Monday, 25th November 2024

Dr Vijay Darda Column: ಹಬ್ಬದ ಗದ್ದಲಕ್ಕೆ ಮೂಕಪ್ರೇಕ್ಷಕರಾಗಿ ಇರುವುದೇಕೆ ?

ಸಂಗತ

ಡಾ.ವಿಜಯ್‌ ದರಡಾ

ನಿಮಗೂ ಗೊತ್ತು, ನಾವು ಭಾರತೀಯರು ಪ್ರತಿ ವರ್ಷ ಕಡಿಮೆಯೆಂದರೂ 30 ದೊಡ್ಡ ಹಬ್ಬಗಳನ್ನು ಆಚರಿಸು ತ್ತೇವೆ. ನಾನಿಲ್ಲಿ ಸಣ್ಣಪುಟ್ಟ ಹಬ್ಬಗಳನ್ನು ಲೆಕ್ಕ ಹಾಕಲು ಹೋಗಿಲ್ಲ. ಅವುಗಳನ್ನೂ ಸೇರಿಸಿದರೆ ನೂರಾರು ಹಬ್ಬ ಗಳಾಗುತ್ತವೆ. ವರ್ಷಪೂರ್ತಿ ನಮ್ಮ ದೇಶದ ಒಂದಲ್ಲಾ ಒಂದು ರಾಜ್ಯದಲ್ಲಿ ಒಂದಲ್ಲಾ ಒಂದು ಹಬ್ಬದ ಆಚರಣೆ ನಡೆಯುತ್ತಲೇ ಇರುತ್ತದೆ. ಇವುಗಳಲ್ಲಿ ಕೆಲ ಹಬ್ಬಗಳ ಆಚರಣೆ ಬಹಳ ಜೋರಾಗಿರುತ್ತದೆ. ಜಗತ್ತಿನ ಯಾವುದೇ ದೇಶವೂ ಭಾರತದಲ್ಲಿ ಆಚರಿಸಿದಷ್ಟು ಹಬ್ಬಗಳನ್ನು ಆಚರಿಸುವುದಿಲ್ಲ.

ನಾವು ಆಚರಿಸುವ ಹಬ್ಬಗಳು ಭಾರತೀಯರನ್ನು ಒಗ್ಗಟ್ಟಾಗಿ ಇರಿಸುವಲ್ಲಿ ಹಾಗೂ ನಮ್ಮ ಸಂಸ್ಕೃತಿಯನ್ನು ಉಳಿಸಿ
ಬೆಳೆಸಿಕೊಂಡು ಹೋಗುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂಬುದು ನಿಸ್ಸಂಶಯ. ಅಷ್ಟೇ ಅಲ್ಲ, ಈ ಹಬ್ಬಗಳು ನಮ್ಮ ಬದುಕಿಗೆ ಸಂತೋಷ ಹಾಗೂ ಹೊಸ ಬಣ್ಣಗಳನ್ನು ತುಂಬುತ್ತವೆ. ಆದ್ದರಿಂದ ಈ ಹಬ್ಬಗಳ ಆಚರಣೆಯನ್ನು
ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಹಾಗೂ ಪಾರಂಪರಿಕವಾಗಿ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ಹೀಗೇ
ಉಳಿಸಿಕೊಂಡು ಹೋಗುವ ಅಗತ್ಯವಿದೆ.

