ಒಂದೊಳ್ಳೆ ಮಾತು
ರೂಪಾ ಗುರುರಾಜ್
ಮುಲ್ಲೈಕ್ಕೊಡು ಎಂದು ತಮಿಳುನಾಡಿನ ಒಂದು ಪುಟ್ಟ ಗ್ರಾಮ. ಅಲ್ಲಿ ಶ್ರೀಕೃಷ್ಣನ ಒಂದು ಸುಂದರವಾದ ದೇವಾಲಯ. ಅರ್ಚಕರೂ ಅವರಿಗೆ ಸಹಾಯಕನಾಗಿದ್ದ ತುಳಸಿ ಎಂಬ ಯುವಕನೂ ದಿನವೂ ಬೆಳಿಗ್ಗೆ ನಾಲ್ಕು ಗಂಟೆಗೇ ಎದ್ದು ಶುಚಿ ಯಾಗಿ ದೇವಸ್ಥಾನಕ್ಕೆ ಬರುತ್ತಿದ್ದರು. ದೇವಾ ಲಯದ ಪಕ್ಕದ ಒಂದು ಹೂದೋಟ. ತೋಟದಿಂದ ಹೂಗಳನ್ನು ತಂದು ದೇವರೀಗೆ ಮಾಲೆಯಾಗಿ ಕಟ್ಟಿ ಕೊಡುವ ಕೆಲಸ ತುಳಸಿಯದು. ಅವನೋ ಪರಮ ಕೃಷ್ಣ ಭಕ್ತ. ಸದಾ ಕೃಷ್ಣಧ್ಯಾನ ನಿರತ.
ತೋಟದಲ್ಲಿ ಹೂಗಳನ್ನು ಕೀಳುವಾಗಲೂ ಅವನಿಗೆ ಕೃಷ್ಣನದೇ ನೆನಪು. ಕೃಷ್ಣಾರ್ಪಣಂ ಎಂದು ಮನದಲ್ಲಿ ಹೇಳಿಕೊಂಡೇ ಹೂಗಳನ್ನು ಕಿತ್ತು ಪೋಣಿಸಿ ಹಾರ ಮಾಡುವನು ಈ ಭಕ್ತ. ಇತ್ತ ಅರ್ಚಕರು ಅವನಿತ್ತ ಮಾಲೆಗಳನ್ನು ಶ್ರೀ ಕೃಷ್ಣನ ಮಂಗಳ ಮೂರ್ತಿಗೆ ಮುಡಿಸಿ ಅಲಂಕಾರ ಮಾಡಲು ಹೋದರೆ, ಅದಾಗಲೇ ದೇವರು ಒಂದು ಹೊಸ ಮಾಲೆಯನ್ನು ಧರಿಸಿ ಹುರುಪಿನೊಂದಿಗೆ ಇವರನ್ನು ಎದುರುಗೊಳ್ಳಲು ಸಿದ್ಧನಾಗಿರು ತ್ತಿದ್ದ. ಹಳೆಯ ನಿರ್ಮಾಲ್ಯವನ್ನು ತೆಗೆದು ಹೊಸ ಮಾಲೆ ಯನ್ನು ದೇವರಿಗೆ ಹಾಕಿ ಅಲಂಕಾರ ಮಾಡಬೇಕೆಂದಿದ್ದ ಅರ್ಚಕರಿಗೆ ಒಂದು ಕಡೆ ನಿರಾಸೆ.
