Tuesday, 3rd December 2024

Harish Kera Column: ಜೂಲಾನೆಗಳಿಗೊಂದು ಜುರಾಸಿಕ್‌ ಪಾರ್ಕ್‌

ಕಾಡು ದಾರಿ

ಹರೀಶ್‌ ಕೇರ

ನೀವು ‘ಐಸ್ ಏಜ್’, ‘10000 ಬಿ.ಸಿ.’ ಮೊದಲಾದ ಇಂಗ್ಲಿಷ್ ಫಿಲಂಗಳನ್ನು ನೋಡಿದ್ದರೆ, ಅದರಲ್ಲಿ ಬರುವ ಜೂಲಾನೆಗಳನ್ನು
(mammoth) ನೋಡಿರುತ್ತೀರಿ. ಮೈತುಂಬ ಜೂಲು ಹೊದ್ದುಕೊಂಡಿರುವ ಇವು ಹಿಮಯುಗದ ದೈತ್ಯ ಆನೆಗಳು. ನಮ್ಮ ಈಗಿನ
ಆನೆಗಳ ಎರಡು ಪಟ್ಟು ಗಾತ್ರದ ಇವು ಭೂಮಿಯನ್ನು ಒಂದು ಕಾಲದಲ್ಲಿ ಆಳಿದ್ದವು.

ತೀರಾ ಇತ್ತೀಚಿನವರೆಗೆ, ಅಂದರೆ ಸುಮಾರು 5000 ವರ್ಷಗಳ ಹಿಂದಿನವರೆಗೂ ಇವು ಉಳಿದಿದ್ದವು. ಭೂಮಿಯ ವಯೋಮಾನ ಪರಿಗಣಿಸಿದರೆ 5000 ವರ್ಷ ಎಂಬುದು ಇತ್ತೀಚಿನ ಸಂಗತಿಯೇ ಸರಿ. ಹಲವು ಪ್ರಾಕೃತಿಕ ಕಾರಣಗಳಿಂದ ಇವು ಅಳಿದವು. ಇವುಗಳಲ್ಲಿ ಕಟ್ಟ ಕಡೆಯ ಆನೆಯನ್ನೂ ಮನುಷ್ಯನೇ ಕೊಂದ. ನಾವು ಕಾಣುವ ಈಗಿನ ಆನೆಗಳಷ್ಟು ಬುದ್ಧಿವಂತರಲ್ಲದ ಅವುಗಳನ್ನು ಮನುಷ್ಯರು ಮಾಂಸಕ್ಕಾಗಿ, ಚಳಿಯನ್ನು ನಿವಾರಿಸಿ ಕೊಳ್ಳಬಹುದಾದ ದಪ್ಪ ತುಪ್ಪಳಕ್ಕಾಗಿ ಸುಲಭವಾಗಿ ಬೇಟೆಯಾಡಿ ಕೊಂದರು.

