ವಿಶೇಷ ವರದಿ: ಅಪರ್ಣಾ ಎ.ಎಸ್. ಬೆಂಗಳೂರು
ಮೂರು ತಿಂಗಳಿನಲ್ಲಿ ಸೋಂಕು ಪರೀಕ್ಷೆ ಗುರಿ
ಏಡ್ಸ್ ತಡೆಯುವಿಕೆಯಲ್ಲಿ ದೇಶಕ್ಕೆ ಮಾದರಿಯಾದ ಕರ್ನಾಟಕ
ವಿಶ್ವ ಏಡ್ಸ್ ದಿನಾಚರಣೆ
ಇಂದು 9ನೇ ಸ್ಥಾನದಲ್ಲಿದ್ದ ಕರ್ನಾಟಕ ಈ ಬಾರಿ 16ನೇ ಸ್ಥಾನಕ್ಕೆ
ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಎಚ್‌ಐವಿ ಸೋಂಕಿತರ ಸಂಖ್ಯೆಯೂ ಇಳಿಮುಖವಾಗುತ್ತಿದ್ದು, ಕಳೆದ ವರ್ಷ ದೇಶದಲ್ಲಿ 9ನೇ ಸ್ಥಾನದಲ್ಲಿದ್ದ ಕರ್ನಾಟಕ ಈ ಬಾರಿ 16ನೇ ಸ್ಥಾನಕ್ಕೆ (ಶೇ.0.22) ಕುಸಿದಿದೆ.
2018-19ನೇ ಸಾಲಿನಲ್ಲಿ ಕರ್ನಾಟಕ 8ನೇ ಸ್ಥಾನದಲ್ಲಿತ್ತು. ದೇಶದಲ್ಲೇ ನಾಗಾಲ್ಯಾಂಡ್‌ನಲ್ಲಿ ಶೇ.1.66 ಸೋಂಕಿತರಿದ್ದು, ಪ್ರಥಮ ಸ್ಥಾನದಲ್ಲಿದೆ. ಮಿಜೋರಾಂನಲ್ಲಿ ಶೇ.0.91, ತ್ರಿಪುರದಲ್ಲಿ ಶೇ.0.63 ತಲಾ 2 ಮತ್ತು 3ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಈಗಿನವರೆಗೂ ಒಟ್ಟು 1,67,872 ಸೋಂಕಿತರಿದ್ದಾರೆ.
2017-18ರ ಅಕ್ಟೋಬರ್‌ವರೆಗೆ 22,20,292 ಜನರಿಗೆ ನಡೆಸಿದ್ದ ಪರೀಕ್ಷೆಯಲ್ಲಿ 18,862 ಜನರಿಗೆ, 2018-19ರ ಅಕ್ಟೋಬರ್‌ವರೆಗೆ 24,73,845 ಜನರಿಗೆ ನಡೆಸಿದ್ದ ಪರೀಕ್ಷೆಯಲ್ಲಿ 18,143 ಜನರಿಗೆ, 2019-20ರ ಅಕ್ಟೋಬರ್‌ವರೆಗೆ 25,78,254 ಜನರಿಗೆ ನಡೆಸಿದ್ದ ರೀತಿಯಲ್ಲಿ 15,685 ಹಾಗೂ 2020-21ರ ಅಕ್ಟೋಬರ್ ವರೆಗೆ 6,96,159 ಜನರಿಗೆ ನಡೆಸಿದ್ದ ಪರೀಕ್ಷೆಯಲ್ಲಿ 4,682 ಮಂದಿಗೆ ಹಾಗೂ 6,36,665 ಗರ್ಭಿಣಿಯರಿಗೆ ನಡೆಸಿದ ಪರೀಕ್ಷೆಯಲ್ಲಿ 313 ಮಂದಿಗೆ ಎಚ್‌ಐವಿ ಸೋಂಕು ಪತ್ತೆಯಾಗಿದೆ. ಸೋಂಕು ಪತ್ತೆಯಾದ ದಿನ ದಿಂದ ಈಗಿನವರೆಗೂ ಒಟ್ಟು 80,693 ಸೋಂಕಿತರು ಮೃತಪಟ್ಟಿದ್ದಾರೆ.
ಅರಿವು ಮೂಡಿಸುವ ಕಾರ್ಯ: ಜಾಗತಿಕವಾಗಿ ಮಾರಕವಾಗಿರುವ ಏಡ್ಸ್ ಕಾಯಿಲೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ರೋಗ ಬಾರದಂತೆ ಕೈಗೊಳ್ಳಬೇಕಾದ ಕ್ರಮ, ಚಿಕಿತ್ಸಾ ಕ್ರಮ ಮತ್ತು ಏಡ್ಸ್ ಲಕ್ಷಣಗಳ ಕುರಿತು ಅರಿವು ಮೂಡಿಸುವ ಸಲುವಾಗಿ 1988ರಿಂದ ಡಿ.1ರಂದು ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ಬಾರಿಯಂತೆ ಈ ಬಾರಿಯೂ ಎಚ್‌ಐವಿ ಸೋಂಕಿನ ತಡೆಗಾಗಿ ಜಾಗತಿಕ ಒಗ್ಗಟ್ಟು ಜವಾಬ್ದಾರಿಯ ಹಂಚಿಕೆ ಘೋಷಣೆಯೊಂದಿಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ.
