ಹಮಿರ್ಪುರ: ಲೋಕದಲ್ಲಿ ಏನೇನೋ ಘಟನೆಗಳು ನಡೆಯುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ವಿಚಿತ್ರ ಮತ್ತು ವಿಶಿಷ್ಟತೆಯಿಂದ ಕೂಡಿರುತ್ತವೆ. ಈಗಿನ ಡಿಜಿಟಲ್ ಜಮಾನದಲ್ಲಿ ಇಂತಹ ಸುದ್ದಿಗಳು ತಕ್ಷಣವೇ ಹರಿದಾಡಿ ಎಲ್ಲೆಡೆ ವೈರಲ್ ಆಗುತ್ತವೆ. ಅಂತಹ ಒಂದು ಸುದ್ದಿ ಮತ್ತು ಅದರ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ. ಉತ್ತರ ಪ್ರದೇಶದ ಹರ್ಮಿಪುರದಲ್ಲಿ ವ್ಯಕ್ತಿಯೊಬ್ಬ ಬೃಹತ್ ಗಾತ್ರದ ಮೊಸಳೆಯನ್ನು ‘ಬಾಹುಬಲಿ’ ಪ್ರಭಾಸ್ ನಂತೆ ತನ್ನ ಭುಜಗಳಲ್ಲಿ ಹೊತ್ತೊಯ್ಯತ್ತಿರುವ ವಿಡಿಯೋ ಇದಾಗಿದ್ದು, ಈತನ ಭುಜಬಲದ ಪರಾಕ್ರಮ ಇದೀಗ ನೆಟ್ಟಿಗರ ಕಡೆಯಿಂದ ‘ಭಳಿರೆ.. ಶಹಬ್ಬಾಸ್..’ ಎಂಬ ಪ್ರಶಂಸೆಯನ್ನು ನೀಡಿದೆ.
ವಿಷಯ ಏನಪ್ಪಾ ಅಂದ್ರೆ, ಈ ಗ್ರಾಮದ ಜನರು ಕಳೆದ ಕೆಲವು ದಿನಗಳಿಂದ ಮೊಸಳೆ ಉಪಟಳದಿಂದ ಬೇಸತ್ತಿದ್ದರು. ಮತ್ತು ಅದರ ಭಯದಿಂದಲೇ ಬದುಕುವಂತಹ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಪರಿಸ್ಥಿತಿ ಹೀಗಿರುವಾಗ ಅವರು ಈ ವಿಚಾರವನ್ನು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ ಮತ್ತು ತಮ್ಮ ಸಮಸ್ಯೆಗೆ ಪರಿಹಾರವನ್ನು ನೀಡುವಂತೆ ವಿನಂತಿಸಿಕೊಂಡಿದ್ದಾರೆ.
ಗ್ರಾಮಸ್ಥರ ಮನವಿ ಮೇರೆಗೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯವರು ಈ ಮೊಸಳೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಮೊಸಳೆ ಸೆರೆ ಸಿಕ್ಕಿದ್ದು, ಅದನ್ನು ಅರಣ್ಯ ಇಲಾಖೆಯ ವಾಹನದಲ್ಲಿ ಸಾಗಿಸಲು, ಅಲ್ಲಿಯವರೆಗೆ ಇದನ್ನು ವ್ಯಕ್ತಿಯೊಬ್ಬ ತನ್ನ ಭುಜಗಳಲ್ಲಿ ಗೋಣಿಚೀಲದಂತೆ ಎತ್ತಿಕೊಂಡು ಹೋಗಿದ್ದಾನೆ. ಅದೇ ವಿಡಿಯೋ ಇದಿಗ ಎಲ್ಲೆಡೆ ವೈರಲ್ ಆಗಿರುವಂಥದ್ದು.
