ಸಂಸ್ಮರಣೆ
ಜ್ಯೋತಿರಾದಿತ್ಯ ಸಿಂಧಿಯಾ
ರತನ್ ಟಾಟಾ ಇಹಲೋಕ ತ್ಯಜಿಸಿದ್ದಾರೆ. ಅದರೊಂದಿಗೆ ಜಗತ್ತು ಒಬ್ಬ ಅದ್ಭುತ ದೂರದೃಷ್ಟಿಯ, ಅಪ್ರತಿಮ ಹೃದಯವಂತ ಹಾಗೂ ದೈತ್ಯ ಉದ್ಯಮಿಯನ್ನು ಕಳೆದುಕೊಂಡಿದೆ. ರತನ್ ಟಾಟಾ ಔದ್ಯೋಗಿಕ ಜಗತ್ತಿಗೆ ಮಾತ್ರ
ಅನುಪಮ ಪರಂಪರೆಯೊಂದನ್ನು ಬಿಟ್ಟು ಹೋಗಿಲ್ಲ.
ಭಾರತವನ್ನೂ, ಭಾರತೀಯರನ್ನೂ ಹೇಗೆ ಮೊದಲ ಸ್ಥಾನದಲ್ಲಿರಿಸಬೇಕು ಎಂಬುದಕ್ಕೆ ಅವರು ಅಸಾಮಾನ್ಯ ಉದಾಹರಣೆಯನ್ನು ಕೂಡ ಬಿಟ್ಟು ಹೋಗಿದ್ದಾರೆ. ‘ಭಾರತ ಮೊದಲು’ ಎಂಬುದು ಅವರ ಬದುಕಿನಲ್ಲಿ ಆಳವಾಗಿ ಬೇರುಬಿಟ್ಟಿದ್ದ, ಅವರ ಹೃದಯದಲ್ಲಿ ಸದಾ ಮಿಡಿಯುತ್ತಿದ್ದ ಮೌಲ್ಯವಾಗಿತ್ತು.
ನಿಮಗೆ ಟಾಟಾ ಸ್ಟೀಲ್‌ನ ಹಳೆಯ ಜಾಹೀರಾತೊಂದು ನೆನಪಿರಬಹುದು. ‘ವಿ ಆಲ್ಸೋ ಮೇಕ್ ಸ್ಟೀಲ್’ ಎಂದು
ಹೇಳುತ್ತಿದ್ದ ಜಾಹೀರಾತು ಅದು. ರತನ್ ಟಾಟಾ ಅವರನ್ನು ಚೆನ್ನಾಗಿ ಬಲ್ಲ ಎಲ್ಲರಿಗೂ ಅದರ ಒಳಾರ್ಥವೇನು ಎಂಬುದು ಗೊತ್ತಿತ್ತು. ವಿ ಆಲ್ಸೋ ಮೇಕ್ ಸ್ಟೀಲ್ ಎಂಬುದನ್ನು ಇಂಗ್ಲಿಷ್ ನಿಂದ ಭಾರತೀಯ ಭಾಷೆಗೆ ಅನುವಾದಿಸಿದರೆ, ‘ನಾವು ಸ್ಟೀಲ್ ಕೂಡ ತಯಾರಿಸುತ್ತೇವೆ’ ಎಂದೂ, ‘ನಾವು ಕೂಡ ಸ್ಟೀಲ್ ತಯಾರಿಸುತ್ತೇವೆ’ ಎಂದೂ, ಎರಡು ರೀತಿಯ ಅರ್ಥ ಸುರಿಸುತ್ತದೆ.