ಇನ್ನೊಂದೆಡೆ ಅಚ್ಚರಿ. ‘ಇದು ಹೇಗೆ ಸಾಧ್ಯ?’ ಎಂದು ಯೋಚಿಸಿದ ಅವರು ಇದು ತುಳಸಿಯದೇ ಕುಚೇಷ್ಟೆ ಎಂದು ಸಂದೇಹಿಸಿ, ಅವನು ತಾನೇ ಕೈಯಿಂದ ದೇವರಿಗೆ ಹೂ ಮುಡಿಸಿದನಲ್ಲ ಎಂದು ಖೇದ ಪಟ್ಟರು. ‘ನಾಳೆಯಿಂದ ನೀನು ಮಾಲೆ ಕಟ್ಟಬೇಡ. ಇನ್ನು ಮೇಲೆ ಹಂಡೆಗಳಿಗೆ ನೀರು ತುಂಬುವ ಕೆಲಸ ಮಾಡು ಸಾಕು’ ಎಂದು ಕಟ್ಟಪ್ಪಣೆ ಮಾಡಿದರು ಅರ್ಚಕರು. ಇದು ಭಗವಂತನ ಹೊಸ ಆಜ್ಞೆ ಎಂದು ಭಾವಿಸಿದ ತುಳಸಿ ಮರುದಿನದಿಂದ ನೀರು ತುಂಬಲಾರಂಭಿಸಿದ.
ಮರುದಿನ ಅರ್ಚಕರು ಶ್ರೀಕೃಷ್ಣನಿಗೆ ಅಭಿಷೇಕ ಮಾಡಲು ಹೋಗುತ್ತಾರೆ. ಅರೇ! ಆಗ ತಾನೇ ಶುದ್ಧ ಜಲದಿಂದ ಮಿಂದಂತೆ ಕೃಷ್ಣ ಶುಭ್ರನಾಗಿ ಮಿಂಚುತ್ತಿದ್ದ. ಗರ್ಭಗುಡಿಯಲ್ಲ ನೀರು. ಮೈಯಿಂದ ನೀರು ತೊಟ್ಟಿಕ್ಕುತ್ತಿದ್ದ ಕೃಷ್ಣ ಅರ್ಚಕರನ್ನು ಕಂಡು ಮುಸಿನಗುತ್ತಿದ್ದ. ಮತ್ತೆ ಅರ್ಚಕರಿಗೆ ಕಡುಕೋಪ! ತುಳಸಿಯನ್ನು ಕರೆದು ‘ಏನೋ, ದೇವರಿಗೆ ಅಭಿಷೇಕ ಮಾಡುವಷ್ಟು ಧೈರ್ಯ ಬಂತೇ ನಿನಗೆ! ನಿನ್ನಿಂದ ನನಗೆ ಉಪಕಾರಕ್ಕೆ ಬದಲಾಗಿ ತೊಂದರೆಯೇ ಹೆಚ್ಚಾಯ್ತು’ ಎಂದೆಲ್ಲ ಬೈಯಲಾರಂಭಿಸಿದರು. ತುಳಸಿಗೋ ಕಣ್ಣುಗಳಿಂದ ಧಾರಾಕಾರವಾಗಿ ನೀರು ಸುರಿಯಲಾ ರಂಭಿಸಿತು. ‘ಸ್ವಾಮಿ, ನಾನು ಹಂಡೆಗಳಲ್ಲಿ ನೀರು ತುಂಬಿದೆ ಅಷ್ಟೇ! ಅಯ್ಯೋ! ಕೃಷ್ಣನಿಗೆ ಅಭಿಷೇಕ ಮಾಡುವುದು ಹೇಗೆಂದೇ ನನಗೆ
ತಿಳಿಯದು’ ಎಂದ.
