Friday, 3rd January 2025

Roopa Gururaj Column: ಗತಿಗಳ ಆಧಾರದ ಮೇಲೆ ಪ್ರಾರಬ್ಧ ಕರ್ಮಗಳಿಂದ ಮುಕ್ತಿ

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಒಬ್ಬ ವ್ಯಕ್ತಿ ಸತತವಾಗಿ ಹರಿನಾಮದ ಜಪವನ್ನು ಮಾಡುತ್ತಿದ್ದ. ಅವನಿಗೂ ವಯಸ್ಸಾಗುತ್ತಾ ಎಲ್ಲಕ್ಕೂ ಮಗನನ್ನು ಅವಲಂಬಿಸಬೇಕಾಗಿತ್ತು. ದಿನಕಳೆದಂತೆ ಮಗನು ಅವನು ಕರೆದಾಗಲಿಲ್ಲ ನಿರ್ಲಕ್ಷ್ಯ ಮಾಡತೊಡಗಿದ. ಹೊತ್ತು ಸಾರಿ ಕರೆದರೆ ಒಮ್ಮೆ ಬಂದು ವಿಚಾರಿಸುತ್ತಿದ್ದ. ವೃದ್ಧನ ಬದುಕು ಬಹಳ ತ್ರಾಸದಾಯಕವಾಗಿತ್ತು.

ಒಂದು ದಿವಸ ರಾತ್ರಿ ವೃದ್ಧನು ಬಚ್ಚಲು ಮನೆಗೆ ಹೋಗಲು ಮಗನನ್ನು ಕರೆದನು. ಕೂಡಲೇ ಒಬ್ಬ ಹುಡುಗ ಧಾವಿಸಿ ಬರುತ್ತಾನೆ. ಬಹಳ ಕಾಳಜಿ ಪೂರ್ವಕವಾಗಿ ಆ ವೃದ್ಧನನ್ನು ಕರೆದೋಯ್ದು ಬಹಿರ್ದೆಸೆ ಮಾಡಿಸಿ ಪುನಃ ಹಾಸಿಗೆ ಮೇಲೆ ಕರೆ ತಂದು ಮಲಗಿಸಿ ಹೋದನು. ಆ ದಿನದ ನಂತರ ಈ ಕೆಲಸವು ನಿತ್ಯದ ನಿಯಮದ ಹಾಗೆ ನಡೆಯ
ತೊಡಗಿತು. ಒಮ್ಮೆ ವೃದ್ಧನಿಗೆ ಸಂಶಯ ಬಂದಿತು, ಮೊದಮೊದಲು ಎಷ್ಟು ಕೂಗಿದರೂ ಬರಲಾರದ ಮಗನು ಈಗೀಗ ಕರೆದಾಕ್ಷಣವೇ ಬಂದು ಬಹಳ ಕಾಳಜಿ ಪೂರ್ವಕವಾಗಿ ಕರೆಯೊಯ್ದು ಕೆಲಸ ಮುಗಿಸಿ ಮರಳಿ ಕರೆತಂದು ಹಾಸಿಗೆಯ ಮೇಲೆ ಮಲಗಿಸುತ್ತಾನೆ. ಈ ಎಲ್ಲ ಕೆಲಸಗಳಲ್ಲಿ ಅವನ ಒಡನಾಟ ಮತ್ತು ಅವನ ಸ್ಪರ್ಶವು ಬಹಳ ಮೃದುವಾಗಿರುತ್ತದೆ. ಅದೂ ಅಲ್ಲದೇ ತನ್ನ ಹಾಸಿಗೆ, ಕೋಣೆಯ ಶುಚಿತ್ವಕ್ಕೆ ಬಹಳ ಗಮನ ಕೊಡುತ್ತಿದ್ದಾರೆ.

ಎಲ್ಲ ನನ್ನ ಪುಣ್ಯ ಎಂದುಕೊಂಡರು. ಒಂದು ರಾತ್ರಿ ಆ ವ್ಯಕ್ತಿ ಬಂದಾಗ ಅವನ ಕೈ ಹಿಡಿದು ಆ ವೃದ್ಧನು ಪ್ರೀತಿಯಿಂದ ಕೇಳುತ್ತಾನೆ. ‘ನಿಜ ಹೇಳು ನೀನು ಯಾರು..!?, ನನ್ನ ಮಗನಂತೂ ಈ ರೀತಿ ವರ್ತಿಸುವುದಿಲ್ಲ..!’

ಆ ವೃದ್ಧರ ಮಾತಿಗೆ ಕತ್ತಲು ಕವಿದ ಆ ಕೋಣೆ ಯಲ್ಲಿ ಒಂದು ಅಲೌಕಿಕವಾದ ಬೆಳಕು ಮೂಡುತ್ತದೆ. ಆ ಹುಡುಗನ ರೂಪದಲ್ಲಿರುವ ಭಗವಂತನು ಅವನ ಮುಂದೆ ಪ್ರಕಟನಾಗಿ ದರ್ಶನ ಕೊಟ್ಟ. ಆಗ ವೃದ್ಧನು ಅಮಿತಾನಟದಿಂದ ಕಂಬನಿ ತುಂಬಿ ಬಂದು ಯಾವ ಮಾತೂ ಆಡಲು ಆಗದ ಪರಿಸ್ಥಿತಿಯಲ್ಲಿ ಕೆಲವು ಭಾವಪೂರ್ಣ ಶಬ್ದಗಳನ್ನು
ಹೇಳುತ್ತಾನೆ ‘ಹೇ ಪ್ರಭು..! ನೀನು ಸ್ವತ: ಬಂದು ನನ್ನ ಪ್ರಾತಃವಿಧಿಗಳನ್ನು ಮಾಡಿಸುತ್ತಿದ್ದೆಯಾ, ಹೇ ಅನಾಥ
ರಕ್ಷಕನೇ ಸತತವಾಗಿ ನಿನ್ನ ನಾಮಸ್ಮರಣೆಯನ್ನು ಮಾಡುತ್ತಿರುವ ನನ್ನಿಂದ ನೀನು ಒಂದು ವೇಳೆ ಪ್ರಸನ್ನ
ನಾಗಿದ್ದರೆ ನನ್ನನ್ನು ಮುಕ್ತನನ್ನಾಗಿ ಮಾಡಿಬಿಡು.’

ಆಗ ಪ್ರಭು ಹೇಳಿದ – ‘ಈಗ ನೀನು ಇದೆಲ್ಲ ಅನುಭವಿಸುತ್ತಿರುವುದು ನಿನ್ನ ಪ್ರಾರಬ್ಧ. ನೀನು ಸದಾ ನನ್ನ ನಾಮ ಸ್ಮರಣೆಯನ್ನು ಮಾಡಿ ನನ್ನ ಪ್ರೀತಿಯ ಭಕ್ತನಾಗಿದ್ದಿ. ಅದಕ್ಕೆ ನಿನ್ನ ಪ್ರಾರಬ್ಧವನ್ನು ಸವೆಸಲು ನಿನಗೆ ಸಹಾಯ ಮಾಡುತ್ತಿರುವೆ.’ ಆಗ ಮುದುಕ ತಡೆಯದೆ ಕೇಳುತ್ತಾನೆ ‘ನನ್ನ ಪ್ರಾರಬ್ಧ ಕರ್ಮಗಳು ನಿನ್ನಕೃಪೆಗೂ ನಿಲುಕದಷ್ಟು ಕಠಿಣವಾಗಿವೆಯೇನು..? ನಿನ್ನ ಕೃಪೆಯಿಂದ ನನ್ನ ಪ್ರಾರಬ್ಧ ಕರ್ಮಗಳು ಕರಗಲಾರದೇನು..?’ ಅವನು ಈ ಮಾತಿಗೆ ಪ್ರಭು ಹೇಳುತ್ತಾನೆ ‘ನನ್ನ ಕೃಪೆಯು ಪ್ರತಿ ಜೀವಿಗಳ ಮೇಲಿದೆ..! ಅವಶ್ಯವಾಗಿ ನಿನ್ನ ಪ್ರಾರಬ್ಧ ಕರ್ಮವನ್ನು ಕರಗಿಸ ಬಲ್ಲದು.

