Saturday, 26th October 2024

Roopa Gururaj Column: ಮನುಷ್ಯತ್ವವನ್ನೇ ಮರೆಸುವ ಅಹಂಕಾರ

ಒಂದೊಳ್ಳೆ ಮಾತು

ರೂಪಾ ಗುರುರಾಜ್

ದಾದೂ ದಯಾಲರು ಒಬ್ಬ ಮಹಾ ಸಂತರು. ಅವರ ಜೀವನ ಶೈಲಿ, ಧ್ಯಾನ, ಪ್ರವಚನಗಳು ಜನರನ್ನು ಬಹಳವಾಗಿ ಆಕರ್ಷಿಸಿದ್ದವು. ಅವರು ಊರಿಂದ ಊರಿಗೆ ತಿರುಗಾಡುತ್ತಾ, ಅಲ್ಲಿ ಸತ್ಸಂಗ, ಭಜನೆ, ಪ್ರವಚನ ನಡೆಸುತ್ತಿದ್ದರು.
ಹೀಗೆ ಅವರು ಒಂದು ಊರಿಗೆ ಸತ್ಸಂಗಕ್ಕಾಗಿ ಬಂದಾಗ, ಈ ವಿಷಯ, ಆ ವಿಭಾಗದ ಕೊತ್ವಾಲ್ವನವರೆಗೂ ತಲುಪಿತು. ಅವನಿಗೂ ಕೂಡ ಈ ಸಂತರ ಸತ್ಸಂಗದಲ್ಲಿಭಾಗಿಯಾಗಲುಆಸಕ್ತಿ ಉಂಟಾಯಿತು.

ಒಂದು ದಿನ ಬೆಳಗ್ಗೆ ಕೊತ್ವಾಲ ಕುದುರೆಯ ಮೇಲೆ ಕುಳಿತು ಪ್ರವಚನ ನಡೆಯುವ ಸ್ಥಳವನ್ನು ಹುಡುಕಲು ಹೊರಟ. ಹೋಗುತ್ತಿzಗ ಸ್ವಲ್ಪ ದೂರ ದಲ್ಲಿ ಒಬ್ಬ ಮುದುಕ, ನಡುರಸ್ತೆಯಲ್ಲಿ ಬಿದ್ದಿದ್ದ ಮುಳ್ಳುಗಿಡಗಳನ್ನು, ಪಕ್ಕಕ್ಕೆ ತಳ್ಳಿ ರಸ್ತೆಯನ್ನು ಸ್ವಚ್ಛ ಮಾಡುತ್ತಿದ್ದ. ಈ ಕೋತ್ವಾಲ ಅವನನ್ನು, ‘ಏ, ಮುದುಕ ಇಲ್ಲಿ ದಿನಾಲು ಒಬ್ಬರು ಸತ್ಸಂಗವನ್ನು ನಡೆಸುತ್ತಾರೆ, ಆ ಸ್ಥಳ ಯಾವುದೆಂದು ನಿನಗೇನಾದರೂ ಗೊತ್ತೇ?’ ಎಂದು ಕೇಳಿದ.

ಸ್ವಚ್ಛ ಮಾಡುವ ಕೆಲಸದಲ್ಲಿ ಮಗ್ನನಾಗಿದ್ದ ಮುದುಕನಿಗೆ, ಇವನ ಮಾತು ಕೇಳಿಸಲಿಲ್ಲ. ಈಗ ಕೊತ್ವಾಲನಿಗೆ, ರೇಗಿ ಹೋಯಿತು, ಎಷ್ಟು ಸೊಕ್ಕು ಈ ಮುದಿಯನಿಗೆ ಎಂದು ತನ್ನಕೈಯಲ್ಲಿದ್ದ ಅಧಿಕಾರದ ದಂಡವನ್ನು, ಈ ಮುದುಕ‌ ನೆಡೆಗೆ ಬೀಸಿ, ‘ಸತ್ಸಂಗ ನೆಡೆಯುವ ಸ್ಥಳ ಗೊತ್ತೊ ಇಲ್ಲವೋ, ಹೇಳೋ’ ಎಂದು ಗಟ್ಟಿಯಾಗಿ ಕಿರುಚಿದ. ಇವನ ಕೈಲಿದ್ದ ಕೋಲು ಆ ಮುದುಕನ ಹಣೆಗೆ ರೆಪ್ಪೆಂದು ಬಡಿದು, ಕ್ಷಣಾರ್ಧದಲ್ಲಿ ಹಣೆಯಿಂದ ರಕ್ತ ಚಿಮ್ಮಲಾರಂಭಿಸಿತು.

ಮುದುಕ ರಕ್ತವನ್ನೂ ಒರೆಸಿಕೊಳ್ಳದೆ, ‘ಸ್ವಾಮಿ, ಹೀಗೆಯೇ ಮುಂದೆ ಹೋಗಿ, ಅಂದು ಆಲದ ಮರವಿದೆ, ಅಲ್ಲಿ ಬಲಕ್ಕೆ ತಿರುಗಿದರೆ ಒಂದು ದೇವಸ್ಥಾನ ಸಿಗುತ್ತದೆ, ಅಲ್ಲಿಯೇ ಪ್ರತಿದಿನ ಸಂಜೆ ಸತ್ಸಂಗ ಪ್ರವಚನ ನಡೆಯುವುದು’ ಎಂದು ಹೇಳಿದ. ಕೊಟ್ವಲ ತನ್ನ ಕೆಲಸಕ್ಕೆ ಒಂದಿಷ್ಟೂ ಪರಿ ತಪ್ಪಿಸದೆ ಸೊಕ್ಕಿನಿಂದ ಹೊರಟು ಹೋದ. ಸಂಜೆ ಯಾಗುತ್ತಿದ್ದಂತೆ ಜನ ತಂಡೋಪತಂಡವಾಗಿ, ಪ್ರವಚನವನ್ನು ಕೇಳಲು ದೇವಸ್ಥಾನದೊಳಗೆ ಬರತೊಡಗಿದರು. ಮುಂದಿನ ಸಾಲಿನ ಒಂದು ವಿಶೇಷ ಆಸನದಲ್ಲಿ ಈ ಕೊತ್ವಾಲ ಬಂದುಕುಳಿತಿದ್ದ.

