ಪ್ರತಿಭಾವಂತರೆಲ್ಲರೂ ವೈದ್ಯರಾಗಲಿ – ಪ್ರದೀಪ್ ಈಶ್ವರ್
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಿ, ವೈದ್ಯಕೀಯ ಪದವಿ ಓದುವ ಅವಕಾಶ ಕಲ್ಪಿಸಿದರೆ, ಅವರು ಮುಂದೆ ನಿಸ್ವಾರ್ಥ ಮನೋಭಾವದಿಂದ ಜನಸಾಮಾನ್ಯರಿಗೆ ಚಿಕಿತ್ಸೆ ನೀಡುವರೆಂಬ ನಿರೀಕ್ಷೆಯಿಂದ ತರಬೇತಿ ನೀಡುತ್ತಿರುವ ಪ್ರದೀಪ್ ಈಶ್ವರ್ ಅವರ ಅಭಿಯಾನ ಗಮನ ಸೆಳೆಯುತ್ತದೆ. ಪರಿಶ್ರಮ ನೀಟ್ ಅಕಾಡೆಮಿ ಎಂಬ ಸಂಸ್ಥೆಯ ಮೂಲಕ ನೀಟ್ ಪರೀಕ್ಷೆಗೆ ತರಬೇತಿ ನೀಡುವ ಪ್ರದೀಪ್ ಈಶ್ವರ್, ಸೂಪರ್ 60 ಎಂಬ ಹೆಸರಿನಲ್ಲಿ ಅರ್ಹ ಅಭ್ಯರ್ಥಿಗಳಿಗೆ ಉಚಿತ ತರಬೇತಿ ನೀಡುವ ಮಹದಾಸೆಯನ್ನು ಹೊಂದಿರುವುದು ವಿಶೇಷ.
ವೈದ್ಯರ ಸೇವೆ ಅನುಪಮ. ಸಕಾಲದಲ್ಲಿ ದೊರೆಯುವ ವೈದ್ಯಕೀಯ ಚಿಕಿತ್ಸೆ ಖಂಡಿತವಾಗಿಯೂ ಜೀವಗಳನ್ನು ಉಳಿಸಬಲ್ಲದು. ಆದರೆ, ತುರ್ತು ಸಮಯದಲ್ಲಿ ವೈದ್ಯರ ಸೇವೆ ದೊರೆಯದೇ ತಂದೆ ತಾಯಿಯರನ್ನೇ ಕಳೆದುಕೊಳ್ಳುವ ಕ್ಲಿಷ್ಟಕರ ಸನ್ನಿವೇಶ ಎದುರಾದರೆ, ಹೇಗಾಗಬೇಡ!
ಪ್ರದೀಪ್ ಅವರು ಅಂತಹ ಒಂದು ಸನ್ನಿವೇಶವನ್ನು ಎದುರಿಸುವ ಅನಿವಾರ್ಯತೆ ಒದಗಿತ್ತು. ತಂದೆ ಮತ್ತು ತಾಯಿಯರು ಜೀವನ ದಲ್ಲಿ ಬಹಳಷ್ಟು ಕಷ್ಟ ಅನುಭವಿಸಿ, ಇಬ್ಬರೂ ಒಂದೇ ಸಮಯದಲ್ಲಿ ತೀವ್ರ ಸಂಕಷ್ಟಕ್ಕೆ ಒಳಗಾದರು. ತಕ್ಷಣ ಬಂಧುಗಳು ಆಸ್ಪತ್ರೆಗೆ ಸೇರಿಸಿದರು. ಆದರೆ, ಆ ದಿನ ಮಧ್ಯಾಹ್ನ ಒಂದೂವರೆ ಗಂಟೆಗೆ ಡ್ಯೂಟಿ ಮುಗಿಸಿ ಮನೆಗೆ ತೆರಳಬೇಕಾದ ವೈದ್ಯರು, ಬೆಳಗಿನ ಹನ್ನೊಂದುವರೆಗೇ ಮನೆಗೆ ತೆರಳಿದ್ದರು.
ಇತ್ತ, ಪ್ರದೀಪ್ ಅವರ ತಂದೆ ತಾಯಿ, ಆಸ್ಪತ್ರೆಯಲ್ಲಿ ನರಳುತ್ತಾ ಮಲಗಿದ್ದಾರೆ, ಆದರೆ ಉತ್ತಮ ಮತ್ತು ಪರಿಣಾಮಕಾರಿ ಚಿಕಿತ್ಸೆ ನೀಡಬೇಕಾದ ವೈದ್ಯರು ಆಸ್ಪತ್ರೆಯಲ್ಲಿಲ್ಲ. ಆ ಕಾಲದಲ್ಲಿ ಇನ್ನೂ ಮೊಬೈಲ್ ಗಳು ಹೆಚ್ಚು ಜನಪ್ರಿಯವಾಗಿರಲಿಲ್ಲ. ಬೇರೆ ಮೂಲ ಗಳಿಂದ ಆಧುನಿಕ ಚಿಕಿತ್ಸೆ ಒದಗಿಸಲು ಅನುಕೂಲ್ಲದ ಗ್ರಾಮೀಣ ಪ್ರದೇಶ ಅದು. ಸುಮಾರು ಒಂದು ಗಂಟೆ ನರಳಿದ ತಂದೆ, ತಾಯಿ ಇಬ್ಬರೂ ಒಂದೇ ದಿನ ಅಗಲಿದರು.
