ತುಂಟರಗಾಳಿ
ಹರಿ ಪರಾಕ್
ಸಿನಿಗನ್ನಡ
ಹೊಂಬಾಳೆ ಫಿಲ್ಮ್ಸ್ ಈಗ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಇಡೀ ಭಾರತದಾದ್ಯಂತ ಸದ್ದು ಮಾಡುತ್ತಿರುವ ಬ್ಯಾನರ್. ವಿಜಯ್ ಕಿರಗಂದೂರು ಅವರು ಇದ ರಡಿಯಲ್ಲಿ ಪುನೀತ್ ರಾಜ್ ಕುಮಾರ್ ಅವರ ‘ನಿನ್ನಿಂದಲೇ’ ಸಿನಿಮಾ ಮಾಡಿ ಸೋತಾಗ, ‘ನಿನ್ನಿಂದಲೇ ಸೋತೆ ಒಪ್ಪಿಕೋ’ ಎಂದು ಆಡಿಕೊಂಡವರು ಈ ಹೊಂಬಾಳೆ ಇಷ್ಟೊಂದು ಬೆಳೆಯುತ್ತೆ ಅಂತ ಅಂದುಕೊಂಡಿರಲಿಲ್ಲ. ಈಗ ಈ ಹೊಂಬಾಳೆಯ ಗೊನೆ, ಕೊನೆ ಇಲ್ಲವೆಂಬಂತೆ
ಬೆಳೆಯುತ್ತಿದೆ.
ಅದಕ್ಕೆ ಕಾರಣ ‘ಕೆಜಿಎಫ್’ ಎಂದರೆ ತಪ್ಪಿಲ್ಲ. ನಂತರ ಕೆಜಿಎಫ್ 2 ಮತ್ತು ಸಲಾರ್ ಸಿನಿಮಾಗಳ ಮೂಲಕ ಸದ್ದು
ಮಾಡಿತ್ತು ಈ ಬ್ಯಾನರ್. ಜತೆಗೆ ಪುನೀತ್ ಅವರ ‘ರಾಜಕುಮಾರ’ ಸಿನಿಮಾ ಮಾಡಿ ಗೆದ್ದಿತ್ತು. ಮತ್ತೆ ಪುನೀತ್ ಜತೆ ‘ದ್ವಿತ್ವ’ ಸಿನಿಮಾ ಅನೌ ಮಾಡಿದ್ದರೂ ದುರದೃಷ್ಟವಶಾತ್ ಅದು ಆಗಲಿಲ್ಲ. ಆದರೆ ನಂತರದಲ್ಲಿ ತಾನು ಯಶ್, ಪುನೀತ್, ಪ್ರಶಾಂತ್ ನೀಲ್ ಅವರಿಗಷ್ಟೇ ಸೀಮಿತವಲ್ಲ ಎನ್ನುವಂತೆ ಕನ್ನಡದ ಎಲ್ಲ ನಟರನ್ನೂ ಟಚ್ ಮಾಡಲು ಶುರುಮಾಡಿತ್ತು ಹೊಂಬಾಳೆ. ರಕ್ಷಿತ್ ಶೆಟ್ಟಿ ನಿರ್ದೇಶನದ ‘ರಿಚರ್ಡ್ ಆಂಟನಿ’ ಚಿತ್ರ ಅನೌನ್ಸ್ ಆಗಿದ್ದು ಇದೇ ಹೊಂಬಾಳೆ ಬ್ಯಾನರ್ನಿಂದ. ರಿಷಬ್ ಶೆಟ್ಟಿ ಜತೆಗಿನ ‘ಕಾಂತಾರ’ದ ಕ್ರೆಡಿಟ್ ಕೂಡಾ ಹೊಂಬಾಳೆಯದ್ದೇ.
ಈಗ ಇದೇ ತಿಂಗಳು ಶ್ರೀಮುರಳಿ ಜತೆಗಿನ ‘ಭಗೀರಾ’ ಚಿತ್ರದ ಬಿಡುಗಡೆಗೆ ತಯಾರಾಗಿದೆ ಹೊಂಬಾಳೆ. ಇದನ್ನೆ ನೋಡಿ,
ಹಿಂದೊಮ್ಮೆ ‘ಹೊಂಬಾಳೆ, ಹೊಂಬಾಳೆ’ ಅಂತ ತಮ್ಮ ಸಿನಿಮಾದಲ್ಲಿ ಹಾಡಿದ್ದ ನಮ್ಮ ನವರಸ ನಾಯಕ ಜಗ್ಗೇಶ್, ‘ನಿಮ್ ಬ್ಯಾನರ್ನಲ್ಲಿ ನನ್ನಾಸೆಯ ಹೂವೇ ಪಾರ್ಟ್-2 ಮಾಡೋಣ್ವೇ?’ ಅಂತ ಕೇಳಿದ್ರು ಅನ್ನೋದು ಮಾತ್ರ ಶುದ್ಧ ಸುಳ್ಳು.
