Wednesday, 27th November 2024

Bangladesh Unrest: ಬಾಂಗ್ಲಾದೇಶದಲ್ಲಿ ಹಿಂದೂ ಸಂತ ಚಿನ್ಮಯ್‌ ಕೃಷ್ಣ ದಾಸ್‌ ಅರೆಸ್ಟ್‌‌ ಆಗಿದ್ದೇಕೆ?

Bangladesh Unrest

ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ ತಾರಕಕ್ಕೇರಿದೆ. ಅವರ ಮನೆ, ಮಠ, ದೇವಾಲಯಗಳ ಮೇಲೆ ದಾಳಿಯೂ ಎಗ್ಗಿಲ್ಲದೆ ಮುಂದುವರಿದಿದೆ. ಈ ನಡುವೆ ಸಂತ್ರಸ್ತ ಹಿಂದೂ ಸಮುದಾಯದ ಸುರಕ್ಷತೆಗೆ ದನಿ ಎತ್ತಿದ್ದ ಹಾಗೂ, ವಿಪತ್ತಿನ ಸಂದರ್ಭದಲ್ಲಿ ಬಾಂಗ್ಲಾದೇಶದ ಹಿಂದೂಗಳ ಪಾಲಿಗೆ ಆಪದ್ಭಾಂಧವರಂತೆ ಹೊರಹೊಮ್ಮಿದ್ದ ಸಂತ ಚಿನ್ಮಯ್‌ ಕೃಷ್ಣ ದಾಸ್‌ (Chinmoy Krishna Das) ಅವರನ್ನು ಕೂಡ ಢಾಕಾದ ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ದೇಶ ದ್ರೋಹದ ಆರೋಪವನ್ನು ಮಾಡಲಾಗಿದ್ದು, ಜಾಮೀನು ನಿರಾಕರಿಸಿ ಜೈಲಿಗೆ ಕಳಿಸಲಾಗಿದೆ. ಇದರೊಂದಿಗೆ ಢಾಕಾ, ಚಿತ್ತಗಾಂಗ್‌ನಲ್ಲಿ (Bangladesh Unrest) ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಸಾವಿರಾರು ಹಿಂದೂಗಳು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಪೊಲೀಸರ ಲಾಠಿ ಪ್ರಹಾರಕ್ಕೂ ಧೃತಿಗೆಡದೆ ಮೈಯೊಡ್ಡುತ್ತಿದ್ದಾರೆ.

ಹಾಗಾದರೆ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲುವುದು ಯಾವಾಗ? ಅವರೆಷ್ಟು ಸುರಕ್ಷಿತ? ಇದೆಲ್ಲ ಹೇಗೆ ಆರಂಭವಾಯಿತು? ಚಿನ್ಮಯ್‌ ಕೃಷ್ಣದಾಸ್‌ ಅವರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಳೆದ ಆಗಸ್ಟ್‌ 5ರಂದು ಮಾಜಿ ಪ್ರಧಾನಿ ಶೇಖ್‌ ಹಸೀನಾ ಪದಚ್ಯುತಿಯಾಗಿ ಗಡೀಪಾರಾದ ಬಳಿಕ ಬಾಂಗ್ಲಾದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಈಗಾಗಲೇ ಅನೇಕ ಹಿಂದೂಗಳು ನಿರಾಶ್ರಿತರಾಗಿದ್ದಾರೆ. ಇಸ್ಕಾನ್‌ನಲ್ಲಿ ಈ ಹಿಂದೆ ಸಂನ್ಯಾಸಿಯಾಗಿದ್ದ ಸಂತ ಚಿನ್ಮಯ್‌ ಕೃಷ್ಣ ದಾಸ್‌ ಅವರ ಬಂಧನದೊಂದಿಗೆ ಹಿಂಸಾಚಾರ ಮತ್ತಷ್ಟು ಮುಂದುವರಿದಿದೆ.

