Wednesday, 27th November 2024

IPL 2025: ʻಆರ್‌ಸಿಬಿ ಪರ ನನ್ನ ಅಧ್ಯಾಯ ಮುಕ್ತಾಯʼ-ಫ್ಯಾನ್ಸ್‌ಗೆ ಫಾಫ್‌ ಡು ಪ್ಲೆಸಿಸ್‌ ಭಾವನಾತ್ಮಕ ಸಂದೇಶ!

IPL 2025: Faf du Plessis bids goodbye to RCB with an emotional message after IPL auction

ನವದೆಹಲಿ: (IPL 2025) ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಸೇರ್ಪಡೆಯಾದ ಎರಡು ದಿನಗಳ ಬಳಿಕ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಫಾಫ್‌ ಡು ಪ್ಲೆಸಿಸ್‌ ತಮ್ಮ ಮಾಜಿ ತಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶವನ್ನು ಬರೆದಿದ್ದಾರೆ. ತಮಗೆ ಆರ್‌ಸಿಬಿ ತಂಡದಲ್ಲಿ ಬೆಂಬಲ ನೀಡಿದ್ದ ಸಹ ಆಟಗಾರರು, ಟೀಮ್‌ ಮ್ಯಾನೇಜ್‌ಮೆಂಟ್‌ ಹಾಗೂ ಪ್ರಾಮಾಣಿಕ ಅಭಿಮಾನಿಗಳಿಗೆ ಫಾಫ್‌ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ನವೆಂಬರ್‌ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ನಡೆದಿದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಮೆಗಾ ಹರಾಜಿನಲ್ಲಿ ಆರ್‌ಟಿಎಂ ಮೂಲಕ ಫಾಫ್‌ ಡು ಪ್ಲೆಸಿಸ್‌ ಅವರನ್ನು ಉಳಿಸಿಕೊಳ್ಳುವಲ್ಲಿ ಬೆಂಗಳೂರು ಫ್ರಾಂಚೈಸಿ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 40ರ ಪ್ರಾಯದ ಆಟಗಾರನನ್ನು ಖರೀದಿಸಿತ್ತು.

Virat Kohli: ಆರ್‌ಸಿಬಿಗೆ ಕೊಹ್ಲಿ ಮತ್ತೆ ನಾಯಕ!

ಫಾಫ್‌ ಡು ಪ್ಲೆಸಿಸ್‌ ಭಾವನಾತ್ಮಕ ಸಂದೇಶ

ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಫಾಫ್‌ ಡು ಪ್ಲೆಸಿಸ್‌ ಆರ್‌ಸಿಬಿ ತಂಡಕ್ಕೆ ಹಾಗೂ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶವನ್ನು ಬರೆದಿದ್ದಾರೆ. “ಆರ್‌ಸಿಬಿಯೊಂದಿಗೆ ನನ್ನ ಅಧ್ಯಾಯ ಮುಕ್ತಾಯವಾಗುತ್ತಿದ್ದಂತೆ, ಇದು ಎಂತಹ ಅದ್ಭುತ ಪಯಣವಾಗಿದೆ ಎಂದು ಪ್ರತಿಬಿಂಬಿಸಲು ನಾನು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತೇನೆ. ನಾನು ಮೂರು ವರ್ಷಗಳ ಹಿಂದೆ ಆರ್‌ಸಿಬಿಗೆ ಸೇರಿಕೊಂಡಾಗ, ಈ ಪ್ರಯಾಣವು ಹೇಗೆ ತೆರೆದುಕೊಳ್ಳುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಆದರೆ ನಾನು ಬೆಂಗಳೂರು ನಗರ ಮತ್ತು ಆರ್‌ಸಿಬಿಯ ಅದ್ಭುತ ಜನರನ್ನು ಪ್ರೀತಿಸುತ್ತಿದ್ದೇನೆ. ಈ ಸ್ಥಳ ಮತ್ತು ಇಲ್ಲಿನ ಜನರು ನಾನು ಯಾರೆಂಬುದರ ಒಂದು ಭಾಗವಾಗಿದ್ದಾರೆ ಮತ್ತು ನಾನು ಈ ನೆನಪುಗಳನ್ನು ಶಾಶ್ವತವಾಗಿ ಉಳಿಸಿಕೊಂಡು ಹೋಗುತ್ತೇನೆ. ಈ ಮೂರು ವರ್ಷಗಳನ್ನು ತುಂಬಾ ವಿಶೇಷವಾಗಿದ್ದಕ್ಕಾಗಿ ಧನ್ಯವಾದಗಳು,” ಎಂದು ಡು ಪ್ಲೆಸಿಸ್ ಬರೆದಿದ್ದಾರೆ.

ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಡುಪ್ಲೆಸಿಸ್‌

“ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡುವುದು ನನ್ನ ವೃತ್ತಿ ಜೀವನದ ಅತ್ಯಂತ ಎಲೆಕ್ಟ್ರಿಕ್ ಅನುಭವಗಳಲ್ಲಿ ಒಂದಾಗಿದೆ. ಅಭಿಮಾನಿಗಳ ಶಕ್ತಿ, ಉತ್ಸಾಹ ಮತ್ತು ಬೆಂಬಲವು ಅದನ್ನು ನಿಜವಾಗಿಯೂ ವಿಶೇಷವನ್ನಾಗಿಸುತ್ತದೆ. ಪ್ರತಿ ಬಾರಿ ನಾನು ಮೈದಾನಕ್ಕೆ ಕಾಲಿಟ್ಟಾಗ, ಇಲ್ಲಿನ ವಾತಾವರಣ ವಿಭಿನ್ನವಾಗಿರುತ್ತದೆ,” ಎಂದು ತಿಳಿಸಿದ್ದಾರೆ.

“ನಾನು ವಿದಾಯ ಹೇಳುವಾಗ, ಎಲ್ಲರಿಗೂ ನನ್ನ ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಅಭಿಮಾನಿಗಳು, ನನ್ನ ತಂಡದ ಸದಸ್ಯರು, ಸಿಬ್ಬಂದಿ, ತರಬೇತುದಾರರು ಮತ್ತು ಮಾಲೀಕರು. ನಿಮ್ಮೊಂದಿಗೆ ಈ ಪ್ರಯಾಣವು ಒಂದು ರೀತಿಯ ಗೌರವವಾಗಿದೆ. ತುಂಬಾ ಪ್ರೀತಿಯಿದೆ,” ಅವರು ಬರೆದುಕೊಂಡಿದ್ದಾರೆ.

IPL Auction 2025: ಆರ್‌ಸಿಬಿ ಸೇರಿದ ಭುವನೇಶ್ವರ್‌, ಕೃಣಾಲ್‌

ಮೂರು ಆವೃತ್ತಿಗಳಲ್ಲಿ ಆರ್‌ಸಿಬಿಯನ್ನು ಮುನ್ನಡೆಸಿದ್ದ ಫಾಫ್‌

ಫಾಫ್‌ ಡು ಪ್ಲೆಸಿಸ್‌ ಅವರು 2022ರ ಮೆಗಾ ಹರಾಜಿನ ಮೂಲಕ ಬೆಂಗಳೂರು ತಂಡಕ್ಕೆ ಬಂದಿದ್ದರು. ಮೂರು ಆವೃತ್ತಿಗಳಲ್ಲಿ ಆರ್‌ಸಿಬಿಯನ್ನು ಮುನ್ನಡೆಸಿದ್ದರು. ಅದರಂತೆ 2024ರ ಟೂರ್ನಿಯಲ್ಲಿ ಬೆಂಗಳೂರು ತಂಡ ಪ್ಲೇಆಫ್‌ಗೆ ಲಗ್ಗೆ ಇಟ್ಟಿತ್ತು ಹಾಗೂ ಈ ಆವೃತ್ತಿಯಲ್ಲಿ ಅವರು 438 ರನ್‌ಗಳನ್ನು ಕಲೆ ಹಾಕಿದ್ದರು. 2023ರ ಟೂರ್ನಿಯಲ್ಲಿ ಅವರು ಆರ್‌ಸಿಬಿ ಪರ 700ಕ್ಕೂ ಅಧಿಕ ರನ್‌ಗಳನ್ನು ಗಳಿಸಿದ್ದರು. ಫಾಫ್‌ ಡು ಪ್ಲೆಸಿಸ್‌ ಸ್ಥಾನಕ್ಕೆ ಇದೀಗ ಇಂಗ್ಲೆಂಡ್‌ ತಂಡದ ಫಿಲ್‌ ಸಾಲ್ಟ್‌ ಬಂದಿದ್ದು, ವಿರಾಟ್‌ ಕೊಹ್ಲಿ ಜೊತೆ ಇನಿಂಗ್ಸ್‌ ಆರಂಭಿಸುವ ಸಾಧ್ಯತೆ ಇದೆ.