ಎಲ್ಲ ಅಂದುಕೊಂಡಂತೆ ನಡೆದರೆ ಈ ಆನೆಗಳು ಮತ್ತೆ ಭೂಮಿಯ ಮೇಲೆ ಹೆಜ್ಜೆ ಹಾಕಲಿವೆ. ಹಾಂ, ಮ್ಯೂಸಿಯಂ ಪೀಸುಗಳಲ್ಲ ಅಥವಾ ವೇಷಗಳೂ
ಅಲ್ಲ. ನಿಜವಾದ ಮ್ಯೂಮೂತ್‌ಗಳೇ ಕಣ್ಣು ಬಿಟ್ಟು ನಡೆದಾಡಲಿವೆ. 2028ರಲ್ಲಿ ಮೊದಲ ಮ್ಯಾಮೂತ್ ನ ಮರಿ ಪ್ರಯೋಗಾಲಯದಿಂದ ಆಚೆ ಬರಲಿದೆ. ಇದು ಹೇಗೆ ಸಾಧ್ಯ ಅನ್ನುತ್ತೀರಾ? ನೀವು ‘ಜುರಾಸಿಕ್ ಪಾರ್ಕ್’ ಫಿಲಂ ನೋಡಿಯೇ ಇರುತ್ತೀರಿ. ಅಲ್ಲಿ ಜುರಾಸಿಕ್ ಯುಗದ ದೈತ್ಯ ಪೆಡಂಭೂತಗಳಾದ ಡೈನೋಸಾರ್‌ಗಳನ್ನು ಮರುಸೃಷ್ಟಿಸಿ ಇಟ್ಟಿರುವುದು, ಅವು ಅನಾಹುತಕ್ಕೆ ಕಾರಣವಾಗುವುದು- ಇವೆಲ್ಲವನ್ನು ದೊಡ್ಡ ತೆರೆಯ ಮೇಲೆ ನೋಡಿ ಆನಂದಿಸಿರುತ್ತೀರಿ. ಈ ಫಿಲಂನ ಭರ್ಜರಿ ಯಶಸ್ಸಿನಿಂದ ಪ್ರೇರಣೆಗೊಂಡು ಇದರ ನಂತರದ ಭಾಗಗಳೂ ಬಂದವು. ಅಂದರೆ, ಅಳಿದುಹೋಗಿರುವ ಜೀವಿಗಳನ್ನು ಮರುಸೃಷ್ಟಿಸುವ ಚಿಂತನೆಯೇನೂ ಅಪರೂಪವಲ್ಲ.

ಅಂಥ ಪ್ರಯತ್ನಗಳೂ ವಿಜ್ಞಾನ ಲೋಕದಲ್ಲಿ ನಡೆಯುತ್ತಿವೆ. ಬೆನ್ ಲ್ಯಾಮ್ ಎಂಬ ಕನಸುಗಾರ ಇಂಥದೊಂದು ಪ್ರಯತ್ನಕ್ಕೆ ಮುಂದಾಗಿದ್ದಾನೆ. ಇವನು ಹಾಗೂ ಮಿತ್ರ ಜಾರ್ಜ್ ಚರ್ಚ್ ಸೇರಿ ‘ಕೊಲೋಸಲ್ ಬಯೋಸೈನ್ಸಸ್’ ಎಂಬ ಸಂಸ್ಥೆ ಸ್ಥಾಪಿಸಿದ್ದಾರೆ. ಇದರ ಉದ್ದೇಶ ‘ಡಿ ಎಕ್ಸ್ಟಿಂಕ್ಷನ್’. ಎಕ್ಸ್ಟಿಂಕ್ಷನ್ ಅಂದರೆ ಜೀವಿಪ್ರಭೇದಗಳ ಅಳಿವು. ಹೀಗೆ ಳಿದುಹೋದ ಜೀವಿಪ್ರಭೇದಗಳಲ್ಲಿ ಕೆಲವನ್ನು ಮತ್ತೆ ಭೂಮಿಯ ಮೇಲೆ ಜೀವಂತಗೊಳಿ ಸುವ ಉದ್ದೇಶ ಈ ಸಂಸ್ಥೆಯದ್ದು. ಹೆದರಬೇಡಿ, ಡೈನೋಸಾರ್‌ಗಳನ್ನು ಮರಳಿ ತರುವ ಉದ್ದೇಶವೇನೂ ಇವರಿಗಿಲ್ಲ. ಇವರ ಪಟ್ಟಿಯಲ್ಲಿ ಮೊದಲಿಗೆ ಇರುವ ಹೆಸರೇ ಈ ಹಿಮದಾನೆ.

ಈ ಮಹಾಗಜವೇ ಯಾಕೆ? ಅದಕ್ಕೂ ಕಾರಣಗಳಿವೆ. ಈ ದೈತ್ಯ ಆನೆಗಳು ಹೆಚ್ಚಾಗಿ ಜೀವಿಸಿದ್ದುದು ಹಿಮಪ್ರಾಂತ್ಯಗಳಲ್ಲಿ. ಅಂದರೆ ಮುಖ್ಯವಾಗಿ
ಭೂಮಿಯ ಉತ್ತರದ ಹಿಮಪ್ರದೇಶಗಳಲ್ಲಿ. ಮೊದಲನೆಯದಾಗಿ, ಮಹಾಗಜದ ಅವಶೇಷಗಳು ಹಿಮದೊಳಗೆ ಸಹಸ್ರಾರು ವರ್ಷಗಳಿಂದ ಸುರಕ್ಷಿತವಾಗಿದೆ.

