Tuesday, 26th November 2024

ಮತ್ತೊಮ್ಮೆ ಅವತರಿಸಿ ಬನ್ನಿ

ಗೋಪಣ್ಣ ಬೆಂಗಳೂರು

ಬೆಲಗೂರು ಒಂದು ಪುಟ್ಟ ಹಳ್ಳಿ. ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲೂಕಿಗೆ ಸೇರಿದ, ಇತ್ತ ಕಡೂರು ಮತ್ತು ಅತ್ತ ಅರಸಿಕೆರೆ ತಾಲೂಕುಗಳ ಗಡಿಯಂಚಿನ ಗ್ರಾಮ. ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆಯೂ ಈ ಹಳ್ಳಿಗಿದೆ. ಅಲ್ಲಿ ರಾಮ ಮಾನಸ ಮಂದಿರ
ಕಟ್ಟುವ ಸಮಯದಲ್ಲಿ ಬೃಹತ್ ಗಾತ್ರದ ಪುರಾತನ ಇಟ್ಟಿಗೆಗಳು ದೊರೆತಿದ್ದು, ಅವುಗಳಲ್ಲಿ ಕೆಲವು ಈಗಲೂ ಬಿಂದು ಮಾಧವ ಗುರುಗಳ ಮನೆಯಲ್ಲಿ ಇದೆ.

ಬೆಲಗೂರಿನ ಆಂಜನೇಯ ಸ್ವಾಮಿ ದೇಗುಲದ ಅರ್ಚಕರಾದ ಲಕ್ಷ್ಮೀನಾರಾ ಯಣ ಭಟ್ಟ ಮತ್ತು ಲಕ್ಷ್ಮಿದೇವಮ್ಮನವರ ಕಿರಿಯ ಮಗನಾಗಿ 1947ರಲ್ಲಿ ಜನನ. ಬಡತನದ ಕುಟುಂಬ. ಹುಟ್ಟಿದ ಏಳು ದಿನಕ್ಕೇ ತಂದೆಯನ್ನು ಕಳೆದುಕೊಂಡು, ಕಷ್ಟದಲ್ಲಿ ಬಾಲ್ಯವನ್ನು ಕಳೆಯಬೇಕಾದ ಅನಿವಾರ್ಯತೆ. ಬಾಲ್ಯದಿಂದಲೂ ಪಠ್ಯಕ್ರಮದಲ್ಲಿ ಆಸಕ್ತಿ ಕಡಿಮೆ. ರಾಮಾಯಣದ ಕಥೆಯನ್ನು ಕೇಳುವುದನ್ನೇ ತಮ್ಮ ಉಸಿರಾಗಿಸಿಕೊಂಡು ಬೆಳೆದರು.

ನಾಯಿಯೊಂದು ಕಚ್ಚಿ ಗಾಯಗೊಳಿಸಿದ ಮಂಗನ ಮೇಲೆ ವಿಶೇಷ ಪ್ರೀತಿ, ಅಕ್ಕರೆ, ಮಮತೆಯನ್ನು ತೋರಿ, ಅದನ್ನು ತನ್ನ ಜೊತೆಗೇ ಇಟ್ಟು ಕೊಂಡು, ತನಗೆ ನೀಡಿದ ಆಹಾರದಲ್ಲಿ ಅರ್ಧಭಾಗವನ್ನು ಆ ಪ್ರಾಣಿಗೂ ನೀಡಿ ಸಂತೋಷ ಪಡುತ್ತಿದ್ದ ಬಾಲಕ ಅವರು. ಅವರ ದೃಷ್ಟಿಯಲ್ಲಿ ಆ ಮಂಗವು ಪ್ರಾಣಿಯಲ್ಲ, ತನ್ನ ಸಮಾನ ಎನಿಸಿದ ಓರ್ವ ಜೀವಿ. ಮುಂದೆ ಯೂ ಆ ಕೋತಿರೂಪಿ ಆಂಜನೇಯನೇ ಅವರ ಜತೆಗಾರ.

