Tuesday, 3rd December 2024

IND vs AUS: ನನ್ನ ನಾಯಕತ್ವ ಕೊಹ್ಲಿ, ರೋಹಿತ್‌ ಶೈಲಿಗಿಂತ ಭಿನ್ನ; ಆಸೀಸ್‌ಗೆ ಬುಮ್ರಾ ಎಚ್ಚರಿಕೆ

ಪರ್ತ್‌: ನಾಳೆ(ಶುಕ್ರವಾರ) ಪರ್ತ್‌ನಲ್ಲಿ ಆರಂಭವಾಗುವ ಮೊದಲ ಟೆಸ್ಟ್‌ ಪಂದ್ಯದೊಂದಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಪ್ರಾರಂಭಿಸಲು ಪ್ರವಾಸಿ ಭಾರತ ಮತ್ತು ಆತಿಥೇಯ ಆಸ್ಟ್ರೇಲಿಯಾ(IND vs AUS) ತಂಡಗಳು ಸಿದ್ಧವಾಗಿವೆ. ಬಾರ್ಡರ್‌-ಗವಾಸ್ಕರ್‌(Border–Gavaskar Trophy) ಇತಿಹಾಸದಲ್ಲಿ ಮೊದಲ ಬಾರಿಗೆ ಇಬ್ಬರು ವೇಗದ ಬೌಲರ್‌ಗಳಾದ ಜಸ್‌ಪ್ರೀತ್‌ ಬುಮ್ರಾ(jasprit bumrah) ಮತ್ತು ಪ್ಯಾಟ್ ಕಮಿನ್ಸ್(Pat Cummins) ತಂಡಗಳ ನಾಯಕತ್ವವನ್ನು ವಹಿಸಲಿದ್ದಾರೆ.

ಪಂದ್ಯಕ್ಕೂ ಮುನ್ನದಿನ ನಡೆದ ಸುದ್ದಿಗೋಷ್ಠಿಯಲ್ಲಿ ಭಾರತ ತಂಡದ ಹಂಗಾಮಿ ನಾಯಕ ಜಸ್‌ಪ್ರೀತ್‌ ಬುಮ್ರಾ ಹಲವು ವಿಚಾರಗಳನ್ನು ತಿಳಿಸಿದರು. ನ್ಯೂಜಿಲ್ಯಾಂಡ್‌ ವಿರುದ್ಧದ ತವರಿನ ಟೆಸ್ಟ್‌ ಸರಣಿ ಸೋಲನ್ನು ಮರೆತು ನಮ್ಮ ತಂಡ ಉತ್ತಮ ಪ್ರದರ್ಶನ ತೋರುವ ವಿಶ್ವಾಸ ನನಗಿದೆ. ನನ್ನದೇ ಆದ ಶೈಲಿಯಲ್ಲಿ ತಂಡವನ್ನು ಮುನ್ನಡೆಸುವೆ. ಇದು ರೋಹಿತ್‌ ಮತ್ತು ಕೊಹ್ಲಿಗಿಂತಲೂ ಭಿನ್ನ ರೀತಿಯಲ್ಲಿ ಇರಲಿದೆʼ ಎಂದು ಆಸೀಸ್‌ಗೆ ಎಚ್ಚರಿಕೆ ನೀಡಿದರು.

ʼನಾನು ನಾಯಕನಾಗಿದ್ದಾಗ ಅತ್ಯುತ್ತಮ ಪ್ರದರ್ಶನ ನೀಡಬಲ್ಲೆ. ಏಕೆಂದರೆ ನಾನು ಹೆಚ್ಚುವರಿ ಜವಾಬ್ದಾರಿಯನ್ನು ಹೊಂದಿರುವೆ ಎಂದು ನನಗೆ ತಿಳಿದಿದೆ. ವೇಗದ ಪಿಚ್‌ನಲ್ಲಿ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ನಡೆಸುವ ಎಲ್ಲ ತಯಾರಿಯನ್ನು ಪೂರ್ಣಗೊಳಿಸಿದ್ದೇವೆ. ಪ್ರತಿಷ್ಠಿತ ಸರಣಿಯ ಮೊದಲ ಪಂದ್ಯಕ್ಕೆ ನಾಯಕನಾಗಿರುವುದು ನನ್ನ ಪಾಲಿನ ಸೌಭಾಗ್ಯʼ ಎಂದು ಬುಮ್ರಾ ಹೇಳಿದರು.