ರತನ್ ಟಾಟಾ ಹಾಸ್ಯ ಚಟಾಕಿಗಳಿಗೆ ಪ್ರಸಿದ್ಧರಾಗಿದ್ದ ಮನುಷ್ಯ. ಅವರು ಬ್ರಿಟಿಷರಿಗೆ ಟಾಂಗ್ ನೀಡಲು ಇಂಥದ್ದೊಂದು ಜಾಹೀರಾತು ಮಾಡಿಸಿದ್ದರು ಎಂಬುದರ ಜತೆಗೇ, ಭಾರತೀಯತೆಯೆಂಬ ಸ್ವಾಭಿಮಾನವನ್ನು ಸಮಸ್ತ ದೇಶವಾಸಿಗಳಲ್ಲೂ ಮೂಡಿಸುವ ಅಪ್ಪಟ ದೇಶಭಕ್ತನ ಪ್ರಯತ್ನ ಕೂಡ ಇದರ ಆಂತರ್ಯದಲ್ಲಿ ಇತ್ತು. ಮನಸ್ಸು ಮಾಡಿದರೆ ನಾವು ಏನು ಬೇಕಾದರೂ ಮಾಡಬಲ್ಲೆವು ಎಂಬ ಉತ್ಸಾಹವನ್ನು ಅವರು ಜನರಲ್ಲಿ ಈ
ಜಾಹೀರಾತಿನ ಮೂಲಕ ತುಂಬಿದ್ದರು. ಆದ್ದರಿಂದಲೇ ಅವರು ಭಾರತೀಯರ ಪಾಲಿಗೆ ಉದಾರ ಹೃದಯದ, ‘ಬದುಕಿಗಿಂತ ದೊಡ್ಡ ವ್ಯಕ್ತಿತ್ವದ ಮನುಷ್ಯ’ ಆಗಿದ್ದರು. ನಿಜವಾದ ಅರ್ಥದಲ್ಲಿ ಅವರೊಬ್ಬ ಬಹುದೊಡ್ಡ ಕನಸುಗಾರ ಎಂಬುದಕ್ಕೆ ಭಾರತದ ಶಕ್ತಿಯನ್ನು ಮನಗಂಡು ಈ ದೇಶವನ್ನು ಎಷ್ಟು ಎತ್ತರಕ್ಕೆ ಕೊಂಡೊ
ಯ್ಯಲು ಸಾಧ್ಯವೋ ಅಷ್ಟು ಎತ್ತರಕ್ಕೆ ಕೊಂಡೊಯ್ಯಲು ತಮ್ಮಿಂದಾದ ಎಲ್ಲಾ ಕೆಲಸಗಳನ್ನೂ ಮಾಡಬೇಕೆಂದು ಕಟಿಬದ್ಧರಾಗಿ ಅವರು ನಿಂತಿದ್ದೇ ಸಾಕ್ಷಿಯಾಗಿದೆ. ಔದ್ಯೋಗಿಕ ಜಗತ್ತಿನಲ್ಲಿ ಪಾಲಿಸಬೇಕಾದ ಮೌಲ್ಯಗಳ ಬಗ್ಗೆ ಅವರಿಗೆ ಸ್ಪಷ್ಟವಾದ ಕಲ್ಪನೆಯಿತ್ತು.
ಅದರ ಜತೆಗೇ, ದೇಶದ ಜನಸಾಮಾನ್ಯರ ದೈನಂದಿನ ಬದುಕಿನ ವಾಸ್ತವಗಳ ಅರಿವೂ ಇತ್ತು. ಈ ಕಾರಣದಿಂದಾಗಿಯೇ ಟಾಟಾ ಗ್ರೂಪ್ ಎಂಬ ಕಂಪನಿಗಳ ಸಮೂಹವನ್ನು ಪ್ರತಿಯೊಬ್ಬ ಭಾರತೀಯನ ದಿನನಿತ್ಯದ ಬದುಕಿನ ಎಲ್ಲಾ ಸ್ತರಗಳನ್ನೂ ಒಂದಲ್ಲಾ ಒಂದು ರೀತಿಯಲ್ಲಿ ತಟ್ಟುವಂತೆ ಕಟ್ಟಿ ಬೆಳೆಸಲು ಅವರಿಂದ ಸಾಧ್ಯವಾಯಿತು. ಅದರ ಮೂಲಕ ಅವರು ಭಾರತೀಯ ಉದ್ಯಮಿಗಳು ಯೋಚಿಸುವ ರೀತಿಯನ್ನೇ ಬದಲಾಯಿಸಿದರು. ವಿಭಿನ್ನವಾಗಿ ಮತ್ತು ಜನಸಾಮಾನ್ಯರ ದೃಷ್ಟಿಯಿಂದ ಯೋಚಿಸುವ ಸಾಮರ್ಥ್ಯ ಅವರಿಗಿತ್ತು ಎಂಬುದಕ್ಕೆ ಅತ್ಯಂತ ಕಡಿಮೆ ಬೆಲೆಯ ಕುಡಿಯುವ ನೀರಿನ ಶುದ್ಧೀಕರಣ ಯಂತ್ರ ‘ಸ್ವಚ್ಛ್’, ಕಡಿಮೆ ಬೆಲೆಯಲ್ಲಿ ಜನಸಾಮಾನ್ಯರಿಗೆ ಕಾರಿನ ಪ್ರಯಾಣ ಒದಗಿಸಲು ಅವರ ಕಂಪನಿ ನಿರ್ಮಿಸಿದ ಟಾಟಾ ಇಂಡಿಕಾ ಮತ್ತು ನ್ಯಾನೋ ಕಾರುಗಳು, ‘ಜಿಂಜರ್’ ಹೆಸರಿನ
ಕಡಿಮೆ ಬಜೆಟ್‌ನ ಆರಾಮದಾಯಕ ಹೋಟೆಲ್ ಗಳು ನಮ್ಮ ಕಣ್ಣಮುಂದೆ ಇವೆ.
