Thursday, 31st October 2024

Hasanamba Temple: ಹಾಸನಾಂಬೆ ದರ್ಶನಕ್ಕೆ ಭಕ್ತರ ಮಹಾಪೂರ, ಗದ್ದಲ, ವಿಐಪಿ ಪಾಸ್-‌ ವಿಶೇಷ ಬಸ್‌ ರದ್ದು

hasanamba temple

ಹಾಸನ: ಹಾಸನದ ಹಾಸನಾಂಬಾ ದೇಗುಲದಲ್ಲಿ (hasanamba temple) ದೇವಿಯ ದರ್ಶನಕ್ಕೆ (hasanamba darshan) ಭಾರಿ ಸಂಖ್ಯೆಯಲ್ಲಿ ಜನ ಮುಗಿಬಿದ್ದಿದ್ದಾರೆ. ದರ್ಶನಕ್ಕೆ ಇನ್ನು ಕೆಲವೇ ದಿನಗಳು ಅವಕಾಶವಿದ್ದು, ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ದೇಗುಲಕ್ಕೆ (Hasan news) ಆಗಮಿಸುತ್ತಿದ್ದಾರೆ. ಗುರುವಾರ ಸಹ ಭಾರೀ ಸಂಖ್ಯೆಯಲ್ಲಿ ಭಕ್ತರು ಬಂದಿದ್ದು, ನಿಯಂತ್ರಣ ಮಾಡಲಾಗದೆ ಸಿಬ್ಬಂದಿ ಪರದಾಡಿದರು.

ಈ ನಡುವೆ, ಜನಜಂಗುಳಿ ನಿಯಂತ್ರಿಸಲಾಗದ ಹಿನ್ನೆಲೆಯಲ್ಲಿ 1000 ರೂ. ಮೊತ್ತದ ನೇರ ವಿಶೇಷ ದರ್ಶನದ ಟಿಕೆಟ್ ವಿತರಣೆ, ವಿಐಪಿ ಪಾಸ್ ರದ್ದುಗೊಳಿಸಲಾಗಿದೆ. ಜತೆಗೆ, ಹಾಸನಾಂಬೆ ದರ್ಶನಕ್ಕೆ ಬಿಟ್ಟಿದ್ದ 500 ವಿಶೇಷ ಬಸ್​ಗಳ ಸಂಚಾರವನ್ನೂ ರದ್ದುಗೊಳಿಸಲಾಗಿದೆ. ಬೆಂಗಳೂರು ಸೇರಿ ವಿವಿಧೆಡೆಯಿಂದ ಹಾಸನಾಂಬೆ ದರ್ಶನಕ್ಕೆಂದು ಹೊರಡಲು ಅನುವಾಗಿದ್ದ 500 ವಿಶೇಷ ಬಸ್​ಗಳ ಸಂಚಾರವನ್ನೂ ರದ್ದುಗೊಳಿಸಲಾಗಿದೆ.

ಗುರುವಾರ ಬೆಳಗ್ಗೆಯಿಂದಲೇ ನಿರೀಕ್ಷೆಗೂ ಮೀರಿ ಭಕ್ತಸಾಗರವೇ ಹರಿದುಬರುತ್ತಿದೆ. ಜನರ ನಿಯಂತ್ರಕ್ಕೆ ಮೂವರು ಎಸ್​​ಪಿಗಳು ಪರದಾಡುವಂತಾಗಿದೆ. ಹಾಸನ ಎಸ್​​ಪಿ ಮಹಮ್ಮದ್ ಸುಜೀತಾ, ಕೊಡಗು ಎಸ್​ಪಿ ಹಾಗೂ ಮಂಡ್ಯ ಎಸ್​ಪಿಗಳು ಜನರ ನಿಯಂತ್ರಣಕ್ಕೆ ಪರದಾಡಿದ್ದಾರೆ. ಹಾಸನದ ಹಾಸನಾಂಬೆ ದೇವಿ ದರ್ಶನದ ಎಲ್ಲ ವಿಐಪಿ ಪಾಸ್​ಗಳನ್ನು ಹಾಸನಾಂಬೆ ದೇಗುಲ ಆಡಳಿತ ಮಂಡಳಿ ರದ್ದುಗೊಳಿಸಿದೆ. ಈಗಾಗಲೇ ಸರತಿ ಸಾಲಿನಲ್ಲಿ ನಿಂತಿರುವ ಭಕ್ತರನ್ನು ಹೊರತುಪಡಿಸಿ ಉಳಿದವರಿಗೆ ವಿಐಪಿ ಪಾಸ್ ಮೂಲಕ ಒಳಪ್ರವೇಶಕ್ಕೆ ಅವಕಾಶ ಇಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಲಕ್ಷಾಂತರ ಪಾಸ್ ಹಂಚಿಕೆ ಮಾಡಲಾಗಿದೆ. ವಿವಿಐಪಿ ಪಾಸ್ ಪಡೆದು ನೇರ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಬಂದಿದ್ದಾರೆ. ಹಾಸನಾಂಬೆ ದೇವಾಲಯ ಆಡಳಿತ ಮಂಡಳಿಯ ಅವೈಜ್ಞಾನಿಕ ನಡೆಯಿಂದ ಈಗ ಅಧಿಕಾರಿಗಳು, ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಐಪಿ ಪಾಸ್ ಹಾಗೂ ವಿಶೇಷ ದರ್ಶನ ಟಿಕೆಟ್ ಪಡೆದು ಬಂದಿರುವ ಲಕ್ಷಾಂತರ ಮಂದಿ, ‘ಪಾಸ್ ಇದೆ, ಒಳಗೆ ಬಿಡಿ’ ಎಂದು ಪೊಲೀಸರ ಜೊತೆ ವಾಗ್ವಾದ ಮಾಡುತ್ತಿದ್ದಾರೆ. ಜಿಲ್ಲಾಡಳಿತದ ಅವ್ಯವಸ್ಥೆಗೆ ಜನರು ಹೈರಾಣಾಗಿದ್ದು, ಆರೇಳು ಗಂಟೆ ಕಳೆದರೂ ದರ್ಶನ ಸಿಗದೆ ಜನರು ರೊಚ್ಚಿಗೆದ್ದಿದ್ದಾರೆ.