ಮುಂಬೈ: ಅಮೆರಿಕದ ಅಧ್ಯಕ್ಷ(America President)ರಾಗಿ ಡೊನಾಲ್ಡ್ ಟ್ರಂಪ್(Donald Trump) ಚುನಾವಣೆಯನ್ನು ಗೆದ್ದ ಬಳಿಕ ಅಲ್ಲಿನ ಷೇರು ಮಾರುಕಟ್ಟೆಯಲ್ಲಿ ಸೂಚ್ಯಂಕಗಳು ಏರಿಕೆಯಾಗಿವೆ. ಆದರೆ ಭಾರತದ ಸ್ಟಾಕ್ ಮಾರ್ಕೆಟ್(Stock Market)ನಲ್ಲಿ ಮಂಗಳವಾರ ಸೆನ್ಸೆಕ್ಸ್(Sensex) ಮತ್ತು ನಿಫ್ಟಿ(Nifty) ಭಾರಿ ಕುಸಿತಕ್ಕೀಡಾಗಿವೆ.
ಮಧ್ಯಾಹ್ನದ ವೇಳೆಗೆ ಸೆನ್ಸೆಕ್ಸ್ 781 ಅಂಕ ಕಳೆದುಕೊಂಡು 79,615 ಅಂಕಗಳಿಗೆ ಇಳಿಕೆಯಾಗಿದ್ದರೆ, ನಿಫ್ಟಿ 261 ಅಂಕ ನಷ್ಟದಲ್ಲಿ 24,222 ಅಂಕಗಳಿಗೆ ಕುಸಿದಿತ್ತು. ಹೂಡಿಕೆದಾರರು 4 ಲಕ್ಷ ಕೋಟಿಗೂ ಹೆಚ್ಚು ಕಲೆದುಕೊಂಡಿದ್ದಾರೆ. ಯಾಕೆ ಹೀಗಾಗಿದೆ ಎಂಬ ಕಳವಳ ಈಗ ಉಂಟಾಗಿದೆ. ಮೋದಿಯವರೊಡನೆ ಉತ್ತಮ ಸಂಬಂಧವನ್ನು ಹೊಂದಿರುವ ಹಾಗೂ ರಾಷ್ಟ್ರೀಯತೆಯ ಚಿಂತನೆಯನ್ನು ಪ್ರತಿಪಾದಿಸುವ ಟ್ರಂಪ್ ಅವರಿಂದ ಭಾರತಕ್ಕೆ ಅನುಕೂಲವಾಗಲಿದೆ ಎಂಬ ನಿರೀಕ್ಷೆಯ ನಡುವೆಯೂ ಏಕೆ ಸ್ಟಾಕ್ ಮಾರ್ಕೆಟ್ ಆತಂಕಕ್ಕೀಡಾಗಿದೆ ಎಂಬ ಪ್ರಶ್ನೆ ಉಂಟಾಗಿದೆ.
ಭಯೋತ್ಪಾದನೆಯ ದಮನ,
ಡೊನಾಲ್ಡ್ ಟ್ರಂಪ್ ಅವರ ಅಮೆರಿಕ ಫಸ್ಟ್ ವಾಣಿಜ್ಯ ನೀತಿಯ ಪರಿಣಾಮ ಏನಾಗಬಹುದು ಎಂಬ ಆತಂಕ ಭಾರತೀಯ ಷೇರು ಮಾರುಕಟ್ಟೆಯನ್ನು ಕಾಡುತ್ತಿದೆ. ಏಕೆಂದರೆ ಟ್ರಂಪ್ ಅವರು ನಾನಾ ರಾಷ್ಟ್ರಗಳಿಂದ ಅಮೆರಿಕಕ್ಕೆ ಆಮದಿನ ಮೇಲೆ ಭಾರಿ ಸುಂಕ ಹಾಕುವ ಮೂಲಕ ತಮ್ಮ ಅಮೆರಿಕ ಫಸ್ಟ್ ನೀತಿಯನ್ನು ಜಾರಿಗೊಳಿಸುವುದು ವಾಡಿಕೆ. ಹೀಗಾಗಿ ಇದರ ಪಾಸಿಟಿವ್ ಮತ್ತು ನೆಗೆಟಿವ್ ಪರಿಣಾಮಗಳೆರಡನ್ನೂ ಎದುರಿಸಬೇಕಾಗುತ್ತದೆ ಎಂಬ ಕಳವಳ ಹೂಡಿಕೆದಾರರಲ್ಲಿ ಉಂಟಾಗಿದೆ. ಹೀಗಾಗಿ ಆರಂಭದಲ್ಲಿ ಜಿಗಿದಿದ್ದ ಸೆನ್ಸೆಕ್ಸ್ ಮತ್ತು ನಿಫ್ಟಿ ಬಳಿಕ ಕುಸಿದಿವೆ.
