Thursday, 26th December 2024

Vishwavani Editorial: ಹಬ್ಬಗಳಲ್ಲೇ ಬರೆ ಬೀಳುವುದೇಕೆ?

ಬೆಳಕಿನ ಹಬ್ಬ ದೀಪಾವಳಿಯ ಈ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಹೂವು-ಹಣ್ಣು, ತರಕಾರಿ ಹಾಗೂ ಪೂಜಾ ಸಾಮಗ್ರಿಗಳ ಬೆಲೆ ಮುಗಿಲು ಮುಟ್ಟಿರುವುದರ ಬಗೆಗಿನ ವರದಿಗಳನ್ನು ನೀವು ಈಗಾಗಲೇ ಓದಿರಬಹುದು. ಬೇಡಿಕೆ ಮತ್ತು ಪೂರೈಕೆಗಳ ನಡುವಿನ ಅಂತರ ಹೆಚ್ಚಾದಾಗ, ಅಥವಾ ಉತ್ಪಾದನೆಯಲ್ಲಿನ ಕುಸಿತದಿಂದಾಗಿ ನಿರ್ದಿಷ್ಟ ಪದಾರ್ಥದ ತೀವ್ರ ಕೊರತೆ ತಲೆದೋರಿದಾಗ ಮಾರುಕಟ್ಟೆಯಲ್ಲಿ ಅಂಥ ವಸ್ತುಗಳ ಬೆಲೆಯೇರಿಕೆ ಕಂಡುಬರುವುದು ವಾಡಿಕೆ. ಆದರೆ, ಇಂಥ ಯಾವ ಸಮಸ್ಯೆ ಇಲ್ಲದಿರುವಾಗಲೂ, ಹಬ್ಬ-ಹರಿದಿನ ಬರುತ್ತಿದ್ದಂತೆ ಉತ್ಪನ್ನಗಳ ಬೆಲೆಯೇರಿಕೆಯಾಗುವುದೇಕೆ ಎಂಬುದು ಶ್ರೀಸಾಮಾನ್ಯರ ಪ್ರಶ್ನೆ.

ಉದಾಹರಣೆಗೆ, ಕೆಲ ದಿನಗಳ ಹಿಂದಷ್ಟೇ ಒಂದು ಕೆ.ಜಿ. ಸೇವಂತಿಗೆ ಹೂವಿನ ಬೆಲೆ 150 ರುಪಾಯಿ ಇದ್ದುದು, ಹಬ್ಬ ಬರುತ್ತಿದ್ದಂತೆ 250 ರುಪಾಯಿಗೆ ಜಿಗಿದುಬಿಡುತ್ತದೆ. ಇದು ನಿಜಕ್ಕೂ ಪವಾಡವಲ್ಲವೇ? ಇಂಥ ‘ಕೃತಕ’ ಬೆಲೆಯೇರಿಕೆಗೆ ಕಾರಣರಾರು? ಹೂವು, ಹಣ್ಣು, ತರಕಾರಿ ಸೇರಿದಂತೆ ಯಾವುದೇ ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿ ಕಾಲಾನುಕಾಲಕ್ಕೆ ಗ್ರಾಹಕರ ಬೇಡಿಕೆಯಲ್ಲಿ ಮತ್ತು ಅವುಗಳ ಮಾರಾಟ ಬೆಲೆಯಲ್ಲಿ ಹೆಚ್ಚಳವಾದರೆ ಕೃಷಿಕರಿಗೆ ನಾಲ್ಕು ಕಾಸು ಹೆಚ್ಚು ಸಂಪಾದನೆಯಾದರೂ ಆಗುತ್ತದೆ ಅಂತ ಸಮಾಧಾನಪಟ್ಟುಕೊಳ್ಳೋಣ
ಎಂದರೆ, ಇಲ್ಲಿ ಬಹುತೇಕ ಅಂತ ದೃಶ್ಯ ಕಂಡುಬರುವುದು ಕಮ್ಮಿ.

ಏಕೆಂದರೆ, ಇಲ್ಲಿ ಪ್ರಯೋಜನ ಪಡೆಯುವುದು ಕೃಷಿ ಉತ್ಪನ್ನಗಳನ್ನು ಬೆಳೆದ ರೈತರೂ ಅಲ್ಲ, ಅವನ್ನು ಖರೀದಿಸುವ ಗ್ರಾಹಕರೂ ಅಲ್ಲ; ಬದಲಿಗೆ ಅವನ್ನು ಕೈಬದಲು ಮಾಡಿ ದುಡ್ಡನ್ನು ಗಂಟುಮಾಡಿಕೊಳ್ಳುವ ಮಧ್ಯವರ್ತಿಗಳು! ಪದಾರ್ಥಗಳ ಕೃತಕ ಬೆಲೆಯೇರಿಕೆಗೆ ಕಾರಣವಾಗಿರುವ ಅಂಶಗಳಲ್ಲಿ ಇವರೂ ಸೇರಿಕೊಂಡಿದ್ದಾರೆ ಎಂಬುದು ಗಂಭೀರವಾಗಿ ಆಲೋಚಿಸಬೇಕಾದ ಸಂಗತಿ. ಹಬ್ಬ-ಹರಿದಿನ ಬಂದಾಗ ಗ್ರಾಹಕರು ಸಾಮಾನ್ಯವಾಗಿ ಚೌಕಾಸಿ ಮಾಡುವುದಿಲ್ಲ; ದೇವರ ಮೇಲಿನ ಶ್ರದ್ಧಾಭಕ್ತಿಯಿಂದಾಗಿ ಹೆಚ್ಚು ಹಣ ತೆತ್ತಾದರೂ ಅವರು ಅಗತ್ಯ ವಸ್ತುಗಳನ್ನು ಖರೀದಿಸುತ್ತಾರೆ ಎಂಬುದು ಮಧ್ಯವರ್ತಿಗಳಿಗೂ ಗೊತ್ತಿದೆ.

ಹೀಗಾಗಿ ಅವರಾಡಿದ್ದೇ ಆಟ. ಆದರೆ ಇಂಥ ಅತಿರೇಕದ ಬೆಲೆಯೇರಿಕೆಗೆ ಲಗಾಮು ಹಾಕುವುದಕ್ಕೆ ಆಳುಗ ವ್ಯವಸ್ಥೆಗೆ ಸಾಧ್ಯವೇ ಇಲ್ಲವೇ ಎಂಬುದು ಶ್ರೀಸಾಮಾನ್ಯರ ಪ್ರಶ್ನೆ.

ಇದನ್ನೂ ಓದಿ: Vishwavani Editorial: ತಮಸೋಮಾ ಜ್ಯೋತಿರ್ಗಮಯ