Monday, 25th November 2024

Zeeshan Siddique: ಯುದ್ಧ ಮುಗಿದಿಲ್ಲ; ಬಿಷ್ಣೋಯ್‌ ಗ್ಯಾಂಗ್‌ಗೆ ಸವಾಲು ಒಡ್ಡಿದ ಬಾಬಾ ಸಿದ್ದಿಕಿ ಪುತ್ರ

Zeeshan Siddique

ಮುಂಬೈ: ಕಳೆದ ವಾರ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಹತ್ಯೆಗೀಡಾದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ (Baba Siddique) ಅವರ ಪುತ್ರ ಝೀಶಾನ್ ಸಿದ್ದಿಕಿ (Zeeshan Siddique) ಭಾನುವಾರ ತನ್ನ ತಂದೆಯ ಹಂತಕರಿಗೆ ಬಹಿರಂಗವಾಗಿ ಸವಾಲು ಹಾಕಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ʼʼಯುದ್ಧ ಮುಗಿದಿಲ್ಲ. ನ್ಯಾಯ ಸಿಗುವವರೆಗೂ ಸುಮ್ಮನಿರುವುದಿಲ್ಲʼʼ ಎಂದು ಹೇಳಿದ್ದಾರೆ.

“ಅವರು (ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌) ನನ್ನ ತಂದೆಯನ್ನು ಮೌನಗೊಳಿಸಿದರು. ಆದರೆ ಅವರು ಒಂದು ವಿಚಾರವನ್ನು ಮರೆತಿದ್ದಾರೆ. ನನ್ನ ತಂದೆ ಸಿಂಹ. ಅವರ ಹೋರಾಟವನ್ನು ನಾನು ಮುಂದುವರಿಸುತ್ತೇನೆ. ಅವರು ನ್ಯಾಯದ ಪರವಾಗಿ ನಿಂತಿದ್ದರು. ಅವರು ಬದಲಾವಣೆಗಾಗಿ ಹೋರಾಡಿದ್ದಾರೆ ಮತ್ತು ಅಚಲ ಧೈರ್ಯದಿಂದ ಬಿರುಗಾಳಿಗಳನ್ನು ಎದುರಿಸಿದ್ದಾರೆ. ಈಗ ಅವರನ್ನು ಮೌನವಾಗಿಸಿದವರು ತಾವು ಗೆದ್ದಿದ್ದೇವೆ ಎಂದು ಭಾವಿಸಿ ನನ್ನತ್ತ ದೃಷ್ಟಿ ಹಾಯಿಸಿದ್ದಾರೆ. ಅವರಿಗೆ ನಾನು ಸವಾಲು ಹಾಕುತ್ತೇನೆ: ಸಿಂಹದ ರಕ್ತವು ನನ್ನ ರಕ್ತನಾಳಗಳಲ್ಲಿ ಹರಿಯುತ್ತದೆ” ಎಂದು ಝೀಶಾನ್ ಸಿದ್ದಿಕಿ ಬರೆದುಕೊಂಡಿದ್ದಾರೆ.

ಕಾಂಗ್ರೆಸ್ ಶಾಸಕರೂ ಆಗಿರುವ ಝೀಶಾನ್ ಸಿದ್ದಿಕಿ, ʼʼತಂದೆಯ ಹತ್ಯೆ, ಬೆದರಿಕೆಗೆ ಹೆದರುವುದಿಲ್ಲʼʼ ಎಂದು ಘೋಷಿಸಿದ್ದಾರೆ. “ನಾನಿನ್ನೂ ಇಲ್ಲೇ ಇದ್ದೇನೆ; ಯಾವುದೇ ಭಯವಿಲ್ಲದೆ. ನಾನು ತಂದೆಯ ಸ್ಥಾನದಲ್ಲಿ ಎದ್ದು ನಿಲ್ಲುತ್ತೇನೆ. ಈ ಹೋರಾಟ ಇನ್ನೂ ಮುಗಿದಿಲ್ಲ. ಯಾವುದೇ ಸವಾಲಿಗೆ ಸಿದ್ಧ. ನರಿಗಳು ಕೆಲವೊಮ್ಮೆ ಸಿಂಹವನ್ನು ಮೋಸದಿಂದ ಕೊಲ್ಲುತ್ತವೆ” ಎಂದು ಅವರು ಬರೆದಿದ್ದಾರೆ.