‘ಆ ದಿನ, ಡ್ಯೂಟಿ ವೈದ್ಯರು ಆಸ್ಪತ್ರೆಯಲ್ಲೇ ಇದ್ದು, ಚಿಕಿತ್ಸೆ ನೀಡಿದ್ದರೆ, ನಮ್ಮ ತಂದೆ ತಾಯಿ ಇವರಿಬ್ಬರಲ್ಲಿ ಒಬ್ಬರಾದರೂ ಬದುಕುತ್ತಿದ್ದರು. ಇದನ್ನು ವಿಧಿ ಎಂದು ಕರೆಯುವು ದಕ್ಕಿಂತ, ನಮ್ಮ ವ್ಯವಸ್ಥೆಯಲ್ಲಿರುವ ಕೊರತೆಗಳು ಎಂದೇ ಕರೆಯಬೇಕು. ಅಂದೇ ನಾನು ನಿರ್ಧರಿಸಿದೆ, ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೌಲಭ್ಯ ಉತ್ತಮ ಪಡಿಸಲು ಏನಾದರೂ ಸಕಾರಾತ್ಮಕ ಕೆಲಸಗಳನ್ನು ಮಾಡಲೇ ಬೇಕು ಎಂದು.’ ಎನ್ನುತ್ತಾರೆ ಪ್ರದೇಪ್. ಪ್ರದೀಪ್ ಈಶ್ವರ್ ಅವರು ಆಗಿನ್ನೂ ಪಿಯುಸಿಯಲ್ಲಿದ್ದರು. ತಾನೇ ಸ್ವತಃ ವೈದ್ಯನಾಗಬೇಕೆಂಬ ಆಸೆ. ಆದರೆ, ತಂದೆ ತಾಯಿಯರನ್ನು ಕಳೆದುಕೊಂಡರು.
ಆದರೆ, ಸೂಕ್ತ ಅವಕಾಶ, ಸೌಲಭ್ಯವಿಲ್ಲದೇ, ವೈದ್ಯಕೀಯ ಪದವಿಯನ್ನು ಓದುವ ಅದೃಷ್ಟ ಪ್ರದೀಪ್ ಈಶ್ವರ್ ಅವರಿಗೆ ದೊರೆಯ ಲಿಲ್ಲ. ಬಂಧುಗಳ ಸಹಕಾರದಿಂದ, ಎಂಎಸ್ಸಿ ಪದವಿಯನ್ನು ಮುಗಿಸಿ, ಜೀವಶಾಸ್ತ್ರದ ಉಪನ್ಯಾಸಕರಾದರು. ವೈದ್ಯ ಪದವಿಗೆ ತರಬೇತಿ ನೀಡುವ ಕನಸು ಇತ್ತ ಉಪನ್ಯಾಸಕ ಹುದ್ದೆಯಲ್ಲಿದ್ದುಕೊಂಡು, ಮಕ್ಕಳಿಗೆ ಪಾಠ ಮಾಡುತ್ತಿರುವಾಗಲೇ, ಅತ್ತ ಮನದಲ್ಲಿ ಅಂತರ್ಗತವಾಗಿದ್ದ ಆ ಒಂದು ಆಸೆ ಚಿಗುರೊಡೆಯಿತು. ನಮ್ಮ ನಾಡಿನ ಹಳ್ಳಿ ಗಳಲ್ಲಿ, ಸಣ್ಣಪುಟ್ಟ ಊರುಗಳಲ್ಲಿ ವೃತ್ತಿ ನಿರ್ವಹಿ ಸಲು ಸಿದ್ಧರಿರುವ ಇನ್ನಷ್ಟು ವೈದ್ಯರನ್ನು ತಯಾರಿಸಬೇಕು, ಹೊಸ ಹೊಸ ಯುವಕ ಯುವತಿಯರನ್ನು ಈ ವೃತ್ತಿಗೆ ಸೇರಿಸಬೇಕು, ನಿಸ್ವಾರ್ಥ ಸೇವೆ ನೀಡುವ ಯುವ ಪಡೆಯನ್ನು ನಿರ್ಮಿಸಬೇಕು ಎಂಬ ಅವರ ಮಹದಾಸೆಯನ್ನು ಅವರು ಚಿವುಟ ಲಿಲ್ಲ, ಬದಲಿಗೆ ಆ ಕನಸಿಗೆ ನೀರೆರೆಯುತ್ತಾ ಬಂದರು. ಯುವ ಜನರು ವೈದ್ಯ ವೃತ್ತಿ ಸೇರಲು ಅನುಕೂಲವಾಗುವಂತಹ ತರಬೇತಿಯನ್ನು ನಡೆಸುವ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ತಾವೇ ಒಂದು ತರಬೇತಿ ಸಂಸ್ಥೆ ಆರಂಭಿಸಬೇಕು, ಅಲ್ಲಿ ಬಡ ವಿದ್ಯಾರ್ಥಿಗಳು ಓದಲು ಅನುಕೂಲವಾಗಬೇಕು ಎಂಬ ಅವರ ಮನದಾಳದ ಆಸೆಯನ್ನು ಕಾರ್ಯರೂಪಕ್ಕೆ ತರಲು ಸಿದ್ಧರಾದರು. ಅವರ ಕನಸಿನ ತರಬೇತಿ ಸಂಸ್ಥೆಯಲ್ಲಿ ಎಲ್ಲರಿಗೂ ಅವಕಾಶ. ಸಂಸ್ಥಯು ತನ್ನ ಕಾಲ ಮೇಲೆ ತಾನು ನಿಲ್ಲುವಂತಹ ವ್ಯವಸ್ಥೆಯ ಜತೆಯಲ್ಲೇ, ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳೂ ಅಲ್ಲಿ ತರಬೇತಿ ಪಡೆಯುವಂತಾಗಬೇಕು ಎಂಬುದೇ ಅವರ ಕನಸಾಗಿತ್ತು. ಅದು ಇಂದು ನನಸಾಗಿದೆ.
