ಇಂದು ನರಕ ಚತುರ್ದಶಿ, ನಾಡಿದ್ದು ಬಲಿಪಾಡ್ಯಮಿ. ಒಟ್ಟಿನಲ್ಲಿ ಜನಮಾನಸದಲ್ಲೀಗ ದೀಪಾವಳಿಯ ಸಂಭ್ರಮ, ಹೊಸಬಟ್ಟೆ ಧರಿಸುವ ಮತ್ತು ಸಿಹಿತಿನಿಸು ಮೆಲ್ಲುವ ಸಡಗರ.
‘ತಮಸೋಮಾ ಜ್ಯೋತಿರ್ಗಮಯ’ ಎಂಬ ಮಾತಿ ನಂತೆ, ಮನುಷ್ಯನು ಕತ್ತಲೆಯಿಂದ ಬೆಳಕಿನೆಡೆಗೆ ಹೆಜ್ಜೆಹಾಕ ಬೇಕಿರುವುದರ ಸಾಂಕೇತಿಕ ಸಂದರ್ಭವೂ ಆಗಿದೆ ದೀಪಾವಳಿ. ಈ ಹಬ್ಬದ ವೇಳೆ ಬೆಳಗುವ ಸಾಲುದೀಪಗಳು ‘ಮುಸುಕಿದ ಮಬ್ಬಿನಲಿ ಕೈಹಿಡಿದು ನಡೆಸುವ’ ಸಾಧನ ಗಳಾಗಬೇಕು ಮತ್ತು ಅವುಗಳ ಕಾರಣದಿಂದಾಗಿ ಮನುಜನ ಬಾಳು ಬೆಳಗುವಂತಾಗಬೇಕು.
ಆದರೆ ದೀಪಾವಳಿಯ ಜತೆಜತೆಗೇ ಬರುವ ಅಗ್ನಿ ಅವಘಡಗಳು ಎಂಥವರನ್ನೂ ಕಂಗೆಡಿಸಿಬಿಡುತ್ತವೆ. ಕಾಸರ ಗೋಡಿನ ನೀಲೇಶ್ವರದ ದೇಗುಲವೊಂದರ ಸಮೀಪ ಮೊನ್ನೆ ಮಧ್ಯರಾತ್ರಿ ಸಂಭವಿಸಿದ ಪಟಾಕಿ ಸ್ಪೋಟದ ಭೀಕರ ದುರಂತದಲ್ಲಿ 154ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿರುವುದು ವಿಷಾದನೀಯ. ಸಂಭ್ರಮ-ಸಡಗರಗಳಿಗೆ ಒಡ್ಡಿಕೊಂಡವರು ಅರೆಕ್ಷಣ ಮೈಮರೆತರೂ ಏನೆಲ್ಲಾ ಅತಿರೇಕಗಳಾಗ ಬಹುದು ಎಂಬುದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ ನೀಲೇಶ್ವರದಲ್ಲಿ ಸಂಭವಿಸಿದ ಈ ದುರಂತ. ಕಾರ್ತಿಕ ಮಾಸವು ಮುಗಿಯುವವರೆಗೂ ದೀಪಗಳ ಸಾಲು ಮತ್ತು ಪಟಾಕಿಗಳ ಆರ್ಭಟ ಕಂಡುಬರುವಂಥದ್ದೇ. ಇಷ್ಟೂ ಅವಧಿಯಲ್ಲಿ ಜನರು ಸುರಕ್ಷತೆಗೆ ಇನ್ನಿಲ್ಲದ ಮಹತ್ವವನ್ನು ನೀಡಬೇಕಾಗಿದೆ.
ಮನೆಯ ಹಿರಿಯರೆನಿಸಿಕೊಂಡವರು ಅಂಥದೊಂದು ಮುನ್ನೆಚ್ಚರಿಕೆಯ ಪ್ರಜ್ಞೆಯನ್ನು ಕಿರಿಯರಲ್ಲಿ ತುಂಬಬೇಕಿದೆ. ವಿಶೇಷವಾಗಿ, ಪಟಾಕಿ ಮಳಿಗೆಗಳನ್ನು ಸಜ್ಜುಗೊಳಿಸಿಕೊಂಡಿರುವವರು ಎಷ್ಟು ಮುಂಜಾಗ್ರತೆ ವಹಿಸಿದರೂ
ಸಾಲದು. ಸಣ್ಣದೊಂದು ನಿರ್ಲಕ್ಷ್ಯದ ‘ಕಿಡಿ’ ಭಾರಿ ಅಪಾಯವನ್ನೇ ತಂದೊಡ್ಡಬಲ್ಲದು ಎಂಬುದಕ್ಕೆ ಪ್ರತಿ ವರ್ಷವೂ ಸಾಕಷ್ಟು ನಿದರ್ಶನಗಳು ಸಿಗುತ್ತವೆ. ಇದನ್ನು ಗಮನದಲ್ಲಿರಿಸಿಕೊಂಡೇ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸೋಣ. ‘ದೀಪದಿಂದ ದೀಪವ, ಹಚ್ಚಬೇಕು ಮಾನವ’ ಎನ್ನುತ್ತದೆ ಒಂದು ಕವಿವಾಣಿ. ಇನ್ನೊಬ್ಬರ ಬಾಳನ್ನು ಬೆಳಗುವುದಕ್ಕೆ ನಮ್ಮ ಕೈಲಿ ಸಾಧ್ಯವಾಗುವಷ್ಟರ ಮಟ್ಟಿಗೆ ಯತ್ನಿಸುವುದೂ ದೀಪಾವಳಿಯ ಮತ್ತೊಂದು ಸ್ವರೂಪವೇ
ಎಂದು ಭಾವಿಸೋಣ. ಆಗ ಪರಸ್ಪರರ ಕಂಗಳಲ್ಲಿ ಮಿನುಗುವ ಕಾಂತಿಯು ಒಂದಿಡೀ ಪರಿಸರವನ್ನೇ ಬೆಳಗಬಲ್ಲದು. ನಮಗೀಗ ಬೇಕಿರುವುದು ಅಂಥ ಪರಾನುಭೂತಿ ಪ್ರಜ್ಞೆಯೇ. ದೀಪಾವಳಿ ಹಬ್ಬ ಅದಕ್ಕೆ ಪರ್ವಕಾಲವಾಗಲಿ.
ಇದನ್ನೂ ಓದಿ: Deepavali Horoscope 2024: ಯಾವ ರಾಶಿಯವರು ಯಾವ ರೀತಿ ದೀಪ ಬೆಳಗಿಸಿದರೆ ಶುಭ ಫಲ ಪಡೆಯಬಹುದು?