ಲೂಸ್ ಟಾಕ್- ಮಿಸ್ ಚಂಚಲಾ
ಏನ್ರೀ ಮೊನ್ನೆ ಮದುವೆ ಆಗ್ತೀನಿ ಅಂದ್ರಂತೆ, ಈಗ ಆಗಲ್ಲ ಅಂತಿದೀರಂತೆ? ಅಲ್ಲ ರೀ, ಯಾರೋ ಸುದ್ದಿ ಬರೆದ್ರು ಅಂತ ಮದುವೆನೇ ಕ್ಯಾನ್ಸಲ್ ಮಾಡಿಬಿಡ್ತೀರಾ?
- ಅಯ್ಯೋ… ಈಗಿನ್ ಕಾಲದಲ್ಲಿ ಮದುವೆಗಳೇ ಮೂರು ದಿನಕ್ಕೆ ಬಿದ್ದುಹೋಗುವಾಗ ಮದುವೆ ಸುದ್ದಿಗಳು ಬಿದ್ದುಹೋಗೋದು ಯಾವ ಲೆಕ್ಕ ಬಿಡಿ.
- ಮುಂದೆ ನಿಂತು ಮದುವೆ ಕ್ಯಾನ್ಸಲ್ ಮಾಡಿಸೋ ಹಿರಿಯರು ಇರ್ತಾರೆ ಬಿಡಿ. ಆದ್ರೆ, ಯಾರೇನೇ ಅಂದ್ರೂ, ನಿಮ್ಮಿಬ್ರಲ್ಲಿ ಯಾರಾದ್ರೂ ಒಬ್ರು ಬೇರೆಯವರನ್ನ ಮದುವೆ ಆಗಿ ಲೈಫಲ್ಲಿ ಸೆಟ್ಲ್ ಆಗೋವರೆಗೆ ಆ ಸುದ್ದಿಗೆ ಲೈಫ್ ಇದ್ದೇ ಇರುತ್ತೆ. ಅಲ್ವಾ?
- ಇಲ್ಲರೀ, ನಾವಿಬ್ರೂ ಮದುವೆ ಆಗ್ತಾ ಇದೀವಿ. ಆದರೆ, ಬೇರೆ ಬೇರೆ ಮದುವೆ ಆಗ್ತಾ ಇದೀವಿ. ಅಷ್ಟೆ.
ಅಯ್ಯೋ, ನೀವು ಮದುವೆ ಆಗ್ತಿದೀರೋ ಅಥವಾ ಬೇರೆ ಆಗ್ತಾ ಇದೀರೋ ಕನ್ ಫ್ಯೂಸ್ ಆಗ್ತಿದೆ. ನೀವು ಯಾರನ್ನ ಮದ್ವೆ ಆಗ್ತಿರಾ ಅನ್ನೋದೇನೂ ಮಿಲಿಯನ್ ಡಾಲರ್ ಕ್ವೆಶ್ಚನ್ ಅಲ್ಲ ಬಿಡಿ. ಆದ್ರೆ, ಇನ್ನೊಬ್ರು, ಕಂಗ್ರಾಟ್ಸ್ ಹೇಳೋಕೆ ಫೋನ್ ಮಾಡಿದ್ರೆ ‘ಸುದ್ದಿನೇ ಸುಳ್ಳು’ ಅಂದ್ರಂತೆ?- ಮದುವೆ ಆಗೋದು ಲೇಟ್ ಅಲ್ವಾ, ಸದ್ಯಕ್ಕೆ ಹಿಂಗೆ ಹೇಳಿ, ಅವರಿಗೆ ಮೇಕಿಂಗ್ ನ್ಯೂಸ್, ನಮಗೆ ಬ್ರೇಕಿಂಗ್ ನ್ಯೂಸ್ ಅಂತದ್ರು. ಹೋಗ್ಲಿ ಬಿಡಿ. ಬ್ರೇಕ್ ಆಗಿದ್ದಕ್ಕೆ ನೀವು ಕಂಗ್ರಾಟ್ಸ್ ಹೇಳಲ್ವಾ?