ಪ್ರದೀಪ್ ಈಶ್ವರ್ ಅವರು ಕಳೆದ ಎರಡು ಮೂರು ವರ್ಷಗಳಿಂದ ನೀಟ್ ಪರೀಕ್ಷೆಗೆ ನೂರಾರು ವಿದ್ಯಾರ್ಥಿಗಳನ್ನು ತರಬೇತು ಗೊಳಿಸುತ್ತಿದ್ದಾರೆ. ಅವರಲ್ಲಿ ಅರ್ಧಕ್ಕರ್ಧ ಜನ ಆರ್ಥಿಕವಾಗಿ ದುರ್ಬಲರು ಎಂದರೆ ನಂಬಲೇ ಬೇಕು.
ಉಚಿತ ತರಬೇತಿ
‘ಉತ್ತಮ ಅಂಕ ಪಡೆದಿರುವ ಆದರೆ, ಆರ್ಥಿಕವಾಗಿ ಸಬಲರಲ್ಲದ ವಿದ್ಯಾರ್ಥಿಗಳು ವೈದ್ಯಕೀಯ ಪದವಿ ಪಡೆಯುವ ಕನಸು ಕಂಡರೆ
ತಪ್ಪೇನಿದೆ? ಅಂತಹ ಪ್ರತಿಭಾವಂತ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿ, ಅವರಿಂದ ಯಾವುದೇ ಶುಲ್ಕ ಪಡೆಯದೇ ಪರಿಣತರ
ನ್ನಾಗಿಸಿ, ನೀಟ್ ಪರೀಕ್ಷೆ ಪಾಸು ಮಾಡಿಸಿ, ವೈದ್ಯರನ್ನಾಗಿ ಮಾಡಬೇಕೆಂಬುದೇ ನನ್ನ ಮಹದಾಸೆ’ ಎನ್ನುವ ಪ್ರದೀಪ್ ಈಶ್ವರ್
ಅವರು, ಇಂತಹದೊಂದು ಯೋಜನೆಯನ್ನು ಕೈಗೊಂಡಾಗ, ಕೆಲವು ತೊಡಕುಗಳೂ ಎದುರಾದವು.
ಒಂದನೆಯದಾಗಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ವಿಷಯ. ಎರಡನೆಯದಾಗಿ, ಅವರು ಆರ್ಥಿಕವಾಗಿ ದುರ್ಬಲರು ಎಂದು ಖಚಿತಪಡಿಸಿಕೊಳ್ಳುವ ಸಂಕೀರ್ಣ ಸಮಸ್ಯೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಎಂದು ಪ್ರಚಾರ ನೀಡಿದೊಡನೆ, ಸಾವಿರಕ್ಕೂ ಮಿಕ್ಕು ಅರ್ಜಿಗಳು ಬಂದವು. ಅವರಲ್ಲಿ ನಿಜವಾಗಿಯೂ ಅರ್ಹತೆ ಉಳ್ಳ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಬೇಕಿತ್ತು. ಅಂತಹ ಅರವತ್ತು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಅವರಿಗೆ ಉಚಿತ ತರಬೇತಿ ನೀಡಿದರು.
ಇಂದು ಪ್ರದೀಪ್ ಈಶ್ವರ್ ಅವರ ಕನಸು ನನಸಾಗುವ ಹಂತದಲ್ಲಿದೆ. ಇವರು ತರಬೇತಿ ನೀಡಿದ …. ಅಭ್ಯರ್ಥಿಗಳು ನೀಟ್ ಪರೀಕ್ಷೆ
ಯಲ್ಲಿ ಉತ್ತಮ ಅಂಕ ಗಳಿಸಿ, ವೈದ್ಯಕೀಯ ಪದವಿಯ ಸೀಟ್ ಗಳಿಸಿದ್ದಾರೆ. ಅವರಲ್ಲಿ ಮೂವರು ಏಮ್‌ಸ್‌ನಲ್ಲೂ ಪ್ರವೇಶ ಪಡೆದಿ ದ್ದಾರೆ. ಹಲವು ಬೆಂಗಳೂರಿನ ಕಾಲೇಜುಗಳಲ್ಲಿ ಸರಕಾರ ನೀಡುವ ಕಡಿಮೆ ಶುಲ್ಕದ ಸೀಟು ಪಡೆದಿದ್ದಾರೆ. ಆರ್ಥಿಕವಾಗಿ ಸಬಲ ರಲ್ಲದ ಪ್ರತಿಭಾವಂತ ಅಭ್ಯರ್ಥಿಗಳು ವೈದ್ಯಕೀಯ ಪದವಿಯನ್ನು ಅಭ್ಯಸಿಸುತ್ತಾರೆ ಎಂಬ ವಿಷಯವೇ ಪ್ರದೀಪ್ ಈಶ್ವರ್ ಅವರಿಗೆ ಬಹಳಷ್ಟು ಸಂತೋಷ ತಂದಿದೆ.