ನಾನು ಕೂಡ ಹಬ್ಬಗಳನ್ನು ಆಚರಿಸುತ್ತಲೇ ಬೆಳೆದವನು. ನಮ್ಮ ಮನೆಯಲ್ಲಿ ಹಿಂದೂ ಧರ್ಮದ ಹಬ್ಬಗಳನ್ನು
ಮಾತ್ರವಲ್ಲ, ಎಲ್ಲಾ ಧರ್ಮ ಹಾಗೂ ಪಂಥಗಳ ಹಬ್ಬವನ್ನೂ ಅತ್ಯಂತ ಭಕ್ತಿಯಿಂದ ಆಚರಿಸುತ್ತೇವೆ. ನನ್ನ ಪ್ರಕಾರ ಈ ಹಬ್ಬಗಳ ಸಾಮಾಜಿಕ ಆಯಾಮವು ದೇಶವನ್ನು ಇನ್ನಷ್ಟು ಸದೃಢಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಈ ವರ್ಷ ನವರಾತ್ರಿ ಹಬ್ಬ ಆಚರಿಸಲು ನನ್ನ ಹುಟ್ಟೂರಾದ ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಗೆ ಹೋದಾಗ ಒಂದು ಸಂಗತಿಯನ್ನು ಗಮನಿಸಿದೆ. ಅದು ನನ್ನಲ್ಲಿ ಕೆಲ ಪ್ರಶ್ನೆಗಳನ್ನು ಹುಟ್ಟುಹಾಕಿತು. ನನ್ನ ಪ್ರಕಾರ ಈ ಪ್ರಶ್ನೆಗಳು ಕೇವಲ ಯವತ್ಮಾಲ್‌ಗೆ ಸೀಮಿತವಲ್ಲ. ಇವು ಸ್ಥಳೀಯ ಆಡಳಿತದ ನೀತಿ ನಿಯಮಗಳನ್ನು ಮೀರಿ ಹಬ್ಬಗಳನ್ನು ಆಚರಿಸುವ ಭಾರತದ ಎಲ್ಲಾ ಭಾಗಗಳಲ್ಲೂ ಪ್ರಜ್ಞಾವಂತರ ಮನಸ್ಸಿನಲ್ಲಿ ಏಳುವ ಪ್ರಶ್ನೆಗಳು.

ಸ್ಥಳೀಯ ಮುನ್ಸಿಪಾಲಿಟಿಗಳು ಹಾಗೂ ಪಂಚಾಯ್ತಿಗಳು ಹಬ್ಬಗಳಿಗಾಗಿ ಜನರು ನಿಯಮಗಳನ್ನು ಮುರಿಯುವು ದನ್ನು ನೋಡಿಕೊಂಡು ಮೂಕಪ್ರೇಕ್ಷಕರಾಗಿ ಏಕೆ ಉಳಿಯುತ್ತವೆ? ಅದರಿಂದ ಜನಸಾಮಾನ್ಯರಿಗೆ ಆಗುವ ತೊಂದರೆ ಗಳನ್ನು ಏಕೆ ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ? ನಮ್ಮ ದೇಶದ ಎಲ್ಲಾ ಭಾಗಗಳಲ್ಲೂ ನವರಾತ್ರಿ ಹಬ್ಬ ವನ್ನು ಬಹಳ ಭಕ್ತಿಯಿಂದ ಆಚರಿಸಲಾಗುತ್ತದೆ. ಹೆಸರು ಬೇರೆ ಬೇರೆ ಇರಬಹುದು, ಆದರೆ ದುರ್ಗಾಮಾತೆ ಯನ್ನು ಆರಾಧಿಸುವ ಈ ಹಬ್ಬವನ್ನು ಎಲ್ಲಾ ಕಡೆ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಆದರೆ ಈ ಹಬ್ಬವನ್ನು ಆಚರಿಸಲು ಜನರು ಸಾರ್ವಜನಿಕ ರಸ್ತೆಗಳನ್ನು ಆಕ್ರಮಿಸಿಕೊಳ್ಳುವ ರೀತಿ ನೋಡಿ ನನಗೆ ಆಶ್ಚರ್ಯವಾಯಿತು.

