ಟಿದ್ದರೆ, ಮತ್ತೊಂದು ಕಡೆಯಿಂದ ಸತೀಶ್ ಜಾರಕಿಹೊಳಿ ಸೇರಿದಂತೆ
ಅವರ ಆಪ್ತರು ‘ಪರ್ಯಾಯ ನಾಯಕತ್ವದ ಸೌಂಡೆದ್ದರೆ ಹುಷಾರ್’ ಎಂಬ ಮೆಸೇಜು ರವಾನಿಸುತ್ತಿದ್ದಾರೆ.

ಸುರ್ಜೇವಾಲ ಮಾತ್ರ ಆಡಿದ ಮಾತು?

ಅಂದ ಹಾಗೆ, ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆ ಆರಂಭವಾಯಿತಲ್ಲ? ಇದಾದ ನಂತರ ಅತ್ಯಾಪ್ತ ಸಚಿವರೊಬ್ಬರು ಸಿದ್ದರಾಮಯ್ಯ ಅವರ ಜತೆ ಒನ್-ಟು-ಒನ್ ಚರ್ಚೆ ಮಾಡಿದರಂತೆ. ‘ಸರ್, ಈಗಲಾದರೂ ನೀವು ಸ್ಪಷ್ಟವಾಗಿ ಹೇಳಿ. ಅಧಿಕಾರ ಹಂಚಿಕೆಯ ವಿಷಯದಲ್ಲಿ ಹೈಕಮಾಂಡ್ ಲೆವೆಲ್ಲಿನಲ್ಲಿ ಏನಾದರೂ ಒಪ್ಪಂದ ವಾಗಿದೆಯೇ? ಆಗಿದ್ದರೆ ಅದನ್ನು ನೇರವಾಗಿ ಹೇಳಿಬಿಡಿ. ಆಗ ನಾವು ಮುಂದಿನ ತೀರ್ಮಾನ ತೆಗೆದುಕೊಳ್ಳಲು ಅನುಕೂಲವಾಗುತ್ತದೆ’ ಅಂತ ಈ ಸಚಿವರು ಕೇಳಿದಾಗ ‘ಯೇ, ಅಂಥ ಒಪ್ಪಂದವೇನೂ ಆಗಿಲ್ಲ. ಆದರೆ ಈ ಸಂಬಂಧ ಒಂದು ಸಲ ಸುರ್ಜೇವಾಲಾ ಅವರು ನನ್ನೆದುರು ಪ್ರಸ್ತಾಪಿಸಿzರೆ. ಆದರೆ ಈ ಬಗ್ಗೆ ನಾನೇನೂ ಹೇಳಿಲ್ಲ’ ಅಂದರಂತೆ ಸಿದ್ದರಾಮಯ್ಯ.

ಆಗ ಈ ಸಚಿವರು, ‘ಒಂದು ವೇಳೆ ಮುಡಾ ಪ್ರಕರಣದ ಹಿನ್ನೆಲೆಯಲ್ಲಿ ಹೈಕಮಾಂಡ್ ವರಿಷ್ಠರು ನಿಮ್ಮ ಬಳಿ
ರಾಜೀನಾಮೆ ಕೇಳಿದರೆ ಏನು ಮಾಡುತ್ತೀರಿ?’ ಅಂತ ಮರುಪ್ರಶ್ನಿಸಿದ್ದಾರೆ. ಅದಕ್ಕುತ್ತರಿಸಿದ ಸಿದ್ದರಾಮಯ್ಯ, ‘ಒಂದು ವೇಳೆ ವರಿಷ್ಠರು ಈ ಬಗ್ಗೆ ಕೇಳಿದರೆ, ನನ್ನ ಆಪ್ತ ಸಚಿವರು, ಶಾಸಕರ ಜತೆ ಮಾತನಾಡಿ ತೀರ್ಮಾನಿಸುವುದಾಗಿ
ಹೇಳಿ ಬರುತ್ತೇನೆ. ಆದರೆ ನನಗನ್ನಿಸುವ ಪ್ರಕಾರ ವರಿಷ್ಠರು ಈಗಂತೂ ರಾಜೀನಾಮೆ ಕೇಳುವ ಮೂಡ್‌ನಲ್ಲಿಲ್ಲ’
ಎಂದಿದ್ದಾರೆ.

