ಒಂದೊಳ್ಳೆ ಮಾತು
ರೂಪಾ ಗುರುರಾಜ್
ಅಂಬರೀಷ ಮಹಾರಾಜನು ಶ್ರೀವಿಷ್ಣುವಿನ ಅಂತರಂಗದ ಭಕ್ತರಲ್ಲಿ ಒಬ್ಬನಾಗಿದ್ದ. ಅವನ ಪರಿಶುದ್ಧವಾದ ಭಕ್ತಿಯನ್ನು ಶ್ರೀಹರಿಯು ಬಹಳವಾಗಿ
ಮೆಚ್ಚಿಕೊಂಡಿದ್ದ. ಅಷ್ಟೇ ಅಲ್ಲ ಅವನ ರಕ್ಷಣೆಗಾಗಿ ತನ್ನ ಸುದರ್ಶನ ಚಕ್ರವನ್ನೂ ಅದೃಶ್ಯ ರೂಪದಲ್ಲಿ ಕಾವಲಿಗೆ ಇರಿಸಿದ್ದ.
ಒಂದು ಸಲ ಅಂಬರೀಷ ರಾಜನು ಏಕಾದಶೀ ವ್ರತವನ್ನು ಕೈಗೊಂಡ. ಆ ಸಮಯಕ್ಕೆ ಸರಿಯಾಗಿ ಕೋಪ ಸ್ವಭಾವದ ದೂರ್ವಾಸ ಮುನಿಗಳು ಅಲ್ಲಿಗೆ ದಯಮಾಡಿಸಿದರು. ಅಂಬರೀಷನು ಅವರನ್ನು ಭಯ-ಭಕ್ತಿಗಳಿಂದ ಸ್ವಾಗತಿಸಿದ, ಸತ್ಕರಿಸಿದ. ಅವರು ‘ನಾನು ನದಿಗೆ ಹೋಗಿ ಸ್ನಾನ ಸಂಧ್ಯಾವಂದನೆಗಳನ್ನು ಮುಗಿಸಿಕೊಂಡು ಬರುತ್ತೇನೆ. ಅಷ್ಟರಲ್ಲಿ ಊಟದ ವ್ಯವಸ್ಥೆ ಮಾಡಿಸು’ ಎಂದು ಹೇಳಿ ಯಮುನಾ ನದಿಗೆ
ಹೊರಟರು. ಮುನಿಗಳ ಭೋಜನಕ್ಕೆ ವ್ಯವಸ್ಥೆ ಮಾಡಲಾಯಿತು.
ಆದರೆ ಮುನಿಗಳು ಪಾರಣೆ ಸಮಯಕ್ಕೆ ಬರಲಿಲ್ಲ. ರಾಜನು ವ್ರತದ ನಿಯಮದಂತೆ ದ್ವಾದಶಿಯ ಮುಹೂರ್ತ ಕಳೆಯುವ ಮೊದಲೆ ಪಾರಣೆ
ಮಾಡಬೇಕಾಗಿತ್ತು. ಆದರೆ ದೂರ್ವಾಸರು ಬರುವ ಲಕ್ಷಣ ಕಾಣಿಸಲಿಲ್ಲ. ಇದರಿಂದ ಅಂಬರೀಷನಿಗೆ ಸಮಸ್ಯೆಯಾಯಿತು. ಈಗ ಏನು ಮಾಡಬೇಕೋ ತಿಳಿಯಲಿಲ್ಲ. ಜ್ಞಾನಿಗಳಾದ ಹಿರಿಯ ಬ್ರಾಹ್ಮಣರನ್ನು ಕರೆದು ‘ಈಗ ನಾನೇನು ಮಾಡಲಿ? ಈ ಸಮಸ್ಯೆಯಿಂದ
ನಾನು ಹೇಗೆ ಪಾರಾಗಲಿ’ ಎಂದು ಕೇಳಿದ. ದೂರ್ವಾಸರು ಅತಿಥಿಗಳಾಗಿ ಅಲ್ಲಿಗೆ ಬಂದಿದ್ದರು. ಅವರನ್ನು ಬಿಟ್ಟು ರಾಜನು ಊಟ ಮಾಡುವಂತಿರಲಿಲ್ಲ. ರಾಜ ಅಂಬರೀಷನು ತರುವಾಯ ಸ್ವಲ್ಪ ನೀರು ಕುಡಿದು ಪಾರಣೆ ವಿಧಿಯನ್ನು ಮುಗಿಸಿದ.