MAGA ಎಫೆಕ್ಟ್
ರಿಪಬ್ಲಿಕನ್ನರು ಈ ಬಾರಿ ಮೇಕ್ ಅಮೆರಿಕ ಗ್ರೇಟ್ ಅಗೈನ್ ಘೋಷಣೆಯನ್ನು ಜೋರಾಗಿಯೇ ಮಾಡಿದ್ದಾರೆ. ಇದರರ್ಥ ಅಮೆರಿಕವನ್ನು ಮತ್ತೆ ಬಲಾಢ್ಯಗೊಳಿಸುವುದು. ಆದರೆ ಇದರಿಂದ ಭಾರತದಂಥ ಪ್ರಗತಿಶೀಲ ಮಾರುಕಟ್ಟೆಯ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಆತಂಕವೂ ಇದೆ. ಸ್ಟಾಕ್ ಮಾರ್ಕೆಟ್‌ನಿಂದ ವಿದೇಶಿ ಹೂಡಿಕೆಯ ಹೊರ ಹರಿವು ಕೂಡ ಸಂಭವಿಸುವ ಆತಂಕ ಇದೆ.
ಅಮೆರಿಕದ ಬಾಂಡ್ ಪ್ರಬಲ ಸಾಧ್ಯತೆ
ಟ್ರಂಪ್ ಪಾಲಿಸಿಗಳ ಪರಿಣಾಮ ಅಮೆರಿಕದ ಬಾಂಡ್‌ಗಳಲ್ಲಿನ ಹೂಡಿಕೆಗೆ ಹೆಚ್ಚು ರಿಟರ್ನ್ ಸಿಗುವ ಸಾಧ್ಯತೆ ಇದೆ. ಕಳೆದ ವಾರದಿಂದೀಚೆಗೆ ಯುಎಸ್ ಬಾಂಡ್‌ಗಳು 0.15%ರಷ್ಟು ದರ ಏರಿಕೆ ದಾಖಲಿಸಿವೆ. ಅಮೆರಿಕದ ಬಾಂಡ್ ಮಾರುಕಟ್ಟೆ ಚೇತರಿಸಿದರೆ ಭಾರತೀಯ ಸ್ಟಾಕ್ ಮಾರ್ಕೆಟ್ ಮೇಲೆ ನೆಗೆಟಿವ್ ಪ್ರಭಾವ ಬೀರುವ ಸಾಧ್ಯತೆ ಇದೆ.
ಡಾಲರ್ ಪ್ರಾಬಲ್ಯ
ಟ್ರಂಪ್ ಅಧ್ಯಕ್ಷರಾಗುತ್ತಿದ್ದಂತೆ ಡಾಲರ್ ಕೂಡ ಅಬ್ಬರಿಸುತ್ತಿದೆ. ಈಗ ಡಾಲರ್ ಎದುರು ರೂಪಾಯಿ ಮೌಲ್ಯ 84 ರೂ.ಗೆ ಇಳಿದಿದೆ.
ಬಡ್ಡಿ ದರ ಇಳಿಕೆ ವಿಳಂಬ?
ಅಮೆರಿಕದಲ್ಲಿ ಬಾಂಡ್‌ಗಳ ರಿಟರ್ನ್ ಹೆಚ್ಚಳವಾದರೆ, ಅಲ್ಲಿನ ಫೆಡರಲ್ ರಿಸರ್ವ್ ತನ್ನ ಬಡ್ಡಿ ದರಗಳನ್ನು ತಗ್ಗಿಸುವ ಯೋಜನೆಯನ್ನು ಮುಂದೂಡಬಹುದು. ಆಗ ಭಾರತದಲ್ಲೂ ಬಡ್ಡಿ ದರ ಇಳಿಕೆಯಲ್ಲಿ ವಿಳಂಬವಾಗಬಹುದು. ಅಮೆರಿಕ ಫಸ್ಟ್ ನೀತಿಯ ಭಾಗವಾಗಿ ಚೀನಾದ ಆಮದಿನ ಮೇಲೆ 60% ತೆರಿಗೆ ಮತ್ತು ಇತರ ದೇಶಗಳ ಆಮದಿಗೆ 10-20% ತೆರಿಗೆ ವಿಧಿಸಿದರೆ, ಅಮೆರಿಕದಲ್ಲೂ ಹಣದುಬ್ಬರ ಹೆಚ್ಚುವ ಸಾಧ್ಯತೆ ಇದೆ. ಆಗ ಬಡ್ಡಿ ದರ ಇಳಿಕೆಗೆ ಕೈ ಹಾಕದಿರಬಹುದು.
ವಿದೇಶಿ ಹೂಡಿಕೆಯ ಹೊರ ಹರಿವು:
ಭಾರತೀಯ ಷೇರು ಮಾರುಕಟ್ಟೆಯಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೂಡಿಕೆಯನ್ನು ನಿರಂತರ ಹಿಂತೆಗೆದುಕೊಳ್ಳುತ್ತಿದ್ದಾರೆ. ಅಮೆರಿಕ ಬಡ್ಡಿ ದರ ಇಳಿಕೆಯನ್ನು ಮುಂದೂಡಿದರೆ ಈ ವಿದೇಶಿ ಹೂಡಿಕೆಯ ಹೊರ ಹರಿವು ಕೂಡ ಹೆಚ್ಚುವ ಆತಂಕ ಇದೆ.
