Tuesday, 26th November 2024

Explosion: 3 ಮನೆಗಳಲ್ಲಿ ಭೀಕರ ಸ್ಫೋಟ; ನಾಲ್ವರ ಸಾವು: ಕಾರಣ ನಿಗೂಢ

ಭೋಪಾಲ್‌: ಮಧ್ಯಪ್ರದೇಶದ (Madhya Pradesh) ಮೊರೆನಾ ನಗರದಲ್ಲಿ ನ. 25ರ ತಡರಾತ್ರಿ 3 ಮನೆಗಳಲ್ಲಿ ಸ್ಫೋಟ (Explosion) ಸಂಭವಿಸಿದೆ. ಪರಿಣಾಮವಾಗಿ ನಾಲ್ವರು ಸಾವನ್ನಪ್ಪಿದ್ದು, ಐವರಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ರಾಥೋಡ್‌(Rathore) ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಸ್ಫೋಟದಿಂದಾಗಿ 3 ಮನೆಗಳು ಕುಸಿದು ಬಿದ್ದು ನೆಲ ಸಮವಾಗಿವೆ ಎಂದು ತಿಳಿದು ಬಂದಿದೆ. ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಧ್ಯರಾತ್ರಿ ಸ್ಫೋಟ ಸಂಭವಿಸಿದ್ದು, ಈ ಕುರಿತು ಮಾಹಿತಿ ಸಿಕ್ಕ ಬೆನ್ನಲ್ಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮುನ್ಸಿಪಲ್ ಕಾರ್ಪೊರೇಷನ್ (Municipal Corporation) ನೆರವಿನಿಂದ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.

“ಕೊತ್ವಾಲಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ 12ರಿಂದ 1 ಗಂಟೆಯ ನಡುವೆ ಈ ಘಟನೆ ಸಂಭವಿಸಿರುವ ಬಗ್ಗೆ ಮಾಹಿತಿ ಬಂದಿದೆ. ತಕ್ಷಣವೇ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಮುನ್ಸಿಪಲ್ ಕಾರ್ಪೊರೇಷನ್ ತಂಡದ ನೆರವಿನಿಂದ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ” ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ (CSP) ರವಿ ಸೋನರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

“ನಾವು ರಕ್ಷಣಾ ಕಾರ್ಯಾಚರಣೆಯನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಈವರೆಗೆ ನಾವು 2 ಮೃತ ದೇಹಗಳನ್ನು ಪತ್ತೆ ಹಚ್ಚಿದ್ದೇವೆ. ಮನೆಯ ಅವಶೇಷಗಳಲ್ಲಿ ಇನ್ನೂ ಇಬ್ಬರು ಸಿಲುಕಿರುವ ಸಾಧ್ಯತೆಯಿದೆ. ಐವರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಸೋನರ್ ಹೇಳಿದ್ದಾರೆ.

ಘಟನೆಯ ಬಗ್ಗೆ ಮಾತನಾಡಿರುವ ಮೊರೆನಾ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಪಿ) ಸಮೀರ್ ಸೌರಭ್ “ಸ್ಫೋಟದ ಕಾರಣ ಇನ್ನೂ ತಿಳಿದುಬಂದಿಲ್ಲ. ಸ್ಥಳದಲ್ಲಿ ಎಫ್‌ಎಸ್‌ಎಲ್(FSL) ತಂಡವಿದೆ. ತನಿಖೆಯ ನಂತರ ನಿಖರ ಕಾರಣವನ್ನು ನಿರ್ಧರಿಸಲಾಗುವುದು” ಎಂದಿದ್ದಾರೆ.

ಸ್ಫೋಟದ ಹಿಂದಿರುವ ಕಾರಣವೇನು?

ಸ್ಫೋಟದಿಂದಾಗಿ ಮನೆಗಳು ಧ್ವಂಸಗೊಂಡಿದ್ದು, ಗನ್ ಪೌಡರ್‌ನಿಂದ ಸ್ಫೋಟ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಅವಶೇಷಗಳನ್ನು ತೆಗೆಯುವಾಗ ಎಲ್‌ಪಿಜಿ ಸಿಲಿಂಡರ್‌ಗಳು ಹಾಗೇ ಇರುವುದು ಕಂಡುಬಂದಿದೆ. ಸ್ಫೋಟದ ಹಿಂದಿನ ಖಚಿತ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಭೂಪೇಂದ್ರ ಸಿಂಗ್ ಕುಶ್ವಾಹಾ ಹೇಳಿದ್ದಾರೆ.

ವಿಧಿ ವಿಜ್ಞಾನ ಪ್ರಯೋಗಾಲಯದ ತಂಡದ ಕಾರ್ಯಾಚರಣೆಯಿಂದ ಗನ್‌ ಪೌಡರ್ ಅಥವಾ ಗ್ಯಾಸ್ ಸಿಲಿಂಡರ್ ನಿಂದ ಸ್ಫೋಟಗೊಂಡಿದೆಯೇ ಎಂದು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವವರನ್ನು ಗ್ವಾಲಿಯರ್‌ಗೆ ಕಳುಹಿಸಲಾಗಿದೆ ಎಂದು ಮೊರೆನಾ ಜಿಲ್ಲಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಗ್ಯಾಸ್‌ ಸಿಲಿಂಡರ್‌ ಸ್ಫೋಟ

ಕಳೆದ ತಿಂಗಳಷ್ಟೇ ಬೆಂಗಳೂರು ನಗರದ ಬಿಟಿಎಂ ಲೇಔಟ್‌ನ ಮನೆಯೊಂದರಲ್ಲಿ ಎಲ್‌ಪಿಜಿ ಸಿಲಿಂಡರ್‌ ಸ್ಫೋಟಗೊಂಡು 36 ವರ್ಷದ ಚ್ಯಕ್ತಿಗೆ ಸುಟ್ಟ ಗಾಯಗಳಾಗಿದ್ದವು. ಮನೆ ಸಮೀಪದ ಅಪಾರ್ಟ್‌ಮೆಂಟ್‌ಗಳಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಪವನ್‌ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಸಿಲಿಂಡರ್‌ ಸ್ಫೋಟಗೊಂಡ ಮಾಹಿತಿ ಸಿಕ್ಕ ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದರು. ಸ್ಫೋಟದ ತೀವ್ರತೆಗೆ ಮನೆಯ ಗೋಡೆಗಳು ಕುಸಿದು ಪಕ್ಕದ ಮನೆಗಳಿಗೂ ಹಾನಿಯಾಗಿತ್ತು.

ಈ ಸುದ್ದಿಯನ್ನೂ ಓದಿ: ಗ್ಯಾಸ್ ಸಿಲಿಂಡರ್‌ಗಳ ಸ್ಫೋಟ: ಬಸ್‌ಗಳು ಬೆಂಕಿಗೆ ಆಹುತಿ