Saturday, 23rd November 2024

‌Vishweshwar Bhat Column: ಸಮುದ್ರದ ಮೇಲೆ ಡ್ರೋನ್‌

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಸಮುದ್ರದ ಮೇಲೆ ಡ್ರೋನ್ ಹಾರಿಸುವುದು ಒಂದು ರೋಮಾಂಚನಕಾರಿ ಅನುಭವವಾಗಿದ್ದರೂ, ಇದು ಹಲವಾರು ಸವಾಲುಗಳು ಮತ್ತು ಅಪಾಯಗಳನ್ನು ಹೊಂದಿದೆ. ಹೀಗಾಗಿ ಸಮುದ್ರದ ಮೇಲೆ ಡ್ರೋನ್ ಹಾರಿಸುವಾಗ ತುಸು ಎಚ್ಚರ ಅಗತ್ಯ. ನೀವು ಯಾವ ಡ್ರೋನ್ ಹಾರಿಸುತ್ತಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಒಳ್ಳೆಯದು.

200 ಗ್ರಾಂ ತೂಕಕ್ಕಿಂತ ಕಡಿಮೆ ಭಾರದ ಡ್ರೋನ್ ಹಾರಿಸಿದರೆ, ಸಮುದ್ರದ ಗಾಳಿಯ ಹೊಡೆತಕ್ಕೆ ಸಿಲುಕಿ ಕ್ರ್ಯಾಶ್ ಆಗುವ ಸಂಭವ ಹೆಚ್ಚು. ಅಂಥ ಸಂದರ್ಭಗಳಲ್ಲಿ 700 ಗ್ರಾಂಗಿಂತ ಭಾರದ ಡ್ರೋನ್ (DJI Air 3, DJI Mavic 3 Pro ಇತ್ಯಾದಿ..) ಆಯ್ಕೆ ಮಾಡಿಕೊಳ್ಳಬೇಕು. ಆ ಡ್ರೋನ್ ಗಳು ಎಷ್ಟೇ ಬಲವಾದ ಗಾಳಿ ಹೊಡೆತವನ್ನಾದರೂ ತಡೆದು ಕೊಳ್ಳುತ್ತವೆ. ಕೆಲವು ಸಂದರ್ಭಗಳಲ್ಲಿ ಗಾಳಿಯ ಬೀಸುವ ವೇಗ ಬಲವಾಗಿದ್ದರೆ, ರಿಮೋಟ್ ಕಂಟ್ರೋಲರ್‌ ನಲ್ಲಿ Strong Wind ಎಂಬ ವಾರ್ನಿಂಗ್ ಬರುತ್ತದೆ.

ಗಾಳಿ ಬೀಸುವ ಪ್ರಮಾಣ ಮತ್ತಷ್ಟು ಜೋರಾದರೆ, Home Button ಪ್ರೆಸ್ ಮಾಡಿ ಎಂಬ ಸಂದೇಶ ಬರುತ್ತದೆ. ಆಗಲೂ ನೀವು ಅದು ಹೇಳದಂತೆ ಕೇಳದಿದ್ದರೆ, ಡ್ರೋನ್ ತಾನು ಎಲ್ಲಿಂದ ಹಾರಿತ್ತೋ ಅಲ್ಲಿಗೆ ತನ್ನ ಪಾಡಿಗೆ ಮರಳುತ್ತದೆ. ಕೆಲವು ವೇಳೆ ಗಾಳಿಯ ರಭಸ ಇದ್ದಕ್ಕಿದ್ದಂತೆ ಜೋರಾದರೆ, ಕ್ರ್ಯಾಶ್ ಆಗಲೂಬಹುದು. ಸಮುದ್ರದಲ್ಲಿ ಕಡಲ ಪಕ್ಷಿಗಳ, ಮೀನು ಹಿಡಿಯಲು ಬರುವ ರಣಹದ್ದುಗಳ ಕಾಟ ಬೇರೆ. ನೀಲಾಕಾಶದಲ್ಲಿ ದೊಡ್ಡ ಡ್ರೋನ್‌ ಗಳನ್ನು ಕಂಡರೆ, ಇದ್ಯಾವುದೋ ವಿಚಿತ್ರ ಪಕ್ಷಿ ಅಥವಾ ತನ್ನ ಪ್ರತಿಸ್ಪರ್ಧಿ ಆಗಮಿಸಿದೆಯಲ್ಲಾ ಎಂದು ಅಟ್ಯಾಕ್ ಮಾಡುವ ಸಾಧ್ಯತೆ ಯೂ ಇರುತ್ತದೆ.

ಸಾಮಾನ್ಯವಾಗಿ ಡ್ರೋನ್‌ನ ಬಲವಾದ ಸದ್ದು ಹತ್ತಿರ ಬರದಂತೆ ತಡೆದರೂ, ವೇಗವಾಗಿ ಹಕ್ಕಿಗಳು ಧಾವಿಸಿದಾಗ, ನಿಯಂತ್ರಣ ತಪ್ಪಿ, ಅಚಾನಕ್ ಆಗಿ ಡಿಕ್ಕಿ ಹೊಡೆಯಲೂಬಹುದು. ಆಗಲೂ ಡ್ರೋನ್ ಕ್ರ್ಯಾಶ್ ಆಗುವ ಸಂಭವ ವಿರುತ್ತದೆ. ಇನ್ನು ಕೆಲವು ಸಂದರ್ಭದಲ್ಲಿ ಸಮುದ್ರದ ಗಾಳಿ ಜೋರಾಗಿ ಬೀಸುತ್ತಿದ್ದರೆ, ಡ್ರೋನ್ ನಿಯಂತ್ರಣಕ್ಕೆ ಸಿಗದೇ ಅಡ್ಡಾದಿಡ್ಡಿ ಅಥವಾ ಯದ್ವಾ ತದ್ವಾ ಚಲಿಸುವ ಸಾಧ್ಯತೆಯೂ ಇರುತ್ತದೆ.