ಭಾರತಕ್ಕೂ ಸುಂಕದ ಬಿಸಿ?
ಟ್ರಂಪ್ ಅವರು ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ವಸ್ತುಗಳು ಮತ್ತು ಸೇವೆಗಳ ಮೇಲೆ ಸುಂಕವನ್ನು ವಿಧಿಸುವ ಸಾಧ್ಯತೆಯೂ ಇದೆ. ಏಕೆಂದರೆ ಈ ಹಿಂದೆ ಅಂಥ ನಿರ್ಧಾರವನ್ನು ತೆಗೆದುಕೊಂಡಿದ್ದರು. ತಂತ್ರಜ್ಞಾನ, ಉತ್ಪಾದನೆ ವಲಯದ ಮೇಲೆ ಇದು ನಕಾರಾತ್ಮಕ ಪ್ರಭಾವ ಬೀರುತ್ತದೆ.
ಇಂಥ ಸಂದರ್ಭದಲ್ಲಿ ಹೂಡಿಕೆದಾರರು ಏನು ಮಾಡಬಹುದು? ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ ಅಥವಾ ಸಿಪ್ ಮೂಲಕ ನಿಯಮಿತವಾಗಿ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುವುದರಿಂದ ಮಾರುಕಟ್ಟೆಯ ಏರಿಳಿತಗಳಲ್ಲೂ ಲಾಭ ಪಡೆಯಬಹುದು ಎನ್ನುತ್ತಾರೆ ತಜ್ಞರು. ಸಾಮಾನ್ಯವಾಗಿ ಈಕ್ವಿಟಿ ಹೂಡಿಕೆಯನ್ನು ದೀರ್ಘಕಾಲೀನವಾಗಿ ಮಾಡಿದಾಗ, ಷೇರು ಪೇಟೆಯ ಏರಿಳಿತಗಳು ತಾತ್ಕಾಲಿಕವಾಗಿ ಇರುವುದನ್ನು ಗಮನಿಸಬಹುದು. ಟ್ರೇಡರ್ಸ್ ಮಾತ್ರ ತಾತ್ಕಾಲಿಕ ಏರಿಳಿತಗಳನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಈಕ್ವಿಟಿ ಹೂಡಿಕೆದಾರರು ನಿಶ್ಚಿಂತೆಯಿಂದ ಹೂಡಿಕೆಯನ್ನು ಮುಂದುವರಿಸುತ್ತಾರೆ ಎಂಬುದೂ ವಾಸ್ತವ.
ಯಾವ ಸೆಕ್ಟರ್‌ನಲ್ಲಿ ಹೂಡಿದ್ರೆ ಲಾಭ?
ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಿರುವುದರಿಂದ ಐಟಿ ತಂತ್ರಜ್ಞಾನ ಅಧರಿತ ಕಂಪನಿಗಳ ಷೇರುಗಳು ಆಸಕ್ತಿದಾಯಕವಾಗಿವೆ ಎನ್ನುತ್ತಾರೆ ಹೂಡಿಕೆ ತಜ್ಞರಾದ ನೀರಜ್ ದೆವಾನ್. ಇನ್ಫೋಸಿಸ್, ಎಚ್‌ಸಿಎಲ್ ಟೆಕ್, ಟಿಸಿಎಸ್, ಎಲ್ ಆಂಡ್ ಟಿ ಟೆಕ್ನಾಲಜಿ, ಟಾಟಾ ಟೆಕ್ನಾಲಜೀಸ್ ಷೇರುಗಳನ್ನು ನೀರಜ್ ಶಿಫಾರಸು ಮಾಡಿದ್ದಾರೆ. ಫಾರ್ಮಾ ಸೆಕ್ಟರ್‌ನ ಕಂಪನಿಗಳೂ ಟ್ರಂಪ್ ಟಾರಿಫ್ ವ್ಯಾಪ್ತಿಗೆ ಬರುವ ಸಾಧ್ಯತೆ ಕಡಿಮೆ. ಹೀಗಾಗಿ ಫಾರ್ಮಾ ಸೆಕ್ಟರ್‌ನ ಷೇರುಗಳೂ ಲಾಭದಾಯಕವಾಗಬಹುದು ಎನ್ನುತ್ತಾರೆ ತಜ್ಞರು.
ಈ ಸುದ್ದಿಯನ್ನೂ ಓದಿ: Indian Bank: ವಾಣಿಜ್ಯ ವಾಹನಗಳಿಗೆ ಹಣಕಾಸು ಉತ್ಪನ್ನಗಳನ್ನು ನೀಡಲು ಟಾಟಾ ಮೋಟಾರ್ಸ್ ಜೊತೆಗೆ ಎಂಒಯುಗೆ ಸಹಿ ಹಾಕಿದ ಇಂಡಿಯನ್ ಬ್ಯಾಂಕ್