ಬಿಜೆಪಿಯಲ್ಲಿ ಹೊಸ ಆಟ ಶುರು

ಈ ಮಧ್ಯೆ ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆಗಳಿಂದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ.ಸಂತೋಷ್
ಕಿರಿಕಿರಿ ಮಾಡಿಕೊಂಡಿzರಂತೆ. ಕಾರಣ? ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಯತ್ನಾಳ್, ಸಿ.ಟಿ.ರವಿ, ಅರವಿಂದ ಲಿಂಬಾವಳಿ ಸೇರಿದಂತೆ ಹಲವರು ತಿರುಗಿಬಿದ್ದಿದ್ದಾರಲ್ಲ? ಇವರನ್ನು ಸಮಾಧಾನಿಸಿ,
ವಿಜಯೇಂದ್ರ ಅವರಿಗೆ ವಸ್ತುಸ್ಥಿತಿ ವಿವರಿಸಲು ಆರೆಸ್ಸೆಸ್ ನಾಯಕರು ಇತ್ತೀಚೆಗೆ ಸದಾಶಿವನಗರದಲ್ಲಿ ಸಭೆ ನಡೆಸಿ
ಬಿಳಿಬಾವುಟ ಹಾರಿಸಿದ್ದರು. ಆದರೆ ಆರೆಸ್ಸೆಸ್ ನಾಯಕರು ಬಿಳಿಬಾವುಟ ಹಾರಿಸಿದರೂ ಕ್ಯಾರೆ ಎನ್ನದ ವಿಜಯೇಂದ್ರ
ವಿರೋಽಗಳು ಉಲ್ಟಾ ಮಾತನಾಡಲು ಶುರುವಿಟ್ಟುಕೊಂಡರು. ಯಾವಾಗ ಇವರ ವರಾತ ಶುರುವಾಯಿತೋ,
ಆಗ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ನಿವಾಸದಲ್ಲಿ ಒಂದು ಸಭೆ ನಡೆಯಿತು. ಈ ಸಭೆಯಲ್ಲಿ
ಭಾಗವಹಿಸಿದ್ದವರು ತಮ್ಮನ್ನು ಪಕ್ಷನಿಷ್ಠರು ಅಂತ ಕರೆದುಕೊಂಡು ವಿಜಯೇಂದ್ರ ಪರ ನಿಂತಿದ್ದಲ್ಲದೆ ಯತ್ನಾಳ್
ಮತ್ತಿತರ ನಾಯಕರನ್ನು ‘ಭಿನ್ನಮತೀಯರು’ ಅಂತ ಪ್ರೊಜೆಕ್ಟ್ ಮಾಡಿದರು. ಯಾವಾಗ ಈ ಬೆಳವಣಿಗೆ
ನಡೆಯಿತೋ, ಸಂತೋಷ್ ಅವರಿಗೆ ಕಿರಿಕಿರಿಯಾಗಿದೆ.‌

ಅಂದ ಹಾಗೆ, ಪಕ್ಷದಲ್ಲಿ ಎರಡು ಗುಂಪುಗಳಿರುವುದು ಸಹಜ. ಹಿಂದೆ ಪಕ್ಷದಲ್ಲಿ ಯಡಿಯೂರಪ್ಪ ಮತ್ತು
ಅನಂತಕುಮಾರ್ ಅವರ ಗುಂಪುಗಳು ಇರಲಿಲ್ಲವೇ? ಅದೇ ರೀತಿ ಈಗಲೂ ವಿಜಯೇಂದ್ರ ಪರವಾದ ಮತ್ತು ವಿರುದ್ಧವಾದ ಗುಂಪು ಇರುವುದು ಸಹಜ. ಆದರೆ ವಿಜಯೇಂದ್ರ ವಿರೋಧಿ ಗುಂಪಿಗೆ ‘ಭಿನ್ನಮತೀಯ ಗುಂಪು’ ಅಂತ
ಹಣೆಪಟ್ಟಿ ಕಟ್ಟಿದರೆ ಹೇಗೆ? ಎಂಬುದು ಸಂತೋಷ್ ಆತಂಕ.

