Tuesday, 7th January 2025

Vishwavani Editorial: ಯುನೆಸ್ಕೋ ಗೌರವ ಅಭಿಮಾನದ ಸಂಗತಿ

ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ನಮ್ಮ ನಾಡಿನ ಶ್ರೀಮಂತ ಜಾನಪದ ಪರಂಪರೆ ಮತ್ತು ಯಕ್ಷಗಾನಕ್ಕೆ ಯುನೆಸ್ಕೋ ಗೌರವ ಸಿಕ್ಕಿರುವುದು ಕನ್ನಡಿಗರೆಲ್ಲರೂ ಸಂಭ್ರಮಿಸುವ ಸಂಗತಿ. ಯನೆಸ್ಕೋ ತನ್ನ 10ನೇ ಅಧಿವೇಶನ ದಲ್ಲಿ ರಾಜ್ಯದ ಕರ್ನಾಟಕ ಜಾನಪದ ಪರಿಷತ್ ಮತ್ತು ಕೆರೆಮನೆ ಮನೆತನದ ಶ್ರೀಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಪಣತೊಟ್ಟ ಸಾಧಕ ಸಂಸ್ಥೆಗಳೆಂದು ವಿಶ್ವಮಾನ್ಯತೆ ನೀಡಿದೆ.

ವಿಶ್ವದ 58 ಸರಕಾರೇತರ ಸಂಸ್ಥೆಗಳಲ್ಲಿ ನಮ್ಮ ರಾಜ್ಯದ ಎರಡು ಸಂಸ್ಥೆಗಳು ಸೇರಿರುವುದು ಅಭಿಮಾನದ ವಿಚಾರ.
ಉತ್ತರ ಕನ್ನಡ ಜಿಯ ಹೊನ್ನಾವರ ತಾಲೂಕಿನ ಗುಣವಂತೆಯ ಶ್ರೀಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಯಕ್ಷಗಾನ ಪ್ರಿಯರೆಲ್ಲರಿಗೂ ಚಿರಪರಿಚಿತ ಹೆಸರು. 1934ರಲ್ಲಿ ಯಕ್ಷಲೋಕದ ದಿಗ್ಗಜ ಕೆರೆಮನೆ ಶಿವರಾಮ ಹೆಗಡೆ ಅವರ ಸಾರಥ್ಯದಲ್ಲಿ ಆರಂಭವಾದ ಇಡಗುಂಜಿ ಮೇಳ ಈಗ 90ನೇ ವರ್ಷದ ಸಂಭ್ರಮದಲ್ಲಿದೆ.

ಒಂದು ಕುಟುಂಬ ನಾಲ್ಕು ತಲೆಮಾರುಗಳಿಂದ ಸಂಪೂರ್ಣವಾಗಿ ಕಲೆಗೆ ಸಮರ್ಪಿಸಿಕೊಂಡು ಪರಂ ಪರೆಯ ರಕ್ಷಣೆ ಮತ್ತು ಪೋಷಣೆ ಗಾಗಿ ಪಣತೊಟ್ಟ ಇನ್ನೊಂದು ಉದಾ ಹರಣೆ ಸಿಗಲಾರದು. ಗ್ರಾಮೀಣ ಪರಿಸರದಲ್ಲಿ ಹುಟ್ಟಿ ಅಲ್ಲಿಂದಲೇ ತನ್ನ ಬೇರುಗಳನ್ನು ಭದ್ರಪಡಿಸಿಕೊಂಡು ಬೆಳೆದ ಇಡಗುಂಜಿ ಮೇಳ ಯಕ್ಷಗಾನದ ಸಂವರ್ಧನೆ, ಪರಂಪರೆ ಪ್ರಸಾರ, ಪ್ರಚಾರ, ದಾಖಲಾತಿ, ಕಲಿಕೆ ಈ ಎಲ್ಲ ಪ್ರಯತ್ನಗಳಲ್ಲೂ ಸಾಧನೆ ಮೆರೆದಿದೆ. ಭಾರತ ಮಾತ್ರ ವಲ್ಲದೆ ಹತ್ತಾರು ದೇಶಗಳಲ್ಲಿ ಯಕ್ಷಗಾನ ಪ್ರದರ್ಶನದ ಮೂಲಕ ಕರಾವಳಿಗೆ ಸೀಮಿತವಾಗಿದ್ದ ಈ ಕಲೆಯನ್ನು ವಿಶ್ವದಗಲಕ್ಕೆ ಪರಿಚ ಯಿಸಿದೆ. ಮಂಡಳಿಯ ಹಾಲಿ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ಅವರ ಸಮರ್ಥ ನಾಯಕತ್ವದಲ್ಲಿ ಬೆಳೆದು ಬಂದ ಇಡಗುಂಜಿ ಮೇಳ ಹತ್ತಾರು ಯಕ್ಷದಿಗ್ಗಜರನ್ನು ಪರಿಚಯಿ ಸಿದ ಹೆಗ್ಗಳಿಕೆಯನ್ನೂ ಹೊಂದಿದೆ.

ಇದೇ ರೀತಿ ರಾಜ್ಯದ ಸಾಂಪ್ರದಾಯಿಕ ಕಲಾ ಪ್ರಕಾರಗಳ ರಕ್ಷಣೆಗೆ ಹೆಸರಾಗಿರುವ ಕರ್ನಾಟಕ ಜಾನಪದ ಪರಿಷತ್ತು ಕಳೆದ 45 ವರ್ಷಗಳಿಂದ ಜಾನಪದ ಕ್ಷೇತ್ರಕ್ಕೆ ತನ್ನ ಕೊಡುಗೆಯನ್ನು ನೀಡುತ್ತಾ ಬಂದಿದೆ. ‘ರಾಮನಗರದ ಜಾನ
ಪದ ಲೋಕ’ ನಾಡಿನ ವಿಶಿಷ್ಟ ಸಾಂಸ್ಕೃತಿಕ ಕೇಂದ್ರವಾಗಿ ಗುರುತಿಸಿಕೊಂಡಿದೆ. ಯುನೆಸ್ಕೋ ಗೌರವದೊಂದಿಗೆ ನಮ್ಮ ಜಾನಪದ ಮತ್ತು ಯಕ್ಷಗಾನ ಕಲೆಯನ್ನು ವಿಶ್ವಮಟ್ಟದಲ್ಲಿ ಪರಿಚಯಿಸಲು ಇನ್ನಷ್ಟು ಒತ್ತು ಸಿಕ್ಕಂತಾಗಿದೆ.