ಸರಿ. ಮಾರನೆಯ ದಿನವೇ ಅರ್ಚಕರು ಅವನನ್ನು ದೇವರಿಗೆ ನೈವೇದ್ಯ ತಯಾರಿಸುವ ಪಾಕಶಾಲೆಗೆ ವರ್ಗಾಯಿಸಿದರು. ಅಡುಗೆ ಭಟ್ಟರಿಗೆ ಅವನು ಸಹಾಯಕ ನಾದ. ಮರುದಿನ ಯಥಾಪ್ರಕಾರ ಬೀಗ ತೆರೆದವರು ಕೃಷ್ಣನನ್ನು ನೋಡುತ್ತಾ ಬೆಪ್ಪಾಗಿ ನಿಂತರು! ಕೃಷ್ಣನ ಬಾಯಲ್ಲಿ ಘಮಘಮಿಸುವ ಸಕ್ಕರೆ ಪೊಂಗಲ್ ಇಣುಕುತ್ತಿತ್ತು. ಅತ್ತ ಅಡುಗೆಮನೆಯಲ್ಲಿ ಸಕ್ಕರೆ ಪೊಂಗಲ್ ಆಗ ತಾನೇ ಸಿದ್ಧವಾಗುತ್ತಿತ್ತು. ‘ಈ ತುಳಸಿಯೊಬ್ಬ! ಅವನಿಗೆ ಯಾವ ಕೆಲಸ ಕೊಟ್ಟರೂ ಅದು ಹೇಗೋ ನನಗಿಂತ ಮುಂಚೆಯೇ ಕೃಷ್ಣನಿಗೆ ಸೇರಿಬಿಡುವುದಲ್ಲ! ಅವನೇನು ಮಂತ್ರವಾದಿಯೋ’ ಎಂದು ಗಾಬರಿಗೊಂಡರು. ಎಲ್ಲಿಂದಲೋ ಒಂದು ವಾಣಿ ಕೇಳಿಸಿತು.
‘ಅರ್ಚಕರೇ ಹೆದರಬೇಡಿ, ನಾನಿದ್ದೇನೆ. ಆ ನನ್ನ ಭಕ್ತ ತುಳಸಿಗೆ ನೀವು ಏನು ಕೆಲಸ ಕೊಟ್ಟರೂ ಅವನು ಕೃಷ್ಣಾರ್ಪಣ ಎಂದು ನನಗೆ ಕಾಣಿಕೆ ಸಲ್ಲಿಸಿಬಿಡುತ್ತಾನೆ. ಹೀಗೆ ಅವನು ಅರ್ಪಿಸುವ ಎಲ್ಲವನ್ನೂ ನಾನು ಮನಸಾರೆ ಸ್ವೀಕರಿಸುತ್ತೇನೆ. ಮನಸ್ಸೆ ಬೇರೆಡೆ ಇದ್ದು ಮಾಡುವ ಪೂಜೆಗಿಂತ ಎಲ್ಲವೂ ಕೃಷ್ಣನಿಗೇ ಅರ್ಪಣೆ ಎನ್ನುವವನ ಪ್ರೀತಿಯನ್ನೇ ನಾನು ಸ್ವೀಕರಿಸುತ್ತೇನೆ. ತುಳಸೀ ಒಬ್ಬ ಯೋಗಿ ಆವನ ಭಕ್ತಿ ನನಗೆ ಬಹಳ
ಪ್ರಿಯ’ ಕೃಷ್ಣಪರಮಾತ್ಮನ ಆ ವಾಣಿಯನ್ನು ಕೇಳಿ ಅರ್ಚಕರು ದೇವಾಲಯದ ಹೊರಗೋಡಿದರು.
ತುಳಸಿಯ ಪಾದಗಳಿಗೆ ಸಾಷ್ಟಾಂಗ ಪ್ರಣಾಮ ಮಾಡಿ ದರು. ಭಗವಂತನ ನಾಮಸ್ಮರಣೆ ಪರಿಶುದ್ಧವಾದ ಭಕ್ತಿ ನಾವೆಲ್ಲಿದ್ದರೂ ನಮ್ಮ ಪೂಜೆಯನ್ನು ಅವನಿಗೆ ತಲುಪಿಸುತ್ತದೆ. ಮಾಡುವ ಪ್ರತಿ ಕೆಲಸದಲ್ಲೂ ಶ್ರದ್ಧೆ ಇದ್ದಾಗ ಆ ಕೆಲಸವೇ ಪೂಜೆಯಾಗುತ್ತದೆ.
ಇದನ್ನೂ ಓದಿ: #RoopaGururaj