ಮುಂಬೈ: ಇತ್ತೀಚೆಗೆ ಡಿಜಿಟಲ್ ಅರೆಸ್ಟ್ (Digital Arrest) ಪ್ರಕರಣಗಳು ಹೆಚ್ಚಾಗುತ್ತಿದ್ದು, ಸೈಬರ್ ಕಳ್ಳರು (Cyber Frauds) ನಿರಂತರವಾಗಿ ವಂಚನೆ ನಡೆಸುತ್ತಿದ್ದಾರೆ. ಇದರಿಂದ ಜನ ಸಾಮಾನ್ಯರು ಭಯಭೀತರಾಗಿದ್ದಾರೆ. ಯಾವ ಸಂದರ್ಭದಲ್ಲಿ ಯಾರು ಕರೆ ಮಾಡಿ ವಂಚನೆ ನಡೆಸುತ್ತಾರೋ ಎಂಬ ಆತಂಕದಲ್ಲಿದ್ದಾರೆ. ಈ ಕುರಿತು ಕಠಿಣ ಕಾನೂನು ಕ್ರಮ ಜಾರಿಗೊಂಡಿದ್ದರೂ, ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಇದೀಗ ಮತ್ತೆ ಮುಂಬೈಯ 77 ವರ್ಷದ ಮಹಿಳೆಯೊಬ್ಬರಿಂದ ಬರೋಬ್ಬರಿ 4 ಕೋಟಿ ರೂ.ಗಳನ್ನು ಸೈಬರ್ ಕಳ್ಳರು ವಂಚಿಸಿರುವ ಸುದ್ದಿ ಬೆಳಕಿಗೆ ಬಂದಿದೆ.
ಮುಂಬೈ ನಗರದಲ್ಲಿ ವಾಸವಿರುವ ಮಹಿಳೆಯೊಬ್ಬರಿಗೆ ಕರೆಮಾಡಿ ಐಪಿಎಸ್ (IPS) ಮತ್ತು ಕಾನೂನು ಅಧಿಕಾರಿಗಳಂತೆ ನಟಿಸಿಸ ವಂಚಕರು ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ನಿರಂತರವಾಗಿ ಒಂದು ತಿಂಗಳ ಕಾಲ ಮಹಿಳೆಯನ್ನು ವಂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಹೀಗೊಂದು ದಿನ ವಂಚಕರು ಮಹಿಳೆಗೆ ವಾಟ್ಸ್‌ಆ್ಯಪ್ ಕರೆ ಮಾಡಿ “ತೈವಾನ್‌ನಲ್ಲಿ ನಿಮ್ಮ ಪಾರ್ಸೆಲ್ ಸಿಕ್ಕಿದೆ. 5 ಪಾಸ್‌ಪೋರ್ಟ್‌ಗಳು, ಬ್ಯಾಂಕ್ ಕಾರ್ಡ್, 4 ಕೆಜಿ ಬಟ್ಟೆ ಮತ್ತು ಎಂಡಿಎಂಎ (MDMA) ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಹೇಳಿದ್ದಾರೆ. ಮೊದಲ ಕರೆಯಿಂದಲೇ ಮಹಿಳೆಯನ್ನು ವಂಚಿಸಲು ಶುರು ಮಾಡಿದ್ದಾರೆ ಎನ್ನಲಾಗಿದೆ.
ಮಹಿಳೆಯನ್ನು ಹೆದರಿಸುವ ಸಲುವಾಗಿ ವಂಚಕನು ಮಹಿಳೆಗೆ ಕ್ರೈಂ ಬ್ರಾಂಚ್‌ನ ಸ್ಟಾಂಪ್‌ನೊಂದಿಗೆ ನಕಲಿ ನೋಟಿಸ್ ಕಳುಹಿಸಿದ್ದಾನೆ ಎಂದು ಮುಂಬೈ ಅಪರಾಧ ವಿಭಾಗ ತಿಳಿಸಿದೆ. ಮಹಿಳೆ ತಾನು ಯಾರಿಗೂ ಯಾವುದೇ ಪಾರ್ಸೆಲ್ ಕಳುಹಿಸಿಲ್ಲ ಎಂದು ಹೇಳಿದಾಗ, ಕರೆ ಮಾಡಿದ ವ್ಯಕ್ತಿಯು ನಿಮ್ಮ ಆಧಾರ್ ಕಾರ್ಡ್ ಅನ್ನು ಬಳಸಿಕೊಳ್ಳಲಾಗಿದೆ. ಮುಂಬೈ ಪೊಲೀಸ್ ಅಧಿಕಾರಿಯೊಂದಿಗೆ ನೀವು ಈ ಕೂಡಲೇ ಮಾತನಾಡಬೇಕು ಎಂದು ಹೇಳಿದ್ದಾನೆ. ತಕ್ಷಣವೇ ನಕಲಿ ಪೊಲೀಸ್ ಅಧಿಕಾರಿಗೆ ಫೋನ್ ಕರೆಯನ್ನು ವರ್ಗಾಯಿಸಿದ್ದಾನೆ.
