ಬುಲವಾಯೊ (ಜಿಂಬಾಬ್ವೆ): ಪಾಕಿಸ್ತಾನ ಕ್ರಿಕೆಟ್ ತಂಡದ ಯುವ ಬ್ಯಾಟ್ಸ್ಮನ್ ಸೈಮ್ ಆಯುಬ್ ಅವರು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಜಿಂಬಾಬ್ವೆ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ (PAK vs ZIM) ಕೇವಲ 53 ಎಸೆತಗಳಲ್ಲಿ ಸೈಮ್ ಆಯುಬ್ ಸ್ಪೋಟಕ ಶತಕ ಸಿಡಿಸಿದರು. ಆ ಮೂಲಕ ಪಾಕಿಸ್ತಾನದ ಪರ ಒಡಿಐ ಕ್ರಿಕೆಟ್ನಲ್ಲಿ ವೇಗದ ಶತಕ ಸಿಡಿಸಿದ ಜಂಟಿ ಮೂರನೇ ಬ್ಯಾಟ್ಸ್ಮನ್ ಎನಿಸಿಕೊಂಡರು. ಇದರ ಜೊತೆಗೆ ತಮ್ಮ ಸ್ಪೋಟಕ ಶತಕದ ಮೂಲಕ ಸೈಮ್ ಆಯುಬ್ ಅವರು ವಿಶ್ವ ದಾಖಲೆಯನ್ನು ಬರೆದಿದ್ದಾರೆ.
ಮೊದಲನೇ ಏಕದಿನ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಪಾಕಿಸ್ತಾನ ತಂಡಕ್ಕೆ ಎರಡನೇ ಏಕದಿನ ಪಂದ್ಯದಲ್ಲಿ ಮಾಡು ಇಲ್ಲವೆ ಮಡಿ ಪರಿಸ್ಥಿತಿ ಎದುರಾಗಿತ್ತು. ಇಲ್ಲಿನ ಕ್ವೀನ್ಸ್ ಪಾರ್ಕ್ ಮೈದಾನದಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆತಿಥೇಯ ಜಿಂಬಾಬ್ವೆ ತಂಡವನ್ನು ಪಾಕಿಸ್ತಾನ ಕೇವಲ 145 ರನ್ಗಳಿಗೆ ಆಲ್ಔಟ್ ಮಾಡಿತ್ತು. ಬಳಿಕ ಗುರಿ ಹಿಂಬಾಲಿಸಿದ ಪಾಕಿಸ್ತಾನ ತಂಡಮ ಸೈಮ್ ಆಯುಬ್ (113 ರನ್ಗಳು) ಅವರ ಸ್ಪೋಟಕ ಶತಕದ ಬಲದಿಂದ ಕೇವಲ 18.2 ಓವರ್ಗಳಿಗೆ ವಿಕೆಟ್ ನಷ್ಟವಿಲ್ಲದೆ 148 ರನ್ ಗಳಿಸಿ 10 ವಿಕೆಟ್ಗಳ ಭರ್ಜರಿ ಗೆಲುವು ಪಡೆಯಿತು.
ಈ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಆಯುಬ್, ಜಿಂಬಾಬ್ವೆ ಬೌಲರ್ಗಳಿಗೆ ಬೆವರಿಳಿಸಿದರು. ಆಡಿದ್ದ ಕೇವಲ 62 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ 17 ಬೌಂಡರಿಗಳೊಂದಿಗೆ ಅಜೇಯ 113 ರನ್ಗಳನ್ನು ಸಿಡಿಸಿದರು. ಆ ಮೂಲಕ ಪಾಕಿಸ್ತಾನ ಪರ ಏಕದಿನ ಕ್ರಿಕೆಟ್ನಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ ಮೂರನೇ ಬ್ಯಾಟ್ಸ್ಮನ್ ಎಂಬ ಜಂಟಿ ದಾಖಲೆಯನ್ನು ಬರೆದರು. ಇದಕ್ಕೂ ಮುನ್ನ ಮಾಜಿ ನಾಯಕ ಶಾಹಿದ್ ಆಫ್ರಿದಿ ಅವರು 37 ಎಸೆತಗಳಲ್ಲಿ ಹಾಗೂ 45 ಎಸೆತಗಳಲ್ಲಿ ಶತಕವನ್ನು ಸಿಡಿಸಿದ್ದಾರೆ. ಅಲ್ಲದೆ ಶಾಹಿದ್ ಅಫ್ರಿದಿ 53 ಎಸೆತಗಳಲ್ಲಿಯೂ ಶತಕವನ್ನು ಸಿಡಿಸಿದ್ದರು.
