Friday, 22nd November 2024

Donald Trump: ಮತ್ತೆ ಅಧಿಕಾರಕ್ಕೆ ಬಂದ ಟ್ರಂಪ್‌; ಭಾರತದ ಮೇಲೇನು ಪ್ರಭಾವ?

Donald Trump

ವಾಷಿಂಗ್ಟನ್‌: ಜಗತ್ತೇ ಕುತೂಹಲದಿಂದ ಎದುರು ನೋಡುತ್ತಿದ್ದ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ದೊಡ್ಡಣ್ಣ ಅಮೆರಿಕದ ಅಧ್ಯಕ್ಷ ಪಟ್ಟ ಯಾರಿಗೆ ಎನ್ನುವುದು ಕುತೂಹಲ ತಣಿದಿದೆ. 2ನೇ ಬಾರಿಗೆ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ (Donald Trump) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ (US presidential Elections 2024). ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಆಯ್ಕೆಯಾಗುವುದರಿಂದ ಭಾರತಕ್ಕೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವ ಲೆಕ್ಕಾಚಾರ ಆರಂಭವಾಗಿದೆ.

ವ್ಯಾಪಾರ ನೀತಿಗಳ ಬಗ್ಗೆ ಟ್ರಂಪ್ ಅವರ ನಿಲುವನ್ನು ಪರಿಗಣಿಸಿ ಅವರ ನೇತೃತ್ವದ ಆಡಳಿತವು ಅಮೆರಿಕ ಕೇಂದ್ರಿತ ನೀತಿಗಳಿಗೆ ಆದ್ಯತೆ ನೀಡುವ ಸಾಧ್ಯತೆಯಿದೆ. ಸುಂಕವನ್ನು ಕಡಿಮೆ ಮಾಡಲು ಮತ್ತು ರಫ್ತು ನೀತಿಗಳನ್ನು ಬದಲಾಯಿಸಲು ಭಾರತದ ಮೇಲೆ ಒತ್ತಡ ಹೇರುವ ಸಾಧ್ಯತೆಯಿದೆ.

ಸೆಪ್ಟೆಂಬರ್‌ನಲ್ಲಿ ಟ್ರಂಪ್ ಆಮದು ಸುಂಕದ ವಿಷಯದಲ್ಲಿ ಭಾರತವನ್ನು ದುರುಪಯೋಗ ಮಾಡುವ ದೇಶ ಎಂದು ಟೀಕಿಸಿದರೂ, ಮೋದಿಯನ್ನು ಅದ್ಭುತ ವ್ಯಕ್ತಿ ಎಂದು ಹೊಗಳಿದ್ದರು. ಹೀಗಾಗಿ ಅಮೆರಿಕದ ಕಂಪೆನಿಗಳು ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಭಾರತದ ಪರವಾಗಿ ಕೆಲಸ ಮಾಡುವ ಸಾಧ್ಯತೆ ಇದೆ.

ಬ್ಲೂಮ್ಬರ್ಗ್ ಎಕನಾಮಿಕ್ಸ್ ಪ್ರಕಾರ ಡೊನಾಲ್ಡ್ ಟ್ರಂಪ್ ಅವರ ಪ್ರಸ್ತಾವಿತ ಸುಂಕ ಹೆಚ್ಚಳವು ಭಾರತದ ಆರ್ಥಿಕತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಟ್ರಂಪ್ ಚೀನಾದ ಉತ್ಪನ್ನಗಳ ಮೇಲೆ ಶೇ. 60 ಮತ್ತು ಇತರರ ಮೇಲೆ ಶೇ. 20ರಷ್ಟು ಸುಂಕವನ್ನು ಅನುಸರಿಸಿದರೆ 2028ರ ವೇಳೆಗೆ ಜಿಡಿಪಿ ಶೇ. 0.1 ಕಡಿಮೆಯಾಗುತ್ತದೆ ಎಂದು ಅಂದಾಜಿಸಿದೆ.