ಸ್ಥಳೀಯಾಡಳಿತ ಅದನ್ನು ನೋಡಿಕೊಂಡು ಸುಮ್ಮನೆ ಕುಳಿತಿತ್ತು. ನಿಯಮದ ಉಲ್ಲಂಘನೆಯನ್ನು ನೋಡಿಕೊಂಡು
ಬಾಯ್ಮುಚ್ಚಿಕೊಂಡು ಕುಳಿತುಕೊಳ್ಳುವುದಕ್ಕೆಂದು ನಮ್ಮ ದೇಶದಲ್ಲಿ ಸ್ಥಳೀಯಾಡಳಿತ ವ್ಯವಸ್ಥೆಯನ್ನು ನಾವು
ಮತದಾನದ ಮೂಲಕ ಅಧಿಕಾರಕ್ಕೆ ತರುತ್ತೇವೆಯೇ? ಜನರಿಗೆ ತೊಂದರೆಯಾಗುತ್ತಿರುವಾಗ ಏನೂ ಕ್ರಮ ಕೈಗೊಳ್ಳದೆ ಅವು ಏನು ಮಾಡುತ್ತಿರುತ್ತವೆ? ರಸ್ತೆಗಳನ್ನೆಲ್ಲಾ ಆಕ್ರಮಿಸಿಕೊಂಡು ಸಾರ್ವಜನಿಕವಾಗಿ ನವರಾತ್ರಿ ಆಚರಿಸುವ ವೇಳೆ ಜನರಿಗೆ ಫುಟ್‌ಪಾತುಗಳಲ್ಲಿ ನಡೆದಾಡುವುದಕ್ಕೂ ಜಾಗವಿರಲಿಲ್ಲ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ನಾನು ಬಳಸುದಾರಿಯನ್ನು ಆಶ್ರಯಿಸಬೇಕಾಯಿತು.

ಅಲ್ಲೊಂದು ಆಂಬುಲೆನ್ಸ್ ಕೂಡ ಟ್ರಾಫಿಕ್‌ನಲ್ಲಿ ಸಿಕ್ಕಿ ಹಾಕಿಕೊಂಡು ಮುಂದೆ ಹೋಗಲಾಗದೆ ಪರದಾಡುತ್ತಿರುವು ದನ್ನು ನೋಡಿ ಅಯ್ಯೋ ಅನ್ನಿಸಿತು. ಕಾದು ಕಾದು ಸುಸ್ತಾಗಿ, ಕೊನೆಗೆ ಆಂಬುಲೆನ್ಸ್ ಚಾಲಕ ಕೂಡ ಆ ದಾರಿ ಬಿಟ್ಟು ದೀರ್ಘವಾದ ಬೇರೆ ದಾರಿ ಹಿಡಿದು ಹೋಗ ಬೇಕಾಯಿತು. ಅದರಲ್ಲಿದ್ದ ರೋಗಿಗೆ ಉಂಟಾದ ತೊಂದರೆಯ ಬಗ್ಗೆ ಯಾರಾದರೂ ಯೋಚಿಸಿದ್ದಾರಾ? ಆಸ್ಪತ್ರೆ ತಲುಪುವುದು ತಡವಾಗಿ ಆ ರೋಗಿ ಪ್ರಾಣವನ್ನೇ ಬಿಟ್ಟಿದ್ದರೆ ಅದಕ್ಕೆ ಹೊಣೆ ಯಾರು? ಇದೇ ನವರಾತ್ರಿ ಹಬ್ಬದ ವೇಳೆ ನಾನು ಗರ್ಬಾ ನೃತ್ಯದ ಕೇಂದ್ರ ಸ್ಥಾನವಾದ ಅಹಮದಾಬಾದ್‌ ನಲ್ಲೂ ಒಮ್ಮೆ ಇದ್ದೆ. ಹಾಗೆಯೇ ಮುಂಬೈ ಹಾಗೂ ನಾಗ್ಪುರದಲ್ಲೂ ನವರಾತ್ರಿ ಆಚರಿಸುವುದನ್ನು ನೋಡಿದ್ದೇನೆ. ಅಲ್ಲಿನ ರಸ್ತೆಗಳಲ್ಲಿ ಜನರಿಗೆ ಯಾವ ತೊಂದರೆಯನ್ನೂ ಮಾಡುವುದಿಲ್ಲ.

ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ಜನಸಂಚಾರ ಎಂದಿನಂತೆಯೇ ಸುಗಮವಾಗಿರುತ್ತದೆ. ಪ್ರತಿ ವರ್ಷ ಮುಂಬೈ ನಲ್ಲಿ ಅದ್ದೂರಿ ಗಣೇಶ ಹಬ್ಬದ ಆಚರಣೆಯ ವೇಳೆ ಟ್ರಾಫಿಕ್ ವ್ಯವಸ್ಥೆ ಸುರಳೀತವಾಗಿ ಇರುವಂತೆ ನೋಡಿಕೊಳ್ಳ ಲಾಗುತ್ತದೆ. ಒಂದೇ ಒಂದು ರಸ್ತೆಯನ್ನೂ ಬಂದ್ ಮಾಡುವುದಿಲ್ಲ. ಲಕ್ಷಾಂತರ ಜನರು ಬೀದಿಗೆ ಇಳಿದು ಹಬ್ಬ ಆಚರಿಸುತ್ತಾರೆ. ಚೌಪಟ್ಟಿಯಲ್ಲಿ ಎಲ್ಲರೂ ಒಂದೆಡೆ ಸೇರುತ್ತಾರೆ. ಪೊಲೀಸರು ಸಂಚಾರ ವ್ಯವಸ್ಥೆ ಸುಗಮವಾಗಿ ಇರುವಂತೆ ನೋಡಿಕೊಂಡು ಜನರು ಹಬ್ಬದ ಸಂಭ್ರಮವನ್ನು ಸವಿಯಲು ಅವಕಾಶ ಮಾಡಿಕೊಡುತ್ತಾರೆ. ಅವರ ಪೂರ್ವತಯಾರಿ ಎಷ್ಟು ಚೆನ್ನಾಗಿರುತ್ತದೆಯೆಂದರೆ, ಹಬ್ಬದ ಆಚರಣೆಗಾಗಿ ಸಾಮಾನ್ಯ ದಿನಗಳಿಗಿಂತ ಎಷ್ಟೋ
ಪಟ್ಟು ಹೆಚ್ಚು ಜನರು ರಸ್ತೆಗಿಳಿದರೂ ಸಂಚಾರಕ್ಕೆ ತೊಂದರೆಯಾಗುವುದಿಲ್ಲ. ಹೀಗಾಗಿ ಜನರು ನೆಮ್ಮದಿಯಿಂದ
ಓಡಾಡುತ್ತಾರೆ. ಮುಂಬೈ, ನಾಗ್ಪುರದಂಥ ಮಹಾನಗರದಲ್ಲಿ ಸಂಚಾರ ವ್ಯವಸ್ಥೆಯನ್ನು ಹೀಗೆ ಅಚ್ಚುಕಟ್ಟಾಗಿ ನಿಭಾಯಿಸಲು ಸಾಧ್ಯವಿರುವುದಾದರೆ ಯವತ್ಮಾಲ್‌ನಂಥ ಸಣ್ಣ ಪಟ್ಟಣದಲ್ಲಿ ಏಕೆ ಸಾಧ್ಯವಿಲ್ಲ?