ಪರ್ಮಾ-, ಟಂಡ್ರಾ ಮತ್ತು ಹೆಪ್ಪುಗಟ್ಟಿದ ಹುಲ್ಲುಗಾವಲು ಪ್ರದೇಶಗಳಲ್ಲಿ ಇವೆಲ್ಲ ಇನ್ನೂ ಸಿಗುತ್ತವೆ. ಅನೇಕ ಬೃಹದ್ಗಜಗಳ ದೇಹ ಇಂದಿಗೂ ಸಂಪೂರ್ಣವಾಗಿ ಕೊಳೆತಿಲ್ಲ. ಮಂಜುಗಡ್ಡೆಯಲ್ಲಿ ಮುಚ್ಚಿಹೋಗಿ ಕಾಣಿಸಿಕೊಳ್ಳಲು ಕಾಯುತ್ತಿವೆ. ಹೀಗೆ ಸಂಗ್ರಹಿಸಿದ ಅಂಗಾಂಶ ಮಾದರಿಗಳು ಅಖಂಡ ಡಿಎನ್‌ಎ ಹೊಂದಿವೆ. ಈ ಮ್ಯಾಮೂತ್‌ಗಳ ತುಪ್ಪಳ, ದಂತಗಳು, ನಖಗಳು ಜತೆಗೆ ಇವುಗಳ ಹೊಟ್ಟೆಯಲ್ಲಿ ಜೀರ್ಣವಾಗದ ಆಹಾರ ಕೂಡ ಸಿಕ್ಕಿದೆ. ಹೀಗಾಗಿ ಇಂದು ಹಿಮದಾನೆಯನ್ನು ಮರಳಿ ಸೃಷ್ಟಿಸುವುದು ಸಾಧ್ಯ. ಜಾರ್ಜ್ ಚರ್ಚ್ ಇದಕ್ಕಾಗಿ ಕಾರ್ಯಯೋಜನೆ ಅಭಿವೃದ್ಧಿ ಪಡಿಸಿದ್ದಾನೆ. ಏಷ್ಯನ್ ಆನೆಯ ಜತೆಗಿನ ಶೇ.99.6ರಷ್ಟು ಜೆನೆಟಿಕ್ ಹೊಂದಾಣಿಕೆ, ಅಖಂಡ ಡಿಎನ್‌ಎ ಮತ್ತು ಆಧುನಿಕ ಜೆನೆಟಿಕ್ ಎಂಜಿನಿಯರಿಂಗ್ ಇದನ್ನು ಸಾಧ್ಯವಾಗಿಸಲಿವೆ.

ಇನ್ನೂ ಒಂದು ಮುಖ್ಯ ಕಾರಣವಿದೆ. ಅದು ಹಿಮದಾನೆಗಳ ಅಳಿವಿನಿಂದ ಪರಿಸರದಲ್ಲಿ ಆದ ಬದಲಾವಣೆ. ಹಲವು ವಿಜ್ಞಾನಿಗಳು ಭೂಮಿಯ
ಈಗಿನ ವಾತಾವರಣವೇ ಹಿಮದಾನೆಗಳ ಅಳಿವಿನ ಕೊಡುಗೆ ಎಂಬ ಮಟ್ಟಕ್ಕೂ ಹೋಗಿ ವ್ಯಾಖ್ಯಾನಿಸುತ್ತಾರೆ. ಅದು ಹೇಗೆಂದರೆ, ಸುಮಾರು 15000 ವರ್ಷಗಳ ಹಿಂದೆ ಕೊನೆಯ ಹಿಮಯುಗ ಕೊನೆಗೊಂಡಿತು.