ವಿಶ್ವ ದಾಖಲೆ ಬರೆದ ಸೈಮ್ ಆಯುಬ್
ತಂಡದ ಮೊತ್ತ 150 ಅಥವಾ ಅದಕ್ಕಿಂತ ಕಡಿಮೆ ಮೊತ್ತದ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಎಂಬ ವಿಶ್ವ ದಾಖಲೆಯನ್ನು ಸೈಮ್ ಆಯುಬ್ ಬರೆದಿದ್ದಾರೆ. ಇದಕ್ಕೂ ಮುನ್ನ 2023ರಲ್ಲಿ ನಡೆದಿದ್ದ ವಿಶ್ವಕಪ್ ಲೀಗ್ನ ಎರಡನೇ ಪಂದ್ಯದಲ್ಲಿ ನಮೀಬಿಯಾ ಎದುರು ಸ್ಕಾಟ್ಲೆಂಡ್ ತಂಡದ (157-0) ಜಾರ್ಜ್ ಮುನ್ಷೀ ಅವರು 61 ಎಸೆತಗಳಲ್ಲಿ 103 ರನ್ಗಳನ್ನು ಸಿಡಿಸಿದ್ದರು. ಈ ಪಂದ್ಯದಲ್ಲಿ ಸ್ಕಾಟ್ಲೆಂಡ್ 10 ವಿಕೆಟ್ಗಳ ಭರ್ಜರಿ ಗೆಲುವು ಪಡೆದಿತ್ತು.
ಪಾಕಿಸ್ತಾನ ತಂಡದ ಪರ ಅತ್ಯಂತ ಕಡಿಮೆ ಮೊತ್ತದ ಪಂದ್ಯದಲ್ಲಿ ಶತಕ ಸಿಡಿಸಿದ್ದು ಮಾಜಿ ಬ್ಯಾಟ್ಸ್ಮನ್ ರಮೀಝ್ ರಾಜಾ. ಇವರು 1992ರ ಏಕದಿನ ವಿಶ್ವಕಪ್ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ್ದ 167 ರನ್ಗಳ ಗುರಿಯನ್ನು ಹಿಂಬಾಲಿಸುವ ವೇಳೆ ರಮಿಝ್ ರಾಜಾ ಶತಕವನ್ನು ಸಿಡಿಸಿದ್ದರು. ಅಂದ ಹಾಗೆ ಸೈಮ್ ಆಯುಬ್ ಅವರು ಈ ವರ್ಷದ ಆರಂಭದಲ್ಲಿ ಪಾಕಿಸ್ತಾನದ ಪರ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಇದಕ್ಕೂ ಮುನ್ನ 2023ರಲ್ಲಿ ಇವರು ಟಿ20ಐ ಕ್ರಿಕೆಟ್ಗೂ ಪದಾರ್ಪಣೆ ಮಾಡಿದ್ದರು.
ಪಾಕಿಸ್ತಾನ ಹಾಗೂ ಜಿಂಬಾಬ್ವೆ ನಡುವಣ ಮೂರನೇ ಹಾಗೂ ಏಕದಿನ ಸರಣಿಯ ಕೊನೆಯ ಪಂದ್ಯದ ನವೆಂಬರ್ 28 ರಂದು ಗುರುವಾರ ನಡೆಯಲಿದೆ.
ಈ ಸುದ್ದಿಯನ್ನು ಓದಿ: AUS vs PAK: ಆಸ್ಟ್ರೇಲಿಯಾಕ್ಕೆ ತವರಿನಲ್ಲೇ ಸರಣಿ ಸೋಲುಣಿಸಿದ ಪಾಕಿಸ್ತಾನ