ಗಜಾನನ ಎಂ ಗೋಖಲೆ
ನಮ್ಮೂರಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ದಿನಗಳು ಅವು. ರೇಷನ್ ಅಂಗಡಿಯಿಂದ ಸೀಮೆ ಎಣ್ಣೆ ತಂದು ಮನೆಗಳು ಬೆಳಕಾಗು ತ್ತಿದ್ದ ಕಾಲಮಾನ. ಎರಡು ಕೊಠಡಿಗಳಿಗೆ ಒಂದು ಬುಡ್ಡಿ ದೀಪ ಅಥವಾ ಉಳ್ಳವರ ಮನೆಯಲ್ಲಿ ಲಾಂಟೇನ್. ದೀಪಾವಳಿ ಮತ್ತು ಕಾರ್ತಿಕ ಮಾಸದಲ್ಲಿ ಎಲ್ಲ ಮನೆಗಳಲ್ಲಿ ಮಣ್ಣಿನ ಹಣತೆಗಳನ್ನು ಹಚ್ಚಿ ಸಂಭ್ರಮಿಸುತ್ತಿದ್ದೆವು. ದೀಪಾವಳಿಯ ಆ ಮೂರು ದಿನಗಳ ರಾತ್ರಿಗಳಲ್ಲಿ ಮನೆಗಳು ಬೆಳಗುತ್ತಿದ್ದವು.
ಸುತ್ತಮುತ್ತಲ ಊರುಗಳ ಯುವಕರಲ್ಲಿ ದೀಪಾವಳಿ ಹಬ್ಬದ ಸಮಯದಲ್ಲಿ ಆಕಾಶ ಬುಟ್ಟಿ ತಯಾರಿ ಮತ್ತು ಅದನ್ನು ಏರಿಸುವ ಕಂಬದ ಎತ್ತರದ ಬಗ್ಗೆ ಒಂದು ಸೌಹಾರ್ದ ಸ್ಪರ್ಧೆ ಇರುತ್ತಿತ್ತು. ದೀಪಾವಳಿ ಹಬ್ಬವಾಗಿ ಮೊದಲ ದಿನ ಮತ್ತು ನಂತರ ಒಂದು
ತಿಂಗಳು, ಅಂದರೆ ಕಾರ್ತಿಕ ಮಾಸದ ರಾತ್ರಿಗಳಲ್ಲಿ ಯಾವ ದಿನ ಯಾರು ಬುಟ್ಟಿ ಮೇಲೇರಿಸುವುದೆಂದು ನಿಶ್ಚಯವಾಗುತ್ತಿತ್ತು.
ಗೂಡು ದೀಪದಲ್ಲಿ ಅಳವಡಿಸುವ ಹಣತೆಯಲ್ಲಿ ಹಾಕಿದ ಎಣ್ಣೆ ಚೆಲ್ಲದ ಹಾಗೆ ಮತ್ತು ದೀಪ ಆರಿ ಹೋಗದಂತೆ ಬಣ್ಣದ ಬುಟ್ಟಿ ಯನ್ನು ರಾಟೆಗೆ ಹಾಕಿದ ಹಗ್ಗದ ಮೂಲಕ ಮೇಲಕ್ಕೇರಿಸುವುದು ಕೌಶಲ್ಯದ ಕೆಲಸ. ಚಿಕ್ಕ ಮಕ್ಕಳಿಗೆಲ್ಲಾ ಎತ್ತರದಲ್ಲಿ ಬಣ್ಣದ ಬುಟ್ಟಿಯಲ್ಲಿ ದೀವನ್ನು ನೋಡುವುದೇ ಏನೋ ಒಂದು ಆನಂದ, ಸೋಜಿಗ.