ಸರಿಯಾದ ಸಮಯಕ್ಕೆ ದಾದೂ ದಯಾಲರೂ ಬಂದರು. ಅವರು ಹಣೆಗೊಂದು ಪಟ್ಟಿ ಕಟ್ಟಿಕೊಂಡಿದ್ದರು. ಎಲ್ಲರಿಗೂ ಆಶ್ಚರ್ಯವಾಯಿತು, ಇದೇ ನಾಯ್ತು ಇವರಿಗೆ ಎಂದು. ಕೊತ್ವಾಲನಿಗೆ ಮಾತ್ರ ಮುಖ ಚಿಕ್ಕದಾಯಿತು. ತಾನು ಬೆಳಗ್ಗೆ ಕೋಲಿನಿಂದ ಹೊಡೆದ ಮುದುಕ ಇವರೇ ಎಂದು ಅವನಿಗೆ ಗೊತ್ತಾಯಿತು. ಆದರೆ ಅವರು ಮಾತ್ರ ಏನೂ ಆಗಿಲ್ಲವೆಂಬಂತೆ, ದಿನನಿತ್ಯದಂತೆ ಭಜನೆ, ಪ್ರವಚನಗಳನ್ನು ಶುರು ಮಾಡಿದರು. ಕೊತ್ವಾಲನ ಮನಸ್ಸು
ಮಾತ್ರ ಪ್ರವಚನ ಕೇಳುವುದನ್ನು ಬಿಟ್ಟು, ತಾನು ಅವರ ಹಣೆಗೆ ದೊಣ್ಣೆ ಬೀಸಿದ್ದನ್ನು ನೆನೆಸಿಕೊಂಡು
ಅವಮಾನದಿಂದ ಬೆಂದು ಹೋಗಿತ್ತು .

ಇವರ ಉಪನ್ಯಾಸ ಮುಗಿಯುತ್ತಿದ್ದಂತೆ, ಅವರ ಬಳಿಗೆ ಹೋಗಿ ಕೊತ್ವಾಲ ಅವರ ಕಾಲು ಹಿಡಿದು ಕ್ಷಮೆ ಬೇಡಿದ. ‘ನೀವು ಯಾರೆಂದು ತಿಳಿಯದೇ, ನಾನು ಮಾಡಿದ ತಪ್ಪನ್ನು ತಾವು ಮನ್ನಿಸಬೇಕು. ನನ್ನನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ’ ಎಂದು ಬೇಡಿಕೊಂಡ. ‘ಅದನ್ನು ಆಮೇಲೆ ಯೋಚಿಸೋಣವಂತೆ’ ಎಂದರು ಗುರುಗಳು.

‘ಆದರೆ ಗುರುಗಳೇ ಒಂದು ಮಾತು, ಬೆಳಗ್ಗೆ ನಾನೇ ದಾದೂ ದಯಾಲರೆಂದು, ನೀವೇಕೆ ನನಗೆ ಹೇಳಲಿಲ್ಲ?’ ಎಂದು ಕೇಳಿದ. ಅದಕ್ಕವರು,‘ಅದರಲ್ಲಿ ನಿನ್ನ ತಪ್ಪು ಏನೂ ಇಲ್ಲ, ನೀನು ಒಬ್ಬ ಗುರುವನ್ನು ಹುಡುಕುತ್ತಿದ್ದೆ. ಪರೀಕ್ಷೆ ಮಾಡದೆ ಯಾರನ್ನೂ ಒಪ್ಪಿಕೊಳ್ಳಬಾರದಲ್ಲವೇ? ಅದರ ಪರಿಣಾಮವೇ ಇದು’ ಎಂದು ನಗುತ್ತಾ ತಮ್ಮ
ಹಣೆಯನ್ನು ತೋರಿಸಿದರು.

ಅಧಿಕಾರದ ಮದದಿಂದ ನಾವು ಮತ್ತೊಬ್ಬರನ್ನು ಹೀನಾಯವಾಗಿ ನಡೆಸಿಕೊಂಡಾಗ ಅದು ನಮ್ಮ ಸಣ್ಣತನಕ್ಕೇ ಸಾಕ್ಷಿಯಾಗುತ್ತದೆ. ಯಾರು ಹೇಗೆ ಇರಲಿ, ಅವರನ್ನು ಗೌರವದಿಂದ ಕಾಣುವುದು ನಡೆಸಿಕೊಳ್ಳುವುದು ಮನುಷ್ಯರಾಗಿ ನಮ್ಮ ಮೊದಲ ಕರ್ತವ್ಯ. ಈ ಸೂಕ್ಷ್ಮ ನಮಗೆಲ್ಲ ತಿಳಿದಿರಲಿ.

ಇದನ್ನೂ ಓದಿ: ‌Roopa Gururaj Column: ಸಾಕು ಪ್ರಾಣಿಗಳಿಗಿರುವ ನಿಯತ್ತು