ಹಲೋ, ಮದುವೆಯಾಗೋ ಸಿನಿಮಾ ಹೀರೋ-ಹೀರೋಯಿನ್ ಗಳಿಗೆಲ್ಲ ಕಂಗ್ರಾಟ್ಸ್ ಹೇಳೋದೆ ನಮ್ ಕೆಲಸ ಅಂದ್ಕೊಂಡಿದ್ದೀರಾ? ಅದ್ಬಿಡಿ, ಅದೇನೋ ಸಕ್ಸಸ್ ಸಿಕ್ಮೇಲೆ ಈ ಥರಾ ‘ಸಿಕ್ ಸಿಕ್’ ಸುದ್ದಿ ಕಾಮನ್ ಅಂದ್ರಂತೆ, ನೀವು ಯಾವ ಸಕ್ಸಸ್ ಬಗ್ಗೆ ಹೇಳಿದ್ರಿ ಅಂತ ಗೊತ್ತಾಗ್ಲಿಲ್ಲ..- ಅದೇ ರೀ, ಇತ್ತೀಚೆಗೆ ನೂರು ದಿನ ಓಡದೇ ಇದ್ರೂ, ಬಿಡುಗಡೆ ಆಗಿ ನೂರು ದಿನ ಆಯ್ತಲ್ಲ, ಆ ಸಿನಿಮಾ.
- ಓ, ಆ ಪಿಕ್ಚರ್ನಲ್ಲಿ ನೀವೂ ಆಕ್ಟಿಂಗ್ ಮಾಡಿದ್ರಲ್ವಾ… ಸರಿ, ಸರಿ, ಮರೆತೇಹೋಗಿತ್ತು ನೋಡಿ.. ಸರಿ, ನೀವು ಈ ಮುಂಚೆ ಕೇರಳದಲ್ಲೂ ‘ಡ್ಯುಯೆಟ್’ ಹಾಡಿದ್ರಿ ಅಂತ ಕೇಳ್ದೆ, ಕನ್ನಡದಲ್ಲೂ, ಮಲಯಾಳಂ ನಲ್ಲೂ ಸಿಂಗರ್ ಆಗಿ ಹೊಸ ಹೊಸ ಹಾಡು ಹಾಡಿದ್ದಕ್ಕೇ, ಈಗ ದಿನಕ್ಕೊಂದ್ ಹೊಸರಾಗ ತೆಗೀತಿದೀರಂತೆ?
- ಏನ್ ಜೋಕ್ ಮಾಡ್ತಾ ಇದೀರಾ, ನಂಗೆ ಹಾಡೋಕೇ ಬರಲ್ಲ. ನನ್ ಮದುವೆ ಸುದ್ದಿ ಥರ, ಇದೆಲ್ಲ ನಂಗೆ
ಆಗದೇ ಇರೋರು ಹಬ್ಬಿಸಿರೋ ಸುಳ್ಳು ಸುದ್ದಿ. - ನೆಟ್ ಪಿಕ್ಸ್
ಖೇಮುಶ್ರೀ ಶಾಪಿಂಗ್ ಮಾಲ್ ನಿಂದ ಖರೀದಿ ಮುಗಿಸಿ ಹೊರಬಂದಳು. ಕಾರಿನ ಕೀ ತೆಗೆಯಲು ಪರ್ಸ್ಗೆ ಕೈ ಹಾಕಿದರೆ ಕೀ ಸಿಗಲಿಲ್ಲ. ತಡಬಡಾಯಿಸಿ ಎಲ್ಲ ಕಡೆ ಹುಡುಕಿದರೂ ಕಾರ್ ಕೀ ಸುಳಿವೇ ಇಲ್ಲ. ಅವ ಳಿಗೂ ಗೊತ್ತಿತ್ತು, ಕಾರ್ ಕೀ
ವಿಷಯದಲ್ಲಿನ ತನ್ನ ಬೇಜವಾಬ್ದಾರಿತನ ಇದೇನೂ ಮೊದಲ ಬಾರಿ ಅಲ್ಲ ಎಂಬುದು. ಎಷ್ಟೋ ಸಾರಿ, ಕಾರ್ ಕೀಯನ್ನು ಕಾರಿನ ಬಿಟ್ಟು ಹೋಗಿದ್ದಕ್ಕಾಗಿ ಗಂಡ ಖೇಮುವಿನಿಂದ ಸಿಕ್ಕಾಪಟ್ಟೆ ಬೈಸಿಕೊಂ ಡಿದ್ದು ಅವಳಿಗಿನ್ನೂ ನೆನಪಿತ್ತು. ಈ ಸಲಾನೂ ಹಂಗೇ ಆಯ್ತಾ, ಹಂಗೇ ಆಗಿದ್ರೆ ಆಕಸ್ಮಾತ್ ಯಾರಾದ್ರೂ ಕಾರನ್ನು ಲಪಟಾಯಿಸಿದ್ರೆ
ಏನ್ ಗತಿ ಎಂಬ ಆತಂಕದಲ್ಲಿ ಪಾರ್ಕಿಂಗ್ಗೆ ಓಡೋಡಿ ಬಂದಳು. ಅವಳಂದುಕೊಂಡ ಹಾಗೇ ಆಗಿತ್ತು.
