ನವದೆಹಲಿ: ಪ್ರಸಿದ್ಧ ಮಸಾಲ ಬ್ರ್ಯಾಂಡ್ ಎಂಡಿಎಚ್ ನ ಸಂಸ್ಥಾಪಕ ಮಹಾಶಯ್ ಧರಂಪಾಲ್ ಗುಲಾಟಿ(98) ಗುರುವಾರ ನವದೆಹಲಿಯ ಮಾತಾ ಚನನ್ ಆಸ್ಪತ್ರೆಯಲ್ಲಿ ನಿಧನರಾದರು. ಗುಲಾಟಿ ಅವರು ಕಳೆದ ಕೆಲ ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆಪ್ತವಲಯದಲ್ಲಿ ‘ದಾದಾಜಿ’, ಮಹಾಶಯಜಿ’ ಎಂದೇ ಕರೆಯಲ್ಪಡುತ್ತಿದ್ದ ಮಹಾಶಯ್ ಧರಂಪಾಲ್ ಗುಲಾಟಿ ಅವರ ಜನ್ಮಸ್ಥಳ ಈಗಿನ ಪಾಕಿಸ್ಥಾನದ ಸಿಯಾಲ್ ಕೋಟ್. ಗುಲಾಟಿ ಅವರ ತಂದೆ ಸಿಯಾಲ್ ಕೋಟ್ ನಲ್ಲಿ ಮಾಸಾಲ ಪದಾರ್ಥಗಳ ವ್ಯಾಪಾರ ನಡೆಸುತ್ತಿದ್ದರು. ದೇಶ ವಿಭಜನೆ ನಂತರ ದಿಲ್ಲಿಗೆ ಆಗಮಿಸಿ ಒಂದು ಕಿರಾಣಿಯಲ್ಲಿ ತಮ್ಮ ವ್ಯಾಪಾರ ಆರಂಭಿಸಿದರು.
ದಿಲ್ಲಿಯ ಕರೋಲ್ ಬಾಘ್ ನಿಂದ ಆರಂಭವಾದ ಮಹಾಶಯ್ ಧರಂಪಾಲ್ ಗುಲಾಟಿ ವ್ಯಾಪಾರ ಬೆಳೆದು ದೇಶದ ಪ್ರಸಿದ್ದ ಎಂಡಿಎಚ್ (ಮಹಾಶಿಯನ್ ದಿ ಹಟ್ಟಿ) ಬ್ರ್ಯಾಂಡ್ ವರೆಗೆ ತಲುಪಿದೆ. ಸದ್ಯ ಎಂಡಿಎಚ್ ದೇಶದ ಅಗ್ರಗಣ್ಯ ಮಸಾಲ ಉತ್ಪಾದನಾ ಸಂಸ್ಥೆಗಳಲ್ಲಿ ಒಂದು.
ಮಹಾಶಯ್ ಧರಂಪಾಲ್ ಗುಲಾಟಿ 2019ರಲ್ಲಿ ಪದ್ಮಭೂಷಣ ಪುರಸ್ಕಾರಕ್ಕೂ ಪಾತ್ರರಾಗಿದ್ದರು. ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ಮಹಾಶಯ್ ಧರಂಪಾಲ್ ಗುಲಾಟಿ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