ಮೊದಲೇ ಹೇಳಿದಂತೆ ನಾನು ಹಬ್ಬಗಳನ್ನು ಆಚರಣೆ ಮಾಡುವುದರ ಪರ ಇರುವವನು. ಹಬ್ಬಗಳು ನಮ್ಮ
ಸಂಸ್ಕೃತಿಯ ಪ್ರಮುಖ ಅಂಗ. ಗುಜರಾತ್‌ನಲ್ಲಿ ಅಂಬಾಮಾತೆಯ ಗೌರವಾರ್ಥ ಆರಂಭಗೊಂಡ ಗರ್ಬಾ
ದಾಂಡಿಯಾ ನೃತ್ಯದ ಆಚರಣೆಯನ್ನೇ ನೋಡಿ. ಇಂದು ಅದು ಇಡೀ ದೇಶಕ್ಕೆ ಹರಡಿದೆ. ನವರಾತ್ರಿಯ ವೇಳೆ
ಭಾರತದಾದ್ಯಂತ ಗರ್ಬಾ ದಾಂಡಿಯಾ ನಡೆಯುತ್ತದೆ. ಜನರು ಜಾತಿ, ಪಂಥ, ಪ್ರಾದೇಶಿಕತೆಯನ್ನು ಮೀರಿ
ದಾಂಡಿಯಾದಲ್ಲಿ ಪಾಲ್ಗೊಳ್ಳುತ್ತಾರೆ. ಎಲ್ಲರೂ ಬಹಳ ಭಕ್ತಿಯಿಂದ ದೇವಿಯನ್ನು ನೆನೆದು ನೃತ್ಯ ಮಾಡುತ್ತಾರೆ.
ಇದರಲ್ಲಿ ಜಾತಿ, ಧರ್ಮದ ಭೇದವಿಲ್ಲ. ಗರ್ಬಾ ಪೆವಿಲಿಯನ್ ಗಳಲ್ಲಿ ನಾವು ದೇಶದ ಒಗ್ಗಟ್ಟನ್ನು ನೋಡಬಹುದು. ಅಲ್ಲಿ ಮಿನಿ ಭಾರತವೇ ನಮಗೆ ಕಾಣಿಸುತ್ತದೆ. ಇದೊಂದು ಧನಾತ್ಮಕ ಬೆಳವಣಿಗೆ. ಆದರೆ ಈ ನೃತ್ಯದ ಸಂಭ್ರಮದಿಂದ
ಜನಸಾಮಾನ್ಯರಿಗೆ ತೊಂದರೆ ಆಗದಂತೆಯೂ ನಾವು ನೋಡಿಕೊಳ್ಳಬೇಕಲ್ಲವೇ? ನಮ್ಮ ದೇವ, ದೇವತೆಗಳು
ಬೇರೆಯವರಿಗೆ ತೊಂದರೆ ನೀಡಿ ತಮ್ಮನ್ನು ಆರಾಧಿಸಿ ಎಂದು ಯಾರಿಗೂ ಹೇಳಿಲ್ಲ.

ಹೀಗಾಗಿ ನಾನು ಯವತ್ಮಾಲ್‌ನಲ್ಲಿ ನೋಡಿದ ಸಂಗತಿ ಹಾಗೂ ದೇಶದ ಬೇರೆ ಬೇರೆ ಕಡೆ ಹೀಗೆಯೇ ಹಬ್ಬದ ಹೆಸರಿನಲ್ಲಿ ಜನರಿಗೆ ತೊಂದರೆ ಉಂಟುಮಾಡುವಂತೆ ನಡೆದುಕೊಳ್ಳುವುದು ಸರಿಯಾದ ಕ್ರಮ ಅಲ್ಲ. ಸ್ಥಳೀಯಾ ಡಳಿತ, ಅಧಿಕಾರಿಗಳು ಅಥವಾ ಶಾಸಕಾಂಗವು ಇದನ್ನು ತಡೆಯಲು ಏನೂ ಮಾಡುವುದಿಲ್ಲ ಅಂತಾದರೆ, ನನ್ನ ಪ್ರಕಾರ, ನ್ಯಾಯಾಂಗ ಈ ವಿಷಯದಲ್ಲಿ ಸ್ವಯಂಪ್ರೇರಿತವಾಗಿ ಮಧ್ಯಪ್ರವೇಶ ಮಾಡಬೇಕು. ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ನ್ಯಾಯಾಲಯಗಳಿರುತ್ತವೆ. ಅಲ್ಲಿ ಜಡ್ಜ್‌ ಗಳಿರುತ್ತಾರೆ. ಅವರೂ ಅಲ್ಲಿನ ರಸ್ತೆಗಳಲ್ಲಿ ಓಡಾಡುವಾಗ ಹೀಗೆ ಲಂಗುಲಗಾಮಿಲ್ಲದೆ ಹಬ್ಬ ಆಚರಿಸುವುದರಿಂದ ಜನರಿಗಾಗುತ್ತಿರುವ ತೊಂದರೆಯನ್ನು ನೋಡಿರುತ್ತಾರೆ.