ಸ್ಥಳೀಯ ವಸ್ತುಗಳಿಂದ ತಯಾರಿ
ಒಂದು ತಿಂಗಳ ಮೊದಲೇ, ಆಳುಗಳನ್ನು ಕಾಡಿಗೆ ಕಳುಹಿಸಿ ಅತೀ ಉದ್ದದ ಬಿದಿರು, ಮರ ಅಥವಾ ಅಡಿಕೆ ಮರವನ್ನು ತೋಟ ದಿಂದ ಕಡಿಸಿ ತಂದಿಡಲಾಗುತಿತ್ತು. ಅರಸಿನಮಕ್ಕಿಯಿಂದ ಬಣ್ಣದ ಕಾಗದ, ಅಂಟು, ಕಡ್ಡಿಗಳನ್ನು ರನ್ನರ್ ಬಾಬು ಮೂಲಕ ತರಿಸಿ, ಆಕಾಶಬುಟ್ಟಿ ತಯಾರಿಸುವ ಕೆಲಸ ಹಬ್ಬದ ಮುಂಚಿನ ಕೆಲವು ದಿನಗಳಿಂದ ಪ್ರಾರಂಭ. ಅಂತಿಮ ಹಂತದ ಶೃಂಗಾರ ಮಾತ್ರ ಬಾಕಿ. ಜೋಶಿಯವರ ಅಂಗಡಿ ಪ್ರಾರಂಭವಾದ ಮೇಲೆ ನಮ್ಮ ಊರಲ್ಲೇ ಈ ಸಾಮಗ್ರಿಗಳು ಸಿಗುವಂತಾಯಿತು.
ನಮ್ಮ ದೊಡ್ಡಪ್ಪನ ಮಗ ರಾಜು ಮನೆ ಮುಂದಿನ ಎತ್ತರದ ತೆಂಗಿನ ಮರಕ್ಕೆ ರಾಟೆ ಕಟ್ಟಿ, ಹಗ್ಗ ಇಳಿ ಬಿಟ್ಟು ಗೂಡುದೀಪ ಏರಿಸು ತ್ತಿದ್ದ. ನಮ್ಮ ಅಣ್ಣ ಆಕಾಶಬುಟ್ಟಿ ತಯಾರಿಸುವುದರಲ್ಲಿ ಎತ್ತಿದ ಕೈ. ಅವರು ತಯಾರಿಯಲ್ಲಿ ತೊಡಗಿದಾಗ ನಾವು ಮಕ್ಕಳೆಲ್ಲಾ ಅವರಿಗೆ ಸಹಾಯ ಮಾಡಿದ್ದಕ್ಕಿಂತ, ಗೋಂದು ಚೆಲ್ಲುವುದು, ಬಣ್ಣದ ಕಾಗದ ಹರಿಯುವುದು, ಗೂಡು ದೀಪಕ್ಕೆ ಅಗತ್ಯ ಎನಿಸಿದ ಬಿದಿರಿನ ಕಡ್ಡಿ ಮುರಿಯುವುದು ಮುಂತಾದ ಚೇಷ್ಟೆಗಳನ್ನು ಮಾಡಿ ಬೈಸಿಕೊಂಡಿದ್ದೇ ಜಾಸ್ತಿ.
ಅದೊಂದು ವರ್ಷ ನಮ್ಮ ಊರಿನ ನರಸಿಂಹಣ್ಣನಿಗೆ ತಾವು ಅತೀ ಎತ್ತರದಲ್ಲಿ ದೊಡ್ಡ ಆಕಾಶಬುಟ್ಟಿ ಹಾರಿಸಬೇಕೆಂಬ ಉತ್ಸಾಹ ಬಂದಿತ್ತು. ನರಕಚತುರ್ದಶಿಯ ಮುನ್ನಾದಿನ ಬೆಳಿಗ್ಗೆನೇ ನರಸಿಂಹರಾಯರು ಕಂಬ ನೆಟ್ಟು ಆಕಾಬುಟ್ಟಿ ಹಾರಿಸಲು ತಯಾರಿ ಶುರು ಮಾಡಿದ್ದರು. ಮಧ್ಯಾಹ್ನದ ವೇಳೆಗೆ 5 -6 ಅಡಿ ಗುಂಡಿ ತೋಡಿ 30 ಅಡಿ ಎತ್ತರದ ಅಡಿಕೆ ಮರ ನೆಟ್ಟು , ಆಕಾಶ ಬುಟ್ಟಿಯ ಅಂತಿಮ ಶೃಂಗಾರ ಪೂರ್ತಿಗೊಳಿಸುವಲ್ಲಿ ನಿರತರಾದರು. ಅಂತೂ ಸಂಜೆಯ 6 ಗಂಟೆಯ ವೇಳೆಗೆ, ಸುಂದರ ಆಕಾಶ ಬುಟ್ಟಿ ಸಿದ್ಧವಾಗಿತ್ತು.