ಇವು ರತನ್ ಟಾಟಾ ಪಾಲಿಗೆ ಕೇವಲ ಒಂದೊಂದು ಹೊಸ ಪ್ರಾಜೆಕ್ಟ್ ಆಗಿರಲಿಲ್ಲ, ಬದಲಿಗೆ ಭಾರತದ ಮಧ್ಯಮ ವರ್ಗದ ಜನರಿಗೆ ಸುಖಕರ ಪ್ರಯಾಣ, ಐಷಾರಾಮ ಹಾಗೂ ಅವಕಾಶಗಳನ್ನು ಸೃಷ್ಟಿಸುವ ಭರವಸೆದಾಯಕ ಭವಿಷ್ಯದ ಚಿಹ್ನೆಗಳಾಗಿದ್ದವು. ನ್ಯಾನೋ ಕಾರಿನ ಬಗ್ಗೆ ಒಮ್ಮೆ ಮಾತನಾಡುತ್ತಾ ಅವರು, ‘ಒಂದು ದಿನ ಬಾಂಬೆಯಲ್ಲಿ ಸುರಿಯುತ್ತಿದ್ದ ಬಿರುಮಳೆಯಲ್ಲಿ ಒಂದೇ ಮೋಟರ್‌ಬೈಕ್ ಮೇಲೆ ನಾಲ್ಕು ಜನರ ಪುಟ್ಟ ಸಂಸಾರವೊಂದು ಕುಳಿತು ಪ್ರಯಾಣಿಸುತ್ತಿದ್ದುದನ್ನು ನೋಡಿದೆ.
ಬೇರೆ ಆಯ್ಕೆಯಿಲ್ಲದೆ ಹೀಗೆ ತಮ್ಮ ಜೀವವನ್ನು ಅಪಾಯಕ್ಕೆ ತಳ್ಳಿ ಪ್ರಯಾಣಿಸುವ ಸಾಮಾನ್ಯ ಕುಟುಂಬಗಳ ಅನುಕೂಲಕ್ಕಾಗಿ ಏನಾದರೂ ಮಾಡಬೇಕೆಂದು ಅಂದೇ ನಿರ್ಧರಿಸಿದ್ದೆ’ ಎಂದು ಹೇಳಿದ್ದರು. ಬೇರೆಯ ದೊಡ್ಡ ದೊಡ್ಡ ಉದ್ಯಮಿಗಳಿಗಿಂತ ರತನ್ ಟಾಟಾ ವಿಭಿನ್ನವಾಗಿ ನಿಲ್ಲುವುದು ಇದೇ ಕರುಣೆಯ ಕಾರಣಕ್ಕೆ. ಎಲ್ಲಕ್ಕಿಂತ ಹೆಚ್ಚಾಗಿ ರತನ್ ಟಾಟಾ ಜನಾನುರಾಗಿಯಾಗಿದ್ದರು. ಗ್ರಾಹಕರ ತೃಪ್ತಿ ಹಾಗೂ ಸೇವೆಯೇ ಅವರ ಪರಮೋಚ್ಚ ಗುರಿಯಾಗಿತ್ತು. ತಮ್ಮ ಸುತ್ತಮುತ್ತ ಇರುವ ಪ್ರತಿಯೊಬ್ಬರನ್ನೂ ಗೌರವಿಸುತ್ತಿದ್ದರು. ಅವರನ್ನು ಸಹಾನು ಭೂತಿಯಿಂದ ನೋಡುತ್ತಿದ್ದರು. ಅವರಂಥ ದೊಡ್ಡ ಹಾಗೂ ಶ್ರೀಮಂತ ವ್ಯಕ್ತಿ ಹೀಗೆ ಇರುವ ಅಗತ್ಯವಿರಲಿಲ್ಲ. ಆದರೆ ರತನ್ ಸದಾ ಜನಸಾಮಾನ್ಯರ ಜತೆಗೆ ಇರಲು ಬಯಸುತ್ತಿದ್ದರು. ಅವರ ಮನೆಗೆ ಯಾವಾಗಲೂ ನೆಂಟರಿಷ್ಟರು ಬಂದು-ಹೋಗಿ ಮಾಡಬೇಕಿತ್ತು.
