Tuesday, 7th January 2025

Vishwavani Editorial: ರತನ್ ಟಾಟಾ ದೇಶದ ವರಪುತ್ರ

ಟಾಟಾ ಸಮೂಹದ ಮಾಜಿ ಅಧ್ಯಕ್ಷ ರತನ್ ಟಾಟಾ ಅವರ ನಿಧನಕ್ಕೆ ಇಡೀ ದೇಶ ಮರುಗಿದೆ. ಉದ್ಯಮ ರಂಗದ ಗಣ್ಯರಿಂದ ಹಿಡಿದು ಜನಸಾಮಾನ್ಯರವರೆಗೆ ಎಲ್ಲರೂ ರತನ್ ಟಾಟಾ ಅವರ ಗುಣಗಾನ ಮಾಡುತ್ತಿದ್ದಾರೆ. ಟಾಟಾ ಸಮೂಹದ ಉತ್ಪನ್ನಗಳನ್ನು ಬಳಸುತ್ತಿರುವ ಪ್ರತಿಯೊಬ್ಬರೂ ತಮ್ಮ ಹತ್ತಿರದ ಬಂಧುವೊಬ್ಬರನ್ನು ಕಳೆದು ಕೊಂಡಂತೆ ದು:ಖಿಸುತ್ತಿದ್ದಾರೆ.

ರತನ್ ಟಾಟಾ ಅವರು ಕೇವಲ ಉದ್ಯಮಿಯಾಗಿದ್ದರೆ ದೇಶವಾಸಿಗಳೆಲ್ಲರೂ ಅವರನ್ನು ಹಚ್ಚಿಕೊಳ್ಳುವ ಪ್ರಮೇಯ ಇರುತ್ತಿರಲಿಲ್ಲ. ರತನ್ ಟಾಟಾ ಅವರು ಉದ್ಯಮಿಯಾಗಿಯೂ ಸಂತನಂತೆ ಬಾಳಿದವರು. ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದರೂ ಸದಾ ಸೂಟು ಬೂಟುಗಳಲ್ಲಿ ಕಾಣಿಸಿಕೊಳ್ಳದೆ ಅರ್ಧ ತೋಳಿನ ಶರ್ಟಿನಲ್ಲಿ ಜನ ಸಾಮಾನ್ಯರಂತೆ ಕಾಣಿಸಿಕೊಂಡವರು.

ಮುತ್ತಜ್ಜ ಜಮೆಶೆಡ್‌ಜಿ ಟಾಟಾ ಅವರಂತೆ ದೇಶದ ಬಗ್ಗೆ ಚಿಂತಿಸುತ್ತಲೇ ತಮ್ಮ ಉದ್ಯಮವನ್ನು ವಿಸ್ತರಿಸಿದವರು. 10 ಸಾವಿರ ಕೋಟಿ ರು. ಮೌಲ್ಯದ ಉದ್ಯಮ ಸಮೂಹವನ್ನು ಲಕ್ಷ ಕೋಟಿ ರು.ಗಳಿಗೆ ವಿಸ್ತರಿಸಿದ ಬಳಿಕವೂ ಬೀಗದೆ ಸದಾ ಬಾಗಿ ನಡೆದವರು. ತಮ್ಮ ಸಿರಿವಂತಿಕೆಯ ಪ್ರದರ್ಶನಕ್ಕಾಗಿ ಗಗನಚುಂಬಿ ಬಂಗಲೆಗಳನ್ನು ಕಟ್ಟಿಕೊಳ್ಳದೆ, ದೇಶದ ಪ್ರಜೆಗಳಿಗಾಗಿ ತಾರಾ ಹೊಟೇಲ್‌ಗಳನ್ನು ಕಟ್ಟಿದವರು.

ಜಾಗ್ವಾರ್, ಲ್ಯಾಂಡ್ ರೋವರ್‌ನಂತಹ ವಿಶ್ವದ ದುಬಾರಿ ಕಂಪನಿಗಳನ್ನು ತನ್ನ ತೆಕ್ಕೆಗೆ ಪಡೆದ ಬಳಿಕವೂ ಟಾಟಾ ಕಂಪನಿಯ ಮಧ್ಯಮ ಶ್ರೇಣಿಯ ಕಾರುಗಳನ್ನು ಬಳಸಿದವರು. ಸರಕಾರದ ಮಾಡದ ಅದೆಷ್ಟೋ ಕೆಲಸಗಳನ್ನು
ತಾನು ಮಾಡುವ ಮೂಲಕ ಅಭ್ಯುದ ಯದ ದಾರಿ ತೋರಿಸಿದವರು. ತಮ್ಮ ಕಂಪನಿಗಳಿಗೆ ಲೈಸೆನ್ಸ್, ಗುತ್ತಿಗೆ ಪಡೆಯಲು ಎಂದೂ ಅಡ್ಡ ದಾರಿ ಹಿಡಿದವರಲ್ಲ. ಅನಗತ್ಯ ಹೇಳಿಕೆಗಳನ್ನು ನೀಡಿ ವಿವಾದಕ್ಕೆ ಗುರಿಯಾದವರಲ್ಲ. ಸರಕಾರದ ಮುಂದೆ ಕೈಯೊಡ್ಡಿ ನಿಂತ ವರಲ್ಲ.

ಉದ್ಯಮ ರಂಗದಲ್ಲಿ ಏನೇ ಸಾಹಸ ಮಾಡಿದರೂ ಈ ದೇಶದ ಕೆಳ ಮಧ್ಯಮ ಮತ್ತು ಮಧ್ಯಮ ವರ್ಗದ ಬಗ್ಗೆ ಚಿಂತಿಸುತ್ತಲೇ ಅವರಿಗಾಗಿ ಕೈಗೆಟಕುವ ದರದಲ್ಲಿ ಉತ್ಪನ್ನಗಳನ್ನು ಬಿಡುಗಡೆ ಮಾಡಿದವರು. ರತನ್ ಟಾಟಾ ಬಗ್ಗೆ ಹೇಳುವುದಾದರೆ ಇಂತಹ ನೂರೆಂಟು ವಿಷಯಗಳಿವೆ. ಅಂತಿಮವಾಗಿ ರತನ್ ಟಾಟಾ ನಮ್ಮ ನೆನಪಿನಲ್ಲಿ
ಉಳಿಯುವುದು ಅವರು ನಡೆದು ತೋರಿಸಿದ ನೈತಿಕತೆಯ ಮಾರ್ಗಕ್ಕಾಗಿ, ಅವರ ಸರಳತೆಗಾಗಿ. ನಮ್ಮ ಸರಕಾರ ಇಂತಹ ನಾಯಕನಿಗೆ ಭಾರತ ರತ್ನ ನೀಡದಿದ್ದರೂ ಇವರು ನಿಜವಾದ ಭಾರತ ರತ್ನ, ದೇಶದ ವರಪುತ್ರ.

ಇದನ್ನೂ ಓದಿ: Ratan Tata Death : ರತನ್ ಟಾಟಾಗೆ ನಮನ ಸಲ್ಲಿಸಿದ ಪ್ರೀತಿಯ ಶ್ವಾನ ‘ಗೋವಾ’, ಈ ನಾಯಿಯ ಕತೆಯೂ ಸ್ವಾರಸ್ಯಕರ