ತರಬೇತಿ ನೀಡಲು ಸಂಸ್ಥೆ ಕಟ್ಟಿದರು ಕಳೆದ ಎರಡು ವರ್ಷಗಳಿಂದ ನೂರಾರು ವಿದ್ಯಾರ್ಥಿಗಳನ್ನು ನೀಟ್ ಪರೀಕ್ಷೆಗೆ ತರಬೇತು ಗೊಳಿಸುತ್ತಿರುವ ಪ್ರದೀಪ್ ಈಶ್ವರ್ ಅವರು, ಅದಕ್ಕಾಗಿ ಹದಿನೈದಕ್ಕೂ ಹೆಚ್ಚು ತರಬೇತುದಾರರನ್ನು ನಿಯುಕ್ತಗೊಳಿಸಿದ್ದಾರೆ. ಪರಿಶ್ರಮ ನೀಟ್ ಅಕಾಡೆಮಿಎಂಬ ಹೆಸರಿನ ಈ ಸಂಸ್ಥೆಯಲ್ಲಿ ಪರಿಶ್ರಮಕ್ಕೆ ಮೊದಲ ಸ್ಥಾನ. ಅಭ್ಯರ್ಥಿಗಳು ಮತ್ತು ತರಬೇತಿ ದಾರರು ಗಮನವಿಟ್ಟು, ಪರಿಶ್ರಮ ಹಾಕುತ್ತಾರೆ. ಸ್ವತಃ ತಾವೇ ಜೀವಶಾಸ್ತ್ರದ ವಿಷಯದಲ್ಲಿ ಪಾಠಗಳನ್ನು ಮಾಡುತ್ತಾರೆ.
ವಿದ್ಯಾರ್ಥಿಗಳಿಗೆ ಪಾಠ ಮಾಡಲು, ಅವರೆಲ್ಲರೂ ಅಲ್ಲೇ ತಂಗಲು ಬಾಡಿಗೆ ಕಟ್ಟಡಗಳನ್ನು ಪಡೆದಿದ್ದಾರೆ. ಎಲ್ಲಾ ವಿದ್ಯಾರ್ಥಿ ಗಳಿಗೂ ಗುಣಮಟ್ಟದ ನೀಟ್ ಪಠ್ಯಕ್ರಮದ ಪುಸ್ತಕಗಳನ್ನು ಒದಗಿಸುತ್ತಾರೆ. ಇವೆಲ್ಲಕ್ಕೂ ಸಾಕಷ್ಟು ವೆಚ್ಚವಾಗುತ್ತದೆ. ಈ ಹಿನ್ನೆಲೆ ಯಲ್ಲಿ, ಇವರ ತರಬೇತಿ ಸಂಸ್ಥೆೆ ಎಲ್ಲರಿಗೂ ಉಚಿತ ತರಬೇತಿ ನೀಡುತ್ತದೆ ಎನ್ನಲು ಆಗುವುದಿಲ್ಲ. ಶುಲ್ಕ ಭರಿಸಲು ಸಾಮರ್ಥ್ಯ ಹೊಂದಿದ ಅಭ್ಯರ್ಥಿಗಳು, ಸಾಕಷ್ಟು ಕಡಿಮೆ ಮೊತ್ತದ ಶುಲ್ಕ ಭರಿಸುತ್ತಾರೆ.
ನೀಟ್ ತರಬೇತಿ ನೀಡುವ ಇತರ ಸಂಸ್ಥೆಗಳ ಶುಲ್ಕಗಳಿಗೆ ಹೋಲಿಸಿದರೆ, ಇವರ ಸಂಸ್ಥೆ ವಿಧಿಸುವ ಶುಲ್ಕ ಕಡಿಮೆ. ಹಾಸ್ಟೆಲ್
ಸೌಲಭ್ಯವನ್ನೂ ಒದಗಿಸುವುದರಿಂದ ಸಾಕಷ್ಟು ವೆಚ್ಚವೂ ಒದಗಿ ಬರುತ್ತದೆ. ಇದರ ಜತೆಯಲ್ಲೇ, ಮಾರ್ಚ್ 2020ರ ಸಮಯದಲ್ಲಿ
ಕೋವಿಡ್-19 ನಿಂದ ಎದುರಾದ ಲಾಕ್‌ಡೌನ್ ಸನ್ನಿವೇಶದಿಂದ, ಶುಲ್ಕ ಸಂಗ್ರಹಕ್ಕೆ ತೀವ್ರ ಹೊಡೆತ ಬಿದ್ದು, ತಾತ್ಕಾಲಿಕ ಆರ್ಥಿಕ
ಕೊರತೆಯೂ ಉಂಟಾಯಿತು.
