Wednesday, 27th November 2024

ಅಮೆರಿಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ಹೆಲ್ತ್‌ನ ನಿರ್ದೇಶಕರಾಗಿ ಭಾರತೀಯ ಮೂಲದ ಜಯ್ ಭಟ್ಟಾಚಾರ್ಯ ಆಯ್ಕೆ

Jay Bhattacharya

ವಾಷಿಂಗ್ಟನ್‌: ಅಮೆರಿಕ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್‌ ಟ್ರಂಪ್‌ (Donald Trump) ಅವರು ಬುಧವಾರ (ನ. 27) ಕೋವಿಡ್ ನೀತಿ ವಿಮರ್ಶಕ, ಭಾರತೀಯ ಮೂಲದ ಜಯ್ ಭಟ್ಟಾಚಾರ್ಯ (Jay Bhattacharya) ಅವರನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ಹೆಲ್ತ್‌ನ ನಿರ್ದೇಶಕರನ್ನಾಗಿ ಆಯ್ಕೆ ಮಾಡಿದ್ದಾರೆ.

“ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ಹೆಲ್ತ್‌ನ ನಿರ್ದೇಶಕರಾಗಿ ಸೇವೆ ಸಲ್ಲಿಸಲು ಪಿಎಚ್‌ಡಿ, ಎಂಡಿ ಪೂರೈಸಿರುವ ಜಯ್ ಭಟ್ಟಾಚಾರ್ಯ ಅವರನ್ನು ನಾಮನಿರ್ದೇಶನ ಮಾಡಲು ನಾನು ರೋಮಾಂಚನಗೊಂಡಿದ್ದೇನೆ. ವೈದ್ಯಕೀಯ ಸಂಶೋಧನೆಯನ್ನು ನಿರ್ದೇಶಿಸುವ ಮತ್ತು ಆರೋಗ್ಯವನ್ನು ಸುಧಾರಿಸುವ ಹಾಗೂ ಜೀವಗಳನ್ನು ಉಳಿಸುವ ಪ್ರಮುಖ ಆವಿಷ್ಕಾರಗಳನ್ನು ಮಾಡಲು ಡಾ.ಭಟ್ಟಾಚಾರ್ಯ ಅವರು ರಾಬರ್ಟ್ ಎಫ್ ಕೆನಡಿ ಜೂನಿಯರ್ ಅವರೊಂದಿಗೆ ಸಮನ್ವಯದಿಂದ ಕೆಲಸ ಮಾಡಲಿದ್ದಾರೆʼʼ ಎಂದು ಟ್ರಂಪ್‌ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಜಯ್‌ ಮತ್ತು ರಾಬರ್ಟ್ ಎಫ್ ಕೆನಡಿ ಜೂನಿಯರ್ ಒಟ್ಟಾಗಿ ಎನ್ಐಎಚ್ (National Institutes of Health)ನ ವೈದ್ಯಕೀಯ ಸಂಶೋಧನೆಯನ್ನು ಪುನಃಸ್ಥಾಪಿಸಲಿದ್ದಾರೆ. ಅವರು ನಮ್ಮನ್ನು ಕಾಡುವ ದೀರ್ಘ ಕಾಲದ ಅನಾರೋಗ್ಯ ಮತ್ತು ದೇಶದ ಆರೋಗ್ಯ ಕ್ಷೇತ್ರಕ್ಕೆ ಎದುರಾಗಿರುವ ಸವಾಲುಗಳ ಮೂಲ ಕಾರಣಗಳು ಹಾಗೂ ಪರಿಹಾರಗಳ ಬಗ್ಗೆ ಸಂಶೋಧನೆ ನಡೆಸಲಿದ್ದಾರೆ. ಒಟ್ಟಾಗಿ ಅವರು ಅಮೆರಿಕವನ್ನು ಮತ್ತೆ ಆರೋಗ್ಯದ ಹಾದಿಗೆ ತರಲಿದ್ದಾರೆʼʼ ಎಂದು ಟ್ರಂಪ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಜಯ್ ಭಟ್ಟಾಚಾರ್ಯ ಅವರು, ಅಮೆರಿಕದ ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಸುಧಾರಣೆ ತರುವುದಾಗಿ ತಿಳಿಸಿದ್ದಾರೆ. ʼʼನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹೆಲ್ತ್‌ನ ನಿರ್ದೇಶಕ ಹುದ್ದೆಗೆ ಟ್ರಂಪ್‌ ಅವರು ನಾಮ ನಿರ್ದೇಶನ ಮಾಡಿದ್ದಾರೆ. ನಾವು ಅಮೆರಿಕದ ವೈಜ್ಞಾನಿಕ ಸಂಶೋಧನಾ ರಂಗದಲ್ಲಿ ಬದಲಾವಣೆ ತರಲಿದ್ದೇವೆ. ಆ ಮೂಲಕ ಜನರ ವಿಶ್ವಾಸವನ್ನು ಮರಳಿ ಗಳಿಸುತ್ತೇವೆʼʼ ಎಂದು ಬರೆದುಕೊಂಡಿದ್ದಾರೆ.

