Saturday, 23rd November 2024

ಸೋಂಕು ತಡೆಯಲು ಕಡಿವಾಣ

ಕರೋನಾ ಸೋಂಕಿನ ಎರಡನೆಯ ಅಲೆ ರಾಜ್ಯದಲ್ಲಿ ಹಬ್ಬುವ ಸಾಧ್ಯತೆ ಇದೆ ಎಂದು ಕೆಲವು ಅಧ್ಯಯನಗಳು ಎಚ್ಚರಿಕೆ ನೀಡು ತ್ತಿವೆ. ಅಂತಹ ಎರಡನೆಯ ಅಲೆಯು ಮುಂದಿನ ಕೆಲವು ವಾರಗಳಲ್ಲಿ ಹರಡಲೂಬಹುದು ಎಂಬ ಜಿಜ್ಞಾಸೆ ನಡೆದಿದೆ.

ಆ ಸಂದರ್ಭದಲ್ಲಿ ಜನಸಾಮಾನ್ಯರ ಆರೋಗ್ಯದ ರಕ್ಷಣೆಯನ್ನು ಮಾಡುವ ಗುರುತರ ಜವಾಬ್ದಾರಿಯು ಸರಕಾರದ ಅಂಗಸಂಸ್ಥೆ ಗಳು ಮತ್ತು ಕರೋನಾ ವಾರಿಯರ್ಸ್ ಮೇಲೆ ಇರುವುದಂತೂ ನಿಜ. ಕರೋನಾಕ್ಕೆ ಸುರಕ್ಷಿತ ಲಸಿಕೆಯನ್ನು ಹುಡುಕುವ ಕಾರ್ಯವು
ಪ್ರಗತಿಯಲ್ಲಿದ್ದರೂ, ಬಹುಪಾಲು ಜನರಿಗೆ ಅದನ್ನು ಪ್ರಯೋಗಿಸುವ ತನಕ, ಕರೋನಾದ ಸೋಂಕಿನ ಸಾಧ್ಯತೆ ಇದ್ದದ್ದೇ ಎಂದು ಸಹ ತಜ್ಞರು ಹೇಳುತ್ತಿದ್ದಾರೆ. ಈ ನಡುವೆ, ಕರೋನಾ ಸೋಂಕಿನ ಎರಡನೆಯ ಅಲೆಯ ತೀವ್ರತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ, ಹೊಸವರ್ಷದ ಸಂಭ್ರಮಾಚರಣೆಗೆ ಕಡಿವಾಣ ಹಾಕಬೇಕು ಎಂಬ ಸಲಹೆ ಮುನ್ನೆಲೆಗೆ ಬಂದಿದೆ.

ಹೊಸವರ್ಷದ ಆಚರಣೆಯ ಸಮಯದಲ್ಲಿ ನಡೆಯುವ ಮೋಜು, ಕುಣಿತಗಳನ್ನು ನಿಷೇಧಿಸಲಾಗುವುದು ಎಂಬ ಒಂದು ಸುದ್ದಿಯು ಹರಡಿದ್ದು, ಇದು ಸುಳ್ಳು ಸುದ್ದಿಯ ಸ್ವರೂಪವನ್ನೂ ಪಡೆದಿರುವುದು ಒಂದು ಚೋದ್ಯ. ಇಷ್ಟಕ್ಕೂ ಹೊಸವರ್ಷ ಸಂಭ್ರಮಾಚರಣೆ ಎಂದರೇನು? ಕ್ಯಾಲೆಂಡರ್ ಮುಗಿಯುವ ಡಿಸೆಂಬರ್ 31ರ ರಾತ್ರಿ ಹನ್ನೆರಡು ಗಂಟೆಯ ತನಕ ಎಚ್ಚರಿದ್ದು, ವಿವಿಧ ರೀತಿಯ ತಿನಿಸುಗಳನ್ನು ಮತ್ತು ಪಾನೀಯಗಳನ್ನು ಸೇವಿಸಿ, ಸಂತಸದಿಂದ ಹೊಸ ವರ್ಷವನ್ನು ಸ್ವಾಗತಿಸುವುದು ಎಂದೇ ಅರ್ಥ.

ಇಂಥದೊಂದು ಆಚರಣೆಯಿಂದ ವಿವಿಧ ಅಂಗಡಿ, ರೆಸ್ಟಾರೆಂಟ್‌ಗಳಲ್ಲಿ ವ್ಯಾಪಾರ ನಡೆಯುತ್ತದೆ ನಿಜ. ಆದರೆ, ಕರೋನಾ ಸೋಂಕು ವ್ಯಾಪಿಸುವ ಹಿನ್ನೆಲೆಯಲ್ಲಿ ಈ ಮೋಜಿನ ಆಚರಣೆಯನ್ನು ನಿಷೇಧಿಸಿದರೆ ತಪ್ಪಿಲ್ಲ. ಸೋಂಕು ತಡೆಯಲು ಹಬ್ಬ, ಜಾತ್ರೆಗಳನ್ನೇ ನಿಷೇಧಿಸಿರುವಾಗ, ಹೊಸವರ್ಷಾಚರಣೆಯು ನಿಷೇಧಗೊಂಡರೆ, ಅದರಿಂದ ಸೋಂಕು ಹರಡುವ ಸಾಧ್ಯತೆ ಕಡಿಮೆಗೊಂಡರೆ ಅದು ಸ್ವಾಗತಾರ್ಹ ಬೆಳವಣಿಗೆ.