ಆಗ ವಿಡಿಯೋ ಕಟ್ ಕಟ್ ಆಗಲೂ ಬಹುದು, ಬ್ಲರ್ ಕೂಡ ಆಗಬಹುದು. ಸಮುದ್ರದ ಅಲೆಗಳು ಡ್ರೋನ್‌ನ ಸ್ಥಿರತೆಯನ್ನು ಕಳೆದುಕೊಳ್ಳಲು ಕಾರಣವಾಗಬಹುದು. ಆದ್ದರಿಂದ, ಅಲೆಗಳು ತುಂಬಾ ಹೆಚ್ಚಿರುವಾಗ ಡ್ರೋನ್ ಹಾರಿಸುವುದು ಸುರಕ್ಷಿತವಲ್ಲ. ಸಮುದ್ರದ ಮೇಲಿನ ಹವಾಮಾನವು ಭೂಮಿಯ ಮೇಲಿನ ಹವಾಮಾನಕ್ಕಿಂತ ಹೆಚ್ಚು ಬದಲಾಗುವ ಸಾಧ್ಯತೆ ಇರುತ್ತದೆ. ಗಾಳಿಯ ವೇಗ, ತೇವಾಂಶ ಮತ್ತು ಮಳೆ ಇವುಗಳು ನಿಮ್ಮ ಡ್ರೋನ್‌ನ ಹಾರಾಟ ವನ್ನು ಪ್ರಭಾವಿಸಬಹುದು. ಸಮುದ್ರದ ಮೇಲೆ ಡ್ರೋನ್ ಹಾರಿಸುವಾಗ ಬ್ಯಾಟರಿ ಜೀವಿತಾವಧಿ ಬೇಗ ಕಡಿಮೆ ಯಾಗುವ ಸಾಧ್ಯತೆ ಇರುತ್ತದೆ.

ಸಮುದ್ರದಲ್ಲಿ ಸಿಗ್ನಲ್ ಕ್ಷೀಣವಾಗುವ, ನಷ್ಟವಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ, ಯಾವಾಗಲೂ ಡ್ರೋನ್ ಅನ್ನು ನಮ್ಮ ಕಣ್ಣ ದೃಷ್ಟಿಗೆ ನಿಲುಕುವ ಹತ್ತಿರದಲ್ಲಿರುವಂತೆ ನೋಡಿಕೊಳ್ಳಬೇಕು. ಸಮುದ್ರದ ಮೇಲೆ ಡ್ರೋನ್ ಗಳನ್ನು ಹಾರಿಸುವುದು ಜನಪ್ರಿಯವಾಗುತ್ತಿದ್ದಂತೆ, ಅನೇಕ ಆಸಕ್ತಿದಾಯಕ ಮತ್ತು ಕೆಲವೊಮ್ಮೆ ವಿವಾದಾತ್ಮಕ ಘಟನೆಗಳು ನಡೆದಿರುವುದುಂಟು. ಇತ್ತೀಚೆಗೆ, ಕಪ್ಪು ಸಮುದ್ರದ ಮೇಲೆ ಹಾರಾಡುತ್ತಿದ್ದ ಅಮೆರಿಕದ ಕಣ್ಗಾವಲು ಡ್ರೋನ್ ಅನ್ನು ರಷ್ಯಾದ ಯುದ್ಧ ವಿಮಾನಗಳು ಹೊಡೆದು ಹಾಕಿದ ಘಟನೆ ಗಮನ ಸೆಳೆದಿದೆ. ಇದು ಅಂತಾರಾಷ್ಟ್ರೀಯ ವಾಯು ಪ್ರದೇಶದಲ್ಲಿ ಡ್ರೋನ್ ಗಳ ಬಳಕೆಯ ಕುರಿತು ಹೊಸ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಡ್ರೋನ್ ಗಳನ್ನು ಮೀನುಗಾರಿಕಾ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು, ಸಮುದ್ರ ಜೀವಗಳನ್ನು ಅಧ್ಯಯನ ಮಾಡಲು ಮತ್ತು ಸಾಗರ ಮಾಲಿನ್ಯವನ್ನು ಗುರುತಿಸಲು ಬಳಸಲಾಗುತ್ತಿದೆ. ಕೆಲವು ದೇಶಗಳು ಸಮುದ್ರ
ತೀರದ ರಕ್ಷಣೆ ಮತ್ತು ಕಳ್ಳಸಾಗಾಣಿಕೆಯನ್ನು ತಡೆಯಲು ಡ್ರೋನ್‌ಗಳನ್ನು ಬಳಸುತ್ತಿವೆ. ಸರ್ಫಿಂಗ್, ಡೈವಿಂಗ್ ಮತ್ತು ನೀರೊಳಗಿನ ಇತರ ಚಟುವಟಿಕೆಗಳನ್ನು ರೋಮಾಂಚಕಾರಿ ರೀತಿಯಲ್ಲಿ ವೀಡಿಯೋ ಮಾಡಲು ಡ್ರೋನ್‌ಗಳು ಜನಪ್ರಿಯ ಆಯ್ಕೆಯಾಗಿವೆ. ಆದರೆ ಆ ಡ್ರೋನ್‌ಗಳ ಸಾಮರ್ಥ್ಯವೇ ಬೇರೆ.

ಇದನ್ನೂ ಓದಿ: Vishweshwar Bhat Column: ಗುಜ್ರಾಲ್‌ ಟಿವಿ ಸಂದರ್ಶನ