Wednesday, 27th November 2024

DA Hike: ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ.10.75ಕ್ಕೆ ಹೆಚ್ಚಳ; ಸರ್ಕಾರದಿಂದ ಅಧಿಕೃತ ಆದೇಶ

DA hike

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳು ಮತ್ತು ಪಿಂಚಣಿ ಪರಿಷ್ಕರಣೆ ಕುರಿತು 7ನೇ ರಾಜ್ಯ ವೇತನ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸುವುದಾಗಿ ರಾಜ್ಯ ಸರ್ಕಾರ ಈ ಹಿಂದೆ ಘೋಷಣೆ ಮಾಡಿತ್ತು. ಇದೀಗ ತುಟ್ಟಿ ಭತ್ಯೆಯ ದರಗಳನ್ನು (DA Hike) 2024ರ ಜುಲೈ 1ರಿಂದ ಜಾರಿಗೆ ಬರುವಂತೆ ಪ್ರಸ್ತುತ ಮೂಲ ವೇತನದ ಶೇ.8.50 ರಿಂದ 10.75 ಕ್ಕೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಈ ಬಗ್ಗೆ ಆರ್ಥಿಕ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ ಉಮಾ.ಕೆ ಅವರು ಆದೇಶ ಹೊರಡಿಸಿದ್ದಾರೆ. 2024ರ ಆ.23ರ ಸರ್ಕಾರಿ ಆದೇಶದಲ್ಲಿ ರಾಜ್ಯ ಸರ್ಕಾರಿ ನೌಕರರು ಮತ್ತು ರಾಜ್ಯ ಸರ್ಕಾರದ ನಿವೃತ್ತ ವೇತನದಾರರಿಗೆ ತುಟ್ಟಿ ಭತ್ಯೆ ಮಂಜೂರಾತಿಯನ್ನು ಕ್ರಮಬದ್ಧಗೊಳಿಸುವ ಬಗ್ಗೆ ಅವಕಾಶ ಕಲ್ಪಿಸಲಾಗಿತ್ತು.

ಕೇಂದ್ರ ಸರ್ಕಾರದ ಆದೇಶವನ್ನು ರಾಜ್ಯ ಸರ್ಕಾರವು ಪರಿಗಣಿಸಿ, 2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ತುಟ್ಟಿ ಭತ್ಯೆಯ ದರಗಳನ್ನು 2024ರ ಜುಲೈ 1ರಿಂದ ಜಾರಿಗೆ ಬರುವಂತೆ ಪ್ರಸ್ತುತ ಮೂಲ ವೇತನದ ಶೇ. 8.50 ರಿಂದ 10.75 ಕ್ಕೆ ಪರಿಷ್ಕರಿಸಿ ಹೆಚ್ಚಳ ಮಾಡಲು ಸರ್ಕಾರ ಹರ್ಷಿಸುತ್ತದೆ. ಆದರೆ, ಪರಿಷ್ಕೃತ ತುಟ್ಟಿ ಭತ್ಯೆಯ ದರಗಳ ಆರ್ಥಿಕ ಲಾಭವು 2024 ಆ.1ರಿಂದ ಲಭ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಸರ್ಕಾರಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘ ಅಭಿನಂದನೆ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಶೇ. 2.25% ತುಟ್ಟಿಭತ್ಯೆ ಬಿಡುಗಡೆ ಮಾಡಿದ ಮುಖ್ಯಮಂತ್ರಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಅಭಿನಂದನೆ ತಿಳಿಸಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ 2024ರ ಆ.1ರಿಂದ ಬಾಕಿ ಇದ್ದ ತುಟ್ಟಿಭತ್ಯೆ ಬಿಡುಗಡೆ ಮಾಡುವ ಸಂಘದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯರವರಿಗೆ ಸಂಘವು ಧನ್ಯವಾದಗಳನ್ನು ಸಲ್ಲಿಸುತ್ತದೆ ಎಂದು ನೌಕರರ ಸಂಘದ ರಾಜ್ಯ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದ್ದಾರೆ.

ಸರ್ಕಾರವು ಶೇ. 2.25% ರಷ್ಟು ತುಟ್ಟಿಭತ್ಯೆಯನ್ನು ಬಿಡುಗಡೆ ಮಾಡಲಾಗಿದ್ದು, ಇದರಿಂದ ಸರ್ಕಾರಿ ನೌಕರರ ಮೂಲ ವೇತನದಲ್ಲಿ ಶೇ. 8.50% ರಿಂದ ಶೇ.10.75ಕ್ಕೆ ತುಟ್ಟಿಭತ್ಯೆ ಹೆಚ್ಚಳ ಮಾಡಿದಂತಾಗಿದೆ. ಈ ತುಟ್ಟಿಭತ್ಯೆಯು ಆ.1ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಮಂಜೂರು ಮಾಡಿ ಸರ್ಕಾರ ಇಂದು ಆದೇಶ ಹೊರಡಿಸಿದೆ. ಇದರಿಂದ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 5.20 ಲಕ್ಷ ಸರ್ಕಾರಿ ನೌಕರರು, ನಿಗಮ-ಮಂಡಳಿ-ಅನುದಾನಿತ ಸಂಸ್ಥೆಗಳ ಸುಮಾರು 3.00 ಲಕ್ಷ ನೌಕರರು, ಸುಮಾರು 4.50 ಲಕ್ಷ ನಿವೃತ್ತ ನೌಕರರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ | Aadhaar Card Update: ಆಧಾರ್ ಕಾರ್ಡ್ ಉಚಿತ ಅಪ್‌ಡೇಟ್‌ಗೆ ಡಿ. 14 ಕೊನೆಯ ದಿನ