ಆದರೆ, ಸಂಸ್ಥೆಯ ಸಿಬ್ಬಂದಿ ಮತ್ತು ಪ್ರದೀಪ್ ಈಶ್ವರ್ ಅವರ ಪರಿಶ್ರಮದಿಂದ, ಮತ್ತೆ ಈಗ ತರಬೇತಿಗಳು ಮುಂದುವರಿದಿವೆ,
ಅಭ್ಯರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಇತರ ಅಭ್ಯರ್ಥಿಗಳು ಭರಿಸುವ ಶುಲ್ಕದಲ್ಲಿ ತಮ್ಮ ತರಬೇತಿ ತರಗತಿಗಳನ್ನು ನಡೆಸುವ ಪ್ರದೀಪ್ ಈಶ್ವರ್ ಅವರು, ಆ ಮೊತ್ತದಲ್ಲೇ ಸ್ವಲ್ಪ ಹಣವನ್ನು ಉಳಿಕೆ ಮಾಡಿ, ಉಚಿತ ತರಬೇತಿ ನೀಡುವ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ. ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡುವ ಈ ಯೋಜನೆಯನ್ನು ಸೂಪರ್ 60 ಎಂದು ಅವರು ಹೆಸರಿಸಿದ್ದು, ಈ ಯೋಜನೆಯ ಮೂಲಕ ವೈದ್ಯಕೀಯ ಸೀಟು ಪಡೆಯುವವರು ಖಂಡಿತವಾಗಿಯೂ ಜನರಿಗೆ ನಿಸ್ವಾರ್ಥ ಸೇವೆ ನೀಡುತ್ತಾರೆ ಎಂಬ ಭರವಸೆ ಹೊಂದಿದ್ದಾರೆ.
ಸೂಪರ್ 60
ಈ ಎಲ್ಲಾ ಜವಾಬ್ದಾರಿಗಳ ನಡುವೆಯೇ ಸುಮಾರು 60ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ, ಸೂಪರ್ 60 ಎಂಬ ಪರಿಕಲ್ಪನೆಯ ವ್ಯಾಪ್ತಿ
ಯಲ್ಲಿ, ಉಚಿತ ನೀಟ್ ತರಬೇತಿ ನೀಡುವ ಪ್ರದೀಪ್ ಈಶ್ವರ್ ಅವರ ಯೋಜನೆ ನಮ್ಮ ನಾಡಿಗೇ ಮಾದರಿ ಎನಿಸುತ್ತದೆ. ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ಸಹ ಇವರ ಸಂಸ್ಥೆಯಲ್ಲಿ ತರಬೇತಿ ಪಡೆದು, ಇಂದು ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು, ವೈದ್ಯಕೀಯ ಪದವಿ ಅಧ್ಯಯನ ಮಾಡಲು ಅರ್ಹತೆ ಪಡೆದಿರುವ ವಿಚಾರ ಬಹು ಮುಖ್ಯ ಎನಿಸುತ್ತದೆ.
ಕಳೆದ ಎರಡು ವರ್ಷಗಳಲ್ಲಿ ಸುಮಾರು 70 ಅಭ್ಯರ್ಥಿಗಳು ಸೂಪರ್ 60 ಉಚಿತ ತರಬೇತಿ ಪಡೆದು, ನೀಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. 2020ರ ಮಾರ್ಚ್‌ನಲ್ಲಿ ಇಡೀ ದೇಶವನ್ನು ಕಾಡಿದ ಕೋವಿಡ್-19 ಸೋಂಕಿನ ಭಯ ಮತ್ತು ಲಾಕ್‌ಡೌನ್
ನಿಂದಾಗಿ, ಪರಿಶ್ರಮ ಆಕಾಡೆಮಿಯಲ್ಲಿ ತರಬೇತಿ ಹೊಂದುವ ಅಭ್ಯರ್ಥಿಗಳಿಗೂ ತೊಡಕು ಉಂಟಾಯಿತು. ಆದ್ದರಿಂದ, ಸೂಪರ್
60 ಅಭ್ಯರ್ಥಿಗಳ ಆಯ್ಕೆಯಲ್ಲಿ ತುಸು ತಾತ್ಕಾಲಿಕ ಹಿನ್ನಡೆ ಆಗಿದ್ದು, ಮುಂದಿನ ಬಾರಿಯಿಂದ ಇನ್ನಷ್ಟು ಅರ್ಹ ಬಡ ಅಭ್ಯರ್ಥಿ ಗಳಿಗೆ ಉಚಿತ ತರಬೇತಿ ನೀಡಲು ಸನ್ನದ್ಧರಾಗಿದ್ದಾರೆ ಪ್ರದೀಪ್ ಈಶ್ವರ್.
