Wednesday, 27th November 2024

C P Yogeshwar: ಬಿಜೆಪಿ ಎಂಎಲ್‌ಸಿ ಸ್ಥಾನಕ್ಕೆ ಸಿ.ಪಿ ಯೋಗೇಶ್ವರ್ ರಾಜೀನಾಮೆ; ಚನ್ನಪಟ್ಟಣದಲ್ಲಿ ಸ್ವತಂತ್ರವಾಗಿ ಕಣಕ್ಕೆ!

C P Yogeshwar

ಹುಬ್ಬಳ್ಳಿ: ಬಿಜೆಪಿ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್‌ (C P Yogeshwar) ರಾಜೀನಾಮೆ ಸಲ್ಲಿಸಿದ್ದಾರೆ. ಚನ್ನಪಟ್ಟಣ ಕ್ಷೇತ್ರ ಉಪ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್‌ ಸಿಗಲ್ಲ ಎಂಬುವುದು ಖಚಿತವಾದ ಹಿನ್ನೆಲೆಯಲ್ಲಿ ಎಂಎಲ್‌ಸಿ ಸ್ಥಾನಕ್ಕೆ ಸೋಮವಾರ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಸಿ.ಪಿ.ಯೋಗೇಶ್ವರ್‌ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಚನ್ನಪಟ್ಟಣ ಕ್ಷೇತ್ರದಿಂದ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ ಎಂದು ತಿಳಿಸಿದ್ದಾರೆ.

ಬಿಜೆಪಿಯಿಂದ ಟಿಕೆಟ್‌ ಕೈತಪ್ಪಿದರೆ ಕಾಂಗ್ರೆಸ್‌ನಿಂದ ಸಿ.ಪಿ.ಯೋಗೇಶ್ವರ್‌ ಸ್ಪರ್ಧಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿಯಿಂದ ಕಣಕ್ಕಿಳಿಯಲು ಸಿ.ಪಿ.ಯೋಗೇಶ್ವರ್‌ ಇಂಗಿತ ವ್ಯಕ್ತಪಡಿಸಿದ್ದರು. ಚನ್ನಪಟ್ಟಣ ಕ್ಷೇತ್ರವನ್ನು ಬಿಟ್ಟುಕೊಡಲು ಜೆಡಿಎಸ್‌ ಒಪ್ಪದ ಕಾರಣ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಸಂಡೂರು ಹಾಗೂ ಶಿಗ್ಗಾಂವಿ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಬಿಜೆಪಿ, ಚನ್ನಪಟ್ಟಣಕ್ಕೆ ಮಾತ್ರ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ. ಇದರಿಂದ ಈ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಬಹುತೇಕ ನಿಖಿಲ್‌ ಕುಮಾರಸ್ವಾಮಿ ಅವರೇ ಸ್ಪರ್ಧಿಸುವ ಸಾಧ್ಯತೆ ಇದೆ.

ಈ ಸುದ್ದಿಯನ್ನೂ ಓದಿ | R Ashok: ಚನ್ನಪಟ್ಟಣ ಉಪಚುನಾವಣೆ; ಎನ್‌ಡಿಎ ಅಭ್ಯರ್ಥಿಗೆ ಟಿಕೆಟ್‌ ಎಂದ ಆರ್. ಅಶೋಕ್‌

ಕಾಂಗ್ರೆಸ್​ ನಾಯಕರನ್ನು ಭೇಟಿ ಮಾಡಿಲ್ಲ

ಯೋಗೇಶ್ವರ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿದ್ದರಿಂದ ಈ ಬಗ್ಗೆ ಸೋಮವಾರ ಬೆಳಗ್ಗೆ ಪ್ರತಿಕ್ರಿಯಿಸಿದ್ದ ಸಿ.ಪಿ.ಯೋಗೇಶ್ವರ್‌ ಅವರು, ನನಗೆ ಟಿಕೆಟ್​ ಕೊಡಲು ಇಷ್ಟವಿರದಿದ್ದರೆ ಕುಮಾರಸ್ವಾಮಿಯವರು ತಮ್ಮ ಮಗನಿಗೆ ಕೊಡಲಿ. ಅದನ್ನು ಬಿಟ್ಟು ನಾನು ಕಾಂಗ್ರೆಸ್​ ನಾಯಕರನ್ನು ಸಂಪರ್ಕಿಸಿದ್ದೇನೆ ಎಂದು ಸುಳ್ಳು ಆರೋಪ ಮಾಡುವುದು ಬೇಡ. ನಾನು ಯಾವ ಕಾಂಗ್ರೆಸ್​ ನಾಯಕರನ್ನೂ ಭೇಟಿ ಮಾಡಿಲ್ಲ. ನನಗೆ ಜೆಡಿಎಸ್​ ಚಿಹ್ನೆ ಅಡಿ ಸ್ಪರ್ಧಿಸಲು ಇಷ್ಟವಿಲ್ಲ. ನಾನು ಬಿಜೆಪಿಯಿಂದ ಸ್ಪರ್ಧೆ ಮಾಡಲು ಇಚ್ಛಿಸಿದ್ದೇನೆ. ನನ್ನ ಜನರು ಕೂಡ ಜೆಡಿಎಸ್​ನಿಂದ ಸ್ಫರ್ಧೆ ಬೇಡ ಎನ್ನುತ್ತಿದ್ದಾರೆ. ಈ ವಿಚಾರವಾಗಿ ಕುಮಾರಸ್ವಾಮಿ ಬಳಿಯೂ ಚರ್ಚೆ ಮಾಡಿದ್ದೇನೆ. ಆದರೆ, ಅವರಿಗೆ ತಮ್ಮ ಮಗನಿಗೆ ಟಿಕೆಟ್​ ಕೊಡಿಸಬೇಕೆಂಬ ಆಸೆ ಇದೆ. ನಾನು ಬಿಜೆಪಿಯಿಂದಲೇ ಸ್ಪರ್ಧೆ ಮಾಡಲು ನಿರ್ಧರಿದ್ದೇನೆ. ಆದರೆ, ಯಾರೊಬ್ಬರೂ ನನಗೆ ಬೆಂಬಲ ಕೊಡುತ್ತಿಲ್ಲ ಎಂದು ಯೋಗೇಶ್ವರ್ ಬೇಸರ ಹೊರಹಾಕಿದ್ದರು.