ಎಚ್‌-1ಬಿ ವೀಸಾ (H-1B visa)

ಎಚ್-1ಬಿ ವೀಸಾವನ್ನು ಅಮೆರಿಕದ ವಿಶೇಷ ಕ್ಷೇತ್ರಗಳಾದ ಐಟಿ, ಎಂಜಿನಿಯರಿಂಗ್ ಮತ್ತು ಹಣಕಾಸು ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಕೌಶಲಭರಿತ ವಿದೇಶೀ ಉದ್ಯೋಗಿಗಳಿಗೆ ನೀಡಲಾಗುತ್ತದೆ. ಇದರ ಮೂಲಕ ಅಮೆರಿಕದಲ್ಲಿರುವ ಕಂಪೆನಿಗಳು ನಿರ್ದಿಷ್ಟ ಪ್ರಮಾಣದ ಪ್ರಾವೀಣ್ಯತೆ ಅಗತ್ಯವಿರುವ ಉದ್ಯೋಗಗಳಿಗೆ ವಿದೇಶಿ ಪ್ರತಿಭೆಗಳನ್ನು ನೇಮಕ ಮಾಡಿಕೊಳ್ಳುತ್ತದೆ. ಹೀಗಾಗಿ ಅಮೆರಿಕದಲ್ಲಿ ಭಾರತೀಯ ಉದ್ಯೋಗಿಗಳಿಗೆ ಅಥವಾ ಅಮೆರಿಕಕ್ಕೆ ಹೋಗಲು ಬಯಸುವವರಿಗೆ ಎಚ್ 1-ಬಿ ವೀಸಾ ಪ್ರಮುಖವಾಗುತ್ತದೆ. ಟ್ರಂಪ್ ಅಧಿಕಾರಕ್ಕೆ ಬಂದರೆ ವಾರ್ಷಿಕ 85,000 ಎಚ್ 1-ಬಿ ವೀಸಾಗಳ ಹಂಚಿಕೆ ಮಾಡಲಾಗುತ್ತದೆ ಎಂದು ಘೋಷಿಸಿದ್ದಾರೆ. ಈ ಹಿಂದೆ ಟ್ರಂಪ್‌ ಎಚ್‌-1ಬಿ ವೀಸಾದ ಮೀಸಲಾತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ರಕ್ಷಣಾ ಮತ್ತು ಭದ್ರತಾ ನೀತಿ

ಡೊನಾಲ್ಡ್ ಟ್ರಂಪ್ ಅವರ ನಾಯಕತ್ವದಲ್ಲಿ ರಕ್ಷಣಾ ಸಹಕಾರವು ಹೆಚ್ಚಾಗಲಿದೆ. ಇಂಡೋ-ಪೆಸಿಫಿಕ್‌ನಲ್ಲಿ ಚೀನಾದ ಪ್ರಭಾವವನ್ನು ಎದುರಿಸಲು ಅಮೆರಿಕ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾ ನಡುವಿನ ಭದ್ರತಾ ಪಾಲುದಾರಿಕೆಯ ಕ್ವಾಡ್ ಅನ್ನು ಅವರ ಆಡಳಿತವು ಈ ಹಿಂದೆ ಬಲಪಡಿಸಿತ್ತು. ಚೀನಾ ಮತ್ತು ಪಾಕಿಸ್ತಾನದಂತಹ ನೆರೆಯ ರಾಷ್ಟ್ರಗಳೊಂದಿಗಿನ ಉದ್ವಿಗ್ನತೆಯ ನಡುವೆ ಹೆಚ್ಚುವರಿ ಜಂಟಿ ಮಿಲಿಟರಿ ಶಸ್ತ್ರಾಭ್ಯಾಸ, ಶಸ್ತ್ರಾಸ್ತ್ರಗಳ ಮಾರಾಟ ಮತ್ತು ತಂತ್ರಜ್ಞಾನ ವರ್ಗಾವಣೆಗಳು ಭಾರತದ ರಕ್ಷಣಾ ಸಾಮರ್ಥ್ಯಗಳನ್ನು ಹೆಚ್ಚಿಸಲಿದೆ.

ಈ ಸುದ್ದಿಯನ್ನೂ ಓದಿ: US presidential elections 2024: ಐತಿಹಾಸಿಕ ಗೆಲುವಿಗೆ ಅಭಿನಂದನೆಗಳು ಗೆಳೆಯ…ಟ್ರಂಪ್‌ ವಿಜಯಕ್ಕೆ ಪ್ರಧಾನಿ ಮೋದಿ ಸಂತಸ