ಪರಿಣಾಮ? ಅವರು ವಿಜಯೇಂದ್ರ ವಿರೋಧಿಗಳಿಗೆ ಸಿಗ್ನಲ್ಲು ನೀಡಿ, ‘ಸದ್ಯಕ್ಕೆ ಹೆಚ್ಚು ಮಾತನಾಡಬೇಡಿ. ಆರೆಸ್ಸೆಸ್
ನಾಯಕರು ಸಂಧಾನಸಭೆ ನಡೆಸಿದ ನಂತರವೂ ನೀವು ಅಪಸ್ವರ ಎತ್ತಿದರೆ ನಿಮಗೆ ಭಿನ್ನಮತೀಯರು ಅಂತ ಹಣೆ
ಪಟ್ಟಿ ಹಚ್ಚಲಾಗುತ್ತದೆ. ಅದು ಒಳ್ಳೆಯದಲ್ಲ’ ಅಂತ ಎಚ್ಚರಿಸಿದ್ದಾರೆ. ಯಾವಾಗ ಸಂತೋಷ್ ಈ ಮಾತು ಹೇಳಿದರೋ, ವಿಜಯೇಂದ್ರ ವಿರೋಧಿ ಪಡೆ ಹೆಚ್ಚು ಮಾತನಾಡುತ್ತಿಲ್ಲ. ಆದರೆ ಬಿಜೆಪಿ ಮೂಲಗಳ ಪ್ರಕಾರ, ಈ ವಿರೋಧಿ ಗುಂಪು ಪಕ್ಷದಲ್ಲಿ ತನ್ನ ಬಲ ಹೆಚ್ಚಿಸಿಕೊಳ್ಳುವ ಕೆಲಸಕ್ಕೆ ಮುಂದಾಗಿದೆ. ಅರ್ಥಾತ್, ಪಕ್ಷದಲ್ಲಿ ಮೂಲೆಗುಂಪಾಗಿರುವವರನ್ನು ಗುರುತಿಸಿ ಪುನಃ ಸಕ್ರಿಯರನ್ನಾಗಿಸುವ ಪ್ರಯತ್ನಕ್ಕೆ ಕೈ ಹಾಕಿದೆ. ಅದರ ಪ್ರಕಾರ ಯತ್ನಾಳ್ ಉತ್ತರ ಕರ್ನಾಟಕ ಭಾಗದಲ್ಲಿ, ರಮೇಶ್ ಜಾರಕಿಹೊಳಿ ಮುಂಬೈ-ಕರ್ನಾಟಕ ಭಾಗದಲ್ಲಿ ಶಾಸಕ ಹರೀಶ್ ಮತ್ತು ಮಾಜಿ ಸಂಸದ ಜಿ. ಎಂ.ಸಿದ್ದೇಶ್ವರ್ ಮಧ್ಯ ಕರ್ನಾಟಕದಲ್ಲಿ, ಅರವಿಂದ ಲಿಂಬಾವಳಿ ಅವರು ಏಕಕಾಲಕ್ಕೆ ಹಳೆ ಮೈಸೂರು ಮತ್ತು ಉತ್ತರ ಕರ್ನಾಟಕದಲ್ಲಿ ಈ ಕೆಲಸಕ್ಕೆ ಕೈ ಹಾಕಿದ್ದಾರೆ. ಈ ಪೈಕಿ ಲಿಂಬಾವಳಿ ಸಂಘಟನೆಯಲ್ಲಿ ಸಕ್ರಿಯರಾಗಿದ್ದವರು. ಅವರಿಗಿರುವ ಹಳೆ ಲಿಂಕುಗಳೂ ಜಾಸ್ತಿ. ಹೀಗಾಗಿ ಎಲ್ಲರೂ ಸೇರಿ ವಿಜಯೇಂದ್ರ ವಿರೋಧಿ ಪಡೆಯನ್ನು ಬಲಿಷ್ಠಗೊಳಿಸಲು ಕಸರತ್ತು ಆರಂಭಿಸಿದ್ದಾರೆ.

ಅಂದ ಹಾಗೆ, ಪಕ್ಷ ರಾಜಕಾರಣದಲ್ಲಿ ಪರ್ಯಾಯ ಶಕ್ತಿಕೇಂದ್ರವನ್ನು ಆಕ್ಟಿವ್ ಆಗಿಡುವ ಪ್ರಯತ್ನ ಎಲ್ಲ ಪಕ್ಷಗಳ
ಹೈಕಮಾಂಡ್‌ಗಳಿಂದ ನಡೆಯುತ್ತದೆ. ಕಾರಣ? ತಾವು ಯಾರಿಗೆ ಹೊಣೆಗಾರಿಕೆ ವಹಿಸಿದ್ದೇವೋ, ಅವರು ಸರ್ವಾಧಿ
ಕಾರಿಗಳಾಗಬಾರದಲ್ಲ? ಹೀಗಾಗಿ ಅವರಿಗೆ ಕೌಂಟರ್ ಅಂತಿರುವುದು ಸೂಕ್ತ ಅಂತ ಹೈಕಮಾಂಡ್‌ಗಳು
ಬಯಸುತ್ತವೆ.

