ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ (Govt Employees) ಕೆಲ ಇಲಾಖೆಗಳ ರಾಜ್ಯ ಪರಿಷತ್ ಸದಸ್ಯ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಗಳಿಗೆ ಪ್ರಜಾಸತ್ತಾತ್ಮಕ ನೌಕರರ ವೇದಿಕೆಯ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಪ್ರತಿಷ್ಠಿತ ಕಣವಾಗಿ ಮಾರ್ಪಟ್ಟಿದ್ದ ಬೆಂಗಳೂರಿನ ಸರ್ವೆ ಇಲಾಖೆ ವತಿಯಿಂದ ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಪ್ರಜಾಸತ್ತಾತ್ಮಕ ನೌಕರರ ವೇದಿಕೆಯ ರಾಜ್ಯ ಘಟಕದ ಖಜಾಂಚಿ ಸ್ಥಾನದ ಅಭ್ಯರ್ಥಿಯೂ ಆಗಿರುವ ಶಿವರುದ್ರಯ್ಯ ಭಾರಿ ಬಹುಮತದಿಂದ ಚುನಾಯಿತರಾಗಿದ್ದಾರೆ. ಕಳೆದ ಬಾರಿ ನೌಕರರ ಸಂಘದ ಚುನಾವಣೆಯಲ್ಲಿ ಷಡಾಕ್ಷರಿ ಪರವಾಗಿ ಟೊಂಕಕಟ್ಟಿ ನಿಂತು ಷಡಾಕ್ಷರಿ ಗೆಲುವಿನಲ್ಲಿ ಬಹುಮುಖ್ಯ ಪಾತ್ರ ವಹಿಸಿ ನಂತರ ನೌಕರರ ಸಂಘದ ಗೌರವಾಧ್ಯಕ್ಷರು ಆಗಿದ್ದ ಶಿವರುದ್ರಯ್ಯ ಅವರನ್ನು ಮೊದಲಿನ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಗೌರವಾಧ್ಯಕ್ಷ ಹುದ್ದೆಯಿಂದ ಕುತಂತ್ರದಿಂದ ಕೆಳಗಿಳಿಸಿದ್ದರು ಎಂಬ ಆರೋಪವಿದೆ.
ರಾಜ್ಯ ಘಟಕದ ಚುನಾವಣೆಯಲ್ಲಿ ಶಿವರುದ್ರಯ್ಯ ಅವರನ್ನು ಎರಡು ತಿಂಗಳ ಹಿಂದೆಯೇ ಪ್ರಜಾಸತ್ತಾತ್ಮಕ ನೌಕರರ ವೇದಿಕೆ ಖಜಾಂಚಿ ಸ್ಥಾನಕ್ಕೆ ಘೋಷಣೆ ಮಾಡಿತ್ತು. ಸರ್ವೆ ಇಲಾಖೆಯ ರಾಜ್ಯ ಪರಿಷತ್ ಚುನಾವಣೆ ತೀವ್ರ ಹಣಾಹಣಿಯಿಂದ ಕೂಡಿತ್ತು. ಷಡಾಕ್ಷರಿ ಬೆಂಬಲಿತ ಸರ್ವೆ ಇಲಾಖೆಯ ಬಸವರಾಜ ಎಂಬುವವರನ್ನು ನಿಲ್ಲಿಸಿ ಸ್ವತಃ ಷಡಾಕ್ಷರಿಯೇ ಕಳೆದ ಒಂದು ತಿಂಗಳಿಂದ ತಿರುಗಿ ಪ್ರಚಾರ ಮಾಡಿ ನಾನಾ ತಂತ್ರಗಳನ್ನು ಹೆಣೆದಿದ್ದರು. ಷಡಾಕ್ಷರಿ ಮಾಡಿದ ತಂತ್ರ ವಿಫಲವಾಗಿ ಶಿವರುದ್ರಯ್ಯರವರು ಬುಧವಾರ ನಡೆದ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿದ್ದಾರೆ.
ಅವಿರೋಧ ಆಯ್ಕೆ:
ಇನ್ನು ಪ್ರಜಾಸತ್ತಾತ್ಮಕ ನೌಕರರ ವೇದಿಕೆಯ ಅಭ್ಯರ್ಥಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ.ನಾಗೇಶ ಅವರು ನೌಕರರ ಸಂಘದ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೊಪ್ಪಳ ಜಿಲ್ಲಾ ನೌಕರರ ಸಂಘದ ಅಧ್ಯಕ್ಷರಾಗಿ ನಾಗರಾಜ ಜುಮ್ಮನ್ನವರ ಆಯ್ಕೆಯಾಗುವ ಮೂಲಕ ಪ್ರಜಾಸತ್ತಾತ್ಮಕ ವೇದಿಕೆ ರಾಜ್ಯ ಪದಾಧಿಕಾರಿಗಳ ಚುನಾವಣೆಗೆ ಮುನ್ನುಗುತ್ತಿದೆ. ಈಗಾಗಲೇ ಷಡಾಕ್ಷರಿ ಬಣದಲ್ಲಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಖಜಾಂಚಿ ಸ್ಥಾನದ ಅಭ್ಯರ್ಥಿಗಳನ್ನು ಪ್ರಜಾಸತ್ತಾತ್ಮಕ ವೇದಿಕೆಯ ನೌಕರರ ವೇದಿಕೆಯ ಅಭ್ಯರ್ಥಿಗಳು ಸೋಲಿನ ರುಚಿ ತೋರಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Youth Festival: ನ.30ಕ್ಕೆ ಜಿಲ್ಲಾಮಟ್ಟದ ಯುವಜನೋತ್ಸವ: ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