ಅಲ್ಲಿ ಅವಳ ಕಾರ್ ಇರಲಿಲ್ಲ. ತಕ್ಷಣ ಪೊಲೀಸರಿಗೆ ಕಾಲ್ ಮಾಡಿ ಕರೆಸಿ, ಕಾರಿನ ಕಲರ್, ನಂಬರ್ ಮತ್ತಿತರ
ವಿವರ ನೀಡಿ ದೂರು ಕೊಟ್ಟಳು. ಪೊಲೀಸರು ಕಾರು ಹುಡುಕಲು ಹೊರಟರು. ಒಬ್ಬಳೇ ನಿಂತಿದ್ದ ಖೇಮುಶ್ರೀ ಸ್ವಲ್ಪ ಹೊತ್ತಿನ ನಂತರ, ‘ಬೈಸಿ ಕೊಂಡರೂ ಪರವಾಗಿಲ್ಲ, ಯಾವುದಕ್ಕೂ ಗಂಡನಿಗೆ ಫೋನ್ ಮಾಡಿ ವಿಷಯ ತಿಳಿಸೋದು ಒಳ್ಳೇದು’ ಎಂದು ಖೇಮುಗೆ ಕಾಲ್ ಮಾಡಿ ಮೆಲ್ಲನೆ ಅಳುಕಿನಿಂದಲೇ ಹೇಳಿದಳು ‘ರೀ, ನನ್ನ ಕಾರ್ ಕೀ ಕಾರ ಬಿಟ್ಟಿದ್ದೆ.
ಈಗ ಕಾರು ಕಳುವಾಗಿದೆ. ಬಯ್ಬೇಡಿ, ನಾನಿಲ್ಲಿ ಶಾಪಿಂಗ್ ಮಾಲ್ ಬಳಿ ಒಬ್ಬಳೇ ಇದೀನಿ ಬರ್ತೀರಾ ಪ್ಲೀಸ್’. ಆ
ಕಡೆಯಿಂದ ಗಂಡ ಖೇಮು ರೇಗಿದ, ‘ಅಯ್ಯೋ ನಿನ್ನ, ಲೇ, ಇವತ್ತು ನೀನೆ ಡ್ರೈವ್ ಮಾಡ್ಕೊಂಡ್ ಹೋಗಿದ್ದೆ. ಬೆಳಗ್ಗೆ
ನಾನೇ ನಿನ್ನ ಕಾರಲ್ಲಿ ಕರ್ಕೊಂಡ್ ಹೋಗಿ ಶಾಪಿಂಗ್ ಮಾಲ್ ಹತ್ರ ಬಿಟ್ ಬರಲಿಲ್ವಾ. ಈಗ ಈ ಪೊಲೀಸ್ನೋರಿಗೆ ನಿನ್ನ ಕಾರನ್ನ ನಾನು ಕದ್ದಿಲ್ಲ ಅಂತ ಕನ್ವಿನ್ಸ್ ಮಾಡಿ ಆಮೇಲ್ ಬರ್ತೀನಿ ಇರು’.
ಲೈನ್ ಮ್ಯಾನ್
ಲವ್ನಲ್ಲಿ ಹುಡುಗ ಕೈ ಕೊಟ್ರೆ- ಬಗನಿ ಗೂಟ
- ಹುಡುಗಿ ಕೈ ಕೊಟ್ರೆ- ಭಗಿನಿ ಗೂಟ
- ಹಳೆ ಮಾತು: ಸಮುದ್ರ ದಡದಲ್ಲಿ ಕಪ್ಪೆಚಿಪ್ಪುಗಳು ಸಿಗುತ್ತವೆ. ಮುತ್ತುಗಳು ಬೇಕು ಅಂದ್ರೆ ಸಮುದ್ರದ ತಳಕ್ಕೆ
ಹೋಗಬೇಕು. - ಹೊಸ ಮಾತು: ವಾಲ, ಟೈಮ್ ಲೈನ್ಗಳಲ್ಲಿ ಎಲ್ಲರೂ ಸಾಚಾಗಳೇ ಆಗಿರ್ತಾರೆ; ನಿಜವಾದ ಮುಖ ಗೊತ್ತಾಗಬೇಕು ಅಂದ್ರೆ ಇನ್ಬಾಕ್ಸ್ ಗೆ ಹೋಗಬೇಕು.