ಆಗ ಈ ಬೃಹದ್ಗಜಗಳು ಹೆಚ್ಚು ಸಂಖ್ಯೆಯಲ್ಲಿದ್ದವು. ರೋಮದಿಂದ ಕೂಡಿದ ಈ ಪ್ರಾಣಿಗಳಿಗೆ, ಕರಗಿದ ಹಿಮನದಿಗಳು, ಚಳಿಗಾಲ ಆರಾಮ ದಾಯಕವಾಗಿತ್ತು ಮತ್ತು ಸಸ್ಯವೈವಿಧ್ಯವೂ ಸಮತೋಲನದಲ್ಲಿ ಇತ್ತು. ಬೃಹದ್ಗಜಗಳ ಆದ್ಯತೆಯ ಆಹಾರ ಬೆಳೆಯಲು ಇದು ಉತ್ತಮ ಹವಾಮಾನವಾಗಿತ್ತು. ದಟ್ಟವಾದ ಕಾಡುಗಳು, ಜವುಗು ಭೂಮಿಗಳು ಇನ್ನೂ ಬೆಳೆಯದೆ ವಿಶಾಲ ಹುಲ್ಲುಗಾವಲುಗಳಿದ್ದವು. ಆದರೆ ಅಲಾಸ್ಕಾ, ಯುಕಾನ್ ಮತ್ತು ಸೈಬೀರಿಯಾದ ವಿಶಾಲವಾದ ಪ್ರದೇಶಗಳಲ್ಲಿ ಹಿಮದಾನೆಗಳಿಗೆ ಕೊನೆಗಾಲ ಸಮೀಪಿಸುತ್ತಿತ್ತು. ಮಾನವರು ಸಹಸ್ರಾರು ವರ್ಷಗಳಿಂದ ಸೈಬೀರಿಯಾದಲ್ಲಿ ಉಣ್ಣೆಗಾಗಿ, ಮಾಂಸಕ್ಕಾಗಿ ಆನೆಗಳನ್ನು ಬೇಟೆಯಾಡಿದ್ದರು. ಹಿಮಯುಗದ ಕೊನೆಗಾಲದಲ್ಲಿ ಜನ
ಬೇರಿಂಗ್ ಜಲಸಂಽಯನ್ನು ದಾಟಿ ಅಲಾಸ್ಕಾ ಮತ್ತು ಯುಕಾನ್‌ನಲ್ಲಿ ಮೊದಲ ಬಾರಿಗೆ ಬೇಟೆಯಾಡಲು ಪ್ರಾರಂಭಿಸಿದರು.

ಸುಮಾರು 13000 ವರ್ಷಗಳ ಹಿಂದೆ ಹವಾಮಾನ ಬೆಚ್ಚಗಾಗಲು ಆರಂಭಿಸಿತು. ಏರುತ್ತಿರುವ ತಾಪಮಾನ ಆನೆಗಳ ಮೆಚ್ಚಿನ ಆಹಾರವಾದ ಹುಲ್ಲು ಮತ್ತು ವಿಲೋಗಳು ಕಡಿಮೆಯಾಗಲು ಕಾರಣವಾಯಿತು. ಕಡಿಮೆ-ಪೋಷಕಾಂಶದ ಕೋನಿಫರ್‌ಗಳು, ವಿಷಕಾರಿ ಬರ್ಚ್‌ಗಳು ಬೆಳೆಯ ತೊಡಗಿದವು. ಜವುಗು ಜಮೀನು ಹೆಚ್ಚಿತು. ಕಾಡುಗಳು ಬೆಳೆಯತೊಡಗಿದವು. ಆಹಾರ ದಕ್ಕುವುದು ಕಷ್ಟವಾಯಿತು. ಜತೆಗೆ ಬೇಟೆಯೂ ಸೇರಿ ಇವು ಅಳಿದವು. ಈಗ ಅವುಗಳನ್ನು ಮರಳಿ ತರಲೇಬೇಕು ಎಂದು ಕೊಲೋಸಲ್ ಹಠ ಹಿಡಿಯುವುದಕ್ಕೂ ಕಾರಣಗಳನ್ನು ಪಟ್ಟಿ ಮಾಡಿದೆ. ದೈತ್ಯ ಆನೆಗಳನ್ನು ಸೃಷ್ಟಿಸಿ ಇಲ್ಲಿ ಬಿಟ್ಟರೆ 10000 ವರ್ಷಗಳ ಹಿಂದಿನ ಸಸ್ಯವೈವಿಧ್ಯವನ್ನೂ ಜೀವವೈವಿಧ್ಯವನ್ನೂ ಹಾಗೇ ವಾತಾವರಣವನ್ನೂ ಮರಳಿ ತರಬಹುದು.