ಶಾಲೆಗೆ ಹೋಗಿದ್ದ ಮಕ್ಕಳು ಬಂದು, ಮನೆಯವರವರೆಲ್ಲರ ಸಮ್ಮುಖದಲ್ಲಿ ಮೊದಲ ದಿನ ಆಕಾಶಬುಟ್ಟಿಯಲ್ಲಿ ಮಣ್ಣಿನ ದೀಪ ವನ್ನು ಇಟ್ಟು , ಮೇಲೆ ಏರಿಸಲು ಎಲ್ಲರೂ ಕಂಬದ ಬಳಿ ಬಂದಾಗಿತ್ತು. ನರಸಿಂಹಣ್ಣ ಮುಖ ಪೆಚ್ಚಾಗಿದ್ದು ಆಗಲೇ. ತಮ್ಮ ಎಲ್ಲಿಲ್ಲದ ಉತ್ಸಾಹದಲ್ಲಿ, ಕಂಬ ಹೂಳುವ ಮೊದಲು ತುದಿಯಲ್ಲಿ ಅದಕ್ಕೊಂದು ಪುಟಾಣಿ ರಾಟೆ ಕಟ್ಟಿ ಹಗ್ಗವನ್ನು ಇಳಿಸಲು
ಮರೆತುಬಿಟ್ಟಿದ್ದರು. ಉತ್ಸಾಹಕ್ಕೆ ಒಂದು ಉದಾಹರಣೆ ಅಂತೂ ಮತ್ತೊಮ್ಮೆ ಕಂಬವನ್ನು ತೆಗೆದು, ರಾಟೆ ಮತ್ತು ಹಗ್ಗ ಹಾಕಿ, ಆ ಹಗ್ಗಕ್ಕೆ ಗೂಡು ದೀಪವನ್ನು ಸಿಕ್ಕಿಸಿ, ಅದರಲ್ಲಿ ದೀಪ ಇರಿಸಿ, ಎಣ್ಣೆ ಚೆಲ್ಲದ ರೀತಿಯಲ್ಲಿ ಜಾಗ್ರತೆಯಿಂದ ಬಣ್ಣ ಬಣ್ಣದ ಬೆಳಕು ಬೀರುವ ಗೂಡುದೀಪ ಮೇಲಕ್ಕೆೆರುವ ವೇಳೆಗೆ ರಾತ್ರೆ 9 ಗಂಟೆಯಾಗಿತ್ತು.
ನರಸಿಂಹಣ್ಣದ ಈ ಅತಿ ಉತ್ಸಾಹದ ಕೆಲಸವು ಊರಿನ ಎಲ್ಲರ ತಮಾಷೆಯ ವಸ್ತುವಾಗಿದ್ದು ನಿಜವಾದರೂ, ಸುಂದರವಾದ ಗೂಡು ದೀಪವನ್ನು ಮನೆಯಲ್ಲೇ ತಯಾರಿಸಿ, ಆಗಸಕ್ಕೆ ಏರಿಸುವ ಅವರ ಉತ್ಸಾಹ ಮಾತ್ರ ಮಾದರಿಯಾಗಿತ್ತು. ಮಕ್ಕಳು ಉತ್ಸಾಹ ದಿಂದ ಕೆಲಸ ಮಾಡಲು, ನರಸಿಂಹಣ್ಣನ ಕೌಶಲವನ್ನು ಉದಾಹರಣೆಯಾಗಿ ನೀಡಿ, ಮಕ್ಕಳನ್ನು ಹುರಿದುಂಬಿಸುತ್ತಿದ್ದರು.
ಪೇಟೆಯ ಅವಲಂಬನೆ ಇಲ್ಲದೇ, ಮನೆಯಲ್ಲೇ ಬಣ್ಣದ ಕಾಗದ ಅಂಟಿಸಿ, ಬಿದಿರಿನ ಕಡ್ಡಿಗಳಿಂದ ತಯಾರಿಸಿದ ಗೂಡುದೀಪವು ಅಂದಿನ ಸ್ವಾವಲಂಬನೆಗೆ ಒಂದು ಉದಾಹರಣೆ ತಾನೆ! ದೀಪಾವಳಿ ಕಳೆದು, ಕಾರ್ತಿಕ ಮಾಸ ಮುಗಿಯುವ ತನಕವೂ, ಆಕಾಶ ಬುಟ್ಟಿ ಅಥವಾ ಗೂಡು ದೀಪಗಳು ನಮ್ಮೂರಿನ ಮನೆಗಳ ಮುಂದೆ ಆಗಸದಲ್ಲಿ ಬಣ್ಣ ಬಣ್ಣದ ಬೆಳಕನ್ನು ಬೀರುತ್ತಿದ್ದುದು ಇಂದಿಗೂ ನೆನಪಾಗುತ್ತದೆ.