Wednesday, 30th October 2024

DK Shivakumar: ಸಿಎಂ ಆಗಿದ್ದಾಗಲೇ ಚನ್ನಪಟ್ಟಣಕ್ಕೆ ಏನೂ ಮಾಡದ ಕುಮಾರಣ್ಣ ಈಗೇನು ಮಾಡ್ತಾರೆ? ಡಿ.ಕೆ. ಶಿವಕುಮಾರ್ ಗೇಲಿ

DK Shivakumar

ಬೆಂಗಳೂರು: ಮುಖ್ಯಮಂತ್ರಿಯಾಗಿ ಅಧಿಕಾರ ಇದ್ದಾಗಲೇ ತಾನು ಪ್ರತಿನಿಧಿಸುತ್ತಿದ್ದ ಚನ್ನಪಟ್ಟಣ (Channapatna) ಕ್ಷೇತ್ರದ ಜನರಿಗೆ ಕುಮಾರಣ್ಣ ಏನೂ ಮಾಡಲಿಲ್ಲ. ಈಗ ಈ ಕ್ಷೇತ್ರದ ಶಾಸಕ ಸ್ಥಾನವೂ ಇಲ್ಲದಿರುವಾಗ ಅವರು ಏನು ತಾನೇ ಮಾಡಲು ಸಾಧ್ಯ? ಇದು ಕ್ಷೇತ್ರದ ಜನರಿಗೂ ಚನ್ನಾಗಿ ಗೊತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ. ವಿಧಾನಸೌಧದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಬುಧವಾರ ಅವರು ಪ್ರತಿಕ್ರಿಯೆ ನೀಡಿದರು.

ಚನ್ನಪಟ್ಟಣ ಉಪಚುನಾವಣೆ ಬಗ್ಗೆ ಕೇಳಿದಾಗ, ನಾವು ಚುನಾವಣೆಗಾಗಿ ಚನ್ನಪಟ್ಟಣದಲ್ಲಿ ಕೆಲಸ ಮಾಡುತ್ತಿಲ್ಲ. ಅಲ್ಲಿ ಶಾಸಕ ಸ್ಥಾನ ತೆರವಾದಾಗಿನಿಂದಲೂ ನಾನು ಹಾಗೂ ರಾಮಲಿಂಗಾರೆಡ್ಡಿ ಅವರು ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ ಅವರು, ಆ ಕ್ಷೇತ್ರದ ಜನರ ಮನೆ ಬಾಗಿಲಿಗೆ ಸರ್ಕಾರ ಹೋಗಿ ಅವರ ಕಷ್ಟಗಳನ್ನು ಆಲಿಸಿದೆ. ಪಂಚಾಯ್ತಿ ವ್ಯಾಪ್ತಿಯಲ್ಲಿ ಜನರ ಸಮಸ್ಯೆ ಕೇಳಲು ಕಾರ್ಯಕ್ರಮ ಮಾಡಿದಾಗ ಸುಮಾರು 22 ಸಾವಿರ ಕುಟುಂಬಗಳು ಅರ್ಜಿ ಸಲ್ಲಿಸಿವೆ ಎಂದರು.

ಈ ಸುದ್ದಿಯನ್ನೂ ಓದಿ | CM Siddaramaiah: ರಾಜಸ್ವ ಸಂಗ್ರಹಣೆಗೆ ತ್ವರಿತ ಕ್ರಮ ತೆಗೆದುಕೊಳ್ಳಿ: ಸಿದ್ದರಾಮಯ್ಯ ಸೂಚನೆ

ತಮಗೆ ಮನೆ, ನಿವೇಶನ ನೀಡಿಲ್ಲ, ಬಗರ್ ಹುಕ್ಕುಂ ಸಾಗುವಳಿ ಸಭೆ ಮಾಡಿಲ್ಲ, ರಸ್ತೆ ಇಲ್ಲ. ನಮ್ಮ ಕಷ್ಟ ಕೇಳಲು ಈ ಹಿಂದೆ ಶಾಸಕರಾಗಿದ್ದ ಕುಮಾರಣ್ಣ ಬಂದಿಲ್ಲ ಎಂದು ಜನ ಸಮಸ್ಯೆ ಹೇಳಿಕೊಂಡರು. ಈ ಹಿನ್ನೆಲೆಯಲ್ಲಿ ನಾನು ಹಾಗೂ ರಾಮಲಿಂಗಾರೆಡ್ಡಿ ಅವರು ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿ ಚನ್ನಪಟ್ಟಣಕ್ಕೆ 500 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿ ರಸ್ತೆ, ನೀರಾವರಿ ಯೋಜನೆಗೆ ಮುಂದಾಗಿದ್ದೇವೆ. ಇದರ ಜತೆಗೆ ಕ್ಷೇತ್ರದ ಜನರಿಗೆ 5 ಸಾವಿರ ಮನೆಗಳನ್ನು ಮಂಜೂರು ಮಾಡಲಾಗಿದೆ. ನಿವೇಶನ ಹಂಚಿಕೆ ಮಾಡಲು ಸರ್ಕಾರಿ ಜಾಗ ಗುರುತಿಸಿ ಬಡಾವಣೆ ನಿರ್ಮಾಣ ಕೆಲಸ ಮಾಡುತ್ತಿದ್ದೇವೆ. ಹಕ್ಕುಪತ್ರ ನೀಡುವ ಹಂತಕ್ಕೆ ಕೆಲಸ ಬಂದು ನಿಂತಿದೆ. ಇದರ ಜತೆಗೆ ಎಲ್ಲಾ ಗ್ರಾಮಗಳಲ್ಲಿ ಜಮೀನು ಖರೀದಿ ಮಾಡಲು ಮುಂದಾಗಿದ್ದೇವೆ ಎಂದು ವಿವರಿಸಿದರು.