ಒಂದು ಮುಗ್ಧ ಮಗುವಿನಂತೆ ರತನ್ ಪ್ರತಿಯೊಂದನ್ನೂ ಕುತೂಹಲದಿಂದ ನೋಡುತ್ತಿದ್ದರು. ಸಾಮಾನ್ಯ ಜನರ ಬದುಕಿನ ಬಗ್ಗೆ ಅವರಿಗೆ ಅಪಾರ ಕುತೂಹಲವಿತ್ತು.
ಅವರ ಜೀವನಶೈಲಿ, ಇಷ್ಟಾನಿಷ್ಟಗಳು, ಪ್ರಯಾಣ, ಪ್ರವಾಸ ಇತ್ಯಾದಿಗಳ ಬಗ್ಗೆ ಯಾವಾಗಲೂ ವಿಚಾರಿಸುತ್ತಿದ್ದರು. ಹೀಗಾಗಿ ರತನ್ ಟಾಟಾರನ್ನು ಯಾರು ಒಮ್ಮೆ ಭೇಟಿಯಾದರೂ ಅವರ ಹೃದಯದಲ್ಲಿ ಆ ಭೇಟಿ ಸದಾ
ಹಚ್ಚ ಹಸುರಾಗಿರುತ್ತಿತ್ತು. ನಾನು ಕೂಡ ಅವರನ್ನು ಅನೇಕ ಸಲ ಭೇಟಿಯಾಗಿದ್ದೇನೆ. ನನ್ನಂಥ ಕಿರಿಯನ ಜತೆಗೂ ಅಪಾರ ವಿನಯದಿಂದ ನಡೆದುಕೊಳ್ಳುತ್ತಿದ್ದರು. ಮೊದಲ ಬಾರಿ ತಂದೆಯವರ ಜತೆಗೆ ಅವರನ್ನು ಭೇಟಿಯಾದಾಗ ನನಗೆ 10 ವರ್ಷ. ಅಂದಿನಿಂದ ಆರಂಭಿಸಿ, ಕಳೆದ ನಾಲ್ಕು ದಶಕಗಳ ಕಾಲ ಅವರ ಬದುಕು ನನಗೆ ಸದಾ ಸ್ಪೂರ್ತಿದಾಯಕವಾಗಿದೆ. ರತನ್ ಟಾಟಾರಂತೆಯೇ ನಾನು ಕೂಡ ಪ್ರಾಣಿಪ್ರಿಯ. ಅವರ ಮನೆಗೆ ಯಾವಾಗಲೂ
ಮನುಷ್ಯರಿಗೆ ಮತ್ತು ಪ್ರಾಣಿಗಳಿಗೆ ಮುಕ್ತ ಸ್ವಾಗತವಿರುತ್ತಿತ್ತು.