ಭಾರತ ಕೂಡ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಹಿಂದೂಗಳ ಸುರಕ್ಷತೆಗೆ ಬಾಂಗ್ಲಾ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ. ಆದರೆ ಇದು ತನ್ನ ಆಂತರಿಕ ವಿಚಾರ ಎಂದು ಬಾಂಗ್ಲಾದೇಶ ಸರ್ಕಾರ ಸಮಜಾಯಿಷಿ ನೀಡಿದೆ.‌

ಈ ಸುದ್ದಿಯನ್ನೂ ಓದಿ | Chinmoy Krishna Das: ಹಿಂದೂ ಮುಖಂಡ ಚಿನ್ಮೋಯ್ ಕೃಷ್ಣ ದಾಸ್ ಪ್ರಭುಗೆ ಜಾಮೀನು ನಿರಾಕರಣೆ… ದೇಶದ್ರೋಹ ಕೇಸ್‌ ದಾಖಲು

ಹಿಂದೂಗಳ ಸುರಕ್ಷತೆ ಮತ್ತು ಅವರ ಹಕ್ಕುಗಳ ಪರವಾಗಿ ಶಾಂತಿ, ಸಹನೆಯಿಂದ ಪ್ರಶ್ನಿಸುತ್ತಿರುವವರನ್ನು ಹತ್ತಿಕ್ಕಲು ಬಾಂಗ್ಲಾದೇಶ ಸರ್ಕಾರ ಮುಂದಾಗಿರುವುದು ಖಂಡನೀಯ ಎಂದು ಆರ್ಟ್‌ ಆಫ್‌ ಲಿವಿಂಗ್‌ನ ಸ್ಥಾಪಕ ಶ್ರೀ ಶ್ರೀ ರವಿಶಂಕರ್‌ ಸೇರಿದಂತೆ ಹಲವು ಸಾಧು ಸಂತರು ಹಾಗೂ ಹಿಂದೂ ಪರ ಸಂಘಟನೆಗಳ ಮುಖ್ಯಸ್ಥರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಚಿನ್ಮಯ್ ಕೃಷ್ಣ ದಾಸ್‌ ಅರೆಸ್ಟ್‌ ಆಗಿದ್ದೇಕೆ?
ಸಂತ ಚಿನ್ಮಯ್‌ ಕೃಷ್ಣ ದಾಸ ಪ್ರಭು ಅವರನ್ನು ಢಾಕಾದ ವಿಮಾನ ನಿಲ್ದಾಣದಲ್ಲಿ ಸೋಮವಾರ ಬಂಧಿಸಲಾಯಿತು. ಚಿತ್ತಗಾಂಗ್‌ಗೆ ಅವರು ಹೊರಟಿದ್ದರು. ಬಾಂಗ್ಲಾದೇಶದ ಬಾವುಟಕ್ಕೆ ಅಗೌರವ ತೋರಿಸಿದ್ದಾರೆ ಎಂದು ಬಾಂಗ್ಲಾದೇಶ ನ್ಯಾಷನಲ್‌ ಪಾರ್ಟಿಯ ಮುಖಂಡರೊಬ್ಬರಿಂದ ಕಳೆದ ತಿಂಗಳು ದೂರು ಸಲ್ಲಿಸಲಾಗಿತ್ತು. ಈ ದೂರಿನ ಅಧಾರದಲ್ಲಿ ಅರೆಸ್ಟ್‌ ಮಾಡಲಾಗಿದ್ದು, ದೇಶದ್ರೋಹದ ಆಪಾದನೆ ಮಾಡಲಾಗಿದೆ. ಕೋರ್ಟ್‌ನಲ್ಲಿ ಜಾಮೀನು ನಿರಾಕರಿಸಲಾಗಿದೆ.