ಮಾರಣಾಂತಿಕ ಕಾಯಿಲೆಗಳ ಪಟ್ಟಿಯಲ್ಲಿ ಮೊದಲ 10 ಸ್ಥಾನದ ಒಳಗೆ ಬರುವ ಏಡ್ಸ್ ರೋಗದ ಬಗ್ಗೆ ಜಾಗೃತಿ ಮೂಡಿದಂತೆ ಜನರು ಅಗತ್ಯ ಎಚ್ಚರಿಕಾ ಕ್ರಮಗಳನ್ನು ಅನುಸರಿಸುತ್ತಾ ಬಂದಿದ್ದು, ದೇಶದ ಏಡ್ಸ್ ಸೋಂಕಿತರ ಪಟ್ಟಿಯಲ್ಲಿ 9 ರಿಂದ 16ನೇ ಸ್ಥಾನಕ್ಕೆ ಕರ್ನಾಟಕ ತಲುಪಿದೆ. ಸೂಕ್ತ ಚಿಕಿತ್ಸೆ ಇಲ್ಲದೇ ಇರುವ ಕಾರಣದಿಂದ ಪ್ರತಿ ವರ್ಷ 20ಲಕ್ಷಕ್ಕೂ ಹೆಚ್ಚು ಜನರು ಈ ರೋಗ ದಿಂದ ಅಸುನೀಗುತ್ತಿದ್ದು, ಈ ಕುರಿತು ಜಾಗೃತಿ ಮೂಡಿಸುವುದು ಇಂದಿನ ಅಗತ್ಯಗಳಲ್ಲಿ ಪ್ರಮುಖವಾಗಿದೆ.
ಅರಿವು ಮೂಡಿಸುವಿಕೆ: ಅಂತಾರಾಷ್ಟ್ರೀಯ ದಿನಾಚರಣೆ ಅಂಗವಾಗಿ 240 ಸ್ಪಾಟ್ಸ್ ಗಳನ್ನು ದಿನಕ್ಕೆ 8 ಬಾರಿಯಂತೆ 3 ಖಾಸಗಿ ರೇಡಿಯೊ ಚಾನೆಲ್‌ಗಳಲ್ಲಿ 30 ಸೆಕೆಂಡ್ಸ್ ಬಿತ್ತರಿಸಲಾಗಿದೆ. ಆಕಾಶವಾಣಿ ಮೂಲಕ 10 ವಿವಿಧ ವಿಷಯದ 15 ನಿಮಿಷದ ಕಾರ್ಯಕ್ರ ಮವನ್ನು ವಾರಕ್ಕೊಮ್ಮೆ 40 ಸ್ಪಾಟ್‌ಗಳನ್ನು ದಿನಕ್ಕೆರಡು ಬಾರಿಯಂತೆ ಬಿತ್ತರಿಸಲಾಗುತ್ತದೆ. ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ, ಎನ್‌ಇಕೆಎಸ್‌ಆರ್‌ಟಿಸಿ, ಎನ್ ಡಬ್ಲ್ಯೂಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಎಚ್ ಐವಿ/ಏಡ್ಸ್ ಕುರಿತ ಮಾಹಿತಿ ಅಳವಡಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ಚಿಕಿತ್ಸೆ ಸೌಲಭ್ಯ ಶುರು
ರಾಜ್ಯದಲ್ಲಿ 14 ಜೂನ್ 2017ರಿಂದ ಪರೀಕ್ಷೆ- ಚಿಕಿತ್ಸೆ ಸೌಲಭ್ಯವು ಪ್ರಾರಂಭವಾಗಿದ್ದು, ಎಚ್ ಐವಿ ಸೋಂಕಿತರಿಗೆ ಯಾವುದೇ ಹಂತ ದಲ್ಲಿರಲಿ ಹಾಗೂ ಸಿಡಿ-4 ಸಂಖ್ಯೆ ಎಷ್ಟಿದ್ದರೂ ಉಚಿತವಾಗಿ ಆ್ಯಂಟಿ ರೆಟ್ರೋವೈರಲ್ ಥೆರಪಿ ಚಿಕಿತ್ಸೆ ನೀಡಲಾಗುವುದು. ಇನ್ನು ಸೋಂಕಿತರಾದವರಿಗೆ ಮಾನಸಿಕ ಸಾಮಾಜಿಕ ಬೆಂಬಲ ನೀಡುವ 35 ಸಮುದಾಯ ಬೆಂಬಲ ಕೇಂದ್ರಗಳು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿವೆ.