ಹೊಸದಿಲ್ಲಿ: ಪೂರ್ವ ಲಡಾಖ್ (Eastern Ladakh)ನಲ್ಲಿ ಉಭಯ ದೇಶಗಳ ಸೈನ್ಯಗಳ ನಡುವಿನ ಬಿಕ್ಕಟ್ಟನ್ನು ಕೊನೆಗೊಳಿಸಲು ಭಾರತ ಮತ್ತು ಚೀನಾ ಒಪ್ಪಂದಕ್ಕೆ ಬಂದಿದ್ದು, ವಾಸ್ತವಿಕ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಸೇನೆಯನ್ನು ಹಿಂಪಡೆಯುವ ಪ್ರತಿಕ್ರಿಯೆ ಆರಂಭವಾಗಿದೆ (India-China Border).
ಡೆಮ್ಚೋಕ್ ಪ್ರದೇಶದ ಎರಡೂ ಬದಿಯಲ್ಲಿನ 5 ಡೇರೆಗಳು ಮತ್ತು ಡೆಪ್ಸಾಂಗ್‌ನಲ್ಲಿ ಅರ್ಧದಷ್ಟು ತಾತ್ಕಾಲಿಕ ಶಿಬಿರಗಳನ್ನು ಕಿತ್ತು ಹಾಕಲಾಗಿದೆ. ಭಾರತೀಯ ಸೈನಿಕರು ಚಾರ್ಡಿಂಗ್ ನಾಲಾದ ಪಶ್ಚಿಮ ಭಾಗಕ್ಕೆ ಮರಳುತ್ತಿದ್ದರೆ, ಚೀನಾದ ಸೈನಿಕರು ಪೂರ್ವ ಭಾಗಕ್ಕೆ ಹಿಮ್ಮೆಟ್ಟುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎರಡೂ ಬದಿಗಳಲ್ಲಿ ಸುಮಾರು 12 ಡೇರೆಗಳಿವೆ, ಅವೆಲ್ಲವನ್ನೂ ತೆಗೆದು ಹಾಕಲು ಉಭಯ ದೇಶಗಳು ಮುಂದಾಗಿವೆ. ಎಲ್ಲ ಡೇರೆಗಳು ಮತ್ತು ತಾತ್ಕಾಲಿಕ ಶಿಬಿರಗಳನ್ನು ಸಂಪೂರ್ಣವಾಗಿ ತೆಗೆದುಹಾಕಿದ ನಂತರ ಸಮೀಕ್ಷೆಗಳ ಮೂಲಕ ಜಂಟಿ ಪರಿಶೀಲನಾ ಪ್ರಕ್ರಿಯೆ ಪ್ರಾರಂಭವಾಗಲಿದೆ.
#WATCH | Leh, Ladakh | On the agreements between India and China regarding border issues along LAC, former chief executive councillor of Ladakh Autonomous Hill Council Leh, Rigzin Spalbar says, "…We hope that this will lead towards trust between two countries. Peace is needed… pic.twitter.com/SrL03zzCK6
— ANI (@ANI) October 25, 2024
ಚೀನಾದ ಸೈನ್ಯವು ಈ ಪ್ರದೇಶದಲ್ಲಿದ್ದ ತಮ್ಮ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಿದರೆ ಭಾರತೀಯ ಸೇನೆಯು ಕೆಲವು ಪಡೆಗಳನ್ನು ಹಿಂತೆಗೆದುಕೊಂಡಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಮುಂದಿನ 4-5 ದಿನಗಳಲ್ಲಿ ಡೆಪ್ಸಾಂಗ್ ಮತ್ತು ಡೆಮ್ಚೋಕ್‌ನಲ್ಲಿ ಗಸ್ತು ಪುನರಾರಂಭಗೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಸೇನೆಯನ್ನು ಹಿಂಪಡೆಯುವ ಕಾರ್ಯಾಚರಣೆಗಳನ್ನು ಸಂವಹನದ ಮೂಲಕ ಸಂಯೋಜಿಸಲಾಗುತ್ತಿದೆ. ಪ್ರತಿದಿನ ಬೆಳಿಗ್ಗೆ ಎರಡೂ ದೇಶಗಳ ಸ್ಥಳೀಯ ಮಿಲಿಟರಿ ಕಮಾಂಡರ್‌ಗಳು ಚರ್ಚೆ ನಡೆಸಲು ಹಾಡ್‌ಲೈನ್ ಕರೆ ಮಾಡುತ್ತಾರೆ.
“ಡೇರೆಗಳು ಮತ್ತು ತಾತ್ಕಾಲಿಕ ಮೂಲ ಸೌಕರ್ಯಗಳನ್ನು ಹಿಂಪಡೆಯುವ ಕಾರ್ಯ ನಡೆಯುತ್ತಿದೆ” ಎಂದು ಮಿಲಿಟರಿ ಮೂಲಗಳು ತಿಳಿಸಿವೆ.
ಭಾರತ ಮತ್ತು ಚೀನಾದ ನಡುವಿನ ಬಿಕ್ಕಟ್ಟಿಗೆ ಕಾರಣವಾಗಿದ್ದ ಪೂರ್ವ ಲಡಾಖ್‌ನ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಗಸ್ತು ತಿರುಗುವ ಬಗ್ಗೆ ಉಭಯ ರಾಷ್ಟ್ರಗಳು ಸಂಧಾನಕ್ಕೆ ಬಂದಿವೆ. ಎರಡೂ ದೇಶಗಳ ಯೋಧರು ಈ ಭಾಗದಲ್ಲಿ ಗಸ್ತು ತಿರುಗಲು ಒಪ್ಪಂದ ಮಾಡಿಕೊಂಡಿದ್ದಾಗಿ ಕೇಂದ್ರ ಸರ್ಕಾರ ಅಕ್ಟೋಬರ್ 21ರಂದು ತಿಳಿಸಿತ್ತು.
ʼʼ2020ರಲ್ಲಿ ಉದ್ಭವಿಸಿದ ಸಮಸ್ಯೆಯಾದ ಪೂರ್ವ ಲಡಾಖ್‌ನ ಎಲ್ಎಸಿಯಲ್ಲಿ ಗಸ್ತು ತಿರುಗುವ ಬಗ್ಗೆ ಪರಿಹಾರ ಕಂಡುಕೊಳ್ಳಲಾಗಿದೆ. ಕೆಲವು ದಿನಗಳಿಂದ ನಡೆಯುತ್ತಿರುವ ದ್ವಿಪಕ್ಷೀಯ ಸರಣಿ ಮಾತುಕತೆಯು ಫಲಪ್ರದವಾಗಿದೆ. ಎಲ್ಎಸಿ ಗಡಿಯಲ್ಲಿ ಗಸ್ತಿಗೆ ಸೇನೆಗಳು ಸಂಧಾನಕ್ಕೆ ಬಂದಿವೆʼʼ ಎಂದು ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮಾಹಿತಿ ನೀಡಿದ್ದರು.
ಏನಾಗಿತ್ತು?
2020ರಿಂದ ಭಾರತ ಮತ್ತು ಚೀನಾದ ಸೇನೆಗಳು ಪೂರ್ವ ಲಡಾಖ್‌ನ ಡೆಪ್ಸಾಂಗ್ ಮತ್ತು ಡೆಮ್ಚೋಕ್ ಪ್ರದೇಶಗಳಲ್ಲಿ ಗಸ್ತಿಗಾಗಿ ಸಂಘರ್ಷ ನಡೆಸಿದ್ದವು. 2020ರ ಜೂನ್‌ನಲ್ಲಿ ಗಲ್ವಾನ್ ಕಣಿವೆಯಲ್ಲಿ ಭೀಕರ ಘರ್ಷಣೆಯೂ ನಡೆದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧಗಳು ಹದಗೆಟ್ಟಿದ್ದವು. ಇದು ಗಂಭೀರ ಮಿಲಿಟರಿ ಸಂಘರ್ಷಕ್ಕೂ ದಾರಿ ಮಾಡಿಕೊಟ್ಟಿತ್ತು. ಇದೀಗ ಸುಮಾರು 4 ವರ್ಷಗಳ ಬಳಿಕೆ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ಗಡಿಯಲ್ಲಿ ಶಾಂತಿ ನೆಲೆಸದಿದ್ದರೆ ಚೀನಾ ಜತೆಗಿನ ಬಾಂಧವ್ಯ ಸಾಮಾನ್ಯವಾಗಿರಲು ಸಾಧ್ಯವಿಲ್ಲ ಎಂದು ಭಾರತ ಹೇಳಿತ್ತು.
ಈ ಸುದ್ದಿಯನ್ನೂ ಓದಿ: India China Border: ಜೈಶಂಕರ್, ಅಜಿತ್ ದೋವಲ್ ಸಂಧಾನ ಯಶಸ್ವಿ, ಗಲ್ವಾನ್ ಸೇರಿದಂತೆ 4 ಸ್ಥಳಗಳಿಂದ ಚೀನಾ ಪಡೆ ಹಿಂದಕ್ಕೆ