ಈ ಮೊದಲು, ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡಲು ಸ್ಕೈಪ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ಮಹಿಳೆಗೆ ವಂಚಕರು ಹೇಳಿದ್ದಾರೆ. ಫೋನ್ ಕಾಲ್ ಕಟ್ ಮಾಡದಂತೆ ಮತ್ತು ಈ ಕುರಿತು ಯಾರಲ್ಲಿಯೂ ಹೇಳಬಾರದು ಎಂಬಂತೆ ಮಾತನಾಡಿದ್ದಾರೆ.
ಒಬ್ಬ ವ್ಯಕ್ತಿ, ಐಪಿಎಸ್ ಅಧಿಕಾರಿಯ ಸೋಗಿನಲ್ಲಿ ತನ್ನನ್ನು ಆನಂದ್ ರಾಣಾ ಎಂದು ಪರಿಚಯಿಸಿಕೊಂಡಿದ್ದಾನೆ. ಕರೆ ಮಾಡಿದ ವೇಳೆ ಮಹಿಳೆಯ ಬ್ಯಾಂಕ್ ಖಾತೆಯ ವಿವರಗಳನ್ನು ಕೇಳಿದ್ದಾನೆ. ಅಷ್ಟೇ ಅಲ್ಲದೆ ಹಣಕಾಸು ಇಲಾಖೆಯ ಐಪಿಎಸ್ ಜಾರ್ಜ್ ಮ್ಯಾಥ್ಯೂ ಎಂಬ ಮತ್ತೊಬ್ಬ ನಕಲಿ ವ್ಯಕ್ತಿಗೆ ಕರೆಯನ್ನು ವರ್ಗಾಯಿಸಿದ್ದಾನೆ. ಮಹಿಳೆಯಲ್ಲಿ ನಿಮ್ಮ ಪ್ರಕರಣದ ವಿಷಯವಾಗಿ ತನಿಖೆ ನಡಸಬೇಕಿದೆ. ಹಾಗಾಗಿ ನಾವು ಹೇಳುವ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಬೇಕೆಂದು ಹೇಳಿದ್ದಾರೆ. ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ವರ್ತಿಸಿದ ವಂಚಕರು ಮಹಿಳೆಯ ಬಳಿ ನೀವು ನಿರಪರಾಧಿ ಎಂದು ಸಾಬೀತಾದರೆ ನಿಮ್ಮ ಹಣವನ್ನು ಹಿಂತಿರುಗಿಸುತ್ತೇವೆಂದು ಭರವಸೆ ನೀಡಿದ್ದಾರೆ.
ವಂಚಕರ ಮಾತುಗಳಿಗೆ ಬೆದರಿದ ಮಹಿಳೆ ಮೊದಲಿಗೆ 15 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ವಿಡಿಯೋ ಕಾಲ್ ಕಟ್ ಮಾಡಬಾರದು, ವಿಡಿಯೊ ಆನ್ ಮಾಡಿ ಇಟ್ಟುಕೊಳ್ಳಬೇಕು ಇಲ್ಲವಾದರೆ ಬಂಧಿಸುತ್ತೇವೆಂದು ವಂಚಕರು ಮಹಿಳೆಯನ್ನು ಹೆದರಿಸಿದ್ದಾರೆ. ವಂಚಕರ ಫೋನ್ ಕರೆಗಳು ನಿರಂತರ ಒಂದು ತಿಂಗಳ ಕಾಲ ಮುಂದುವರೆದಿದ್ದು,ಮಹಿಳೆ ಬರೋಬ್ಬರಿ 4 ಕೋಟಿ ರೂ. ಕಳೆದುಕೊಂಡಿದ್ದಾರೆ.
ಹಣ ಹಿಂತಿರುಗದಿದ್ದಾಗ ಮಹಿಳೆ ಅನುಮಾನಗೊಂಡು ತನ್ನ ಮಗಳೊಂದಿಗೆ ಎಲ್ಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಮಗಳು ಪ್ರಕರಣದ ಕುರಿತು ಪೊಲೀಸರಿಗೆ ದೂರು ನೀಡುವಂತೆ ಹೇಳಿದ್ದಾಳೆ. ಮಹಿಳೆಯ ದೂರಿನಿಂದಾಗಿ ಈ ವಿಷಯವು ಈಗ ಮುನ್ನೆಲೆಗೆ ಬಂದಿದೆ.
ಈ ಸುದ್ದಿಯನ್ನೂ ಓದಿ: ಸೈಬರ್ ವಂಚನೆಯ ಬಗ್ಗೆ ಅರಿವು ಮೂಡಿಸುವುದು ಅಗತ್ಯ