ಈ ರೀತಿ, ಆಯ್ದ ಅರ್ಹ ಅಭ್ಯರ್ಥಿಗಳಿಗೆ ಉಚಿತ ನೀಟ ತರಬೇತಿ ನೀಡಲು ಸ್ಫೂರ್ತಿ ಎಲ್ಲಿಂದ ಎಂದು ಕೇಳಿದಾಗ ಪ್ರದೀಪ್ ಈಶ್ವರ್ ಅವರು ನೀಡಿದ ಉತ್ತರ, ಅವರ ಕಾಳಜಿಯನ್ನು ವ್ಯಕ್ತಪಡಿಸುವಂತಿತ್ತು. ‘ಇಂದು ವೈದ್ಯಕೀಯ ಪದವಿ ಪಡೆಯುವುದು ಎಂದರೆ, ದೊಡ್ಡ ಮೊತ್ತದ ಹಣವನ್ನು ವೆಚ್ಚ ಮಾಡುವ ಸ್ಥಿತಿ ಇದೆ. ಈ ಒಂದು ಸನ್ನಿವೇಶದಲ್ಲಿ, ಆರ್ಥಿಕವಾಗಿ ದುರ್ಬಲರಾದವರು, ನೀಟ್ ಪರೀಕ್ಷೆಯನ್ನು ಪಾಸು ಮಾಡುವುದೇ ಕಠಿಣ ಎನ್ನುವ ಪರಿಸ್ಥಿತಿಯನ್ನು ನಾನು ನೋಡಿದೆ. ಉತ್ತಮ ಅಭ್ಯರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಿ, ಅವರನ್ನು ವೈದ್ಯಕೀಯ ಶಿಕ್ಷಣಕ್ಕೆ ತೊಡಗಿಸಿದರೆ, ಅವರು ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಜನರಿಗೆ ಸೇವೆ ಮಾಡಬಲ್ಲರು ಎಂದು ಯೋಚಿಸಿದೆ. ತಮ್ಮ ಜೀವನಕ್ಕೆ ತಕ್ಕಷ್ಟು ಆದಾಯ ಗಳಿಸುತ್ತಾ, ಅತಿ ಹೆಚ್ಚಿನ ಹಣಕ್ಕಾಗಿ ಆಸೆ ಪಡದೇ, ನಿಸ್ವಾರ್ಥ ಸೇವೆಯನ್ನು ಅಂತಹ ವೈದ್ಯರಿಂದ ನಿರೀಕ್ಷಿಸಬಹುದು.
ನಮ್ಮ ಸಂಸ್ಥೆಯಲ್ಲಿ ತರಬೇತಿ ನೀಡಿ, ಸರಕಾರಿ ಸೀಟು ಗಳಿಸಿದ ಅಭ್ಯರ್ಥಿಗಳು ಇದನ್ನೇ ನನಗೆ ಹೇಳಿದರು. ತಾವು ಎಲ್ಲಿ ಬೇಕಾ
ದರೂ ಸೇವೆ ಸಲ್ಲಿಸಲು ಸಿದ್ಧ ಎಂದು. ಒಬ್ಬ ಅಭ್ಯರ್ಥಿಯಂತೂ, ತನ್ನ ಕ್ಲಿನಿಕ್‌ಗೆ ನನ್ನ ಹೆಸರನ್ನಿಟ್ಟು, ಬಡಜನರ ಸೇವೆ
ಮಾಡುವುದಾಗಿ ಹೇಳಿದ್ದಾನೆ. ಉಚಿತ ತರಬೇತಿ ನೀಡಿದ ನನಗೆ ಇದಕ್ಕಿಂತ ಇನ್ನೇನು ಹೆಚ್ಚಿನ ಸರ್ಟಿಫಿಕೇಟ್ ಬೇಕು. ಆದ್ದರಿಂದಲೇ, ಪ್ರತಿ ವರ್ಷ ಇನ್ನಷ್ಟು ಹೆಚ್ಚಿನ ಅರ್ಹ ಅಭ್ಯರ್ಥಿಗಳಿಗೆ ಉಚಿತ ನೀಟ್ ತರಬೇತಿ ನೀಡಲು ನಿರ್ಧರಿಸಿದ್ದೇನೆ’ ಎನ್ನುವಾಗ ಪ್ರದೀಪ್ ಈಶ್ವರ್ ಅವರ ಕಂಗಳಲ್ಲಿ ಹೊಳಪು ಕಾಣುತ್ತಿತ್ತು.
ಪ್ರದೀಪ್ ಈಶ್ವರ್ ಅವರು ತಮ್ಮಲ್ಲಿ ಅಧ್ಯಯನ ಮಾಡುವ ಅಭ್ಯರ್ಥಿಗಳಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಹಿಂದೆ ಬಿದ್ದಿಲ್ಲ. ಕೆಂಗೇರಿ ಬಳಿಯ ಬಿಜಿಎಸ್ ಆಸ್ಪತ್ರೆ ಸನಿಹದಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ವಸತಿ ಮತ್ತು ತರಗತಿಗಳನ್ನು ನಡೆಸಿದರೆ, ಪುರುಷ ಅಭ್ಯರ್ಥಿಗಳಿಗೆ ಬೆಂಗಳೂರು ಹೊರ ವಲಯದ ರಾಮೋಹಳ್ಳಿಯಲ್ಲಿ ಸೌಲಭ್ಯ ಕಲ್ಪಿಸಿದ್ದಾರೆ. ಎಲ್ಲಾ ವಲಯದ ಅಭ್ಯರ್ಥಿಗಳು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ನೀಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ವೈದ್ಯರಾಗಿ ಸೇವೆ ಸಲ್ಲಿಸಬೇಕು ಎಂಬುದೇ ತನ್ನ ಅಭಿಲಾಷೆ ಎನ್ನುತ್ತಾರೆ ಪ್ರದೀಪ್ ಈಶ್ವರ್. ಸಂಪರ್ಕ:6360967043
***
ಇಂದು ವೈದ್ಯಕೀಯ ಪದವಿ ಪಡೆಯುವುದು ಎಂದರೆ, ದೊಡ್ಡ ಮೊತ್ತದ ಹಣವನ್ನು ವೆಚ್ಚ ಮಾಡುವ ಸ್ಥಿತಿ ಇದೆ. ಈ ಒಂದು
ಸನ್ನಿವೇಶದಲ್ಲಿ, ಆರ್ಥಿಕವಾಗಿ ದುರ್ಬಲರಾದವರು, ನೀಟ್ ಪರೀಕ್ಷೆಯನ್ನು ಪಾಸು ಮಾಡುವುದೇ ಕಠಿಣ ಎನ್ನುವ ಪರಿಸ್ಥಿತಿ ಯನ್ನು ನಾನು ನೋಡಿದೆ. ಅರ್ಹ ಅಭ್ಯರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಿ, ಅವರನ್ನು ವೈದ್ಯಕೀಯ ಶಿಕ್ಷಣಕ್ಕೆ ತೊಡಗಿಸಿದರೆ,
ಅವರು ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಜನರಿಗೆ ನಿಸ್ವಾರ್ಥ ಸೇವೆ ಮಾಡಬಲ್ಲರು.
