Thursday, 31st October 2024

ಅಧಿವೇಶನಕ್ಕೆ ಬೇಕಿಲ್ಲ ಕೋವಿಡ್ ಪಾಸ್ ?

ವಿಶೇಷ ವರದಿ: ರಂಜಿತ್ ಎಚ್.ಅಶ್ವತ್ಥ

ಸಾಮಾಜಿಕ ಅಂತರ, ಮಾಸ್ಕ್‌, ಸ್ಯಾನಿಟಸರ್ ಕಡ್ಡಾಯ

ಕರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವುದರಿಂದ, ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಲು ಕಡ್ಡಾಯ ಕೋವಿಡ್ ಪರೀಕ್ಷೆಯನ್ನು ಸಡಿಲಗೊಳಿಸುವುದು ಬಹುತೇಕ ನಿಶ್ಚಿತವಾಗಿದೆ.

ಕಳೆದ ಅಧಿವೇಶನದ ವೇಳೆ ಕಾರ್ಯ ಕಲಾಪಕ್ಕೆ ಹಾಜರಾಗುವ ಪ್ರತಿಯೊಬ್ಬರು ಕಡ್ಡಾಯವಾಗಿ ಕರೋನಾ ಪರೀಕ್ಷೆ ಮಾಡಿಸಬೇಕು ಎನ್ನುವ ನಿಯಮವನ್ನು ರೂಪಿಸಲಾಗಿತ್ತು. 72 ಗಂಟೆ ಮೊದಲು ಮಾಡಿರುವ ಕರೋನಾ ನೆಗೆಟಿವ್ ಇರುವ ವರದಿ ಇದ್ದರೆ
ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಈ ಬಾರಿ ಈ ನಿಯಮವನ್ನು ಸಡಿಲಗೊಳಿಸಲು ವಿಧಾನಸಭಾಧ್ಯಕ್ಷ ಕಚೇರಿ ಹಾಗೂ ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ದಿನದಿಂದ ದಿನಕ್ಕೆ ಕರೋನಾ ಸೋಂಕಿತರ ಸಂಖ್ಯೆ ಕ್ಷೀಣಿಸುತ್ತಿದೆ. ಸೋಮವಾರ ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿದೆ. ಇದರೊಂದಿಗೆ ದೇಶದಲ್ಲಿಯೂ ಕರೋನಾ ಲಾಕ್‌ಡೌನ್ ಮಾರ್ಗಸೂಚಿಯನ್ನು ಇನ್ನಷ್ಟು ಸಡಿಲಗೊಳಿಸುವುದಕ್ಕೆ ಕೇಂದ್ರ ಸರಕಾರ ಸಿದ್ಧತೆ ಆರಂಭಿಸಿದೆ. ಆದ್ದರಿಂದ ಈ ಹಂತದಲ್ಲಿ ಕಲಾಪದಲ್ಲಿ ಭಾಗಿಯಾಗುವವರಿಗೆ ಕಡ್ಡಾಯ ಕೋವಿಡ್ ಪರೀಕ್ಷೆ ಎನ್ನುವುದು ಸರಿಯಾಗುವುದಿಲ್ಲ. ಆದ್ದರಿಂದ ಕೋವಿಡ್ ಪರೀಕ್ಷೆಯಿಂದ ಈ ಬಾರಿ ರಿಯಾಯಿತಿ ನೀಡಲು ನಿರ್ಧರಿಸ ಲಾಗಿದೆ ಎನ್ನುವ ಮಾತುಗಳು ಕೇಳಿಬಂದಿದೆ.

ಕೋವಿಡ್ ಪರೀಕ್ಷೆ ಬದಲು, ಕಳೆದ ಕಲಾಪದಲ್ಲಿದ್ದಂತೆ ಕಡ್ಡಾಯ ಮಾಸ್ಕ್‌ ಧಾರಣೆ, ಸ್ಯಾನಿಟೈಸರ್ ಹಾಗೂ ಕರೋನಾ ಸೋಂಕಿನ ಲಕ್ಷಣವಿದ್ದರೆ, ಕಲಾ ಪದೊಳಗೆ ಪ್ರವೇಶ ನೀಡುವುದಿಲ್ಲ. ಇದರೊಂದಿಗೆ ಕಳೆದ ಬಾರಿಯಂತೆ ಸಾಮಾಜಿಕ ಅಂತರವನ್ನು
ಗಮನದಲ್ಲಿರಿಸಿಕೊಂಡು ಕೆಲವು ಮಾರ್ಪಾಡು ಮಾಡುವುದು ಬಹುತೇಕ ನಿಶ್ಚಿತವಾಗಿದೆ.