ಕೆಲವು ದಿನಗಳ ಹಿಂದೆ ಝೀಶಾನ್ ಸಿದ್ದಿಕಿ ನ್ಯಾಯಕ್ಕಾಗಿ ಒತ್ತಾಯಿಸಿದ್ದರು. “ಬಡ, ಮುಗ್ಧ ಜನರ ಜೀವ ಮತ್ತು ಮನೆಗಳನ್ನು ರಕ್ಷಿಸಲು ನನ್ನ ತಂದೆ ಪ್ರಾಣ ಕಳೆದುಕೊಂಡರು. ಆದರೆ ಅವರ ಸಾವನ್ನು ರಾಜಕೀಯಗೊಳಿಸಬಾರದು ಮತ್ತು ವ್ಯರ್ಥವಾಗಲು ಬಿಡಬಾರದು. ನಮಗೆ ನ್ಯಾಯ ಬೇಕು, ನಮ್ಮ ಕುಟುಂಬಕ್ಕೆ ನ್ಯಾಯ ಬೇಕು” ಎಂದು ಅವರು ಪೋಸ್ಟ್ ಮಾಡಿದ್ದರು.

ಪ್ರಕರಣದ ಹಿನ್ನೆಲೆ

66 ವರ್ಷದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಅವರ ಮೇಲೆ ಅಕ್ಟೋಬರ್‌ 12ರಂದು ಮೂವರು ಗುಂಡಿನ ದಾಳಿ ನಡೆಸಿದ್ದರು. ಮುಂಬೈಯ ಬಾಂದ್ರಾ ಪ್ರದೇಶದ ಖೇರ್ ನಗರದಲ್ಲಿನ ಬಾಬಾ ಸಿದ್ದಿಕಿ ಅವರ ಪುತ್ರ, ಶಾಸಕ ಜೀಶಾನ್ ಸಿದ್ದಿಕಿ ಕಚೇರಿಯ ಹೊರಗೆ ಈ ದಾಳಿ ನಡೆದಿತ್ತು. ಆಘಾತಕಾರಿ ಸಂಗತಿಯೆಂದರೆ ದಸರಾ ಆಚರಣೆಯ ವೇಳೆ, ಪೊಲೀಸರು ಹೆಚ್ಚಿನ ಎಚ್ಚರಿಕೆ ವಹಿಸಿದ್ದ ದಿನದಂದೇ ಜನನಿಬಿಡ ರಸ್ತೆಯಲ್ಲಿ ಈ ದಾಳಿ ನಡೆಸಲಾಗಿತ್ತು. ಗಾಯಗೊಂಡ ಸಿದ್ದಿಕ್ಕಿ ಅವರನ್ನು ತಕ್ಷಣ ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿ ಅವರು ಮೃತಪಟ್ಟರು.

ಕೊಲೆ ತನಿಖೆಗೆ ಸಂಬಂಧಿಸಿದಂತೆ, ಮುಂಬೈ ಪೊಲೀಸರು ಮಹಾರಾಷ್ಟ್ರದಾದ್ಯಂತ 15 ತಂಡಗಳನ್ನು ನಿಯೋಜಿಸಿದ್ದಾರೆ ಮತ್ತು ಶೂಟರ್‌ಗಳಿಗೆ ವ್ಯವಸ್ಥಾಪನಾ ಬೆಂಬಲವನ್ನು ನೀಡಿದವರನ್ನು ಗುರುತಿಸಲು ತನಿಖೆ ನಡೆಯುತ್ತಿದೆ ಎಂದು ಮುಂಬೈಯ ಅಪರಾಧ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈಗಾಗಲೇ 9 ಮಂದಿಯನ್ನು ಬಂಧಿಸಲಾಗಿದೆ. ಬಾಬಾ ಸಿದ್ದಿಕಿ ಅವರ ಹತ್ಯೆಯಲ್ಲಿ ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಮತ್ತು ನಟ ಸಲ್ಮಾನ್ ಖಾನ್ ನಡುವಿನ ದ್ವೇಷ ಸೇರಿದಂತೆ ಎಲ್ಲ ಸಂಭಾವ್ಯ ಕೋನಗಳ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಸಿದ್ದಿಕಿ ಮಾತ್ರವಲ್ಲ ಅವರ ಪುತ್ರ ಝೀಶಾನ್ ಸಿದ್ದಿಕಿ ಕೂಡ ಗ್ಯಾಂಗ್‌ಸ್ಟರ್‌ನ ಹಿಟ್‌ಲಿಸ್ಟ್‌ನಲ್ಲಿದ್ದರು ಎಂದು ವಿಚಾರಣೆ ವೇಳೆ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಅಪ್ಪ-ಮಗ ಇಬ್ಬರನ್ನೂ ಕೊಲ್ಲಲು ಸುಪಾರಿ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Baba Siddique: ಸಲ್ಮಾನ್‌ ಖಾನ್‌ ಜತೆ ನಂಟು ಹೊಂದಿರೋರಿಗೆ ಇದೇ ಗತಿ; ಬಿಷ್ಣೋಯ್‌ ಗ್ಯಾಂಗ್ ಎಚ್ಚರಿಕೆ