Chinmoy Krishna Das

ಇಸ್ಕಾನ್‌ ಜತೆಗೆ ಗುರುತಿಸಿಕೊಂಡಿರುವ ಚಿನ್ಮಯ್ ಕೃಷ್ಣದಾಸ್‌ ಅವರು ಬಾಂಗ್ಲಾದೇಶದಲ್ಲಿ ಕೆಲವು ತಿಂಗಳಲ್ಲೇ ಹಿಂದೂಗಳ ನಾಯಕರಾಗಿ ಹೊರಹೊಮ್ಮಿದ್ದಾರೆ. ಪ್ರಭು ಪ್ರಣಾಮ್‌ ಎಂದು ಅತ್ಮೀಯವಾಗಿ ಜನರೊಡನೆ ಬೆರೆಯುವ ಕೃಷ್ಣದಾಸ್‌, ಸಾರ್ವಜನಿಕ ಸಭೆಗಳಲ್ಲಿ ಹಿಂದೂಗಳ ಸುರಕ್ಷತೆ ಬಗ್ಗೆ ಜನ ಜಾಗೃತಿಯನ್ನೂ ಮೂಡಿಸುತ್ತಿದ್ದರು. ಅವರ ಬಹಿರಂಗ ಸಭೆಗಳಿಗೆ ಅಪಾರ ಸಂಖ್ಯೆಯಲ್ಲಿ ಹಿಂದೂಗಳು ಸೇರುತ್ತಿದ್ದರು. ಶೇಖ್‌ ಹಸೀನಾ ನೇತೃತ್ವದ ಸರ್ಕಾರ ಪತನವಾದ ಬಳಿಕ ಇಸ್ಕಾನ್‌ ಸೇರಿ ಹಿಂದೂ ದೇವಾಲಯಗಳ ಮೇಲೆ ದಾಳಿ ಜೋರಾದ ಬಳಿಕ, ಚಿನ್ಮಯ ಕೃಷ್ಣದಾಸ್‌ ಅವರು ಹಿಂದೂ ಸಂಘಟನೆಗೆ ಸಕ್ರಿಯರಾಗಿದ್ದರು. ಇದು ಅಲ್ಲಿನ ಹಂಗಾಮಿ ಸರ್ಕಾರಕ್ಕೆ ತಲೆ ನೋವಾಗಿತ್ತು. ಅವರು ಇಸ್ಲಾಂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಯಾವುದಕ್ಕೂ ಧೃತಿಗೆಡದ ಚಿನ್ಮಯ್‌ ಕೃಷ್ಣದಾಸ್‌, ಮುಸ್ಲಿಂ ಮೆಜಾರಿಟಿಯ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ಬಲವಾಗಿ ಪ್ರತಿಪಾದಿಸಿದರು.

38 ವರ್ಷ ವಯಸ್ಸಿನ ಸಂನ್ಯಾಸಿ ಚಿನ್ಮಯ್ ಕೃಷ್ಣದಾಸ್‌ ಅವರು ಇತ್ತೀಚೆಗೆ ರಚಿಸಲಾಗಿದ್ದ ಹಿಂದೂ ಪರ ಸಂಘಟನೆಯಾದ ಸನಾತನ್‌ ಜಾಗರಣ್‌ ಜೋಟ್ ವೇದಿಕೆಯ ವಕ್ತಾರರಾಗಿದ್ದರು. ಈ ವೇದಿಕೆಯು ಬಾಂಗ್ಲಾದೇಶದಲ್ಲಿರುವ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಹಕ್ಕುಗಳ ಪರ ಹೋರಾಡುತ್ತಿದೆ. ಇದು ಅಲ್ಲಿನ ಎಲ್ಲ ಹಿಂದೂ ಪರ ಸಂಘಟನೆಗಳ ಒಕ್ಕೂಟವಾಗಿದೆ. ಹೀಗಾಗಿ ಮಹತ್ವ ಪಡೆದುಕೊಂಡಿದೆ. ಚಿಟ್ಟಗಾಂಗ್‌ನಲ್ಲಿ ಪುಂಡರೀಕ ಧಾಮ್‌ ಎಂಬ ಧಾರ್ಮಿಕ ಕೇಂದ್ರದ ಅಧ್ಯಕ್ಷರಾಗಿಯೂ ಚಿನ್ಮಯ ಕೃಷ್ಣದಾಸ್‌ ಸೇವೆ ಸಲ್ಲಿಸುತ್ತಿದ್ದಾರೆ. ಪುಂಡರೀಕ ಧಾಮವು ಬಾಂಗ್ಲಾದೇಶದ ಹಿಂದೂಗಳಿಗೆ ಪವಿತ್ರ ಯಾತ್ರಾ ಸ್ಥಳಗಳಲ್ಲೊಂದಾಗಿದೆ.