ಆದರೆ ಮುಂದಿನ ಜನ್ಮದಲ್ಲಿ ಈ ಪ್ರಾರಬ್ಧ ಕರ್ಮಗಳನ್ನು ಅನುಭವಿಸಲು ಪುನಃ ನೀನು ಜನ್ಮವೆತ್ತಬೇಕಾಗುವುದು. ಇದೇ ಕರ್ಮದ ನಿಯಮವಾಗಿದೆ. ಅದಕ್ಕಾಗಿ ನಿನ್ನ ಪ್ರಾರಬ್ಧವನ್ನು ಸ್ವತಃ ಅನುಭವಿಸಿ ನಿನ್ನ ಕೈಯಿಂದಲೇ ಕಡಿಮೆ ಗೊಳಿಸಿ ನಿನ್ನನ್ನು ಈ ಜನನ ಮರಣದ ಚಕ್ರದಿಂದ ಮುಕ್ತಿ ಕೊಡಲು ಇಚ್ಛಿಸುತ್ತೇನೆ..!’

ಭಗವಂತ ಮಾತು ಮುಂದುವರೆಸುತ್ತಾ ‘ಪ್ರಾರಬ್ಧಗಳು ಮಂದಗತಿಯದ್ದು, ತೀವ್ರಗತಿದ್ದು ಹಾಗೂ ಅತ್ಯಂತ ತೀವ್ರಗತಿ ದ್ದಿರುತ್ತವೆ. ಮಂದಗತಿಯ ಪ್ರಾರಬ್ಧವು ನನ್ನ ನಾಮಜಪದಿಂದಲೇ ಕಳೆದು ಹೋಗುವುದು, ತೀವ್ರ ಗತಿಯ ಪ್ರಾರಬ್ಧವು ಸಜ್ಜನರ ಸಹವಾಸ ಭಗವಂತನ ನಾಮಸ್ಮರಣೆ ಮತ್ತು ಸತ್ಕಾರ್ಯಗಳಿಂದ ಕಡಿಮೆಯಾಗುತ್ತದೆ. ಅತ್ಯಂತ ತೀವ್ರ ವಾದ ಪ್ರಾರಬ್ಧವು ಅನುಭವಿಸದೇ ಅದರಿಂದ ಬಿಡುಗಡೆಯೇ ಇಲ್ಲ.

ಆದರೆ ಯಾರು ಶ್ರದ್ಧೆ ಭಕ್ತಿಗಳಿಂದ ಸತತವಾಗಿ ನನ್ನ ನಾಮಸ್ಮರಣೆಯಲ್ಲಿದ್ದು ವಿಶ್ವಾಸದಿಂದ ನನ್ನನ್ನು ಪೂಜಿಸುತ್ತ ಹೋಗುವರೋ ಅವನೊಂದಿಗೆ ನಾನೇ ಇದ್ದು ಅವನ ಪ್ರಾರಬ್ಧವನ್ನು ಕಡಿಮೆಗೊಳಿಸುತ್ತೇನೆ.’ ಎಂದು ಹೇಳಿದರು.
ಈ ಮಾತನ್ನು ಕೇಳುತ್ತಾ ಮುದುಕನಿಗೆ ಕಣ್ಣಲ್ಲಿ ಆನಂದಾಶ್ರು ತುಂಬಿ ಹರಿಯಿತು. ನೆನಪಿರಲಿ ಭಗವಂತನ ನಾಮ ಸ್ಮರಣೆ, ಸಜ್ಜನರ ಸಹವಾಸ, ಸತ್ಕಾರ್ಯಗಳಲ್ಲಿ ಭಾಗಿಯಾದಷ್ಟೂ ನಾವೇ ನಮ್ಮ ಪ್ರಾರಬ್ಧಕರ್ಮ ಗಳನ್ನ ಕಡಿಮೆ ಮಾಡಿಕೊಳ್ಳುತ್ತೇವೆ.

ಇದನ್ನೂ ಓದಿ: ‌Roopa Gururaj Column: ಹೊಟ್ಟೆ ಹಸಿದಾಗ ಅನ್ನದ ಬದಲು ಚಿನ್ನ ತಿನ್ನಲಾಗಲ್ಲ