Wednesday, 27th November 2024

Justin Trudeau : ರಾಜತಾಂತ್ರಿಕತೆಯ ಬಿಕ್ಕಟ್ಟಿನ ಮಧ್ಯೆಯೇ ದೀಪಾವಳಿ ಆಚರಿಸಿದ ಜಸ್ಟಿನ್ ಟ್ರುಡೊ, ಹಿಂದೂ ದೇವಾಲಯಗಳಿಗೂ ಭೇಟಿ

Justin Trudeau

ಒಟ್ಟಾವಾ: ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ಮಧ್ಯೆ, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಅವರು ಭಾನುವಾರ ಇಂಡೋ-ಕೆನಡಿಯನ್ (Indo-Canadian community) ಸಮುದಾಯದೊಂದಿಗೆ ದೀಪಾವಳಿಯನ್ನು(Deepavali) ಆಚರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದೀಪಾವಳಿ ಆಚರಣೆಯ ವಿಡಿಯೋವನ್ನು ಹಂಚಿಕೊಂಡ ಟ್ರುಡೋ ದೀಪಾವಳಿ ಹಬ್ಬದ ಶುಭಾಶಯಗಳು. ಹಬ್ಬವನ್ನು ಆಚರಿಸಿ ಖುಷಿಯಾಯಿತು ಎಂದು ಹೇಳಿದ್ದಾರೆ.

ಹಿಂದೂ ದೇವಾಲಯಗಳಿಗೆ ಭೇಟಿ ನೀಡಿದ ಕೆನಡಾ ಪ್ರಧಾನಿ

ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ ತಾನು ಇದೇ ತಿಂಗಳಲ್ಲಿ ಮೂರು ಹಿಂದೂ ದೇವಾಲಯಕ್ಕೆ ಭೇಟಿ ನೀಡಿರುವುದಾಗಿ ಹೇಳಿದ್ದಾರೆ. ಅವರು ತಮ್ಮ ಕೈಗೆ ಕಟ್ಟಿದ್ದ ಪವಿತ್ರ ದಾರವನ್ನು ವಿಡಿಯೋದಲ್ಲಿ ಪ್ರದರ್ಶಿಸಿದ್ದಾರೆ. ಹಾಗೂ ಅದನ್ನು ಅದೃಷ್ಟ ಮತ್ತು ರಕ್ಷಣೆಯ ಸಂಕೇತವೆಂದು ಕರೆದಿದ್ದಾರೆ. ಇವನ್ನು ನಾನು ಧರಿಸಿದ್ದು , ಅದಾಗಿಯೇ ಕಳಚಿ ಬೀಳುವವರೆಗೆ ನಾನದನ್ನು ತೆಗೆಯುವುದಿಲ್ಲ ಎಂದು ಹೇಳಿದ್ದಾರೆ. ಭಾರತೀಯ ಸಮುದಾಯದೊಂದಿಗೆ ದೀಪಾವಳಿ ಆಚರಿಸಿದ ಟ್ರುಡೋ ಭಾರತೀಯ ಸಹಿ ತಿನಿಸಾದ ಜಿಲೇಬಿಯನ್ನು ಸವಿಯುತ್ತಾ ಇತರರಿಗೂ ಉಳಿಸಬೇಕು ಅಲ್ಲವೇ ಎಂದು ತಮಾಷೆ ಮಾಡಿದರು.