ಬಾಂಗ್ಲಾದೇಶದಲ್ಲಿ ಹಿಂದೂಗಳ ಭದ್ರತೆಗೋಸ್ಕರ ರ‍್ಯಾಲಿಗಳನ್ನು ಅವರು ನಡೆಸುತ್ತಿದ್ದರು. ಅಂತಹ ಒಂದು ರ‍್ಯಾಲಿ ವೇಳೆ ಬಾಂಗ್ಲಾದೇಶದ ಬಾವುಟದ ಬದಲು ಧಾರ್ಮಿಕ ಬಾವುಟವನ್ನು ಪ್ರದರ್ಶಿಸಲಾಗಿತ್ತು ಎಂದು ವರದಿಯಾಗಿದೆ. ಕೋರ್ಟ್‌ ಇದೀಗ ಚಿನ್ಮಯ ಕೃಷ್ಣದಾಸ್‌ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಢಾಕಾ ಕೋರ್ಟ್‌ನ ಹೊರಗೆ ಪೊಲೀಸ್‌ ವ್ಯಾನ್‌ ಹತ್ತುವಾಗ ಜನರತ್ತ ಕೈಬೀಸಿದ ಚಿನ್ಮಯ ಕೃಷ್ಣ ದಾಸ್‌ ಅವರು, ನಮಗೆ ಬಾಂಗ್ಲಾದೇಶದ ಏಕತೆ ಬೇಕು. ಇದಕ್ಕಾಗಿ ಸನಾತನಿಗಳಿಗೆ ಕೆಲವು ಜವಾಬ್ದಾರಿಗಳಿದ್ದು, ಅದನ್ನು ಮಾಡಬೇಕು ಎಂದರು.

‌ಚಿನ್ಮಯ್ ಕೃಷ್ಣ ದಾಸ್‌ ಅರೆಸ್ಟ್ ಬಳಿಕ ಢಾಕಾ, ಚಿತ್ತಗಾಂಗ್‌ ಮತ್ತಿತರ ಕಡೆಗಳಲ್ಲಿ ಹಿಂದೂಗಳು ಬೀದಿಗಿಳಿದು ಪ್ರತಿಭಟಿಸಿದ್ದಾರೆ. ದಾಸ್‌ ಅವರನ್ನು ತಕ್ಷಣ ಬಿಡುಗಡೆಗೊಳಿಸಲು ಒತ್ತಾಯಿಸಿದ್ದಾರೆ. ಚಿತ್ತಗಾಂಗ್‌ನ ಕೋರ್ಟ್‌ ಮುಂದೆ ಸಾವಿರಾರು ಮಂದಿ ಜಮಾಯಿಸಿದಾಗ ಹಿಂಸಾಚಾರ ನಡೆಯಿತು. ಪೊಲೀಸರ ಲಾಠಿ ಪ್ರಹಾರಕ್ಕೆ ಹಲವಾರು ಮಂದಿ ಗಾಯಗೊಂಡರು. ಗಲಭೆಯಲ್ಲಿ ಸೈಫುಲ್‌ ಇಸ್ಲಾಮ್‌ ಆಲಿಫ್‌ ಎಂಬ ವಕೀಲರೊಬ್ಬರು ಹತ್ಯೆಗೀಡಾದರು. ಹೀಗಿದ್ದರೂ, ಅವರ ಕೊಲೆಗೆ ಕಾರಣ ತಿಳಿದು ಬಂದಿಲ್ಲ ಎಂದು ಚಿತ್ತಗಾಂಗ್‌ ವಕೀಲರ ಸಂಘದ ಅಧ್ಯಕ್ಷ ನಜೀಮುದ್ದೀನ್‌ ಚೌಧುರಿ ತಿಳಿಸಿದ್ದಾರೆ. ವಕೀಲರ ಹತ್ಯೆ ಖಂಡಿಸಿ ಢಾಕಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆದಿದೆ.

ಚಿತ್ತಗಾಂಗ್‌ನಲ್ಲಿ ಹಿಂದೂಗಳ ಮೂರು ದೇವಾಲಯಗಳ ಮೇಲೆ ದಾಳಿ ನಡೆದಿದೆ. ಫಿರಂಗಿ ಬಜಾರ್‌ನಲ್ಲಿರುವ ಲೋಕನಾಥ್‌ ದೇವಾಲಯ, ಮಾನಸ ಮಠ ದೇವಾಲಯ, ಹಜಾರಿ ಲೇನ್‌ನಲ್ಲಿರುವ ಕಾಳಿ ಮಠ ದೇವಾಲಯದ ಮೇಲೆ ದಾಳಿ ನಡೆದಿರುವುದಾಗಿ ವರದಿಯಾಗಿದೆ.