- ಅಧಿಕಾರಕ್ಕೆ ಏರುವಾಗ ಅರವಿಂದ ಕೇಜ್ರಿವಾಲ್ ಯಾರ ಮೇಲೆ ಆಣೆ ಮಾಡಿ ಹೇಗೆ ಪ್ರಮಾಣವಚನ ಸ್ವೀಕರಿಸ್ತಾರೆ
- ‘ಆಪ್’ ಕಿ ಕಸಮ್
- ಚಳಿಗಾಲದ ಸಮಸ್ಯೆ
- ಬೈಕಿನ ಹಿಂದೆ ಕೂತ ಹುಡುಗಿ ಬಾಯ್ ಫ್ರೆಂಡ್ನ ಅಪ್ಪಿಕೊಂಡಿರುವುದಕ್ಕೆ ಆ ಹುಡುಗನ ಮೇಲಿರೋ ಸಿಕ್ಕಾಪಟ್ಟೆ ಪ್ರೀತಿಯೇ ಕಾರಣ ಅಂತ ಹೇಳೋಕಾಗಲ್ಲ.
- ನಮ್ ಜನ ಸರಿ ಇಲ್ಲಪ್ಪ…
- ಸಿಟ್ಟು ಬಂದಾಗ ರಾಜಕಾರಣಿಗಳನ್ನು ದೇಶದಿಂದ ಹೊರಗೆ ಹಾಕಬೇಕು ಅಂತಾರೆ; ಈಗ ಅವರಾಗಿಯೇ ದೇಶದಿಂದ ಹೊರಗೆ ಹೋದರೆ ಸಿಟ್ಟು ಮಾಡಿಕೋತಾರೆ.
- ಫಿಲ್ಮ್ ಫೆಸ್ಟಿವಲ್ಗಳಲ್ಲಿ ಸಿಕ್ಕವರನ್ನೆಲ್ಲ ಹೊರಗೆ ತಳ್ಳುತ್ತ ಆಹ್ವಾನಿತರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ಪೊಲೀಸರನ್ನು ನೋಡಿದವರ ಕಾಮೆಂಟ್
- ಆಹಾ, ಫಿಲ್ಮ್ನದ್ರೆ ಎಲ್ಲಾ ಮುಗಿದ್ಮೇಲೆ ಕೊನೇಗ್ ಬರ್ತೀರ, ಫಿಲ್ಮ್ ಫೆಸ್ಟಿವಲ್ಗೆ ಮಾತ್ರ ಎಲ್ಲರಿಗಿಂತ ಮೊದಲೇ ಬಂದ್ಬಿಟ್ಟಿದೀರಾ.
- ಸೀಕ್ವೆಲ್ ಮಾಡಲಾಗದ ಚಿತ್ರಗಳು
- ನಂ.೧
- ಒಕ್ಕೇ ಒಕ್ಕುಡು
- ಅಪವಾದ ಎಂಬಂತೆ ಎರಡೆರಡು ‘ಸ್ವರ್ಗ’ ತೋರಿಸಿದ್ದು ‘ಜನ್ನತ್ 2’
- ‘ಜನ್ನತ್ 3’ ಸಿನಿಮಾ ಬಂದರೆ ಕನ್ನಡದಲ್ಲಿ “ಸ್ವರ್ಗಕ್ಕೆ ‘ಮೂರೇ’ ಗೇಣು” ಅಂತ ರಿಮೇಕ್ ಮಾಡಬಹುದು
ಮಾಡರ್ನ್ ಗಾದೆ - ಸುಸ್ಸೂ ಬಂತು ಅಂತ ಬೆಂಗಳೂರು ‘ಒನ್’ಗೆ ಹೋಗೋಕಾಯ್ತದ..?
ಇದನ್ನೂ ಓದಿ: Hari Parak Column: ʼತುಪ್ಪʼ ತಿಂದು ಕೊಬ್ಬು ಜಾಸ್ತಿ ಆದವರು ʼಘೀʼಳಿಡುತ್ತಾರೆ