ಹಾಗಂತ ವಿಜಯೇಂದ್ರ ವಿರೋಧಿ ಗುಂಪಿನಲ್ಲಿ ಕೇವಲ ನಾಯಕರು ಮಾತ್ರ ಕಂಡರೆ ಹೇಗೆ? ಅಲ್ಲೂ ಕಾರ್ಯಕರ್ತರ ದಂಡಿರಬೇಕಲ್ಲ? ಹಾಗಂತಲೇ ಹೈಕಮಾಂಡ್ ಇಂಗಿತವನ್ನರಿತ ವಿಜಯೇಂದ್ರ ವಿರೋಧಿ ಕ್ಯಾಂಪು ಮೆಲ್ಲಗೆ ರಾಜ್ಯ ಪ್ರವಾಸ ಆರಂಭಿಸಿದೆ.

ಲಾಸ್ಟ್ ಸಿಪ್: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ‌ ಅವರು, ರಾಜ್ಯ ಬಿಜೆಪಿ ಉಸ್ತುವಾರಿ ವಹಿಸಿರುವ ರಾಧಾ ಮೋಹನದಾಸ್ ಅಗರ್ವಾಲ್ ಅವರನ್ನು ಮೊನ್ನೆ ಭೇಟಿ ಮಾಡಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ರಾಜ್ಯ
ರಾಜಕಾರಣದ ಬಗ್ಗೆ ಚರ್ಚೆ ನಡೆಸಿದ ಅಗರ್ವಾಲ ಅವರು, ‘ಕುಮಾರ್ ಸೋಮೀಜಿ, ಚನ್ನಪಟ್ಟಣದ ಇಶ್ಯೂ ಎಲ್ಲಿಗೆ
ಬಂತು?’ ಅಂತ ಕೇಳಿzರೆ. ಆದರೆ ಈ ಬಗ್ಗೆ ಹೆಚ್ಚು ಉತ್ಸಾಹ ತೋರಿಸದ ಕುಮಾರಸ್ವಾಮಿ, ‘ಚುನಾವಣೆಗೆ ಇನ್ನೂ ಟೈಮಿದೆ. ಹೀಗಾಗಿ ಆ ಬಗ್ಗೆ ಮುಂದೆ ಯೋಚಿಸಿದರಾಯ್ತು ಸರ್’ ಎಂದರಂತೆ.

ಅದಕ್ಕೆ ಅಗರ್ವಾಲ, ‘ಅರೇ, ಇದರ ಬಗ್ಗೆ ಮುಂದೇನು ಯೋಚಿಸುವುದು? ಅದು ನಿಮ್ಮ ಕ್ಷೇತ್ರ. ಅಲ್ಲಿಂದ ಯಾರು
ಸ್ಪಽಸಬೇಕು ಅಂತ ನೀವು ನಿರ್ಧರಿಸಬೇಕು. ಹೀಗಾಗಿ ಯಾರು ಕ್ಯಾಂಡಿಡೇಟ್ ಆಗಬೇಕು ಅಂತ ಆದಷ್ಟು ಬೇಗ
ನಿರ್ಧರಿಸಿ. ಯಾವಾಗ ನೀವು ಕರೆಯುತ್ತೀರೋ ಆಗ ನಾವು ಪ್ರಚಾರಕ್ಕೆ ಬರುತ್ತೇವೆ’ ಎಂದಿದ್ದಾರೆ. ಯಾವಾಗ ಅಗರ್ವಾಲ್ ಇಷ್ಟು ಸ್ಪಷ್ಟವಾಗಿ ಹೇಳಿದರೋ, ಇಶ್ಯೂ ಸೆಟ್ಲ್ ಮಾಡಲು ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದಲ್ಲಿ ಪ್ರವಾಸ ಶುರುಮಾಡಿzರೆ. ಅರ್ಥಾತ್, ಚನ್ನಪಟ್ಟಣ ಕ್ಷೇತ್ರದಿಂದ ಮಿತ್ರಕೂಟದ ಅಭ್ಯರ್ಥಿಯಾಗಿ ಜೆಡಿಎಸ್ ಕಣಕ್ಕಿಳಿ
ಯುವುದು ಮತ್ತಷ್ಟು ಖಚಿತವಾಗಿದೆ.

ಇದನ್ನೂ ಓದಿ: Huli Karthik: ‘ಗಿಚ್ಚಿ ಗಿಲಿಗಿಲಿ’ ವಿನ್ನರ್‌ ಹುಲಿ ಕಾರ್ತಿಕ್‌ ವಿರುದ್ಧ ಜಾತಿ ನಿಂದನೆ ಕೇಸ್‌; ಏನಿದು ವಿವಾದ?