ಅವರಿಗೆಲ್ಲ ರತನ್ ತುಂಬು ಹೃದಯದ ಪ್ರೀತಿ ತೋರುತ್ತಿದ್ದರು. ಅದನ್ನು ನಾನು ತುಂಬಾ ಮೆಚ್ಚಿಕೊಂಡಿದ್ದೇನೆ. ಬಾಂಬೆ ಹೌಸ್ ನಲ್ಲಿರುವ ಟಾಟಾ ಗ್ರೂಪ್‌ನ ಹೆಡ್ ಕ್ವಾರ್ಟರ್ಸ್ ಹಾಗೂ ಮುಂಬೈನ ತಾಜ್ ಹೋಟೆಲ್‌ನಲ್ಲಿ ಬೀದಿ ಪ್ರಾಣಿಗಳಿಗೆ ಸದಾ ಆಶ್ರಯವಿರುತ್ತಿತ್ತು.
ಸಿಂಧಿಯಾ ಕುಟುಂಬ ಮತ್ತು ಟಾಟಾ ಕುಟುಂಬದ ನಡುವೆ ಬಹಳ ಹಳೆಯ ಸುಮಧುರ ಸಂಬಂಧವಿದೆ ಎಂಬುದು ನನಗೆ ಹೆಮ್ಮೆಯ ವಿಚಾರ. ಟಾಟಾ ಸ್ಟೀಲ್ ಕಂಪನಿಯಲ್ಲಿ ಕಬ್ಬಿಣ ಮತ್ತು ಉಕ್ಕು ತಯಾರಿಸಲು ಜಮ್‌ಷೆಡ್‌ಜಿ ಟಾಟಾ ಅವರು ಬಂಡವಾಳಕ್ಕಾಗಿ ಎದುರು ನೋಡುತ್ತಿದ್ದಾಗ ನನ್ನ ಮುತ್ತಾತರಾಗಿದ್ದ ಮಹಾರಾಜ ಮಾಧವರಾವ್ ಸಿಂಧಿಯಾ-1 ಅವರು ಹಣಕಾಸಿನ ಸೌಲಭ್ಯ ಒದಗಿಸಿದ್ದರು. ತನ್ಮೂಲಕ ಭಾರತದಲ್ಲಿ ಸ್ವದೇಶಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯೊಂದು ತಲೆಯೆತ್ತುವ ಕನಸು ನನಸಾಗುವುದಕ್ಕೆ ಕಾರಣರಾಗಿದ್ದರು.
ಸ್ವಾತಂತ್ರ್ಯ ಲಭಿಸುವುದಕ್ಕೂ ಮೊದಲು ಜೆಆರ್‌ಡಿ ಟಾಟಾ ಅವರು ಏರ್ ಇಂಡಿಯಾ ಕಂಪನಿಯನ್ನು ಆರಂಭಿಸಿ ದಾಗ ಅವರು ಮತ್ತು ನನ್ನ ತಾತ ಮಹಾರಾಜ ಜೀವಾಜಿ ರಾವ್ ಸಿಂಧಿಯಾ ಒಟ್ಟಾಗಿ ಗ್ವಾಲಿಯರ್ ನಗರವನ್ನು ಜಗತ್ತಿನ ನಾಗರಿಕ ವಿಮಾನಯಾನದ ನಕಾಶೆಯಲ್ಲಿ ಸೇರಿಸುವುದಕ್ಕೆ ಕಾರಣಕರ್ತರಾಗಿದ್ದರು. ರತನ್ ಟಾಟಾಗಿಂತ ಎಂಟು ವರ್ಷ ಚಿಕ್ಕವರಾಗಿದ್ದ ನನ್ನ ತಂದೆ ಕೂಡ ಅವರೊಂದಿಗೆ ಆಪ್ತ ಒಡನಾಟ ಹೊಂದಿದ್ದರು.
ಕಳೆದ ಮೂರು ದಶಕಗಳ ವೃತ್ತಿಜೀವನದಲ್ಲಿ ಮೊದಲಿಗೆ ಇನ್ವೆಸ್ಟ್ ಮೆಂಟ್ ಬ್ಯಾಂಕರ್ ಆಗಿ ಹಾಗೂ ನಂತರ ರಾಜಕಾರಣಿಯಾಗಿ ನಾನು ಅನೇಕ ಬಾರಿ ರತನ್ ಟಾಟಾರನ್ನು ಭೇಟಿಯಾಗಿದ್ದೇನೆ. ಪ್ರತಿ ಬಾರಿಯೂ ಅವರಿಂದ ಹೊಸ ಸೂರ್ತಿ ಪಡೆದೇ ಮರಳಿದ್ದೇನೆ. 2016ರಲ್ಲಿ ಗ್ವಾಲಿಯರ್‌ನಲ್ಲಿರುವ ಸಿಂಧಿಯಾ ಸ್ಕೂಲ್‌ನ ವಾರ್ಷಿಕೋತ್ಸವಕ್ಕೆ ರತನ್ ಟಾಟಾ ಆಗಮಿಸಿದ್ದರು.