ಬೇರು ಗಟ್ಟಿಯಿಲ್ಲದ ಟಂಡ್ರಾ ಮರಗಳು, ಪೊದೆಗಳನ್ನು ಈ ಆನೆಗಳು ಕಿತ್ತೆಸೆದು, ಅವುಗಳಿಗೆ ಬೇಕಾದ ಹುಲ್ಲು ವೇಗವಾಗಿ ಬೆಳೆಯಲು
ನೆರವಾಗಬಹುದು. ಈ ಹುಲ್ಲುಗಳ ಬೇರು ಗಟ್ಟಿ ಮತ್ತು ಆಳ; ಇವು ಇಂಗಾಲವನ್ನು ಹೆಚ್ಚು ಹೀರಿ ಹಿಡಿದಿಟ್ಟುಕೊಳ್ಳುತ್ತವೆ. ಹಾಗೆ ಮಾಡಿ ಭೂಮಿಯ
ವಾತಾವರಣ ತಂಪಾಗಲು ಸಹಾಯ ಮಾಡುತ್ತವೆ. ಆನೆಗಳು ಓಡಾಡುವುದು, ಮೇಯುವುದು, ಅವುಗಳ ವಿಸರ್ಜನೆ ಎಲ್ಲವೂ ಈ ಮಣ್ಣಿನಲ್ಲಿ
ಪೋಷಕಾಂಶ ಹೆಚ್ಚಲು ಕಾರಣವಾಗುತ್ತದೆ. ಇದಕ್ಕೆ ಸಾವಿರಾರು ವರ್ಷ ಬೇಕಾದೀತು. ಆದರೆ ಇದು ಸಾಧ್ಯ. ಜಾಗತಿಕ ಉಷ್ಣತೆ ಏರುವಿಕೆಯ ಸಮಸ್ಯೆಗೆ ಇದೊಂದು ಪರಿಹಾರ.

ಈ ಎಲ್ಲ ಯೋಚನೆಗಳ ಹಿಂದೆ ಈ ಹಿಂದಿನ ಕೆಲವು ಯೋಜನೆಗಳ ಸಾಫಲ್ಯವೂ ಪ್ರೇರಣೆ ನೀಡಿದೆ. ಉದಾಹರಣೆಗೆ ಅಮೆರಿಕದ ಯೆಸ್ಟೋನ್ ನ್ಯಾಷನಲ್ ಪಾರ್ಕ್‌ನ ಬೈಸನ್‌ಗಳು. ಒಂದು ಕಾಲದಲ್ಲಿ ಕಾಡೆಮ್ಮೆಗಳು (ಬೈಸನ್) ಅಮೆರಿಕದ ನೆಲದಾದ್ಯಂತ ನಿರ್ಭಯದಿಂದ
ತಿರುಗಾಡುತ್ತಿದ್ದವು. ಒಂದು ಕಾಲದಲ್ಲಿ ಉತ್ತರ ಅಮೆರಿಕದಲ್ಲಿ ಇವುಗಳ ಸಂಖ್ಯೆ ಒಂದು ಕೋಟಿಗೂ ಮಿಕ್ಕಿ ಇತ್ತು. ಇಂಥ ಹೇರಳ ಸಂಖ್ಯೆಯ
ಮೃಗಗಳನ್ನು ಅಲ್ಲಿಗೆ ಕಾಲಿಟ್ಟ ಯುರೋಪಿಯನ್ನರು ಮುಕ್ಕಿ ಮುಗಿಸಿದರು. ಉತ್ತರ ಅಮೆರಿಕಕ್ಕೆ ಕುದುರೆಗಳು ಮತ್ತು ಗನ್ ಪೌಡರ್ ಕಾಲಿಟ್ಟದ್ದೇ ಸರ್ವನಾಶದ ಮುನ್ನುಡಿ.