ಅವರು ಸ್ವಯಂಪ್ರೇರಿತವಾಗಿ ಈ ವಿಷಯ ಕೈಗೆತ್ತಿಕೊಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡಿ, ಅವರು ಕೆಲಸ ಮಾಡುವಂತೆ ನೋಡಿಕೊಳ್ಳಬಹುದಲ್ಲವೇ? ಆಗಲೂ ಅಧಿಕಾರಿಗಳು ಕ್ರಮ ಕೈಗೊಳ್ಳಲಿಲ್ಲ ಅಂತಾದರೆ ಅವರನ್ನೇ ಈ ಅವ್ಯವಸ್ಥೆಗೆ ಹೊಣೆ ಮಾಡಿ, ಅವರ ವಿರುದ್ಧ ಕ್ರಮ ಜರುಗಿಸಬಹುದಲ್ಲವೇ? ಜನರಿಗಾಗುವ ತೊಂದರೆ
ಅವರಿಗೂ ಆಗುತ್ತಿರುತ್ತದೆ. ಇದನ್ನೆಲ್ಲ ನೋಡಿಕೊಂಡು ಅವರು ಹೇಗೆ ಸುಮ್ಮನೆ ಕುಳಿತಿರಲು ಸಾಧ್ಯ? ನಿಯಮ
ಉಲ್ಲಂಸುವವರನ್ನು ನೋಡಿಕೊಂಡು ಯಾವುದೇ ಕ್ರಮ ಕೈಗೊಳ್ಳದೆ ಕುಳಿತುಕೊಳ್ಳಲು ಜಿಲ್ಲಾಡಳಿತಗಳ ಮೇಲೆ
ಏನಾದರೂ ಒತ್ತಡವಿರುತ್ತದೆಯೇ? ಹೌದಾದರೆ, ಯಾರು ಒತ್ತಡ ಹೇರುತ್ತಾರೆ? ಈ ಪ್ರಶ್ನೆಯನ್ನು ಗಣೇಶನಿಗೆ,
ದುರ್ಗಾಮಾತೆಗೆ ಹಾಗೂ ನ್ಯಾಯದೇವತೆಗೂ ಕೇಳಬೇಕು ಎಂದು ನನಗೆ ಅನ್ನಿಸುತ್ತದೆ.

ನಾವು ನಿಮ್ಮನ್ನು ಪೂಜಿಸುತ್ತೇವೆ, ಅದಕ್ಕಾಗಿ ಉಪವಾಸ ಮಾಡುತ್ತೇವೆ, ನಿಮಗೆ ಶಿರಸಾಷ್ಟಾಂಗ ನಮಸ್ಕಾರ ಮಾಡು ತ್ತೇವೆ. ಆದರೆ ಏಕೆ ನೀವು ಈ ಜನರಿಗೆ ಒಳ್ಳೆಯ ಬುದ್ಧಿ ನೀಡಿಲ್ಲ! ಬೇರೆಯವರಿಗೆ ತೊಂದರೆ ಉಂಟುಮಾಡಿ ಹಬ್ಬಗ ಳನ್ನು ಆಚರಿಸುವ ದುರ್ಬುದ್ಧಿಯನ್ನು ಏಕೆ ಅವರಿಗೆ ನೀಡಿದ್ದೀರಿ? ಜನರಿಗೆ ನಾನೊಂದು ಮಾತು ಹೇಳಲು ಬಯಸುತ್ತೇನೆ. ನೀವು ಪೂಜಿಸುವ ದೇವಾನುದೇವತೆಗಳಲ್ಲಿ ಇರುವ ಒಂದೇ ಒಂದು ಅಂಶದಷ್ಟು ಒಳ್ಳೆಯತನವನ್ನು ನಿಮ್ಮಲ್ಲಿ ಅಳವಡಿಸಿಕೊಂಡರೂ ಸಾಕು, ಹೀಗೆ ನಿಮ್ಮ ಸಂತೋಷ ಹಾಗೂ ಸಂಭ್ರಮಕ್ಕಾಗಿ ನೀವು ಬೇರೆಯವರಿಗೆ ತೊಂದರೆ ಕೊಡಲು ಹೋಗುವುದಿಲ್ಲ. ಕೊನೆಯ ಪಕ್ಷ ನೀವು ಪೂಜಿಸುವ ದೇವರಿಗಾದರೂ ಅಗೌರವ
ನೀಡಬೇಡಿ!