ಇದನ್ನೂ IND vs AUS: ಮೊದಲ ಟೆಸ್ಟ್‌ಗೆ ಹೀಗಿರಲಿದೆ ಭಾರತ ಆಡುವ ಬಳಗ

ಇದೇ ವೇಳೆ ಮೊಹಮ್ಮದ್‌ ಶಮಿ ತಂಡ ಸೇರುವ ವಿಚಾರದಲ್ಲಿಯೂ ಬುಮ್ರಾ ಮಹತ್ವದ ಹೇಳಿಕೆ ನೀಡಿದರು. ʼಭಾರತದ ಅನುಭವಿ ವೇಗಿ ಶಮಿಯೊಂದಿಗೆ ಟೀಮ್‌ ಮ್ಯಾನೇಜ್‌ಮೆಂಟ್‌ ನಿಕಟ ಸಂಪರ್ಕವನ್ನು ಇಟ್ಟುಕೊಂಡಿದೆ. ಎಲ್ಲವೂ ಸರಿಯಾಗಿ ನಡೆದರೆ, ನೀವು ಅವರನ್ನು ಇಲ್ಲಿಯೂ ನೋಡಬಹುದುʼ ಎಂದು ಬುಮ್ರಾ ಸುದ್ದಿಗಾರರಿಗೆ ತಿಳಿಸಿದರು. ಸದ್ಯ ಶಮಿ ಮುಂಬರುವ ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ ಆಡಲಿದ್ದಾರೆ.

ಕಳೆದ ಎರಡು ಬಾರಿ ಆಸ್ಟ್ರೇಲಿಯಾ ನೆಲದಲ್ಲಿ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಗೆದ್ದಿರುವ ಟೀಮ್‌ ಇಂಡಿಯಾ ಇದೀಗ ಹ್ಯಾಟ್ರಿಕ್‌ ಸಾಧನೆ ಮಾಡಲು ಎದುರು ನೋಡುತ್ತಿದೆ ಹಾಗೂ ಮೂರನೇ ಆವತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೆ ಪ್ರವೇಶಿಸುವ ಪ್ರಯತ್ನದಲ್ಲಿದೆ. ಅದೇ ರೀತಿ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೆ ಲಗ್ಗೆ ಇಡಲು ಆಸ್ಟ್ರೇಲಿಯಾ ತಂಡಕ್ಕೂ ಕೂಡ ಈ ಸರಣಿ ಅತ್ಯಂತ ನಿರ್ಣಾಯಕವಾಗಿದೆ.

ರೋಹಿತ್‌ ಇಲ್ಲದ ಕಾರಣ, ರಾಹುಲ್‌ ಅವರು ಯಶಸ್ವಿ ಜೈಸ್ವಾಲ್‌ ಜತೆ ಇನಿಂಗ್ಸ್‌ ಆರಂಭಿಸಲಿದ್ದಾರೆ. ಯುವ ಆಲ್ರೌಂಡರ್‌ ನಿತೀಶ್‌ ರೆಡ್ಡಿ ಅವರು ಪದಾರ್ಪಣೆ ಮಾಡುವ ನಿರೀಕ್ಷೆ ಹೆಚ್ಚಿದೆ. ಇವರನ್ನು ಆಡಿಸಿದರೆ ಬೌಲಿಂಗ್‌ ಜತೆಗೆ ಬ್ಯಾಟಿಂಗ್‌ ಸೇವೆ ಕೂಡ ತಂಡಕ್ಕೆ ಲಭ್ಯವಾಗಲಿದೆ. ವೇಗದ ಬೌಲರ್‌ ಆಗಿರುವ ಕಾರಣ 4ನೇ ವೇಗದ ಬೌಲರ್​ ಆಗಿ ಕೂಡ ಬಳಸಿಕೊಳ್ಳಬಹುದು. ಶುಭಮನ್‌ ಗಿಲ್‌ ಸ್ಥಾನದಲ್ಲಿ ಕರ್ನಾಟಕದ ದೇವದತ್​ ಪಡಿಕ್ಕಲ್ ಅವಕಾಶ ಗಿಟ್ಟಿಸಿಕೊಳ್ಳಬಹುದು.