ಇನ್ನು ಟ್ರೂಡೊ ಅಕ್ಟೋಬರ್ 31 ರಂದು ದೀಪಾವಳಿ ಶುಭಾಶಯಗಳನ್ನು ಸಲ್ಲಿಸಿದ್ದರು. ತಮ್ಮ ಸಂದೇಶದಲ್ಲಿ ಇಂಡೋ-ಕೆನಡಿಯನ್ ಸಮುದಾಯವನ್ನು ಶ್ಲಾಘಿಸಿದ್ದರು. ಕೆನಡಾದಲ್ಲಿ ಕಲಾವಿದರು, ಉದ್ಯಮಿಗಳು, ವೈದ್ಯರು, ಶಿಕ್ಷಣತಜ್ಞರು ಮತ್ತು ನಾಯಕರಾಗಿ ಇಂಡೋ ಕೆನಡಿಯನ್‌ ಸಮುದಾಯವಿದೆ. ಅವರ ಪಾತ್ರ ಮಹತ್ವದ್ದು ಅವರಿಲ್ಲದೆ ಕೆನಡಾದಲ್ಲಿ ದೀಪಾವಳಿ ಸಾಧ್ಯವಿಲ್ಲ ಎಂದು ಹೇಳಿದ್ದರು. ಕೆನಡಾದ ಸಮಾಜಕ್ಕೆ ಇಂಡೋ-ಕೆನಡಿಯನ್‌ರ ಕೊಡುಗೆಗಳನ್ನು ಕೊಂಡಾಡಿದ್ದರು. ಕೆನಡಾ ಯಾವಾಗಲೂ ಬೇರೆ ಧರ್ಮವವನ್ನು ಗೌರವಿಸುತ್ತದೆ. ಇಂಡೋ ಕೆನಡಿಯನ್ ಸಮುದಾಯದ ಭದ್ರತೆ ಹಾಗೂ ಸುರಕ್ಷತೆ ನಮ್ಮ ಆದ್ಯ ಕರ್ತವ್ಯ. ಅವರು ತಮ್ಮ ಧರ್ಮವನ್ನು ಮುಕ್ತವಾಗಿ ಆಚರಿಸಬಹುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ Amit Shah: ಅಮಿತ್‌ ಶಾ ವಿರುದ್ಧದ ಕೆನಡಾ ಆರೋಪಕ್ಕೆ ಭಾರತ ಖಂಡನೆ; ಸಾಕ್ಷ್ಯಾಧಾರ ಇದ್ರೆ ಮಾತ್ರ ಮಾತನಾಡಿ ಎಂದು ಖಡಕ್‌ ಎಚ್ಚರಿಕೆ

ಭಾರತ ಕೆನಡಾ ರಾಜತಾಂತ್ರಿಕತೆ

2023ರ ಸೆಪ್ಟೆಂಬರ್‌ನಲ್ಲಿ ಹತ್ಯೆಯಾಗಿದ್ದಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಹಾಳಾಗಿದೆ. ಈ ಹತ್ಯೆಯನ್ನು ಖಂಡಿಸಿದ್ದ ಕೆನಡಾ ಪ್ರಧಾನಿ, ಹತ್ಯೆಯ ಹಿಂದೆ ಭಾರತದ ಏಜೆಂಟ್‌ ಕೈವಾಡವಿದೆ ಎಂದು ಹೇಳಿದ್ದರು. ಇತ್ತೀಚೆಗೆ ಕೆನಡಾದಲ್ಲಿರುವ ಸಿಖ್‌ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸಿಕೊಂಡು ಹಿಂಸಾಚಾರ ಕೈಗೊಳ್ಳಲು, ಬೆದರಿಕೆ ಹಾಕಲು ಮತ್ತು ಗುಪ್ತಚರ ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ಅಮಿತ್‌ ಶಾ ಆದೇಶಿಸಿದ್ದರು ಎಂದು ಕೆನಡಾದ ವಿದೇಶಾಂಗ ವ್ಯವಹಾರಗಳ ಉಪ ಸಚಿವ ಡೇವಿಡ್‌ ಮಾರಿಸನ್‌ ಆರೋಪಿಸಿದ್ದರು. ಆಧಾರ ರಹಿತ ಆರೋಪಗಳಿಗೆ ತಕ್ಕ ಉತ್ತರ ನೀಡಿರುವ ಭಾರತ ಕೆನಡಾಗೆ ಎಚ್ಚರಿಕೆ ನೀಡಿದೆ. ಭಾರತದಲ್ಲಿರುವ ಹಂಗಾಮಿ ಹೈಕಮಿನಷರ್ ಸೇರಿದಂತೆ ಕೆನಡಾದ ಆರು ರಾಜತಾಂತ್ರಿಕರನ್ನು ವಜಾಗೊಳಿಸಿ, ಶನಿವಾರದ ಒಳಗೆ ಜಾಗ ಖಾಲಿ ಮಾಡುವಂತೆ ಗಡುವು ನೀಡಿತ್ತು.