ಒಂದು ದಿನ ಆ ಕೋತಿಯು ಹಾರಿ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸುತ್ತಿದ್ದುದನ್ನು ಕಂಡ ಅವರು, ಅಚ್ಚರಿಗೊಂಡು ಅದೇಕೆ ತಪ್ಪಿಸಿಕೊಳ್ಳುತ್ತಿದೆ ಎಂಬ ಭಾವನೆಯಿಂದ, ಅದನ್ನು ಹಿಡಿಯಲು ಪ್ರಯತ್ನಿಸಿದರು. ಆಗ ಆ ಕೋತಿಯು ಎದ್ದು ನಿಂತು ‘ತಾಳು ಮಗು, ಮುಂದೆ ನಾನೇನು ಎಂದು ನೋಡುತ್ತೀಯಾ’ ಎಂದು ಹೇಳಿದಂತೆ ಅನಿಸಿ, ಕಣ್ಮರೆಯಾಯಿತು. ಇದು ಗುರುಗಳು ತನ್ನ 17ನೆಯ ವಯಸ್ಸಿನಲ್ಲಿ ಆಂಜನೇಯನನ್ನು ನೋಡಿದ ಮೊದಲ ಘಟನೆ ಎಂಬ ಭಾವನೆ ಇದೆ.

ಹೀಗೆ ಆರಂಭಗೊಂಡ ಆಂಜನೇಯನ ಸಾಂಗತ್ಯ, ಅನುಗ್ರಹ ಮುಂದೆ ಹಲವಾರು ಮಾನವಾತೀತ ಎನಿಸುವ ಅದ್ಭುತ ಕಾರ್ಯ ಗಳನ್ನು ಗುರುಗಳಿಂದ ಮಾಡಿಸಿದೆ. ಆಂಜನೇ ಯನ ಆವಾಹನೆಯಾದರೆ ಸರಿ, ಗುರುಗಳ ಶಕ್ತಿಗೆ ಮೇರೆಯೇ ಇರುತ್ತಿರಲಿಲ್ಲ. ಕಪಿಯಂತೆ ಮರಕ್ಕೆ ನೆಗೆಯುವುದು, ಮರದ ಎಲೆಗಳನ್ನೇ ತಿನ್ನುವುದು, ದಿನಗಟ್ಟಲೆ ಮರಗಳ ಮೇಲೆ ಇರುವುದು, ಹತ್ತೈವತ್ತು ಬಾಳೆಹಣ್ಣುಗಳನ್ನು ಸಿಪ್ಪೆ ಸಹಿತ ತಿನ್ನುವುದು, ಕೊಡಗಟ್ಟಲೆ ಪಾನಕ ಕುಡಿಯುವುದು ನಡೆಯುತ್ತಿತ್ತು. ಇದನ್ನು ಹತ್ತಿರದಿಂದ ಕಂಡವರು ಈಗಲೂ ಇದ್ದಾರೆ. ಇದರ ಜತೆಯಲ್ಲೇ, ಹೆಚ್ಚಿನ ಗ್ರಂಥಾಧ್ಯಯನವನ್ನು ಮಾಡದೆ, ಪುರಾಣ, ವೇದಗಳ ಸಾರವನ್ನು ಅವರು ಅರಿತಿದ್ದು ಆಂಜನೇಯನ ಅನುಗ್ರಹದಿಂದಲೇ ಎಂಬ ನಂಬಿಕೆ.

ಮಾತನಾಡುವ ಆಂಜನೇಯ
ಭಕ್ತರ ಕಷ್ಟಕ್ಕೆ, ಮಾರ್ಗದರ್ಶನ ಅರಸಿ ಬಂದ ಅನುಯಾಯಿಗಳ ಕಷ್ಟಗಳನ್ನು ಪರಿಹರಿಸು ವುದು ಬಿಂದು ಮಾಧವ ಸ್ವಾಮಿಗಳ ಹವ್ಯಾಸ ಮತ್ತು ಕೈಂಕರ್ಯ. ಆದ್ದರಿಂದ ಭಕ್ತರು ಅವರನ್ನು ‘ಮಾತನಾಡುವ ಆಂಜನೇಯ’ ಎಂದೇ ನಂಬಿದ್ದರು. ಪ್ರತಿ ಹುಣ್ಣಿಮೆಯಂದು ನಾನಾ ರೀತಿಯ ಪೂಜೆ, ಹೋಮ, ಶ್ರಾವಣ ಮಾಸದ ವಿಶೇಷ ಯಾಗ, ಹನುಮ ಜಯಂತಿ, ರಥೋತ್ಸವ, ನಿತ್ಯ ಅನ್ನ ದಾಸೋಹ, ಶತ ಚಂಡಿ ಯಾಗ, ಮಹಾಲಕ್ಷ್ಮಿ ಯಾಗ, ಕೋಟಿ ರುದ್ರ ಜಪ ಯಾಗ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಭಕ್ತರ ಅಭಿಲಾಷೆ ಯಂತೆ ಗುರುಗಳು ನಡೆಸುತ್ತಾ ಬಂದಿದ್ದರು.

