Friday, 25th October 2024

Bhairathi Ranagal: ʼಭೈರತಿ ರಣಗಲ್ʼ ಟೀಸರ್‌ನಲ್ಲಿ ಅಬ್ಬರಿಸಿದ ಶಿವಣ್ಣ, ಕುತೂಹಲ ಮೂಡಿಸಿದ ಸೆಂಚುರಿ ಸ್ಟಾರ್‌ ಲುಕ್

bhairathi ranagal

ಬೆಂಗಳೂರು: ʼಕರುನಾಡ ಚಕ್ರವರ್ತಿʼ ಶಿವರಾಜಕುಮಾರ್ (Shiva Rajkumar) ಅಭಿನಯದ ಬಹು ನಿರೀಕ್ಷಿತ ʼಭೈರತಿ ರಣಗಲ್‌ʼ (Bhairathi Ranagal) ಚಿತ್ರದ (Kannada movie) ಟೀಸರ್‌ (Teaser) ಬಿಡುಗಡೆಯಾಗಿದೆ. ಮೊದಲ ನೋಟದಲ್ಲೇ ಕುತೂಹಲ ಮೂಡಿಸಿರುವ ಈ ಟೀಸರ್‌ನಲ್ಲಿ ಕಪ್ಪು ಉಡುಗೆಯಲ್ಲಿ ಶಿವಣ್ಣ ಅಬ್ಬರಿಸಿದ್ದಾರೆ.

ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್ ಅವರು ನಿರ್ಮಿಸಿರುವ, ನರ್ತನ್ ನಿರ್ದೇಶನದಲ್ಲಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ ʼಭೈರತಿ ರಣಗಲ್ ಚಿತ್ರ ನವೆಂಬರ್ 15ರಂದು ತೆರೆಗೆ ಬರಲಿದೆ. ಅದರ ಟೀಸರ್ ಇಂದು ಬಿಡುಗಡೆಯಾಗಿದ್ದು, ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಟೀಸರ್ ಕುತೂಹಲ ಮೂಡಿಸಿದೆ.‌

ಟೀಸರ್‌ನಲ್ಲಿ ಶಿವಣ್ಣ ಅವರ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈಗಾಗಲೇ ಟೈಟಲ್ ಸಾಂಗ್ ಹಾಗೂ ಟೀಸರ್ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿರುವ “ಭೈರತಿ ರಣಗಲ್” ಚಿತ್ರ ನವೆಂಬರ್ 15 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಟ್ರೇಲರ್ ಬರಲಿದೆ. ನರ್ತನ್ ಹಾಗೂ ಶಿವಣ್ಣ ಅವರ ಕಾಂಬಿನೇಶನ್‌ನಲ್ಲಿ ಬಂದಿದ್ದ “ಮಫ್ತಿ” ಚಿತ್ರದ ಪ್ರೀಕ್ವೆಲ್ ಆಗಿರುವ “ಭೈರತಿ ರಣಗಲ್” ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ.

ಶಿವರಾಜಕುಮಾರ್ ಅವರಿಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ಅಭಿನಯಿಸಿದ್ದಾರೆ. ರವಿ ಬಸ್ರೂರ್ ಸಂಗೀತ ನಿರ್ದೇಶನ, ನವೀನ್ ಕುಮಾರ್ ಛಾಯಾಗ್ರಹಣ, ಆಕಾಶ್ ಹಿರೇಮಠ ಸಂಕಲನ, ‌ಗುಣ ಕಲಾ ನಿರ್ದೇಶನ ಹಾಗೂ ದಿಲೀಪ್ ಸುಬ್ರಹ್ಮಣ್ಯ, ಚೇತನ್ ಡಿಸೋಜ ಸಾಹಸ ನಿರ್ದೇಶನ “ಭೈರತಿ ರಣಗಲ್” ಚಿತ್ರಕ್ಕಿದೆ.

ಇದನ್ನೂ ಓದಿ: Bhairathi Ranagal: ಶಿವಣ್ಣ ಅಭಿನಯದ ʼಭೈರತಿ ರಣಗಲ್ʼ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್‌