ಹಿಂದೂ ಸಂತನ ಬಂಧನಕ್ಕೆ ಭಾರತ ಖಂಡನೆ
ಚಿನ್ಮಯ್‌ ಕೃಷ್ಣ ದಾಸ್‌ ಅವರ ಬಂಧನವನ್ನು ಭಾರತ ಅಧಿಕೃತವಾಗಿ ಖಂಡಿಸಿದ್ದು, ವಿದೇಶಾಂಗ ವ್ಯವಹಾರಗಳ ಇಲಾಖೆ ಹೇಳಿಕೆ ಬಿಡುಗಡೆಗೊಳಿಸಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮನೆ ಮಠಗಳನ್ನು ಲೂಟಿ ಮಾಡಲಾಗಿದೆ. ಉದ್ದಿಮೆಗಳನ್ನು ನಾಶಪಡಿಸಲಾಗಿದೆ. ಹಿಂದೂ ದೇವಾಲಯಗಳ ಮೇಲಿನ ದಾಳಿಯೂ ದುರದೃಷ್ಟಕರ. ಶಾಂತಿಯುತವಾಗಿ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಮುಂದಿಡುತ್ತಿದ್ದ ಇಸ್ಕಾನ್‌ನ ಸಂತ ಚಿನ್ಮಯ್ ಕೃಷ್ಣ ದಾಸ್‌ ಅವರನ್ನು ಅರೆಸ್ಟ್‌ ಮಾಡಿರುವುದು ಮತ್ತು ಜಾಮೀನು ನಿರಾಕರಿಸಿರುವುದು ತೀವ್ರ ಕಳವಳ ಮೂಡಿಸಿದೆ ಎಂದು ಇಲಾಖೆ ಆತಂಕ ವ್ಯಕ್ತಪಡಿಸಿದೆ. ಜತೆಗೆ ಬಾಂಗ್ಲಾದೇಶದಲ್ಲಿರುವ ಎಲ್ಲ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಸುರಕ್ಷತೆಗೆ ಕ್ರಮ ಕೈಗೊಳ್ಳಲೇಬೇಕು ಎಂದು ವಿದೇಶಾಂಗ ಇಲಾಖೆ ಆಗ್ರಹಿಸಿದೆ. ಪ್ರಧಾನಿ ನರೇಂದ್ರ ಮೋದಿಯವರೂ ಈ ಹಿಂದೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದರು.

ಅವರ ದನಿಯನ್ನು ಬಾಂಗ್ಲಾ ಸರ್ಕಾರ ಕೇಳಬೇಕಿತ್ತು
ಚಿನ್ಮಯ್‌ ಕೃಷ್ಣ ದಾಸ್‌ ಬಂಧನವನ್ನು ಆರ್ಟ್‌ ಆಫ್‌ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್‌ ಗುರೂಜಿಯವರು ತೀವ್ರವಾಗಿ ಖಂಡಿಸಿದ್ದಾರೆ. ಇಸ್ಕಾನ್‌ ಸಂತ ಚಿನ್ಮಯ್‌ ಕೃಷ್ಣ ದಾಸ್‌ ಅವರು ಕೈಗೆ ಶಸ್ತ್ರಾಸ್ತ್ರವನ್ನು ತೆಗೆದುಕೊಂಡಿಲ್ಲ, ಬಂದೂಕನ್ನು ಹಿಡಿದಿಲ್ಲ. ತಮ್ಮ ಜನರ ಸುರಕ್ಷತೆಗೋಸ್ಕರ ಅವರು ಚಿಂತೆಗೀಡಾಗಿದ್ದಾರೆ. ಅವರ ದನಿಯನ್ನು ಬಾಂಗ್ಲಾ ಸರ್ಕಾರ ಕೇಳಬೇಕಿತ್ತು. ಅದು ಬಿಟ್ಟು ಆಧ್ಯಾತ್ಮಿಕ ಸಂತರೊಬ್ಬರನ್ನು ಅರೆಸ್ಟ್‌ ಮಾಡಿರುವುದು, ಬಾಂಗ್ಲದೇಶ ಪ್ರಧಾನಿ, ನೊಬೆಲ್‌ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್‌ ಯೂನಸ್‌ ಅವರಿಗೆ ಶೋಭೆ ತರುವಂಥದ್ದಲ್ಲ. ಬಾಂಗ್ಲಾದೇಶ ಪ್ರಗತಿಪರ ಮತ್ತು ಉದಾರವಾದಿ ದೇಶವೆಂದು ಪ್ರಸಿದ್ಧವಾಗಿತ್ತು. ಆದರೆ ಈಗಿನ ಬಾಂಗ್ಲಾದೇಶ ಸರ್ಕಾರದ ನಡೆ ದುರದೃಷ್ಟಕರ. ಅವರೇನು, ದೇಶವನ್ನು ಅವನತಿಯ ಕಡೆಗೆ ತೆಗೆದುಕೊಂಡು ಹೋಗುತ್ತಿದ್ದಾರೆಯೇ? ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯವು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಸುರಕ್ಷತೆ ಮತ್ತು ಭದ್ರತೆಗೆ ಒತ್ತಡವನ್ನು ಸೃಷ್ಟಿಸಬೇಕು ಎಂದು ಶ್ರೀ ಶ್ರೀ ರವಿಶಂಕರ್‌ ಗುರೂಜಿಯವರು ಹೇಳಿದ್ದಾರೆ.

