ಬೆಂಗಳೂರು ಮಹಾನಗರಿಯಲ್ಲಿ ಬೀದಿನಾಯಿಗಳ ಹಾವಳಿ ಮಿತಿ ಮೀರಿರುವುದು ಗಂಭೀರ ಸಂಗತಿ. ಲಗ್ಗೆರೆ ಬಡಾವಣೆ ಪ್ರೇಮಾ ನಗರದಲ್ಲಿ ಜನರು ಮನೆಯಿಂದ ಹೊರಗೆ ಹೆಜ್ಜೆಯಿಡಲೂ ಹಿಂದು- ಮುಂದು ನೋಡುವಂತಾಗಿದೆ, ಮಕ್ಕಳು ಶಾಲೆಗೆ ತೆರಳುವುದೂ ದುಸ್ತರವಾಗಿದೆ ಎಂಬ ಮಾಹಿತಿಯು ಇದಕ್ಕೆ ಪುಷ್ಟಿನೀಡಬಲ್ಲದು. ಬೆಂಗಳೂರಿನಲ್ಲಿ ಕಳೆದ 8 ತಿಂಗಳಲ್ಲಿ ಬರೋಬ್ಬರಿ 16888ರಷ್ಟು ನಾಯಿದಾಳಿ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಸಾಕುನಾಯಿಗಳ ದಾಳಿಯ ಪ್ರಮಾಣವೇ ಶೇ.40 ರಷ್ಟಿದೆ ಎಂಬುದು ಪಾಲಿಕೆಯ ವರದಿಯಲ್ಲೇ ದಕ್ಕುವ ಮಾಹಿತಿ.
ಇಷ್ಟಾಗಿಯೂ ನಾಯಿಗಳ ಹಾವಳಿಯನ್ನು ತಡೆಗಟ್ಟಲು ಆಗುತ್ತಿಲ್ಲವೇಕೆ, ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಬಿಬಿಎಂಪಿ ಇನ್ನೂ ಮೀನ-ಮೇಷ ಎಣಿಸುತ್ತಿರುವುದೇಕೆ? ಎಂಬುದು ಭಯಗ್ರಸ್ತ ಜನರಿಂದ ಹೊಮ್ಮುತ್ತಿರುವ ಪ್ರಶ್ನೆ. ಮತ್ತೊಂದೆಡೆ, ದೇಶದ ಅತಿಹೆಚ್ಚು ಏರ್ಟ್ರಾಫಿಕ್ ಕಾಣಬರುವ ವಿಮಾನ ನಿಲ್ದಾಣಗಳಲ್ಲಿ ಒಂದೆನಿಸಿರುವ ಬೆಂಗಳೂರಿನ ‘ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ದ ರನ್ವೇಯಲ್ಲೂ ನಾಯಿಗಳ ಕಾಟ ಪ್ರಾರಂಭವಾಗಿದೆಯಂತೆ! ಈ ನಾಯಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಯಾಗಿಲ್ಲ, ರೇಬಿಸ್ ರೋಗನಿರೋಧಕ ಲಸಿಕೆಯ ನೀಡಿಕೆಯಾಗಿಲ್ಲ ಎಂಬುದು ಮತ್ತೊಂದು ಆಘಾತಕಾರಿ ಸಂಗತಿ.
ರಸ್ತೆಬದಿಯ ತ್ಯಾಜ್ಯಗಳಲ್ಲಿನ ಮಾಂಸವನ್ನು ತಿಂದು ಆಕ್ರಮಣಕಾರಿಯಾಗಿ ಬೆಳೆದಿರುವ ಇಂಥ ನಾಯಿಗಳು ಪ್ರಯಾಣಿಕರಲ್ಲಿ ತಲ್ಲಣ ಉಂಟುಮಾಡಿರುವುದು ಸುಳ್ಳಲ್ಲ. ನಾಯಿಗಳ ಇಂಥ ಹಾವಳಿಯ ಕುರಿತಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಅಳಲು ತೋಡಿಕೊಂಡರೂ, ಸಂಬಂಧಪಟ್ಟವರಿಗೆ ದೂರು ಸಲ್ಲಿಸಿದರೂ ವಿಮಾನ ನಿಲ್ದಾಣದ ಆಡಳಿತ ಮಂಡಳಿಯು ಈ ಸಮಸ್ಯೆಗೆ ಮದ್ದು ಅರೆಯುವ ನಿಟ್ಟಿನಲ್ಲಿ ಯಾವ
ಕ್ರಮಕ್ಕೂ ಮುಂದಾಗದಿರುವುದು ಜನರ ಅಸಮಾಧಾನ-ಆಕ್ರೋಶಗಳನ್ನು ಮತ್ತಷ್ಟು ಹೆಚ್ಚಿಸಿದೆ ಎನ್ನಬೇಕು.
ಬಿಬಿಎಂಪಿಯ ಮತ್ತು ವಿಮಾನ ನಿಲ್ದಾಣದ ಆಡಳಿತ ಮಂಡಳಿಯ ಈ ವರ್ತನೆ ಸಲ್ಲ. ದೇಶದ ಮಿಕ್ಕ ನಗರಗಳಲ್ಲಿ ಇಂಥ ಸಮಸ್ಯೆಗೆ ಯಾವ ಪರಿಹಾರೋಪಾಯಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ಅಧ್ಯಯನ ಮಾಡಿ ಅದನ್ನು ಬೆಂಗಳೂರಿನಲ್ಲೂ ಅಳವಡಿಸಿಕೊಳ್ಳುವುದಕ್ಕೆ
ಸಂಬಂಧಪಟ್ಟವರು ಮುಂದಾಗಬೇಕಿದೆ. ಮನುಷ್ಯನ ಜೀವ ಮತ್ತು ಆರೋಗ್ಯ ಅತ್ಯಂತ ಅಮೂಲ್ಯವಾದದ್ದು; ಅದಕ್ಕೇ ಸಂಚಕಾರ ಒದಗುವಂತಾದರೆ ಪ್ರಯೋಜನವೇನು? ಸಂಬಂಧಪಟ್ಟವರು ಇನ್ನಾದರೂ ಎಚ್ಚೆತ್ತುಕೊಳ್ಳಲಿ.
ಇದನ್ನೂ ಓದಿ: editorial