1800ರ ದಶಕದಲ್ಲಿ ಯುರೋಪಿಯನ್ನರು ಸ್ಥಳೀಯ ಬುಡಕಟ್ಟುಗಳ ಜತೆಗೆ ಬೈಸನ್‌ಗಳನ್ನೂ ಭೂಪಟದಿಂದ ಅಳಿಸಿ ಹಾಕಿದರು. 1900ರ
ಹೊತ್ತಿಗೆ ಅವು ಬಹುತೇಕ ಕಣ್ಮರೆಯಾದವು. ಕೆಲವೇ ಕೆಲವು ಪ್ರಾಣಿಗಳು ಖಾಸಗಿ ರಾಂಚ್‌ಗಳಲ್ಲಿ ರಕ್ಷಣೆಯನ್ನು ಕಂಡುಕೊಂಡವು. ಯೆಸ್ಟೋನ್
ಪ್ರದೇಶದಲ್ಲಿ ಅವುಗಳ ಸಂಖ್ಯೆ ಎರಡು ಡಜನ್‌ಗೆ ಇಳಿಯಿತು. ಈಗ ಗಾಬರಿಗೊಂಡ ಅಮೆರಿಕನ್ನರು ಅದರ ರಕ್ಷಣೆಗೆ ಮುಂದಾದರು.

ಅವುಗಳಿಗಾಗಿಯೇ ರಾಂಚ್‌ಗಳನ್ನು ಮಾಡಿದರು. ಬೇಟೆ ನಿಲ್ಲಿಸಿದರು. ಈಗ ಅವುಗಳ ಸಂಖ್ಯೆ ಹತ್ತಾರು ಸಾವಿರವಿದೆ. ಅಂದರೆ ಮನಸ್ಸು
ಮಾಡಿದರೆ ಯಾವುದೇ ಜೀವಿಯನ್ನು ಉಳಿಸಿಕೊಳ್ಳಬಹುದು. ವನ್ಯಜೀವಿಗಳು ಭೂಮಿಯ ಪರಿಸರ ರಕ್ಷಣೆ ಯಲ್ಲಿ ಹೊಂದಿರುವ ಜಟಿಲ ಸಂಬಂಧವನ್ನು ವಿವರಿಸಲು ಇನ್ನೊಂದು ಜನಪ್ರಿಯ ಉದಾಹರಣೆಯಿದೆ. ಇದನ್ನು ಸಾಕಷ್ಟು ಮಂದಿ ಸಾಕ್ಷ್ಯಚಿತ್ರ ಮಾಡಿದ್ದಾರೆ.