ನಾವು ಚುನಾವಣೆಗಿಂತ ಕ್ಷೇತ್ರದ ಜನರ ಬದುಕು ಬದಲಾವಣೆ ಮಾಡುವತ್ತ ಗಮನ ಹರಿಸುತ್ತಿದ್ದೇವೆ. ಕುಮಾರಸ್ವಾಮಿ ನಮ್ಮ ಕೈ ಬಿಟ್ಟು ಹೋಗಿದ್ದಾರೆ ಎಂದು ಜನರಿಗೆ ಅರಿವಾಗಿದೆ. ಆ ಕ್ಷೇತ್ರದಲ್ಲಿ ಅವರು ಎರಡು ಬಾರಿ ನಿಂತರು, ಅವರ ಧರ್ಮಪತ್ನಿಯವರನ್ನು ನಿಲ್ಲಿಸಿದರು. ಈಗ ನಿರೀಕ್ಷೆಯಂತೆ ತಮ್ಮ ಪುತ್ರನನ್ನೂ ನಿಲ್ಲಿಸಿದ್ದಾರೆ. ಅವರು ಕಾರ್ಯಕರ್ತರಿಗೆ ಟಿಕೆಟ್ ನೀಡುವುದಿಲ್ಲ ಎಂದು ನಮಗೆ ಮುಂಚಿತವಾಗಿ ಖಚಿತವಾಗಿ ಗೊತ್ತಿತ್ತು. ಅವರು ಏನಾದರೂ ಮಾಡಿಕೊಳ್ಳಲಿ, ನಾವು ನಮ್ಮ ಕರ್ತವ್ಯ ಮಾಡುತ್ತಿದ್ದೇವೆ. ಚನ್ನಪಟ್ಟಣ ತಾಲೂಕಿನ ಜನತೆ ಬಗ್ಗೆ ನಮಗೆ ವಿಶ್ವಾಸವಿದೆ. ಅವರು ಈ ಬಾರಿ ನಮ್ಮ ಕೈ ಹಿಡಿಯಲಿದ್ದಾರೆ. ನಮ್ಮ ಸರ್ಕಾರ ಬಲಿಷ್ಠವಾಗಿದೆ. ಅವರ ಕಷ್ಟಕ್ಕೆ ಆಗುವವರು ನಾವು ಎಂದು ಜನರಿಗೂ ಗೊತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸುದ್ದಿಯನ್ನೂ ಓದಿ | Apprentice Training: ಪತ್ರಿಕೋದ್ಯಮ ಪದವೀಧರರಿಂದ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

ಯಾರಿಂದ ಬೇಕಾದರೂ ಪ್ರಚಾರ ಮಾಡಿಸಲಿ

ಯದುವೀರ್ ಅವರಿಂದ ಪ್ರಚಾರ ಮಾಡಿಸುತ್ತಿರುವ ಬಗ್ಗೆ ಕೇಳಿದಾಗ, ಅವರ ಪಕ್ಷದವರು ಅವರಿಗೆ ಬೇಕಾದವರಿಂದ ಪ್ರಚಾರ ಮಾಡಿಸಲಿ. ಅದರಲ್ಲಿ ತಪ್ಪಿಲ್ಲ. ಯದುವೀರ್ ಅವರು ಪ್ರಚಾರಕ್ಕೆ ಬರಬಾರದು ಎಂದು ನಾನ್ಯಾಕೆ ಹೇಳಲಿ? ಅವರ ಪಕ್ಷದ ನಾಯಕರು, ಕುಟುಂಬದವರು ಎಲ್ಲರೂ ಬರಲಿ. ನಮ್ಮ ಪರವಾಗಿ ಜನ ಇದ್ದಾರೆ. ನಮ್ಮ ಶ್ರಮಕ್ಕೆ ಪ್ರತಿಫಲ ಸಿಗಲಿದೆ ಎಂದು ತಿಳಿಸಿದರು.