ಬೇರೆಯವರಿಗೆ ತೊಂದರೆ ನೀಡಿ, ನಾವು ಸಂತೋಷಪಡಲು ಮನುಷ್ಯಮಾತ್ರರಿಗೆ ಹೇಗೆ ಸಾಧ್ಯ ಎಂಬುದೇ ನನಗೆ ಅರ್ಥವಾಗುವುದಿಲ್ಲ. ಇದು ನಾಗರಿಕ ಸಮಾಜದಲ್ಲಿ ಬದುಕುವ ಮಾನವೀಯ ಗುಣಗಳುಳ್ಳ ಮನುಷ್ಯರ ಸ್ವಭಾವ ಖಂಡಿತ ಅಲ್ಲ. ಇದು ನಮ್ಮ ವ್ಯವಸ್ಥೆಯಲ್ಲಿರುವ ಅರಾಜಕ ಅಂಶದ ಅಡ್ಡಪರಿಣಾಮ. ಹಬ್ಬದ ಸಂದರ್ಭದಲ್ಲಿ ಎಲ್ಲೆಡೆ ದೊಡ್ಡ ದೊಡ್ಡ ಹೋರ್ಡಿಂಗ್ ಅಳವಡಿಸುವುದನ್ನು ನಾವು ನೋಡಬಹುದು. ಎಲ್ಲರೂ ಅವರದೇ ಹೋರ್ಡಿಂಗ್ ಹಾಕಿಕೊಳ್ಳುತ್ತಾರೆ. ಅವರೇ ಅವರಿಗೆ ಪ್ರಚಾರ ಕೊಟ್ಟುಕೊಳ್ಳುತ್ತಾರೆ. ಆದರೆ, ಕೋರ್ಟುಗಳು
ಈಗಾಗಲೇ ಹೋರ್ಡಿಂಗ್‌ಗಳನ್ನು ಅಳವಡಿಸುವ ವಿಷಯದಲ್ಲಿ ಸ್ಪಷ್ಟವಾದ ಆದೇಶಗಳನ್ನು ನೀಡಿವೆ. ಆದರೆ ಆ
ಆದೇಶಗಳನ್ನು ಯಾರೂ ಪಾಲಿಸುತ್ತಿಲ್ಲ. ರಾಜಾರೋಷವಾಗಿ ಕೋರ್ಟ್‌ಗಳ ಆದೇಶವನ್ನೇ ಎಲ್ಲರೂ ಉಲ್ಲಂಘಿ ಸುತ್ತಿದ್ದಾರೆ.

ಆದರೂ ನಮ್ಮ ಆಡಳಿತ ವ್ಯವಸ್ಥೆ ಕ್ರಮ ಕೈಗೊಳ್ಳುತ್ತಿಲ್ಲ. ಆ ಹೋರ್ಡಿಂಗ್‌ಗಳ ಫೋಟೋದಲ್ಲಿರುವ ವ್ಯಕ್ತಿಗಳಿಗೆ
ನೋಟಿಸ್ ನೀಡಿ, ದಂಡ ವಿಽಸುವುದಕ್ಕೆ ಏನು ಅಡ್ಡಿಯಿದೆ? ಆ ಹೋರ್ಡಿಂಗ್‌ಗಳಿಗೆ ಪ್ರಾಯೋಜಕತ್ವ ನೀಡುವ ಕಂಪನಿಗಳ ವಿರುದ್ಧ ಏಕೆ ಕ್ರಮ ಕೈಗೊಳ್ಳುವುದಿಲ್ಲ? ಇನ್ನೇನು ದೀಪಾವಳಿ ಹಬ್ಬ ಬರುತ್ತದೆ. ಹಬ್ಬಗಳನ್ನು
ಪ್ರೀತಿಸುವ ಗುಣ ಭಾರತೀಯರ ರಕ್ತದಲ್ಲೇ ಇದೆ. ಹಬ್ಬಗಳು ನಮ್ಮ ಗುರುತು ಕೂಡ ಹೌದು. ದೀಪಾವಳಿಯನ್ನೂ
ದೇಶಾದ್ಯಂತ ಎಲ್ಲಾ ಜಾತಿ, ಧರ್ಮಗಳ ಜನರು ಆಚರಿಸುತ್ತಾರೆ. ಮತ್ತೆ ಸಂಭ್ರಮಾಚರಣೆ, ಹಾಡು, ನೃತ್ಯಗಳು
ನಡೆಯುತ್ತವೆ. ಅದು ಬೇಡ ಎಂದು ಯಾರೂ ಹೇಳುವುದಿಲ್ಲ.

ಆದರೆ, ಅದಕ್ಕಾಗಿ ಜನರ ಕಿವಿ ಒಡೆಯುವಂತೆ ಡಿಜೆಗಳನ್ನು ಹಾಕಿ ಶಬ್ದಮಾಲಿನ್ಯ ಮಾಡುವುದು, ಎಲ್ಲೆಂದರಲ್ಲಿ ಸಮಯ ಮೀರಿ ಪಟಾಕಿಗಳನ್ನು ಸಿಡಿಸಿ ವಾಯುಮಾಲಿನ್ಯ ಉಂಟುಮಾಡುವುದು ಬೇಡ. ಜನರು ಬೇರೆಯವರ ಬಗ್ಗೆ
ಕಿಂಚಿತ್ತಾದರೂ ಕಾಳಜಿ ಇರಿಸಿಕೊಳ್ಳಲಿ. ಡಿಜೆ, ಪಟಾಕಿಗಳಿಂದ ಮಕ್ಕಳು, ವೃದ್ಧರು, ಗರ್ಭಿಣಿಯರು ಹಾಗೂ ರೋಗಿ ಗಳಿಗೆ ಆಗುವ ತೊಂದರೆಯ ಬಗ್ಗೆಯೂ ಯೋಚಿಸಬೇಕಲ್ಲವೇ? ಈ ಅಂಕಣ ಓದಿದ ಮೇಲಾದರೂ ರಾಜ್ಯ ಸರಕಾರ ಗಳ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರಂಥ ಹಿರಿಯ ಅಧಿಕಾರಿಗಳು ಎಚ್ಚೆತ್ತು ಕೊಳ್ಳಲಿ.

ನಿಯಮ ಉಲ್ಲಂಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತಮ್ಮ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಲಿ. ಹಬ್ಬಗಳು ಸಂಭ್ರಮವಾಗಬೇಕೇ ಹೊರತು ಯಾರಿಗೂ ಶಿಕ್ಷೆಯಾಗಬಾರದು.

(ಲೇಖಕರು ಹಿರಿಯ ಪತ್ರಿಕೋದ್ಯಮಿ)

ಇದನ್ನೂ ಓದಿ: Dr Vijay Darda Column: ಆಕ್ಸ್ ಫರ್ಡ್ ಯೂನಿಯನ್‌ ಯಾರದೋ ಕೈಗೊಂಬೆಯೇ ?