Friday, 25th October 2024

Cancer: ಚಿಕಿತ್ಸೆ ಮೂಲಕ ಕ್ಯಾನ್ಸರ್ ಗುಣಪಡಿಸಬಹುದು

ತುಮಕೂರು: ಸ್ತನ ಕ್ಯಾನ್ಸರ್ ಕುರಿತು ಭಾರತೀಯ ವೈದ್ಯಕಿಯ ಸಂಘ ಜಿಲ್ಲಾ ಶಾಖೆ ಹಾಗೂ ಮಹಿಳಾ ವೈದ್ಯರ ಘಟಕದ ಸಹಯೋಗದಲ್ಲಿ ನಗರದಲ್ಲಿ ವಾಕಥಾನ್‌ ಆಯೋಜಿಸಲಾಗಿತ್ತು.

ನಗರದ ಟೌನ್‌ಹಾಲ್ ವೃತ್ತದ ಬಳಿಯ ಐಎಂಎ ಮುಂಭಾಗದಿಂದ ತುಮಕೂರು ವಿಶ್ವವಿದ್ಯಾಲಯದವರೆಗೆ ಹಮ್ಮಿಕೊಂಡಿದ್ದ ಸ್ತನ ಕ್ಯಾನ್ಸರ್ ಅರಿವು ಮೂಡಿಸುವ ವಾಕಥಾನ್‌ಗೆ ಚಾಲನೆ ನೀಡಿದ ಸ್ತನ ಕ್ಯಾನ್ಸರ್ ಗೆದ್ದಿರುವ ಡಾ.ಜಯಶ್ರೀ ಶಾ ಮಾತನಾಡಿ, ಮೊದಲ ಹಂತದಲ್ಲೇ ಕ್ಯಾನ್ಸರ್ ರೋಗದ ಗುಣಲಕ್ಷಣಗಳನ್ನು ಪತ್ತೆ ಹಚ್ಚಿದರೆ, ಚಿಕಿತ್ಸೆ ಮೂಲಕ ಪೂರ್ಣವಾಗಿ ಸ್ತನ ಕ್ಯಾನ್ಸರ್ ಗುಣಪಡಿಸಲು ಸಾಧ್ಯವಿದೆ. ನಾನು ಈ ರೋಗವನ್ನು ಆರಂಭದಲ್ಲೇ ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸೆ ಪಡೆದ ಪರಿಣಾಮ ಈ ರೋಗವನ್ನು ಜಯಿಸಲು ಸಾಧ್ಯವಾಗಿದೆ ಎಂದರು.

ಹೆಣ್ಣುಮಕ್ಕಳು ಈ ವಿಚಾರದಲ್ಲಿ ಮುಜುಗರ ಪಡದೆ ಸಣ್ಣಪುಟ್ಟ ವ್ಯತ್ಯಾಸಗಳು ಕಂಡುಬರುತ್ತಿದ್ದಂತೆ ತಪಾಸಣೆ ಗೊಳಪಡಬೇಕು. ಅದನ್ನು ಪ್ರಥಮ ಹಂತದಲ್ಲಿ ತಿಳಿದು ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು.

ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಶಾಖೆ ಕಾರ್ಯದರ್ಶಿ ಡಾ.ಪ್ರದಿಪ್, ಪ್ರಭಾಕರ್, ಮಹಿಳಾ ಘಟಕದ ಅಧ್ಯಕ್ಷೆ ಡಾ.ಮನೋನ್ಮಣಿ, ಕಾರ್ಯದರ್ಶಿ ಡಾ.ಅರ್ಚನಾ ಪ್ರದಿಪ್, ಜಿಲ್ಲಾ ರೋಟರಿ ಕಾರ್ಯದರ್ಶಿ ಬಿಳಿಗೆರೆ ಶಿವಕುಮಾರ್, ಡಾ.ಕೆ.ಪಿ.ಸುರೇಶ್‌ಬಾಬು, ಡಾ.ಎಸ್.ಜಿ.ಪರಮೇಶ್ವರಪ್ಪ, ಡಾ.ಹೇಮಾಭೂಷಣ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಮುಖ ಬೀದಿಗಳಲ್ಲಿ ಜಾಥಾ: ನಗರದ ಟೌನ್‌ಹಾಲ್ ನಿಂದ ಆರಂಭಗೊಂಡ ವಾಕಥಾನ್‌ನಲ್ಲಿ ಸಿದ್ದಗಂಗಾ ನರ್ಸಿಂಗ್ ಕಾಲೇಜು ಹಾಗೂ ಶ್ರೀದೇವಿ ಸಮೂಹ ಸಂಸ್ಥೆಯ ವಿದ್ಯಾರ್ಥಿಗಳು ಹೆಜ್ಜೆಹಾಕಿದರು. ಬಿ.ಎಚ್.ರಸ್ತೆ ಮೂಲಕ ಸಂಚರಿಸಿ ಸಾರ್ವಜನಿಕರಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲಾಯಿತು. ಆರಂಭದಲ್ಲೇ ಪತ್ತೆ ಹಚ್ಚಿದರೆ ಸ್ತನ ಕ್ಯಾನ್ಸರ್ ಗುಣಪಡಿಸಬಹುದು ಎಂಬುದನ್ನು ಅರುಣಾ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಬೀದಿನಾಟಕದ ಮೂಲಕ ಪ್ರದರ್ಶಿಸಿದರು.