Tuesday, 7th January 2025

Vishwavani Editorial: ಕ್ರಿಮಿನಲ್ ಕಾರಸ್ಥಾನಗಳಾಗದಿರಲಿ

ನ್ಯಾಯಾಲಯದಲ್ಲಿ ಶಿಕ್ಷೆ ಸಾಬೀತಾಗಿ ಶಿಕ್ಷೆಗೊಳಗಾದವರು ಮತ್ತು ಅಪರಾಧ ಪ್ರಕರಣಗಳಲ್ಲಿ ಸಿಲುಕಿ ವಿಚಾರಣೆ ಎದುರಿಸುತ್ತಿದ್ದವರನ್ನು ಜೈಲಿಗೆ ಕಳುಹಿಸುವುದು ಸಾಮಾನ್ಯ ಪ್ರಕ್ರಿಯೆ. ಕಾರಾಗೃಹವು ತಪ್ಪಿತಸ್ಥರು ಶಿಕ್ಷೆ ಅನುಭವಿ ಸುವ ಮತ್ತು ಮುಂದೆ ಉತ್ತಮ ಮನುಷ್ಯರಾಗಿ ಬಾಳಲು ಮನಪರಿವರ್ತನೆ ಮಾಡಿಕೊಳ್ಳುವ ಸ್ಥಳ. ಆದರೆ ರಾಜ್ಯದ ಜೈಲು ಗಳು ಕ್ರಿಮಿನಲ್‌ಗಳಿಗೆ ಸುರಕ್ಷಿತ ತಾಣವಾದಂತಿವೆ.

ಇವರು ಜೈಲಿನಲ್ಲಿದ್ದುಕೊಂಡೇ ಹೊರಪ್ರಪಂಚದಲ್ಲಿ ಅಕ್ರಮ ಚಟುವಟಿಕೆಗಳನ್ನು ಮುಂದುವರಿಸಬಹುದು. ಅಲ್ಲಿಂದಲೇ ಉದ್ಯಮಿಗಳಿಗೆ ಮೊಬೈಲ್ ಮೂಲಕ ಬೆದರಿಸಿ ಹಫ್ತಾ ವಸೂಲಿ ಮಾಡಬಹುದು. ಜೈಲನ್ನೇ ವಿಲಾಸಿ ತಾಣವಾಗಿಸಿಕೊಂಡು ತಮಗೆ ಬೇಕಾದಂತೆ ಪಾರ್ಟಿ ಮಾಡಬಹುದು.

ಸಹಕೈದಿಗಳ, ಅಧಿಕಾರಿಗಳ ಕೈಯಲ್ಲೂ ಸೇವೆ ಮಾಡಿಸಿಕೊಳ್ಳಬಹುದು. ರಾಜ್ಯದ ಜೈಲುಗಳಲ್ಲಿ ಪದೇ ಪದೆ
ವರದಿಯಾಗುತ್ತಿರುವ ಚಿತ್ರಣವಿದು. ನಟ ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲಲ್ಲಿ ವಿಶೇಷ ಆತಿಥ್ಯ ನೀಡಿದ ಫೋಟೋ ವೈರಲ್ ಆಗುತ್ತಿದ್ದಂತೆ ನಮ್ಮ ಜೈಲುಗಳಲ್ಲಿ ನಡೆಯುತ್ತಿರುವ ಅಕ್ರಮ ಕೂಟಗಳ ಚರ್ಚೆ ಮುನ್ನೆಲೆಗೆ ಬಂದಿತ್ತು. ದರ್ಶನ್‌ಗೆ ವಿಶೇಷ ಆತಿಥ್ಯ ನೀಡಿದವರು ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾದವರು.

ಇವರು ಜೈಲನ್ನು ತಮ್ಮ ಸ್ವಾಧೀನಕ್ಕೆ ಪಡೆದಿರುವುದು ಸ್ಪಷ್ಟವಾಗಿತ್ತು. ದುಡ್ಡಿನಾಸೆಗಾಗಿ ಅಧಿಕಾರಿಗಳು ಇವರ ಜತೆ
ಕೈ ಜೋಡಿಸಿದ್ದಾರೆ ಎಂದು ತನಿಖಾ ವರದಿಯಲ್ಲೂ ತಿಳಿಸಲಾಗಿದೆ. ಇದಾದ ಬಳಿಕ ದರ್ಶನ್ ಸೇರಿದಂತೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಕಳುಹಿಸಲಾಗಿತ್ತು. ಜೈಲು
ಅಕ್ರಮಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು, ಗೃಹ ಸಚಿವರು ಉನ್ನತಾಧಿಕಾರಿಗಳಿಗೆ ಸೂಚಿಸಿದ ಬಳಿಕ ಪರಪ್ಪನ ಅಗ್ರಹಾರ ಜೈಲಿಗೆ ಪೊಲೀಸರು ದಾಳಿ ನಡೆಸಿ ಹತ್ತಾರು ಮೊಬೈಲ್, ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದರು.

ಹಲವು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ಇಷ್ಟಾದ ಬಳಿಕವೂ ರೌಡಿಯೊಬ್ಬ ಜೈಲಿನಿಂದಲೇ ಸಾಕ್ಷಿದಾರರಿಗೆ ಕರೆ ಮಾಡಿ ಬೆದರಿಸಿರುವುದು ವರದಿಯಾಗಿದೆ. ಜೈಲುಗಳಲ್ಲಿ ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸದ ಹೊರತು, ಇವು ಕ್ರಿಮಿನಲ್‌ಗಳ ಶಕ್ತಿಕೇಂದ್ರವಾಗಿಯೇ ಮುಂದುವರಿಯುವುದು ಖಚಿತ.

ಇದನ್ನೂ ಓದಿ: ‌Actor Darshan: ಹಬ್ಬದ ದಿನವೇ ದರ್ಶನ್‌ ಫ್ಯಾನ್ಸ್‌ಗೆ ವಿಜಯಲಕ್ಷ್ಮಿ ಖುಷಿಯ ಸುದ್ದಿ