ಶೇಖ್‌ ಹಸೀನಾ ಅವರನ್ನು ಪ್ರಧಾನಮಂತ್ರಿ ಹುದ್ದೆಯಿಂದ ಪದಚ್ಯುತಗೊಳಿಸಿ ಗಡಿಪಾರು ಮಾಡಿದ ಬಳಿಕ ಬಾಂಗ್ಲಾದೇಶದಲ್ಲಿ ಚುನಾಯಿತ ಸರ್ಕಾರದ ಆಡಳಿತ ಅಂತ್ಯವಾಗಿದೆ. ಮಿಲಿಟರಿ ಬೆಂಬಲಿತ ಹಾಗೂ ಮೊಹಮ್ಮದ್‌ ಯೂನಸ್‌ ನೇತೃತ್ವದ ಹಂಗಾಮಿ ಸರ್ಕಾರ ಆಡಳಿತ ನಡೆಸುತ್ತಿದೆ. ಹೀಗಾಗಿ ಇಲ್ಲಿ ಅಲ್ಪ ಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ ಕಳವಳವನ್ನು ಹೆಚ್ಚಿಸಿದೆ.

ಬಾಂಗ್ಲಾದೇಶದಲ್ಲಿ ನಿಷೇಧಿತ ಜಮಾತೆ ಇಸ್ಲಾಮಿ ಪಾರ್ಟಿ ಸಂಘಟನೆಯ ಮೇಲಿನ ನಿಷೇಧವನ್ನು ಯೂನಸ್‌ ಖಾನ್‌ ತೆರವುಗೊಳಿಸಿದಾಗಲೇ, ಇಸ್ಲಾಂ ಮೂಲಭೂತವಾದಿಗಳ ಹಿಡಿತಕ್ಕೆ ಹಂಗಾಮಿ ಸರ್ಕಾರ ಸಿಲುಕಿದೆ ಎಂಬ ಟೀಕೆ ರಾಜಕೀಯ ವಲಯದಲ್ಲಿ ವ್ಯಕ್ತವಾಗಿತ್ತು. ಜತೆಗೆ ಹಿಂದೂ ಸೇರಿದಂತೆ ಅಲ್ಪಸಂಖ್ಯಾತರ ಮೇಲಿ ದೌರ್ಜನ್ಯ ಹೆಚ್ಚುವ ಆತಂಕ ಉಂಟಾಗಿತ್ತು.

ಈ ಸುದ್ದಿಯನ್ನೂ ಓದಿ | Chinmoy Das arrested: ಹಿಂದೂಗಳ ಮೇಲೆ ದಾಳಿ ; ಇಸ್ಕಾನ್‌ ನಿಷೇಧಿಸುವಂತೆ ಬಾಂಗ್ಲಾ ಹೈಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಕೆ

ಚಿನ್ಮಯ್ ಕೃಷ್ಣದಾಸ್‌ ಅವರನ್ನು ಅರೆಸ್ಟ್‌ ಮಾಡಿ ಜೈಲಿಗೆ ಕಳಿಸಿದರೆ, ಹಿಂದೂ ಪರ ದನಿಗಳನ್ನು ಹತ್ತಿಕ್ಕಬಹುದು ಎಂಬ ಯೂನಸ್‌ ಸರ್ಕಾರದ ಯತ್ನ ವಿಫಲವಾದಂತಿದೆ. ಈಗ ಇಡೀ ಜಗತ್ತು ಚಿನ್ಮಯ್‌ ಕೃಷ್ಣದಾಸ್‌ ಅವರತ್ತ ತಿರುಗಿ ನೋಡಿದೆ.‌ ‌