ಸಿಡ್ನಿ: ಕೆಲ ದಿನಗಳ ಹಿಂದೆ ಅಗತ್ಯ ಬಿದ್ದರೆ ನಿವೃತ್ತಿ ವಾಪಸ್ ಪಡೆದು ಭಾರತ ವಿರುದ್ಧದ ವರ್ಷಾಂತ್ಯದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಮತ್ತೆ ಆರಂಭಿಕನಾಗಿ ಕಣಕ್ಕಿಳಿಯಲು ಸಿದ್ಧ ಎಂದು ಆಸ್ಟ್ರೇಲಿಯದ ಬ್ಯಾಟರ್ ಡೇವಿಡ್ ವಾರ್ನರ್(David Warner) ಹೇಳಿದ್ದರು. ಆದರೆ ವಾರ್ನರ್ ಪತ್ನಿ ಕ್ಯಾಂಡಿಸ್(Candice Warner) ಇದು ಅಸಾಧ್ಯ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಫಾಕ್ಸ್ ಸ್ಪೋರ್ಟ್ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಕ್ಯಾಂಡಿಸ್, ʼವಾರ್ನರ್ ಆಸ್ಟ್ರೇಲಿಯಾ ಪರ ಆಡಲು ಯಾವಾಗಲೂ ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ ಒಂದು ವೇಳೆ ಆಯ್ಕೆಗಾರರ ಸಮಿತಿ ಮುಖ್ಯಸ್ಥ ಜಾರ್ಜ್ ಬೈಲಿ, ಕೋಚ್ ಆ್ಯಂಡ್ರೂ ಮೆಕ್ ಡೊನಾಲ್ಡ್ ಫೋನಾಯಿಸಿ ತಂಡಕ್ಕೆ ನಿಮ್ಮ ಅಗತ್ಯ ಇದೆ ಎಂದು ಹೇಳಿದಲ್ಲಿ ವಾರ್ನರ್ ಖಂಡಿತವಾಗಿಯೂ ಆಡಲು ನಿರಾಕರಿಸುತ್ತಾರೆ. ಇದೆಲ್ಲಾ ಆಗುಹೋಗುವ ವಿಷಯವಲ್ಲ’ ಎಂದಿದ್ದಾರೆ. ವಾರ್ನರ್ ಆಡುವ ಬಯಕೆ ವ್ಯಕ್ತಪಡಿಸುತ್ತಿದ್ದರೆ, ಪತ್ನಿ ಉಲ್ಟಾ ಹೊಡೆದಿರುವುದು ಅಚ್ಚರಿಗೆ ಕಾರಣವಾಗಿದೆ.
ಕಳೆದ ವರ್ಷದ ಜನವರಿಯಲ್ಲಿ ಡೇವಿಡ್ ವಾರ್ನರ್ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಆ ಬಳಿಕ ಉಸ್ಮಾನ್ ಖ್ವಾಜಾ ಜತೆಗೆ ಆರಂಭಿಕನಾಗಿ ಆಡುತ್ತಿದ್ದ ಸ್ಟೀವ್ ಸ್ಮಿತ್ ಕೂಡ 4ನೇ ಕ್ರಮಾಂಕಕ್ಕೆ ಮರಳಿದ್ದಾರೆ. ಹೀಗಾಗಿ ಆಸೀಸ್ ಟೆಸ್ಟ್ ತಂಡದಲ್ಲಿ ಆರಂಭಿಕ ಸ್ಥಾನವೊಂದು ಖಾಲಿ ಇದೆ. ಇದೇ ವಿಚಾರವಾಗಿ ವಾರ್ನರ್ ನಿವೃತ್ತಿ ವಾಪಸ್ ಪಡೆಯುವ ಬಗ್ಗೆ ಇತ್ತೀಚೆಗೆ ಮಾತನಾಡಿದ್ದರು. ಅಗತ್ಯ ಬಿದ್ದರೆ ನಿವೃತ್ತಿ ವಾಪಸ್ ಪಡೆದು ಆಡಲು ಸಿದ್ಧ ಎಂದಿದ್ದರು.
ಇದನ್ನೂ ಓದಿ IND vs NZ 3rd Test: ಮುಂಬೈ ಟೆಸ್ಟ್‌ಗೆ ಸ್ಪರ್ಧಾತ್ಮಕ ಪಿಚ್
ಜೂನ್‌ನಲ್ಲಿ ಅಮೆರಿಕ ಮತ್ತು ವೆಸ್ಟ್ ಇಂಡಿಸ್ ಜಂಟಿ ಆತಿಥ್ಯದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸೀಸ್ ತಂಡ ಸೋತ ಬೆನ್ನಲ್ಲೇ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು.
ಆಸ್ಟ್ರೇಲಿಯಾ ಪರ 110 ಟಿ20 ಪಂದ್ಯಗಳನ್ನಾಡಿರುವ ಡೇವಿಡ್ ವಾರ್ನರ್ ಒಂದು ಶತಕ, 28 ಅರ್ಧಶತಕ ಒಳಗೊಂಡಂತೆ 3277 ರನ್ ಸಿಡಿಸಿದ್ದಾರೆ.ಏಕದಿನ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ಪರ 161 ಪಂದ್ಯಗಳನ್ನು ಆಡಿರುವ ವಾರ್ನರ್ 33 ಅರ್ಧಶತಕ, 22 ಶತಕ ಒಳಗೊಂಡಂತೆ 6932 ರನ್ ಕಲೆಹಾಕಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ಪರ 112 ಪಂದ್ಯಗಳನ್ನು ಆಡಿರುವ ವಾರ್ನರ್ 26 ಶತಕ, 37 ಅರ್ಧಶತಕ ಒಳಗೊಂಡಂತೆ 8786 ರನ್ ಕಲೆಹಾಕಿದ್ದಾರೆ. ಈ ಮೂಲಕ ಮೂರು ಸ್ವರೂಪಗಳಲ್ಲೂ ಆಸ್ಟ್ರೇಲಿಯಾ ಪರ 3 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ ಏಕೈಕ ಬ್ಯಾಟರ್ ಎಂಬ ಹಿರಿಮೆಯೂ ಇವರದ್ದಾಗಿದೆ.