– ಪ್ರದೀಪ್ ಈಶ್ವರ್
ಸೂಪರ್ 60 ಯಶಿಕಾ
ನೆಲಮಂಗಲದ ಯಶಿಕಾ ಅವರ ಪೋಷಕರು ಮಧ್ಯಮ ವರ್ಗದ ಕುಟುಂಬ. ಗಾರ್ಮೆಂಟ್ ಕೆಲಸವೇ ಅವರ ಮುಖ್ಯ ಉದ್ಯೋಗ. ತನ್ನ ಪ್ರತಿಭೆ ಮತ್ತು ಅಂಕಗಳಿಂದ ಸೂಪರ್ 60 ತರಬೇತಿಗೆ ಆಯ್ಕೆಯಾದ ಯಶಿಕಾ, ಗಮನವಿಟ್ಟು ಪಠ್ಯಕ್ರಮವನ್ನು ಅಧ್ಯಯನ ಮಾಡಿ ಉತ್ತಮ ಅಂಕಗಳನ್ನು ಗಳಿಸಿದ್ದಾರೆ ಮಾತ್ರವಲ್ಲ, ಇಂದು ಎಐಐಎಂಎಸ್‌ನಲ್ಲಿ ಪದವಿ ಪಡೆಯುವ ಅರ್ಹತೆ ಪಡೆದಿ ದ್ದಾರೆ. ಪರಿಶ್ರಮ ಅಕಾಡೆಮಿಯ ಉಚಿತ ತರಬೇತಿಯೇ ತನ್ನ ಈ ಯಶಸ್ಸಿಗೆ ಕಾರಣ ಎನ್ನುತ್ತಾರೆ ಯಶಿಕಾ.
ಸ್ವತಃ ಲೇಖಕರೂ ಹೌದು
ಪ್ರದೀಪ್ ಈಶ್ವರ್ ಅವರು ಸ್ವತಃ ಲೇಖಕರೂ ಹೌದು. ಮೂಲತಃ ಚಿಕ್ಕಬಳ್ಳಾಪುರ ಹತ್ತಿರದ ಪೆರೆಸಂದ್ರದವರಾ ಪ್ರದೀಪ್ ಅವರಿಗೆ ಮೊದಲಿನಿಂದಲೂ ಬರೆಯುವ ಆಸಕ್ತಿ. ‘ಲೈಫ್ ಈಸ್ ಬ್ಯೂಟಿಫುಲ್’ ಎಂಬ ಜನಪ್ರಿಯ ಪುಸ್ತಕವೂ ಸೇರಿದಂತೆ, ಒಟ್ಟು ಹತ್ತು ಪುಸ್ತಕಗಳನ್ನು ರಚಿಸಿದ್ದಾರೆ. ತುಮಕೂರಿನ ಸಿದ್ದಗಂಗಾ ಮಠದಲ್ಲಿ ಉಚಿತ ಶಿಕ್ಷಣ ಪಡೆದ ಪ್ರದೀಪ್ ಈಶ್ವರ್ ಅವರಿಗೆ, ತಾನು ಸಮಾಜದ ಋಣ ಹಿಂದಿರುಗಿಸಬೇಕು ಎಂಬ ತುಡಿತ. ಆ ತುಡಿದ ಒಂದು ಭಾಗವಾಗಿ, ಈಗ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಟ್ ತರಬೇತಿ ನೀಡುತ್ತಿದ್ದಾರೆ, ಹಲವರು ವೈದ್ಯಕೀಯ ಪದವಿ ಪ್ರವೇಶ ಪಡೆಯಲು ಸಹಾಯ ಮಾಡಿದ್ದಾರೆ.