ಸ್ವಲ್ಪ ಹೊತ್ತಿಗೆ ದೂರ್ವಾಸರು ಅರಮನೆಗೆ ಬಂದರು. ಆಗ ಅವರಿಗೆ ತಮ್ಮ ಯೋಗದೃಷ್ಟಿಯಿಂದ ರಾಜನು ನೀರು ಸೇವಿಸಿದ
ಸಂಗತಿ ತಿಳಿದುಹೋಯಿತು. ಹೇಳಿ ಕೇಳಿ ಅವರು ಮೊದಲೇ ಮಹಾ ಕೋಪಿಷ್ಟರು. ಕೋಪಾವೇಶದ ಆ ಭಯಂಕರ ಭೂತವು ಅರಮನೆಯೇ ಅದುರುವಂತೆ ಕೂಗಿಡುತ್ತಾ ಕೈಯಲ್ಲಿ ತ್ರಿಶೂಲ ಹಿಡಿದು ರಾಜನನ್ನು ಕೊಲ್ಲಲು ಮುಂದಾಯಿತು. ಆಗ ಶ್ರೀಹರಿಯ ಪರಮ ಭಕ್ತನಾದ ಅಂಬರೀಷನು ಸ್ವಲ್ಪವೂ ಹೆದರಲಿಲ್ಲ ಹರಿಯನ್ನು ಸ್ಮರಿಸುತ್ತಾ ನಿಂತುಬಿಟ್ಟ. ಮಾಯದ ಭೂತವು ಅಂಬರೀಷನ ಸನಿಹಕ್ಕೆ ಬರುವುದೇ ತಡ, ಸದಾ ಅವನ ರಕ್ಷಣೆಗಾಗಿ ಅದೃಶ್ಯ ರೂಪದಲ್ಲಿ ಇರುತ್ತಿದ್ದ ವಿಷ್ಣುಚಕ್ರವು ಅದನ್ನು ಕ್ಷಣಮಾತ್ರದಲ್ಲಿ ಸುಟ್ಟು ಬೂದಿ ಮಾಡಿಬಿಟ್ಟಿತು. ಅನಂತರ ಅದು ಗರಗರನೆ ತಿರುಗುತ್ತಾ ದೂರ್ವಾಸರ ಕಡೆಗೂ ಬರತೊಡಗಿತು. ಇದರಿಂದ ಭೀತರಾದ ಮುನಿಗಳು ಅಲ್ಲಿಂದ ಓಡತೊಡಗಿದರು. ಅವರು ಮೂರು ಲೋಕಗಳನ್ನು ಸುತ್ತಿ ಬಂದರೂ, ಚಕ್ರದ ಭಯ
ನಿವಾರಣೆಯಾಗಲಿಲ್ಲ.
ದೂರ್ವಾಸರು ದೇವಲೋಕಕ್ಕೆ ಹೋಗಿ ಬ್ರಹ್ಮ , ವಿಷ್ಣು , ಮಹೇಶ್ವರ ಎಲ್ಲರನ್ನೂ ಕಂಡು ಪರಿಹಾರ ಕೇಳಿದರೂ ಯಾರು ಸಹಾಯ ಮಾಡಲಿಲ್ಲ. ನೀನು ಶ್ರೀಹರಿಭಕ್ತ ಅಂಬರೀಶನ ಬಳಿಗೇ ಹೋಗಬೇಕು ಎಂದು ಹೇಳಿಬಿಟ್ಟರು. ದೂರ್ವಾಸರು ಅರಮನೆಗೆ ಬಂದವರೇ ಓಡಿಹೋಗಿ ಅವನ ಪಾದಗಳ ಮೇಲೆ ಬಿದ್ದರು. ‘ಹೇ ಅಂಬರೀಷ ಮಹಾರಾಜ, ನಾನು ನಿನ್ನ ನಿರ್ಮಲವಾದ ಭಕ್ತಿ, ಪರಿಶುದ್ಧವಾದ ಆಚಾರ-ವಿಚಾರಗಳನ್ನು ಅರ್ಥಮಾಡಿಕೊಳ್ಳದೆ ಮೂರ್ಖತನ ಮಾಡಿದೆ. ನನ್ನನ್ನು ಮನ್ನಿಸು’ ಎಂದು ಕೇಳಿಕೊಂಡರು.
ಅವನು ಅವರನ್ನು ಆದರ ಭಾವದಿಂದ ಎಬ್ಬಿಸಿ ಸಮಾಧಾನಪಡಿಸಿದ. ಬಳಿಕ ಭಗವಂತನನ್ನು ಧ್ಯಾನಿಸುತ್ತಾ ‘ಹೇ ಪರಮಾತ್ಮ ದಯಾಸಾಗರ,
ದಯಮಾಡಿ ಈ ಪೂಜ್ಯರನ್ನು ಕಾಪಾಡು. ನನ್ನ ಭಕ್ತಿ ಶ್ರದ್ಧೆ, ಆಚಾರ ವಿಚಾರಗಳಿಂದ ನಿನಗೆ ಸಂತೋಷವಾಗಿದ್ದರೆ, ಈ ವಯೋವೃದ್ಧರೂ
ಜ್ಞಾನ ವೃದ್ಧರೂ, ಮಹಾಮಹಿಮರೂ ಆಗಿರುವ ದೂರ್ವಾಸ ಮುನಿಗಳಿಗೆ ಮಂಗಳವಾಗುವಂತೆ ಮಾಡು’ ಎಂದು ಪರಿಪರಿಯಾಗಿ ಪ್ರಾರ್ಥಿಸಿದ. ಆ
ತನಕ ಬೆಂಕಿಯ ಜ್ವಾಲೆಗಳನ್ನು ಉಗುಳುತ್ತಾ ದೂರ್ವಾಸರನ್ನು ಕಾಡುತ್ತಿದ್ದ ಸುದರ್ಶನ ಚಕ್ರವು, ಅಂಬರೀಷನು ಹೀಗೆ ಪ್ರಾರ್ಥಿಸಿದ ಕೂಡಲೇ
ಮಾಯವಾಗಿ ಹೋಯಿತು. ಹೀಗೆ ಪರಿಸ್ಥಿತಿ ಪೂರ್ತಿ ತಿಳಿಗೊಂಡ ಮೇಲೆ ಅಂಬರೀಷ ಮಹಾರಾಜನು ದೂರ್ವಾಸರಿಗೆ ಮೊದಲು ಭೋಜನ ಮಾಡಿಸಿ, ಅನಂತರ ತಾನು ಊಟ ಮಾಡಿದ.
ಅನಗತ್ಯವಾಗಿ ತಮ್ಮ ಅಽಕಾರ ಬಲದಿಂದ ಮತ್ತೊಬ್ಬರನ್ನು ಕೆಣಕಿದಾಗ, ಭಗವಂತನೇ ಅವರಿಗೆ ಬುದ್ಧಿ ಕಲಿಸುತ್ತಾನೆ.