ಅದು ಯೆಸ್ಟೋನ್ ನ್ಯಾಷನಲ್ ಪಾರ್ಕ್ ಮತ್ತು ತೋಳಗಳ ಉದಾಹರಣೆ. ಯೆಸ್ಟೋನ್ ಪಾರ್ಕ್‌ನಲ್ಲಿ 1995ರವರೆಗೂ ತೋಳಗಳು ಇರಲಿಲ್ಲ. ಆದರೆ ಜಿಂಕೆಗಳ (ಎಲ್ಕ) ಸಂಖ್ಯೆ ವಿಪರೀತವಾಗಿತ್ತು. ಇದು ಪ್ರವಾಸಿ ತಾಣವೂ ಆದ್ದರಿಂದ ಬೇಟೆಗೆ ಅವಕಾಶ ಇರಲಿಲ್ಲ. ಜನರ ಓಡಾಟವೂ ಹೆಚ್ಚು ಇತ್ತು. ಎಲ್ಕ್‌ಗಳು ವಿಪರೀತವಾಗಿ ಬೆಳೆದ ಪರಿಣಾಮ ಹುಲ್ಲು ಬೆಳೆಯುವಿಕೆ ತುಂಬಾ ಕಡಿಮೆಯಾಗಿತ್ತು. ಎಲ್ ಗಳ ಕಠಿಣ ಗೊರಸುಗಳ ಓಡಾಟದ ಪರಿಣಾಮ, ಮಣ್ಣು ಕೂಡ ಮೆದುವಾಗಿ, ಮಳೆ ಬಂದಾಗ ಮಣ್ಣಿನ ಸವಕಳಿ ಜಾಸ್ತಿಯಾಗಿತ್ತು. ನೀರು ನಿಲ್ಲಿಸಿಕೊಳ್ಳಲು ಹುಲ್ಲಿನ ಬೇರುಗಳಿರಲಿಲ್ಲ.
ಹೀಗಾಗಿ ನದಿಗಳು ಬತ್ತಿಹೋಗಿದ್ದವು. ಇಡೀ ಪಾರ್ಕ್ ಒಣಗಲು ತೊಡಗಿತ್ತು. ಇಂಥ ವೇಳೆಯಲ್ಲಿ ತಜ್ಞರು ಒಂದು ಉಪಾಯ ಮಾಡಿದರು.

1995ರಲ್ಲಿ ತಜ್ಞರು ಸರಕಾರದ ನೆರವಿನಿಂದ ಇಲ್ಲಿ ಕೆಲವು ಸ್ಥಳೀಯ ತೋಳ ಜಾತಿಯನ್ನು ತಂದು ಬಿಟ್ಟು, ಅವು ಅಭಿವೃದ್ಧಿಯಾಗುವಂತೆ
ನೋಡಿಕೊಂಡರು. ತೋಳಗಳು ಜಿಂಕೆಗಳನ್ನು ಬೇಟೆಯಾಡಿದವು. ತೋಳಗಳು ಇದ್ದಲ್ಲಿ ಜನ ಹಾಗೂ ಜಿಂಕೆಗಳ ಓಡಾಟ ಕಡಿಮೆಯಾಯಿತು.
ಹಸಿರುಹುಲ್ಲು, ಪೊದೆಗಳು ಹೆಚ್ಚಿದವು. ಹಕ್ಕಿಜಾತಿಗಳು ಬಂದು ನೆಲೆಸಿ ಹೂವು-ಹಣ್ಣಿನ ಗಿಡಗಳನ್ನು ಹೆಚ್ಚಿಸಿದವು. ಹುಲ್ಲು ನೀರನ್ನು ಹಿಡಿದಿಟ್ಟು ಕೊಂಡು ಸ್ವಲ್ಪಸ್ವಲ್ಪವೇ ಬಿಟ್ಟುಕೊಡತೊಡಗಿತು. ನದಿಪಾತ್ರ ದಲ್ಲಿ ದಟ್ಟ ಕಾಡು ಬೆಳೆದು, ನದಿಯ ಕೊರೆತ, ಸವಕಳಿ ಕಡಿಮೆಯಾಗಿ ನೀರಿನ ಹರಿವು ಹೆಚ್ಚಿತು. ಬತ್ತಿಹೋಗಿದ್ದ ಯೆಸ್ಟೋನ್‌ನ ನದಿಗಳು ಹೀಗೆ ಜೀವಂತಗೊಂಡವು. ಈ ಪ್ರಯೋಗದ ಬಗ್ಗೆ ಡಾಕ್ಯುಮೆಂಟರಿಗಳು ಇಂಟರ್ನೆಟ್‌ನಲ್ಲಿ ಲಭ್ಯವಿವೆ. ಎಲ್ಲಿಯ ತೋಳ, ಎಲ್ಲಿಯ ನದಿ? ಪರಿಸರದ ಕೊಂಡಿಗಳು ಹೀಗೆ ಅದೃಶ್ಯವಾಗಿ ಹೆಣೆದುಕೊಂಡಿರುತ್ತವೆ.

