Friday, 25th October 2024

Vishwavani Editorial: ಅತಿವೃಷ್ಟಿ-ಅನಾವೃಷ್ಟಿಗಳ ಕುಣಿಕೆ

ಎರಡು ತೆರನಾದ ಅತಿರೇಕಗಳಿಗೆ ಸಾಕ್ಷಿಯಾಗಿ ನಿಂತಿದೆ ಕರ್ನಾಟಕ ರಾಜ್ಯ. ಋತುಮಾನಕ್ಕೆ ತಕ್ಕಂತೆ ನಿಗದಿತ ಪ್ರಮಾಣದಲ್ಲಿ ಮಳೆಯಾಗದೆ ಕಳೆದ ವರ್ಷ ರಾಜ್ಯದ ವಿವಿಧೆಡೆಯ ಜನರು, ನಿರ್ದಿಷ್ಟವಾಗಿ ಕೃಷಿಕರು ಅನುಭವಿಸಿದ ಸಂಕಟ-ಸಂಕಷ್ಟಗಳದ್ದು ಒಂದು ಕಥೆಯಾದರೆ, ಮೊನ್ನೆ ಭರ್ಜರಿ ಮಳೆಸುರಿತದಿಂದಾಗಿ ಅಕ್ಷರಶಃ ‘ಮಳೆನಾಡಾಗಿ’ ಮಾರ್ಪಾಡುಗೊಂಡ ಬೆಂಗಳೂರಿನದ್ದು ಮತ್ತೊಂದು ತೆರನಾದ ಬವಣೆ.

ಸಾಯಿ ಲೇಔಟ್ ಸೇರಿದಂತೆ ಮಹಾನಗರಿಯ ಹಲವು ಬಡಾವಣೆಗಳಲ್ಲಿ ಮೊಣ ಕಾಲು ಮುಳುಗುವಷ್ಟರ ಮಟ್ಟದ ನೀರು ಜಮೆಯಾಗಿದ್ದು, ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ಗಳ ಬೇಸ್‌ಮೆಂಟ್‌ಗಳಲ್ಲಿನ ವಾಹನಗಳ ಮುಳುಗಡೆ
ಯಾಗಿದ್ದು, ರಸ್ತೆಗಳಲ್ಲಿ ಜನರ ಮತ್ತು ವಾಹನಗಳ ಸಂಚಾರ ದುಸ್ತರವಾಗಿದ್ದು ಹೀಗೆ ಹೇಳುತ್ತ ಹೋದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಮಿತಿಮೀರಿದ ಮಳೆಸುರಿತವು ಮನುಷ್ಯನ ನಿಯಂತ್ರಣದಲ್ಲಿ ಇಲ್ಲದ ಬಾಬತ್ತು; ಆದರೆ
ಮುನ್ನೆಚ್ಚರಿಕಾ ಕ್ರಮಗಳ ಕಡೆಗಾದರೂ ಆತ ಗಮನ ಹರಿಸಬಹುದಲ್ಲವೇ? ಆದರೆ, ‘ಗಡ್ಡಕ್ಕೆ ಬೆಂಕಿ ಬಿದ್ದಾಗ ಬೋರ್‌ವೆಲ್ ತೋಡಿಸಲು ಮುಂದಾಗುವ’ ಪರಿಪಾಠ ನಮ್ಮ ವ್ಯವಸ್ಥೆಯಲ್ಲಿ ಇನ್ನೂ ಮನೆಮಾಡಿದೆ. ಹೀಗಾಗಿ ಸಮ
ಸ್ಯೆಯೂ ನಿರಂತರವಾಗಿದೆ. ಬೆಂಗಳೂರಿನ ಮಡಿಲಲ್ಲಿದ್ದ ನೂರಾರು ಕೆರೆಗಳನ್ನು ಭೂಗಳ್ಳರು ಗುಳುಂ ಮಾಡಿ, ಅಪಾರ್ಟ್‌ಮೆಂಟುಗಳನ್ನು ಎಬ್ಬಿಸಿದಾಗಲೇ ಸಂಬಂಧಪಟ್ಟವರು ಅವರಿಗೆ ಚುರುಕು ಮುಟ್ಟಿಸಬೇಕಿತ್ತು.

ಆದರೆ ಹಾಗಾಗಲಿಲ್ಲವೇ! ಸಾಲದೆಂಬಂತೆ, ಕಂಡಕಂಡ ನೆಲಕ್ಕೆಲ್ಲಾ ಕಾಂಕ್ರೀಟ್ ಮೆತ್ತಿಸಿಬಿಟ್ಟಿರುವ ಸ್ಥಿತಿ ನಮ್ಮಲ್ಲಿ ಸಾಕಷ್ಟು ಕಾಣಸಿಗುತ್ತದೆ. ಹೀಗಿರುವಾಗ, ಸುರಿದ ಮಳೆನೀರು ಮಣ್ಣಿನಲ್ಲಿ ಇಂಗುವುದಾದರೂ ಹೇಗೆ? ಇಲ್ಲದ ಕೆರೆ-ಕಟ್ಟೆಗಳನ್ನು ಅದು ಸೇರುವುದಾದರೂ ಹೇಗೆ? ಮಹಾನಗರಿಯಲ್ಲಿ ಅಂತರ್ಜಲದ ಮಟ್ಟ ತೀವ್ರವಾಗಿ ಕುಸಿದಿದೆ, ನೀರಿನಲ್ಲಿ ಅಪಾಯಕಾರಿ ಫ್ಲೋರೈಡ್ ಅಂಶವಿದೆ ಎಂದು ಅಬ್ಬರಿಸಿ ಬೊಬ್ಬಿರಿಯುವವರು ಈ ಕಹಿವಾಸ್ತವವನ್ನೇಕೆ ಗ್ರಹಿಸುವುದಿಲ್ಲ? ‘ತಡೆಗಟ್ಟುವಿಕೆಯ ಚಿಕಿತ್ಸೆಗಿಂತ ಉತ್ತಮವಾದ ಕ್ರಮ’ ಎಂಬುದೊಂದು ಮಾತಿದೆ. ಆದರೆ ಇಂಥ ‘ಮುಂಜಾಗ್ರತೆಯ ಚಿತ್ತಸ್ಥಿತಿ’ ನಮ್ಮವರಲ್ಲಿ ಮಂಗಮಾಯವಾಗಿರುವುದೇ, ಮಳೆಸುರಿತದಿಂದಾಗುವ ಅಸ್ತವ್ಯಸ್ತತೆಗಳಿಗೆ ಕಾರಣವಾಗಿಬಿಟ್ಟಿದೆ.

ಇದನ್ನೂ ಓದಿ: Bengaluru Rain: ಭಾರಿ ಮಳೆಗೆ ಬೆಂಗಳೂರಿನ ಫೀನಿಕ್ಸ್ ಮಾಲ್ ಆಫ್ ಏಷ್ಯಾ ಜಲಾವೃತ; ಪಾರ್ಕಿಂಗ್‌ ಸ್ಥಳಕ್ಕೆ ನುಗ್ಗಿದ ನೀರು