ಈಗ ಶುರು ಮಾಡಿದರೆ ತಯಾರಿ ಕಷ್ಟ: ಕೋವಿಡ್ ಪರೀಕ್ಷೆಯಿಂದ ವಿನಾಯಿತಿ ನೀಡುವ ಬಗ್ಗೆ ಸ್ಪಷ್ಟ ಆದೇಶವನ್ನು ವಿಧಾನ ಸಭಾ ಕಾರ್ಯಾಲಯ ಹೊರಡಿಸಿಲ್ಲ. ಆರೋಗ್ಯ ಇಲಾಖೆಯ ವರದಿ ನೋಡಿಕೊಂಡು ಈ ಬಗ್ಗೆ ನಿರ್ಧರಿಸಲು ಚಿಂತನೆ ನಡೆಸ ಲಾಗಿದೆ. ಆದರೆ ಅಧಿವೇಶನ ಆರಂಭಕ್ಕೆ ಇನ್ನು ಐದು ದಿನ ಬಾಕಿಯಿರುವುದರಿಂದ ಈ ಹಂತದಲ್ಲಿ ಕಡ್ಡಾಯ ಕೋವಿಡ್ ಪರೀಕ್ಷೆ ಎಂದರೆ ತಯಾರಿ ಕಷ್ಟವಾಗುತ್ತದೆ. ಆದ್ದರಿಂದ ಈ ವಿನಾಯಿತಿ ನೀಡುವ ಸಾಧ್ಯತೆಯಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇನ್ನೆರಡು ದಿನದಲ್ಲಿ ಸಭೆ
ಸ್ಪೀಕರ್ ಕಚೇರಿಯಿಂದ ಆರೋಗ್ಯ ಇಲಾಖೆಯ ವರದಿಯನ್ನು ಕೇಳಿದ್ದರೂ, ಇಲ್ಲಿಯವರೆಗೆ ಈ ಸಂಬಂಧ ಅಧಿಕಾರಿಗಳು ಸಭೆ ನಡೆಸಿಲ್ಲ. ಬುಧವಾರ ಅಥವಾ ಗುರುವಾರದ ವೇಳೆಗೆ ಸಭೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಆದರೆ
ಕೋವಿಡ್ ಪರೀಕ್ಷೆಗೆ ಪೂರ್ವ ತಯಾರಿ ಅಗತ್ಯವಿರುವುದರಿಂದ, ಗುರುವಾರ ಸಭೆ ನಡೆಸಿದ ಬಳಿಕ ಕಡ್ಡಾಯ ಪರೀಕ್ಷೆ ಸಾಧ್ಯವಿಲ್ಲ. ಆದ್ದರಿಂದ ಈ ಬಾರಿ ಕೋವಿಡ್ ಟೆಸ್ಟ್‌ ಅನ್ನು ಕಡ್ಡಾಯಗೊಳಿಸುವುದಿಲ್ಲ ಎನ್ನುವ ಮಾತುಗಳು ಕೇಳಿಬಂದಿದೆ.

ಬೇಡ ಎನ್ನಲು ಕಾರಣವೇನು
*ದಿನದಿಂದ ದಿನಕ್ಕೆ ಕರೋನಾ ಕ್ಷೀಣಿಸುತ್ತಿದೆ
*ಕೇಂದ್ರ ಸರಕಾರ ಲಾಕ್‌ಡೌನ್ ಅನ್ನೇ ತೆರವು ಮಾಡುವ ಸಮಯದಲ್ಲಿ ಇದು ಅಗತ್ಯವೇ?
*ಈ ಹಂತದಲ್ಲಿ ಪರೀಕ್ಷೆ ಶುರು ಮಾಡಿದರೆ, ನಿರ್ವಹಣೆ ಕಷ್ಟ
*ಲಕ್ಷಣವಿರುವವರಿಗೆ ಕೋವಿಡ್ ಪರೀಕ್ಷೆ ಮಾಡಿದರೆ ಸಾಕೆಂದ ಅಧಿಕಾರಿಗಳು

***

ಈ ಬಾರಿ ಅಧಿವೇಶನದಲ್ಲಿ ಭಾಗವಹಿಸುವವರಿಗೆ ಕೋವಿಡ್ ಟೆಸ್ಟ್‌ ಮಾಡಬೇಕೋ ಬೇಡವೋ ಎನ್ನುವ ಬಗ್ಗೆ ಆರೋಗ್ಯ
ಇಲಾಖೆ ತಜ್ಞರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು. ಶೀಘ್ರವೇ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.
– ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭಾಧ್ಯಕ್ಷ