ಸೆರೆ ಹಿಡಿದ ಮೊಸಳೆಯನ್ನು ಈ ವ್ಯಕ್ತಿ ತನ್ನ ಭುಜಗಳಲ್ಲಿ ಎತ್ತಿಕೊಂಡು ಸಾಗಿಸುವವ ಮೊದಲು, ಅರಣ್ಯ ಇಲಾಖೆಯ ಅಧಿಕಾರಿಗಳು ಅದರ ಬಾಯಿ, ಮತ್ತು ಕೈಕಾಲುಗಳನ್ನು ಬಟ್ಟೆಯಿಂದ ಬಿಗಿದು ಕಟ್ಟಿದ್ದಾರೆ. ಬಳಿಕ ಆ ವ್ಯಕ್ತಿ ಯಾವುದೇ ಅಂಜಿಕೆಯಿಲ್ಲದೆ ಆ ಮೊಸಳೆಯನ್ನು ತನ್ನ ಭುಜದಲ್ಲಿ ಹೊತ್ತುಕೊಂಡು ಅಲ್ಲಿಂದ ಸಾಗಿಸಿದ್ದಾನೆ. ಈ ಮೊಸಳೆಯನ್ನು ಬಳಿಕ ಅದರ ಮೂಲಸ್ಥಾನದಲ್ಲೇ ಬಿಡಲಾಗಿದೆ ಎಂದು ತಿಳಿದುಬಂದಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಆ ವ್ಯಕ್ತಿಯ ಸಾಹಸ ಮತ್ತು ಧೈರ್ಯವನ್ನು ಪ್ರಶಂಸಿದ್ದಾರೆ. ‘ಇವರ ಭುಜಬಲಕ್ಕೆ ಹುಡುಗಿಯರು ಸೋತುಬಿಡಬಹುದು’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Max Movie: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಗುಡ್ನ್ಯೂಸ್; ‘ಮ್ಯಾಕ್ಸ್’ ರಿಲೀಸ್ ಡೇಟ್ ಅನೌನ್ಸ್
ಮಳೆಗಾಲದ ಸಂದರ್ಭದಲ್ಲಿ ನೆರೆ ಬಂದಾಗ ಮೊಸಳೆಗಳು ಜನವಸತಿ ಪ್ರದೇಶಗಳತ್ತ ನುಗ್ಗಿ ಬರುವ ಹಲವಾರು ಘಟನೆಗಳು ನಡೆದಿವೆ. ಈ ಹಿಂದೆ ಗುಜರಾತಿನ ವಡೋರದ ಜನವಸತಿ ಪ್ರದೇಶದಲ್ಲಿ ಹಲವಾರು ಮೊಸಳೆಗಳು ಪತ್ತೆಯಾಗಿ ಅಲ್ಲಿನ ನಿವಾಸಿಗಳಲ್ಲಿ ಭೀತಿ ಮೂಡಿಸಿತ್ತು. ಕೇವಲ ಮೂರು ದಿನಗಳ ಅಂತರದಲ್ಲಿ ಒಟ್ಟು 24 ಮೊಸಳೆಗಳನ್ನ ರಕ್ಷಿಸಿದ್ದು ಸುದ್ದಿಯಾಗಿತ್ತು.
ಇನ್ನು, ಮೊಸಳೆಗಳು ಮನೆ ಮಹಡಿಯನ್ನೇರಿ ವಿಶ್ರಾಂತ ಸ್ಥಿತಿಯಲ್ಲಿರುವ ಹಲವು ವಿಡಿಯೋಗಳು ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇನ್ನು ಉಕ್ಕಿ ಹರಿಯುತ್ತಿರುವ ಒಳಚರಂಡಿಯಲ್ಲಿ ತೇಲಿಬಂದ ಮೊಸಳೆಯೊಂದು ನಾಯಿಯನ್ನು ಕಚ್ಚಿಕೊಂಡು ಹೋಗುತ್ತಿರುವ ವಿಡಿಯೋ ಸಹ ಹಿಂದೊಮ್ಮೆ ಭಾರೀ ಸುದ್ದಿಯಾಗಿತ್ತು.