ಕ್ಷೇತ್ರದಲ್ಲಿ ಪ್ರಬಲವಾಗಿರುವ ಒಕ್ಕಲಿಗರು ಕೈ ಹಿಡಿಯುತ್ತಾರಾ ಎಂದು ಕೇಳಿದಾಗ, ನಾವು ಜಾತಿ ಮೇಲೆ ರಾಜಕಾರಣ ಮಾಡುವುದಿಲ್ಲ. ನೀತಿ ಮೇಲೆ ರಾಜಕಾರಣ ಮಾಡುತ್ತೇವೆ. ಎಲ್ಲಾ ವರ್ಗದ ಜನರ ಪರವಾಗಿ ಕೆಲಸ ಮಾಡುತ್ತೇವೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಕುರುಬರು, ತಿಗಳರು, ಬೆಸ್ತರು, ಮುಸಲ್ಮಾನರು, ಒಕ್ಕಲಿಗರು, ಆಚಾರರು ಸೇರಿದಂತೆ ಎಲ್ಲಾ ವರ್ಗದ ಜನ ಇದ್ದಾರೆ. ನಾವು ಎಲ್ಲರ ಪರವಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ರೈತರ ಹಕ್ಕು ಎತ್ತಿ ಹಿಡಿಯುತ್ತೇವೆ

ವಕ್ಫ್ ಮಂಡಳಿ ಭೂ ವಿವಾದದ ಬಗ್ಗೆ ಕೇಳಿದ ಪ್ರಶ್ನೆಗೆ, ಬಿಜೆಪಿ ಅನಗತ್ಯವಾಗಿ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಬಿಜೆಪಿ ಅವಧಿಯಲ್ಲೂ ವಕ್ಫ್ ಮಂಡಳಿಯಿಂದ ರೈತರಿಗೆ ನೋಟೀಸ್ ನೀಡಲಾಗಿತ್ತು. ದಾಖಲಾತಿಗಳಲ್ಲಿ ಆಗಿರುವ ತಪ್ಪನ್ನು ಸರಿಪಡಿಸುವಂತೆ ನಾವು ಕಂದಾಯ ಇಲಾಖೆಗೆ ಸೂಚನೆ ನೀಡಿದ್ದೇವೆ. ರೈತರಿಗೆ ನೀಡಲಾಗಿರುವ ಭೂಮಿಯನ್ನು ರೈತರ ಭೂಮಿಯಾಗಿ ಮುಂದುವರಿಸಬೇಕು ಎಂದು ತಿಳಿಸಿದ್ದೇವೆ. ನಾವು ಯಾವುದೇ ರೈತರಿಗೆ ತೊಂದರೆ ನೀಡುವುದಿಲ್ಲ. ರೈತರ ಹಕ್ಕನ್ನು ಎತ್ತಿ ಹಿಡಿಯುತ್ತೇವೆ. ಇದು ಸರ್ಕಾರದ ತೀರ್ಮಾನವಾಗಿದ್ದು, ನಾವು ಅದಕ್ಕೆ ಬದ್ಧವಾಗಿದ್ದೇವೆ. ಬಿಜೆಪಿ ಇದನ್ನು ಕೋಮು ವಿಚಾರವಾಗಿ ಬಳಸಲು ಪ್ರಯತ್ನಿಸುತ್ತಿದೆ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಖಾತೆ ಸಚಿವರು ಸ್ಪಷ್ಟನೆ ನೀಡಿದ್ದಾರೆ ಎಂದರು.

ಜಯನಗರಕ್ಕೆ ಬೇರೆ ಯೋಜನೆಯಲ್ಲಿ 40 ಕೋಟಿ ರೂ. ಅನುದಾನ

ಜಯನಗರಕ್ಕೆ ಅನುದಾನ ನೀಡಿಲ್ಲ ಎಂಬ ಆರೋಪದ ಬಗ್ಗೆ ಕೇಳಿದಾಗ, ಈಗ ಬಿಡುಗಡೆ ಮಾಡಿರುವುದು ಉಪಮುಖ್ಯಮಂತ್ರಿಗಳ ಹೆಚ್ಚುವರಿ ಅನುದಾನ ನಿಧಿಯ ಹಣ. ರಸ್ತೆ ಸಮಸ್ಯೆ ಇದೆ ಎಂದು ಎಲ್ಲಾ 27 ಕ್ಷೇತ್ರಗಳಿಗೂ ತಲಾ 10 ಕೋಟಿ ನೀಡಲಾಗಿದೆ. ಜಯನಗರ ಬಹಳ ಚಿಕ್ಕ ಕ್ಷೇತ್ರ. ಅಲ್ಲಿ ದೊಡ್ಡ ಮಟ್ಟದ ಹಾನಿಯಾಗಿಲ್ಲ. ಅವರಿಗೂ ಅನುದಾನ ನೀಡಬೇಕೆನ್ನುವ ಅರಿವು ನನಗಿದೆ. ಅವರು ನಮ್ಮ ಮೇಲೆ ದೊಡ್ಡ ಆರೋಪ ಮಾಡಿದ್ದರು. ಅವರ ಆರೋಪ ನೋಡಿಕೊಂಡು ಅನುದಾನ ಹೆಚ್ಚು ನೀಡಬೇಕೋ, ಕಡಿಮೆ ನೀಡಬೇಕೋ ಎಂದು ಆಲೋಚನೆ ಮಾಡಬೇಕಿದೆ ಎಂದು ತಿಳಿಸಿದರು.