ಸಾಂಕ್ರಾಮಿಕ ರೋಗಗಳಿಗೆ ಲಸಿಕೆಗಳ ಅಭಿವೃದ್ದಿಯಿಂದ ಹಿಡಿದು ಹೊಸ ಔಷಧಿಗಳ ತಯಾರಿವರೆಗೆ ಆರಂಭಿಕ ಹಂತದ ಸಂಶೋಧನೆ ನಡೆಸುವ 27 ಸಂಸ್ಥೆಗಳು ಮತ್ತು ಕೇಂದ್ರಗಳನ್ನು ಎನ್ಐಎಚ್ ನಿರ್ದೇಶಕರು ಮೇಲ್ವಿಚಾರಣೆ ನಡೆಸಲಿದ್ದಾರೆ.

ಯಾರು ಈ ಜಯ್ ಭಟ್ಟಾಚಾರ್ಯ?

ಜಯಂತ್‌ (ಜಯ್‌) ಭಟ್ಟಾಚಾರ್ಯ ಪಶ್ಚಿಮ ಬಂಗಾಳದ ಕೋಲ್ತತಾದಲ್ಲಿ1968ರಲ್ಲಿ ಜನಿಸಿದರು. ಅವರು ಸ್ಟ್ಯಾನ್‌ಫೋರ್ಡ್‌ ಆರೋಗ್ಯ ನೀತಿ ಪ್ರಾಧ್ಯಾಪಕ ಮತ್ತು ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್ -19ರ ವೇಳೆ ಅಮೆರಿಕ ಸರ್ಕಾರದ ನೀತಿಗಳ ಬಹಿರಂಗ ಟೀಕಾಕಾರರಾಗಿ ಗುರುತಿಸಿಕೊಂಡಿದ್ದರು. ಇಬ್ಬರು ಶಿಕ್ಷಣ ತಜ್ಞರೊಂದಿಗೆ ಭಟ್ಟಾಚಾರ್ಯ ಅವರು ಪ್ರಕಟಿಸಿದ ಗ್ರೇಟ್ ಬ್ಯಾರಿಂಗ್ಟನ್ ಘೋಷಣೆ ಕೋವಿಡ್‌ಗೆ ತುತ್ತಾದವರು ಸಾಮಾನ್ಯ ಜೀವನಕ್ಕೆ ಮರಳಲು ಸಹಾಯ ಮಾಡಿದೆ.

ತನ್ನ ಅಭಿಪ್ರಾಯಗಳನ್ನು ಸೆನ್ಸಾರ್ ಮಾಡಲು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲೆ ಸರ್ಕಾರ ಒತ್ತಡ ಹೇರಿದೆ ಎಂದು ಆರೋಪಿಸಿ ಅವರು ಮೊಕದ್ದಮೆ ಹೂಡಿದ್ದರು. ಭಟ್ಟಾಚಾರ್ಯ ಅವರು 1997ರಲ್ಲಿ ಸ್ಟ್ಯಾನ್‌ಫೋರ್ಡ್‌ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸನ್‌ನಿಂದ ಪದವಿ ಮತ್ತು 2000ರಲ್ಲಿ ಸ್ಟ್ಯಾನ್‌ಫೋರ್ಡ್‌ ಅರ್ಥಶಾಸ್ತ್ರ ವಿಭಾಗದಿಂದ ಡಾಕ್ಟರೇಟ್ ಪಡೆದಿದ್ದಾರೆ.

ಈ ಸುದ್ದಿಯನ್ನೂ ಓದಿ: Tulsi Gabbard: ಅಮೆರಿಕದ ಮೊದಲ ಹಿಂದೂ ಶಾಸಕಿ ಈಗ ಗುಪ್ತಚರ ಇಲಾಖೆ ನಿರ್ದೇಶಕಿ- ಯಾರು ಈ ತುಳಸಿ ಗಬ್ಬಾರ್ಡ್‌?