Wednesday, 27th November 2024

Blood-Red liquid flood: ಮುತ್ತಿನ ನಗರದ ಬೀದಿ ಬೀದಿಗಳಲ್ಲಿ ಹರಿದ ಕೆಂಪು ದ್ರವ…ಆತಂಕದಲ್ಲಿ ಜನ

ಹೈದರಾಬಾದ್‌ : ಹೈದರಾಬಾದ್‌ (Hyderabad) ನ ಸುಭಾಷ್‌ ನಗರದ ಬೀದಿಗಳಲ್ಲಿ ನಿಗೂಢ ಕೆಂಪು ದ್ರವವು ಹರಿದಿದ್ದು, ರಕ್ತವನ್ನು ಹೋಲುವ ದ್ರವವನ್ನು ನೋಡಿ ನಿವಾಸಿಗಳು ಆತಂಕಗೊಂಡಿದ್ದಾರೆ ಎಂದು ತಿಳಿದು ಬಂದಿದೆ. (Blood-Red liquid floods) . ನವೆಂಬರ್‌ 25 ರ ರಾತ್ರಿ ಜೇಡಿಮೆಟ್ಲಾ ಕೈಗಾರಿಕಾ ಪ್ರದೇಶದಲ್ಲಿನ (Jeedimetla Industrial Estate) ಮ್ಯಾನ್‌ಹೋಲ್‌ನಿಂದ ದ್ರವವು ಉಕ್ಕಿ ಹರಿದು ಬಂದಿದೆ ಎನ್ನಲಾಗಿದೆ. ಅವಧಿ ಮೀರಿದ (Expired Date) ದ್ರವವನ್ನು ಒಳಚರಂಡಿಗೆ ಸುರಿಯಲಾಗಿದ್ದು, ಅದು ನೇರ ರಸ್ತೆಗೆ ಹರಿದುಕೊಂಡು ಬಂದಿದೆ. ದ್ರವವು ಸೂಸಿರುವ ದುರ್ನಾತದಿಂದಾಗಿ ನಿವಾಸಿಗಳಿಗೆ ಉಸಿರುಗಟ್ಟಿದಂತಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

“ಈ ಪ್ರದೇಶದಲ್ಲಿ ಕೈಗಾರಿಕಾ ತ್ಯಾಜ್ಯ ವಿಲೇವಾರಿಯ ಬಗ್ಗೆ ಯಾರೂ ನಿಗಾವಹಿಸುತ್ತಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜಿಎಚ್‌ಎಂಸಿ (GHMC) ಈ ತ್ಯಾಜ್ಯವನ್ನು ರಸ್ತೆಯಲ್ಲಿ ಸುರಿಯುವವರ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸಬೇಕು. ಸುತ್ತಮುತ್ತಲಿನ ಪ್ರದೇಶಗಳ ತ್ಯಾಜ್ಯ ನಿರ್ವಹಣೆಗಾಗಿ ಅಧಿಕಾರಿಗಳು ಗಮನಹರಿಸಬೇಕು’’ ಎಂದು ಜೀಡಿಮೆಟ್ಲ ನಿವಾಸಿ ಕೆ.ಲಕ್ಷ್ಮಣ್ ಹೇಳಿದ್ದಾರೆ.

ಈ ಕುರಿತು ಸ್ಥಳೀಯರು ಹೈದರಾಬಾದ್ ಮೆಟ್ರೋಪಾಲಿಟನ್ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (HMWS&SB) ಅಧಿಕಾರಿಗಳಿಗೆ ದೂರನ್ನು ನೀಡಿದ್ದಾರೆ. ಆದರೆ ಅಧಿಕಾರಿಗಳು ದೂರನ್ನು ತಳ್ಳಿ ಹಾಕಿದ್ದಾರೆ ಎನ್ನಲಾಗಿದೆ. “ಸ್ಥಳೀಯ ಒಳಚರಂಡಿಯಿಂದ ಅಂತಹ ಬಣ್ಣದ ನೀರು ಹರಿದಿರುವ ಬಗ್ಗೆ ಯಾವುದೇ ಪೂರ್ವ ವರದಿಗಳಾಗಿಲ್ಲ. ರಾಸಾಯನಿಕ ತ್ಯಾಜ್ಯವನ್ನು ನೇರವಾಗಿ ಬೀದಿಗೆ ಸುರಿಯಲಾಗಿದೆ ಎಂಬುದನ್ನು ಇದು ಸೂಚಿಸುತ್ತದೆ” ಎಂದು ಕುತ್ಬುಳ್ಳಾಪುರ ವಿಭಾಗದ ಜಲಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾತ್ರೋರಾತ್ರಿ ಬೀದಿಗಳಲ್ಲಿ ಹರಿದ ರಕ್ತಗೆಂಪಿನ ದ್ರವವನ್ನು ನೋಡಿ ನಿವಾಸಿಗಳು ಭಯಗೊಂಡಿದ್ದಾರೆ. ಅದು ಸೂಸಿದ ದುರ್ವಾಸನೆಯನ್ನು ಸಹಿಸಲಾಗದೆ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಹಲವರಿಗೆ ಉಸಿರುಗಟ್ಟಿದಂತಾಗಿದೆ ಎಂದು ತಿಳಿದು ಬಂದಿದೆ. ಆ ಪ್ರದೇಶವನ್ನು ಮತ್ತೆ ಸಹಜ ಸ್ಥಿತಿಗೆ ತರುವ ಸಲುವಾಗಿ ಇಡೀ ಬೀದಿಯನ್ನು ಬೆಳಗ್ಗೆ ಸ್ವಚ್ಛಗೊಳಿಸಲಾಗಿದೆ.

ಈ ಪ್ರದೇಶದಲ್ಲಿ ಹಿಂದಿನಿಂದಲೂ ಕಲುಷಿತಗೊಂಡಿರುವ ನದಿಗಳಿಗೆ ಕೈಗಾರಿಕೆಯ ತ್ಯಾಜ್ಯವನ್ನು ಸುರಿಯಲಾಗುತ್ತಿದ್ದು, ಅಕ್ರಮವಾಗಿ ಹೂಳೆತ್ತುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಲ್ಲಿನ ನಿವಾಸಿಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ನ್ಯೂಯಾರ್ಕ್‌ ನ ಬೀದಿಗಳಲ್ಲಿ ಹರಿದಿತ್ತು ಹಸಿರು ಬಣ್ಣದ ದ್ರವ

ಕಳೆದ 2023 ರಲ್ಲಿ, ನ್ಯೂಯಾರ್ಕ್ ಬೀದಿಯ ಅಂಚುಗಳ ಉದ್ದಕ್ಕೂ ಹಸಿರು ಲೋಳೆಯ ದ್ರವವು ಹರಿದಿತ್ತು. ಆ ಕುರಿತ ವೀಡಿಯೊಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ದ್ರವವು ಮ್ಯಾನ್‌ಹೋಲ್ ಕವರ್‌ಗಳು ಮತ್ತು ಫುಟ್‌ಪಾತ್‌ ಅನ್ನು ಸಂಪೂರ್ಣವಾಗಿ ಆವರಿಸಿತ್ತು.

ಈ ಸುದ್ದಿಯನ್ನೂ ಓದಿ : ಹೈದರಾಬಾದ್​ನಲ್ಲಿ ಗಣಪತಿ ಲಡ್ಡು 1.20ಕೋಟಿಗೆ ಹರಾಜು