Saturday, 23rd November 2024

ಕಾಲೇಜು ಆರಂಭ ಸುಲಭ, ಮುಂದುವರಿಸುವುದೇ ಸವಾಲು

ರಾಜ್ಯದಲ್ಲೀಗ ಪದವಿ ಕಾಲೇಜುಗಳು ಆರಂಭಗೊಂಡಿವೆ. ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ, ಕಾಲೇಜು
ಆರಂಭಗೊಂಡರೂ ಮಕ್ಕಳು ಕಾಲೇಜುಗಳತ್ತ ಬರುತ್ತಿಲ್ಲ. ಆನ್‌ಲೈನ್ ಹಾಗೂ ಆನ್ಲೈ‌ನ್ ಎರಡಕ್ಕೂ ಅವಕಾಶ ಇರುವುದರಿಂದ ಬಹುತೇಕರೂ ಕಾಲೇಜಿನಿಂದ ದೂರವೇ ಉಳಿದಿದ್ದಾರೆ.

ಸರಕಾರ ಪದವಿ ಕಾಲೇಜುಗಳನ್ನು ಆರಂಭಿಸಿದ ಬಳಿಕ ಇದರಿಂದಾಗುವ ಸಾಧಕ ಬಾಧಕವನ್ನು ನೋಡಿಕೊಂಡು ಪಿಯು ಕಾಲೇಜು ಹಾಗೂ ಶಾಲೆಗಳನ್ನು ಆರಂಭಿಸುವ ಲೆಕ್ಕಾಚಾರದಲ್ಲಿದೆ. ಇದಕ್ಕಾಗಿ ತಜ್ಞರ ಸಲಹೆಯನ್ನು ಸರಕಾರ ಪಡೆದುಕೊಂಡಿದೆ. ಆದರೆ ಪದವಿ ಕಾಲೇಜುಗಳಲ್ಲಿನ ಪರಿಸ್ಥಿತಿ ನೋಡಿಕೊಂಡು ಕಾಲೇಜು ಆರಂಭಿಸುವುದು ಉತ್ತಮ ನಿರ್ಧಾರವಲ್ಲ. ಏಕೆಂದರೆ ಪದವಿ ಕಾಲೇಜಿನಲ್ಲಿ ಓದುವ ವಿದ್ಯಾರ್ಥಿಗಳ ಮನಸ್ಥಿತಿಗೂ, ಶಾಲಾ ಮಟ್ಟದಲ್ಲಿರುವ ವಿದ್ಯಾರ್ಥಿಯ ಮನಸ್ಥಿತಿ ಅಜಗಜಾಂತರ ವಿದೆ.

ಇದರೊಂದಿಗೆ ಪದವಿ ಓದುವ ಬಹುತೇಕರ ಕೈಯಲ್ಲಿ ಮೊಬೈಲ್ ಇರುವುದರಿಂದ ಈಗಲೂ ಆನ್‌ಲೈನ್ ತರಗತಿಯ ಮೊರೆ ಹೋಗಿದ್ದಾರೆ. ಆದರೆ ಶಾಲೆಯನ್ನು ಆರಂಭಿಸಿದರೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆನ್ ಲೈನ್‌ಗಿಂತ ಆ-ಲೈನ್ ಆಯ್ಕೆ ಪಡೆದುಕೊಳ್ಳುವ ಸಾಧ್ಯತೆಯೇ ಹೆಚ್ಚಿರುತ್ತದೆ. ಇದರೊಂದಿಗೆ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಪದವಿ ವಿದ್ಯಾರ್ಥಿಗಳು ನಿಭಾಯಿಸಿದಂತೆ ಸಾಮಾಜಿಕ ಅಂತರ, ಸ್ಯಾನಿಟೈಸರ್, ಮಾಸ್ಕ್ ಬಳಸುತ್ತಾರೆ ಎಂದು ಹೇಳಲು ಆಗುವುದಿಲ್ಲ.

ಆದ್ದರಿಂದ ಪದವಿ ಕಾಲೇಜಿನ ರೀತಿ ಶಾಲೆಗಳನ್ನು ಆರಂಭಿಸುವ ಮೊದಲು ಸರಕಾರ ಎಚ್ಚರಿಕೆವಹಿಸಬೇಕಿದೆ. ಚಂದನ ವಾಹಿನಿ ಯಲ್ಲಿ ಸಂವೇದಾ ತರಗತಿ ಸರಕಾರ ಆರಂಭಿಸಲು ಮುಂದಾಗಿದ್ದು, ಇದನ್ನು ಮತ್ತಷ್ಟು ಹೆಚ್ಚಿಸಬಹುದಾಗಿದೆ. ಈಗಾಗಲೇ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಅರ್ಧ ಶೈಕ್ಷಣಿಕ ವರ್ಷ ಮುಗಿದಿರುವುದರಿಂದ, ಆನ್‌ಲೈನ್‌ನಲ್ಲಿಯೇ ಈ ವರ್ಷ ಪೂರ್ಣ ಗೊಳಿಸುವುದಕ್ಕೆ ಸಾಧ್ಯವೇ ಎನ್ನುವುದನ್ನು ಸರಕಾರ ಯೋಚಿಸಬೇಕಿದೆ. ಆದರೆ ಪದವಿ ಕಾಲೇಜುಗಳ ಆರಂಭವನ್ನೇ ಊರು ಗೋಲಾಗಿಟ್ಟುಕೊಂಡು ಪಿಯುಸಿ ಹಾಗೂ ಅದಕ್ಕಿಂತ ಕೆಳಹಂತದ ತರಗತಿಗಳನ್ನು ಆರಂಭಿಸುವುದಕ್ಕೆ ಸರಕಾರ ಮುಂದಾಗುವ ಮೊದಲು ಎಚ್ಚರಿಕೆವಹಿಬೇಕಿದೆ.

ಈಗಾಗಲೇ ಅವರಸಕ್ಕೆ ಬಿದ್ದು ಆಂಧ್ರಪ್ರದೇಶ ಸರಕಾರ ಮಾಡಿಕೊಂಡಿರುವ ಎಡವಟ್ಟನ್ನು ಕರ್ನಾಟಕ ಮಾಡಿಕೊಳ್ಳದಿರಲಿ.