ಸೂಪರ್ 60 ಚಂದನ್
ಚಂದನ್ ಎಂಬ ಪ್ರತಿಭಾವಂತ ಅಭ್ಯರ್ಥಿ ಮಂಡ್ಯ ಸೀಮೆಯವರು. ಆರ್ಥಿಕವಾಗಿ ಅಷ್ಟೇನೂ ಸಬಲರಲ್ಲದ ಇವರು, ಪರಿಶ್ರಮ ಅಕಾಡೆಮಿಯಲ್ಲಿ ಸೂಪರ್ 60 ನೀಟ್ ತರಬೇತಿಗೆ ಆಯ್ಕೆಯಾದರು. ಸಂಪೂರ್ಣ ಉಚಿತ ತರಬೇತಿ ಪಡೆಯುತ್ತಿರುವ ವೇಳೆಯಲ್ಲಿ,
ಮಂಡ್ಯಕ್ಕೆ ಹೋಗುವಾಗ, ಆಕಸ್ಮಿಕವಾಗಿ ರೈಲಿನಿಂದ ಬಿದ್ದ ಗಾಯಾಳುವಾದರು. ಪರಿಶ್ರಮ ಅಕಾಡೆಮಿಯ ಪ್ರದೀಪ್ ಈಶ್ವರ್ ಅವರು ತಮ್ಮ ಸ್ವಂತ ವೆಚ್ಚದಲ್ಲಿ ಚಂದನ್‌ಗೆ ಚಿಕಿತ್ಸೆ ಕೊಡಿಸಿದ್ದರ ಜತೆಯಲ್ಲೇ, ವಿಶೇಷ ತರಬೇತಿಯನ್ನೂ ನೀಡಿದರು. ಅವರು ನೀಟ್ ಪರೀಕ್ಷೆಯನ್ನು ಉತ್ತಮ ಅಂಕಗಳಲ್ಲಿ ತೇರ್ಗಡೆ ಹೊಂದಿ, ಇಂದು ಸರಕಾರಿ ಕೋಟಾದಲ್ಲಿ ವೈದ್ಯಕೀಯ ಸೀಟು ಪಡೆಯುವು ದರಲ್ಲಿದ್ದಾರೆ.
ಪರಿಶ್ರಮ ನೀಟ್ ಅಕಾಡೆಮಿ
ವೈದ್ಯಕೀಯ ಪದವಿಗೆ ಪ್ರವೇಶ ಪಡೆಯಲು ಇಂದು ನೀಟ್ (ಎನ್‌ಇಇಟಿ) ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವುದು ಅತಿ ಮುಖ್ಯ. ಇದನ್ನು ಗುರುತಿಸಿದ ಪ್ರದೀಪ್ ಈಶ್ವರ್ ಅವರು ತಮ್ಮ ಪರಿಶ್ರಮ ಅಕಾಡೆಮಿಯ ಮೂಲಕ ನೂರಾರು ಅಭ್ಯರ್ಥಿಗಳಿಗೆ ಪ್ರತಿವರ್ಷ ತರಬೇತಿ ನೀಡುತ್ತಿದ್ದಾರೆ. ಜತೆಯಲ್ಲೇ ಸೂಪರ್ 60 ಎಂಬ ಮಾನದಂಡದಲ್ಲಿ, 60 ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಅವರಿಗೆ ಉಚಿತ ತರಬೇತಿ ನೀಡುತ್ತಿದ್ದಾರೆ. ಈ ರೀತಿ ಉಚಿತ ತರಬೇತಿ ಪಡೆದ ಹಲವರು ಇಂದು ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ, ವೈದ್ಯಕೀಯ ಪದವಿಗೆ ಪ್ರವೇಶ ಪಡೆದಿದ್ದಾರೆ.
ನೀಟ್ ಯಶಸ್ಸಿನ ರಹಸ್ಯ
ಪ್ರದೀಪ್ ಈಶ್ವರ್ ಅವರು ಅಭ್ಯರ್ಥಿಗಳಿಗೆ ನೀಡುವ ಸಲಹೆ ಸರಳ ಮತ್ತು ನೇರ. ಅದೇ ಸಲಹೆಯು ನೀಟ್ ಪರೀಕ್ಷೆೆಯಲ್ಲಿ ಹೆಚ್ಚಿನ ಅಂಕ ಗಳಿಸಲು ಸಹಾಯ ಮಾಡುತ್ತದೆ! ನೀಟ್ ಪರೀಕ್ಷೆಯಲ್ಲಿ ಜೀವಶಾಸ್ತ್ರ ವಿಷಯದಲ್ಲಿ 360 ಅಂಕಗಳಿದ್ದು, 90 ಪ್ರಶ್ನೆಗಳಿರು ತ್ತವೆ. ಅದರಲ್ಲಿ ಹೆಚ್ಚಿನ ಅಂಕ ಗಳಿಸಲು ಮತ್ತು ಆ ವಿಷಯವನ್ನು ಅಧ್ಯಯನ ಮಾಡಲು ಒತ್ತು ನೀಡಬೇಕು. ಇದರ ಜತೆ, ಭೌತ ಶಾಸ್ತ್ರದಲ್ಲಿ 45 ಪ್ರಶ್ನೆ, ರಸಾಯನ ಶಾಸ್ತ್ರದಲ್ಲೂ 45 ಪ್ರಶ್ನೆ (ತಲಾ 180 ಅಂಕಗಳು). ಇವೆರಡರಲ್ಲೂ ಉತ್ತಮ ಸಾಧನೆ ಮಾಡಿ, ಜೀವಶಾಸ್ತ್ರದಲ್ಲಿ ಹೆಚ್ಚಿನ ಅಧ್ಯಯನ ನಡೆಸಿದರೆ, ನೀಟ್ ಪರೀಕ್ಷೆೆಯಲ್ಲಿ ಯಶಸ್ಸು ಗಳಿಸಬೇಕೆಂಬುದು ಪ್ರದೀಪ್ ಈಶ್ವರ್ ಅವರ ಸಲಹೆ.