ಅವರಿಗೆ ಅತಿಥಿ ಸತ್ಕಾರ ನೀಡುವ ಭಾಗ್ಯ ನನ್ನದಾಗಿತ್ತು. ಆಗ ಅವರಿಗೆ 80 ವರ್ಷ. ಆದರೂ ವಿದ್ಯಾರ್ಥಿಗಳ ವಲಯದಲ್ಲಿ ಅವರೊಬ್ಬ ಹೀರೋ ಆಗಿದ್ದರು. ವಿದ್ಯಾರ್ಥಿಗಳು ನೀಡಿದ ಪ್ರತಿಯೊಂದು ಪ್ರಾತ್ಯಕ್ಷಿಕೆಯನ್ನೂ ಆಸಕ್ತಿಯಿಂದ ವೀಕ್ಷಿಸಿದ ಟಾಟಾ, ಪ್ರತಿ ವಿದ್ಯಾರ್ಥಿಯ ಜತೆಗೂ ಆಪ್ತವಾಗಿ ಮಾತನಾಡಿದ್ದರು. ತಮ್ಮ ಸುದೀರ್ಘ
ವೃತ್ತಿಜೀವನದಲ್ಲಿ ರತನ್ ಟಾಟಾ ಯಾವಾಗಲೂ ಯುವಕರಲ್ಲಿ ಹೊಸ ಹೊಸ ಐಡಿಯಾಗಳನ್ನು ಬಿತ್ತುತ್ತಿದ್ದರು. ನಿವೃತ್ತಿಯ ನಂತರ ಅವರು ಯುವಕರ ಸ್ಟಾರ್ಟಪ್‌ಗಳನ್ನು ಗುರುತಿಸಿ, ಪ್ರತಿಭಾವಂತರ ಹೊಸ ಉದ್ದಿಮೆಗಳಲ್ಲಿ
ಬಂಡವಾಳ ತೊಡಗಿಸುವ ಮೂಲಕ ಅವರು ಬೆಳೆಯಲು ಪ್ರೋತ್ಸಾಹ ನೀಡುತ್ತಿದ್ದರು.
ಒಬ್ಬ ಸಮಾಜ ಸೇವಕನಾಗಿ ಅವರು ಭಾರತ ಹಾಗೂ ಹೊರದೇಶಗಳಲ್ಲಿ ಲಕ್ಷಾಂತರ ಜನರ ಬದುಕನ್ನು ಸುಧಾ ರಿಸುವಲ್ಲಿ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಹಾಗೆ ನೋಡಿದರೆ ಸಾಮಾಜಿಕ ಪ್ರಗತಿಗಾಗಿ ಟಾಟಾ ಕುಟುಂಬ ಆರಂಭ ದಿಂದಲೂ ಕೊಡುಗೆ ನೀಡುತ್ತಲೇ ಬಂದಿದೆ. ಆ ಶ್ರೀಮಂತ ಪರಂಪರೆಯನ್ನು ರತನ್ ಟಾಟಾ ಇನ್ನಷ್ಟು ಎತ್ತರಕ್ಕೆ ಏರಿಸಿದರು. ವೃತ್ತಿಜೀವನದಲ್ಲಿ ಅವರು ತಮ್ಮ ಕಂಪನಿಯ ನೌಕರರ ಹಾಗೂ ಷೇರುದಾರರ ಹಿತಾಸಕ್ತಿ ಕಾಪಾಡುವಲ್ಲಿ ಸದಾ ಮುಂಚೂಣಿ ಯಲ್ಲಿರುತ್ತಿದ್ದರು. ಹೀಗಾಗಿ ಟಾಟಾ ಕಂಪನಿಯ ನೌಕರರಿಗೆ ಹಾಗೂ ಷೇರುದಾರರಿಗೆ ಟಾಟಾ ಗ್ರೂಪ್ ಜತೆಗೆ ವೈಯಕ್ತಿಕ ಮಟ್ಟದಲ್ಲೂ ಒಂದು ಬಾಂಧವ್ಯವಿರುತ್ತಿತ್ತು.