ರಾಮ ಭಜನೆ ಎಂದರೆ ವಿಶೇಷ ಪ್ರೀತಿ, ಆಸಕ್ತಿ. ಆಗಾಗ ಭಜನಾ ಸಪ್ತಾಹಗಳೂ ನಡೆಯುತ್ತಲೇ ಇದ್ದವು. ಬೆಲಗೂರಿನ ಬಿಂದು ಮಾಧವ ಸ್ವಾಮಿಗಳಿಗೆ ಎಲ್ಲಾ ಜನರೂ ಸಮಾನರು. ಎಲ್ಲರನ್ನೂ ಪ್ರೀತಿಯಿಂದ, ಅಕ್ಕರೆಯಿಂದ ಕಾಣುತ್ತಿದ್ದರು. ಜಾತಿ ಭೇದವನ್ನು ಮೀರಿದ ಅವಧೂತರು ಅವರು. ಅವರ ಪರಿಕಲ್ಪನೆ ಎನಿಸಿದ ಅಪರೂಪದ ರಥವೊಂದನ್ನು ಈಚೆಗೆ ಬೆಲಗೂರಿನಲ್ಲಿ ಸಮರ್ಪಣೆ
ಮಾಡಲಾಯಿತು. ಚಾರಿತ್ರಿಕ ವ್ಯಕ್ತಿಗಳ ಕೆತ್ತನೆಗಳನ್ನು ಹೊಂದಿರುವ ಈ ರಥ ಸಮರ್ಪಣೆ ಒಂದು ವಿಶೇಷ ಅನುಭವ. ಇದರಲ್ಲಿ ಎಲ್ಲಾ ಮತ,  ಪಂಥಗಳ ವ್ಯಕ್ತಿಗಳ ಚಿತ್ರಣಗಳನ್ನು ಗುರುಗಳು ಕೆತ್ತಿಸಿದ್ದಾರೆ. ಭಾರತಲ್ಲಿ ಇಂತಹ ಇನ್ನೊಂದು ಮರದ ರಥವಿಲ್ಲ.
ಗುರುವಾಗಿ, ತಂದೆಯಾಗಿ, ತಾಯಿಯಾಗಿ, ಬಂಧು ಬಳಗವಾಗಿ, ಸ್ನೇಹಿತರಾಗಿ, ಸಮಾಜದ ಜನರಿಗೆ ಮಾರ್ಗದರ್ಶಕರಾಗಿದ್ದ
ಬಿಂದು ಮಾಧವ ಗುರುಗಳು, ಬಡವ ಬಲ್ಲಿದ ಭೇದಭಾವವಿಲ್ಲದೆ, ಜಾತಿ ಬೇಧವಿಲ್ಲದೆ ಎಲ್ಲಾ ವಯಸ್ಕರನ್ನೂ ಸಮಾನವಾಗಿ ಕಾಣುತ್ತಿದ್ದರು.

ಇದು ಬಹು ವಿಶೇಷ. ಅವರ ಅಗಲುವಿಕೆ ಭಕ್ತರನ್ನು ಅನಾಥ ಭಾವನೆಗೆ ನೂಕಿದೆ. ಬಿಂದು ಮಾಧವ ಸ್ವಾಮಿಗಳು ಮತ್ತೊಮ್ಮೆ
ಅವತರಿಸಿ ಬರಲಿ.