ಶಾಸಕರ ಮಾತಿಗೆ ಜನರಿಗೆ ಅನ್ಯಾಯ ಮಾಡುವುದು ಎಷ್ಟು ಸರಿ ಎಂದು ಕೇಳಿದಾಗ, ನಾವು ಕ್ಷೇತ್ರದ ಜನರಿಗೆ ಅನ್ಯಾಯ ಮಾಡುತ್ತಿಲ್ಲ. ಈಗಾಗಲೇ ಬೇರೆ ಬೇರೆ ಯೋಜನೆಗಳ ಅಡಿಯಲ್ಲಿ ಆ ಕ್ಷೇತ್ರಕ್ಕೆ ರೂ. 40 ಕೋಟಿ ಅನುದಾನ ನೀಡಲಾಗಿದೆ. ಆದರೆ ರಾಮಲಿಂಗಾರೆಡ್ಡಿ ಅವರ ಕ್ಷೇತ್ರಕ್ಕೆ ಅನುದಾನ ನೀಡಿಲ್ಲ. ಬಿಜೆಪಿ ಶಾಸಕರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅಲ್ಲಿನ ಶಾಸಕರು ಕ್ಷೇತ್ರಕ್ಕೆ ಬಂದು ನೋಡಿ ಎಂದು ಮನವಿ ಮಾಡಿದ್ದಾರೆ. ಅಲ್ಲಿ ಹೋಗಿ ನೋಡುತ್ತೇನೆ. ಟೀಕೆ ಮಾಡುವವರು ಮಾಡಲಿ. ಟೀಕೆ ಮಾಡುವವರಿಗೆ ಬೇಡ ಎಂದು ಹೇಳುವುದಿಲ್ಲ. ರಾಜಕಾರಣದಲ್ಲಿ ಎಲ್ಲವನ್ನೂ ಸ್ವೀಕಾರ ಮಾಡುತ್ತೇವೆ ಎಂದು ತಿಳಿಸಿದರು.

ಎಚ್ಎಂಟಿ ಅರಣ್ಯ ಜಾಗದಲ್ಲಿ ಚಲನಚಿತ್ರ ಶೂಟಿಂಗ್‌ಗಾಗಿ ಮರ ಕಡಿದವರ ಬಗ್ಗೆ ಕ್ರಮ ಕೈಗೊಳ್ಳಲು ಅರಣ್ಯ ಸಚಿವರು ಬಿಬಿಎಂಪಿಗೆ ಸೂಚಿಸಿರುವ ಬಗ್ಗೆ ಕೇಳಿದಾಗ, ಈ ವಿಚಾರವಾಗಿ ನನಗೆ ಮಾಹಿತಿ ಇಲ್ಲ. ಬೇರೆ ಇಲಾಖೆಗಳ ವಿಚಾರದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದರು.

ಈ ಸುದ್ದಿಯನ್ನೂ ಓದಿ | Free Training: ಕೋಳಿ ಸಾಕಾಣಿಕೆ, ಫೋಟೋಗ್ರಫಿ ಉಚಿತ ತರಬೇತಿ; ಅರ್ಜಿ ಆಹ್ವಾನ

ನ್ಯಾಯಾಲಯದ ತೀರ್ಮಾನ ಸ್ವಾಗತಿಸುತ್ತೇವೆ

ದರ್ಶನ್ ಅವರಿಗೆ ಮಧ್ಯಂತರ ಜಾಮೀನು ಸಿಕ್ಕ ಬಗ್ಗೆ ಕೇಳಿದಾಗ, ನ್ಯಾಯಾಲಯದ ತೀರ್ಪನ್ನು ನಾವು ಪ್ರಶ್ನೆ ಮಾಡುವುದಿಲ್ಲ. ನ್ಯಾಯಾಲಯದ ತೀರ್ಪನ್ನು ಸರ್ಕಾರ ಬಹಳ ಗೌರವದಿಂದ ಸ್ವಾಗತಿಸುತ್ತದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.