ಒಬ್ಬ ನಿಜವಾದ ನಾಯಕನಂತೆ ಅವರು ಯಾವತ್ತೂ ತಾವು ಪ್ರಚಾರದಲ್ಲಿರಲು ಬಯಸುತ್ತಿರಲಿಲ್ಲ. ಸದಾ ತೆರೆಯ ಹಿಂದೆಯೇ ನಿಂತು ಎಲ್ಲರನ್ನೂ ಪ್ರೋತ್ಸಾಹಿಸಲು ಬಯಸುತ್ತಿದ್ದರು. ‘ಟಾಟಾ ಒಮ್ಮೆ ಭರವಸೆ ನೀಡಿದರೆಂದರೆ ಅದು ರತನ್ ಅವರಿಂದ ಸಿಕ್ಕ ಭರವಸೆ’ ಎಂಬ ಮಾತು ಚಾಲ್ತಿಯಲ್ಲಿತ್ತು. ರತನ್ ಮಾತು ಕೊಟ್ಟರೆ ಯಾವತ್ತೂ ಅದು ಸುಳ್ಳಾಗುತ್ತಿಲಿಲ್ಲ. ನಾನಂತೂ ಅವರನ್ನು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯದ ಗಟ್ಟಿ ನಾಯಕನಂತೆ ನೋಡಿದ್ದೇನೆ. ಏರ್ ಇಂಡಿಯಾವನ್ನು ಟಾಟಾ ಕಂಪನಿಯು ಖರೀದಿಸುವ ಪ್ರಕ್ರಿಯೆ ನಡೆಯುತ್ತಿದ್ದಾಗ ಟಾಟಾ ಗ್ರೂಪ್ ಜತೆಗೆ ಬಹಳ ಹತ್ತಿರದಿಂದ ಕೆಲಸ ಮಾಡಿದ್ದೇನೆ. ಅದನ್ನೊಂದು ಜಾಗತಿಕ ದರ್ಜೆಯ ಏರ್ ಲೈನ್ಸ್ ಆಗಿ ರೂಪಿಸಬೇಕೆಂಬುದು ರತನ್ ಟಾಟಾ ಬಯಕೆಯಾಗಿತ್ತು.
ಅದಕ್ಕಾಗಿ ಅವರು ತೋರಿದ ಧೈರ್ಯ ಹಾಗೂ ಭಾವನಾತ್ಮಕ ಬದ್ಧತೆಯನ್ನು ಹೇಗೆ ಮರೆಯಲಿ? ಸ್ವಾತಂತ್ರ
ಪೂರ್ವದಲ್ಲಿ ಅವರ ಕುಟುಂಬವೇ ಹುಟ್ಟುಹಾಕಿದ ಏರ್‌ಲೈನ್ಸ್ ಅದಾಗಿತ್ತು. ಅದು ಪುನಃ ಯಶಸ್ಸಿನ ಹೊಸ ಎತ್ತರಕ್ಕೇರಲಿ ಎಂದು ಟಾಟಾ ಮನಸಾರೆ ಆಶಿಸಿದ್ದರು.
ನಾವೆಲ್ಲರೂ ಅವರ ಸಾವಿನ ದುಃಖದಲ್ಲಿರುವಾಗ ಕೊನೆಯ ಬಾರಿ 2022ರಲ್ಲಿ ನಾನು ಅವರನ್ನು ಭೇಟಿಯಾದ ಗಳಿಗೆ
ನೆನಪಾಗುತ್ತಿದೆ. ನನ್ನ ಪತ್ನಿ ಹಾಗೂ ಮಗನ ಜತೆಗೆ ಹೋಗಿ ಅವರೊಂದಿಗೆ ಊಟ ಮಾಡಿದ್ದೆ. ಅವರ ಡೈನಿಂಗ್ ಟೇಬಲ್ ಮೇಲೆ ಪುಸ್ತಕಗಳು ಹಾಗೂ ಬಿಸಿನೆಸ್ ಪ್ಲಾನ್‌ನ ಫೈಲ್‌ಗಳೇ ತುಂಬಿದ್ದವು. ತಮ್ಮ ಜತೆಗೆ ಕೆಲಸ ಮಾಡು ತ್ತಿರುವ ಯುವ ಉದ್ಯಮಿಗಳ ಉತ್ಸಾಹ ಹಾಗೂ ಹೊಸ ಹೊಸ ಐಡಿಯಾಗಳ ಬಗ್ಗೆಯೇ ನಮ್ಮ ಜತೆಗೆ ಮಾತನಾಡಿ ದ್ದರು.