ಮ್ಯಾಮೂತ್‌ಗಳ ಪುನರುತ್ಥಾನದ ಹಿಂದೆ ಈ ಎಲ್ಲ ಚಿಂತನೆಯಿದೆ. ಆದರೆ ಇದಕ್ಕಿರುವ ಸಮಸ್ಯೆಗಳೂ ಸಾಕಷ್ಟು. ಮೊದಲಿಗೆ ಮ್ಯಾಮೂತ್
ಅನ್ನು ಸೃಷ್ಟಿಸಿ ಉಳಿಸಿಕೊಳ್ಳುವುದೇ ಕಡುಕಷ್ಟ. ನಂತರ ಎರಡನೆಯದು, ಅವುಗಳು ಬೆಳೆದು ತಾವೇ ಪುನರ್‌ಸೃಷ್ಟಿ ಮಾಡಲು ಕಲಿಯಬೇಕು.
ತಮಗೆ ಈ ಹಿಂದಿನ ಪೂರ್ವಮಾದರಿಗಳಿಲ್ಲದ ಈ ಸನ್ನಿವೇಶದಲ್ಲಿ, ಪ್ರಾಕೃತಿಕ ತಂತ್ರಗಳ ಕಲಿಕೆಗೆ ಹೆತ್ತವರು-ಬಂಧುಗಳು-ಕುಟುಂಬ ಇಲ್ಲದ
ಸನ್ನಿವೇಶದಲ್ಲಿ ಇವು ಏನನ್ನು ಕಲಿಯುತ್ತವೆ, ಹೇಗೆ ಕಲಿಯುತ್ತವೆ? ವಿಜ್ಞಾನ ಈ ಸವಾಲುಗಳನ್ನು ಉತ್ತರಿಸಬೇಕಾಗುತ್ತದೆ.

ಕೊಲೋಸಲ್ ತಂಡದ ಮುಂದೆ ಹಿಮದಾನೆಗಳು ಮಾತ್ರವಲ್ಲದೆ ಇನ್ನೂ ಎರಡು ಜೀವಿಗಳ ಮರುಸೃಷ್ಟಿಯ ಯೋಜನೆ ಕೂಡ ಇದೆ. ಒಂದನೆ ಯದು ಟಾಸ್ಮಾನಿಯಾದ ಹುಲಿ, ಇನ್ನೊಂದು ಮಾರಿಷಸ್‌ನ ಡೋಡೋ ಪಕ್ಷಿ. ಇವೆರಡಕ್ಕೂ ಮನುಷ್ಯನೇ ಮರಣಶಾಸನ ಬರೆದಿದ್ದಾನೆ. ಟಾಸ್ಮಾನಿಯಾ ಟೈಗರ್ ಎಂಬುದು ಹುಲಿ ಮತ್ತು ತೋಳಗಳ ನಡುವೆ ಇರುವಂತೆ ಕಾಣುವ ಒಂದು ಮೃಗ. 1930ರಲ್ಲಿ ಈ ಜಾತಿಯ ಕೊನೆಯ ಕುಡಿಯನ್ನು ಮನುಷ್ಯ ಬೇಟೆಯಾಡಿ ಅಳಿಸಿಹಾಕಿದ. ಇನ್ನು ಮಡಗಾಸ್ಕರ್‌ನಲ್ಲಿದ್ದ, ಹಾರಲರಿಯದ ಡೋಡೋ ಎಂಬ ದೊಡ್ಡ ಕೋಳಿಯಂಥ ಪಕ್ಷಿಯು ಕೊನೆಯದಾಗಿ ಕಂಡದ್ದು 1662ನಲ್ಲಿ. ಎರಡರ ಡಿಎನ್‌ಎಗಳೂ ಲಭ್ಯವಿವೆ. ಸೃಷ್ಟಿಸಿ ಸಾಕುವುದಷ್ಟೇ ಬಾಕಿ.

ಇದನ್ನೂ ಓದಿ: harish kera