ತಾನೂ ಉದ್ಯಮಿಯಾಗಬೇಕೆಂದು ಬಯಸಿದ್ದೇನೆಂದು ನನ್ನ ಮಗ ಹೇಳಿದಾಗ ಅವರಿಗೆ ಬಹಳ ಖುಷಿಯಾಗಿತ್ತು. ಅದಕ್ಕೆ ಬೇಕಾದ ಸಲಹೆ ಹಾಗೂ ಕಿವಿಮಾತನ್ನು ಒಬ್ಬ ಸಂತನ ಸ್ಥಾನದಲ್ಲಿ ನಿಂತು ಹೇಳಿದ್ದರು! ಅವರು ತೋರಿದ ಪ್ರೀತಿ, ಅವರ ವಿನಯ, ಅವರ ಮೃದುವಾದ ಮಾತುಗಳು ಹಾಗೂ ಕಾಳಜಿಯನ್ನು ಯಾವತ್ತೂ ಮರೆಯಲಾರೆ.
ಆ ದಿನದ ನೆನಪು ಸದಾ ನನ್ನ ಹೃದಯದಲ್ಲಿ ಬೆಚ್ಚಗಿರುತ್ತದೆ. ‘ಹಾಡು ಮುಗಿದಿದೆ, ಅದರ ಸಂಗೀತ ಇನ್ನೂ ಮನಸ್ಸಿನಲ್ಲಿ ಸುಳಿದಾಡುತ್ತಿದೆ’ ಎಂಬ ಮಾತಿನಂತೆ ರತನ್ ಟಾಟಾ ಅವರ ನಿರ್ಗಮನ ನನಗೆ ವೈಯಕ್ತಿಕವಾಗಿಯೂ ತುಂಬಲಾರದ ನಷ್ಟವಾಗಿದೆ.
ನಮ್ಮೆಲ್ಲರ ಮೇಲೆ ಅಚ್ಚಳಿಯದ ಪ್ರಭಾವ ಉಂಟುಮಾಡಿದ ಒಬ್ಬ ಅದ್ಭುತ ಮನುಷ್ಯ ಹಾಗೂ ದೂರದೃಷ್ಟಿಯ ನಾಯಕನನ್ನಾಗಿ ನಾನು ಸದಾ ಅವರನ್ನು ನೆನಪಿನಲ್ಲಿರಿಸಿಕೊಳ್ಳುತ್ತೇನೆ. ಭಾರತ ಮಾತೆಯ ನಿಜವಾದ ಪುತ್ರ ರತನ್
ಟಾಟಾಗೆ ಇಡೀ ದೇಶ ಶ್ರದ್ಧಾಂಜಲಿ ಸಲ್ಲಿಸುತ್ತಿದೆ. ಅವರಲ್ಲಿ ನಾನೂ ಒಬ್ಬ. ಉಕ್ಕಿಗಿಂತ ಗಟ್ಟಿಯಾಗಿರುವ ಅವರ ಮೌಲ್ಯಗಳು ಹಾಗೂ ಮನುಕುಲದ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳಬೇಕೆಂಬ ಅವರ ಬದ್ಧತೆಯೇ ಅವರನ್ನು ನಿಜವಾದ ‘ಭಾರತ ರತನ್’ ಆಗಿಸಿವೆ.
(ಲೇಖಕರು ಕೇಂದ್ರ ಸಚಿವರು)
ಇದನ್ನೂ ಓದಿ: Kiran Upadhyay Column: ಲೋಕೋಮೋಟಿವ್‌ಗಿಂತ ದೊಡ್ಡದು ಮೋಟಿವೇಷನ್